ಕಾಲಮಾಯಾಂಶಯೋಗೇನ ಭಗವದ್ವೀಕ್ಷಿತಂ ನಭಃ ।
ತಾಮಸಾನುಸೃತಂ ಸ್ಪರ್ಶಂ ವಿಕುರ್ವನ್ನಿರ್ಮಮೇಽನಿಲಮ್ ॥೧೧॥
ಮೊದಲು ಆಕಾಶದ(ನಭಃ) ಸೃಷ್ಟಿಯಾಯಿತು. ಇಲ್ಲಿ ಆಕಾಶದ ಸೃಷ್ಟಿ
ಎಂದರೆ ಅವಕಾಶದ(space) ಸೃಷ್ಟಿ ಅಲ್ಲ. ಅವಕಾಶ ಮೊದಲಿನಿಂದಲೂ ಇತ್ತು. ಅಂತಹ ಅವಕಾಶದಲ್ಲಿ
ಸೃಷ್ಟಿ ಸಾಪೇಕ್ಷವಾದ ವಾತಾವರಣ ಸೃಷ್ಟಿಯಾಯಿತು. ಇದನ್ನು ಇಂದು ನಾವು ಕಣ್ಣಿಗೆ ಕಾಣದ ನೀಲ
ವರ್ಣ (ultraviolet rays) ಎಂದು ಕರೆಯುತ್ತೇವೆ.
ಇದನ್ನೇ ಆಚಾರ್ಯ ಮಧ್ವರು “ಆಕಾಶೋ
ನೀಲಿಮೋ ದೇಹಿಃ” ಎಂದು
ವರ್ಣಿಸಿದ್ದಾರೆ. [ಇಂದು ವೈಜ್ಞಾನಿಕವಾಗಿ ಏನನ್ನು ಹೇಳುತ್ತಿದ್ದಾರೋ, ಅದನ್ನು ಅತ್ಯಂತ ನಿಖರವಾಗಿ ವೇದದಲ್ಲಿ ಮೊದಲೇ ಹೇಳಿರುವುದನ್ನು
ನಾವು ಕಾಣುತ್ತೇವೆ]. ಹೀಗೆ ಅಹಂಕಾರತತ್ತ್ವಮಾನಿನಿ ಶಿವನಿಂದ ಆಕಾಶತತ್ತ್ವದ ದೇವತೆಯಾದ ಗಣಪತಿಯ
ಸೃಷ್ಟಿಯಾಯಿತು.
ಯಾವ ಕಾಲದಲ್ಲಿ ಏನು ಸೃಷ್ಟಿಯಾಗಬೇಕು ಎನ್ನುವುದು
ತಿಳಿದಿರುವುದು ಕೇವಲ ಭಗವಂತನಿಗೆ ಮಾತ್ರ. ಹಾಗಾಗಿ ಆತನನ್ನು ಕಾಲಪುರುಷ ಎಂದು ಕರೆಯುತ್ತಾರೆ.
ಚತುರ್ಮುಖ, ಪ್ರಕೃತಿ ಮತ್ತು ಕಾಲದ ಸಮಾವೇಶದಿಂದ ಸೃಷ್ಟಿ ಬೆಳೆದುಕೊಂಡು ಬರುತ್ತದೆ. ಅಂದರೆ
ಮುಂದಿನ ಸೃಷ್ಟಿಗೆ ನಿಯತ ಕಾಲ ಕೂಡಿ ಬರಬೇಕು, ಶ್ರೀಲಕ್ಷ್ಮಿ ಅನುಗ್ರಹವಾಗಬೇಕು, ಚತುರ್ಮುಖನ ಸಹಕಾರ ಬೇಕು, ಇಷ್ಟೇ ಅಲ್ಲ, ಜೊತೆಗೆ
ಭಗವಂತನ ಕೃಪಾದೃಷ್ಟಿ ಬೀಳಬೇಕು.
ಆಕಾಶದ ಸೃಷ್ಟಿಯ ನಂತರ ಮುಂದಿನ ಸೃಷ್ಟಿ ಆಗಬೇಕು ಎಂದು ಭಗವಂತ
ದೃಷ್ಟಿಹಾಯಿಸಿದ. ಅವನ ಕೃಪಾದೃಷ್ಟಿ ಬೀಳುತ್ತಲೇ
ಮುಂದಿನ ಸೃಷ್ಟಿಗೆ ಶ್ರೀಲಕ್ಷ್ಮಿ ಮತ್ತು ಚತುರ್ಮುಖ ಸಿದ್ಧರಾದರು.
ಅನಿಲೋಽಪಿ ವಿಕುರ್ವಾಣೋ ನಭಸೋರುಬಲಾನ್ವಿತಃ ।
ಸಸರ್ಜ ರೂಪತನ್ಮಾತ್ರಾಂ ಜ್ಯೋತಿರ್ಲೋಕಸ್ಯ ಲೋಚನಮ್ ॥೧೨॥
ತಾಮಸ ಅಹಂಕಾರದಿಂದ ಅನುಗತವಾಗಿ, ಚತುರ್ಮುಖ ಮತ್ತು
ಪ್ರಕೃತಿಯಿಂದ ಕಾಲಬದ್ಧವಾದ ಸಮಯದಲ್ಲಿ ಭಗವಂತನ ಅನುಗ್ರಹದಿಂದ ತಮೋಮಾನಿನಿಯಾದ ಶಿವನ
ಪ್ರೇರಣೆಯಿಂದ ನಿಷ್ಪಂಧವಾದ ಆಕಾಶದಲ್ಲಿ ಕಂಪನ ಹುಟ್ಟಿ ಅದು ಸ್ಪರ್ಶ ತನ್ಮಾತ್ರಾರೂಪವಾಗಿ
ಪರಿಣಮಿಸಿ ಆಮೂಲಕ ಗಾಳಿಯನ್ನು ನಿರ್ಮಿಸಿತು. ಗಾಳಿ ಬೀಸತೊಡಗಿತು. ಗಾಳಿಯಿಂದ ಜಗತ್ತಿಗೆಲ್ಲಾ
ಕಣ್ಣಾದ ಬೆಳಕಿನ(ಬೆಂಕಿಯ) ಸೃಷ್ಟಿಯಾಯಿತು. ಅಂದರೆ ರೂಪ ತನ್ಮಾತ್ರೆ ಸೃಷ್ಟಿಯಾಯಿತು. ಇದರಿಂದ ಕಣ್ಣಿಂದ ಕಾಣಬಹುದಾದ ಪ್ರಪಂಚ
ಸೃಷ್ಟಿಯಾಯಿತು.
ಅನಿಲೇನಾನ್ವಿತಂ ಜ್ಯೋತಿರ್ವಿಕುರ್ವತ್ ಪರವೀಕ್ಷಿತಮ್ ।
ಆಧತ್ತಾಂಭೋ ರಸಮಯಂ ಕಾಲಮಾಯಾಂಶಯೋಗತಃ ॥೧೩॥
ನೀರು ಸೃಷ್ಟಿಯಾಗುವ ಕಾಲ ಕೂಡಿ ಬರುತ್ತಿದ್ದಂತೆ ಭಗವಂತನ
ಕೃಪಾದೃಷ್ಟಿಯಲ್ಲಿ, ಬೆಳಕಿನಿಂದ ಅನುಶಕ್ತವಾಗಿ,
ಹಿಂದೆ ಸೃಷ್ಟಿಯಾಗಿರುವ ಗುಣಗಳನ್ನು ಹೊತ್ತುಕೊಂಡು ರಸ ತನ್ಮಾತ್ರೆ ಸೃಷ್ಟಿಯಾಯಿತು.
ಇದರಿಂದ ಜಲ ನಿರ್ಮಾಣವಾಯಿತು. ಪ್ರಪಂಚದಲ್ಲಿ ನಾನಾ ಬಗೆಯ ‘ರುಚಿ’ ಹುಟ್ಟಿಕೊಂಡಿತು.
ಜ್ಯೋತಿಷಾಂಭೋಽನುಸಂಸೃಷ್ಟಂ ವಿಕುರ್ವತ್ ಪರವೀಕ್ಷಿತಮ್ ।
ಮಹೀಂ ಗಂಧಗುಣಾಮಾಧಾತ್ ಕಾಲಮಾಯಾಂಶಯೋಗತಃ ॥೧೪॥
ತೇಜಸ್ಸಿನ ಪರಿಣಾಮವಾದ ಜಲವು ಭಗವಂತನ ಕೃಪಾದೃಷ್ಟಿಗೆ
ಗೋಚರವಾಗಿ, ಪರಿಣಾಮಕಾಲ, ಚಿತ್ಪ್ರಕೃತಿ ಮತ್ತು ಚತುರ್ಮುಖರ ಪರಸ್ಪರ ಮೇಲನದಿಂದ ಗಂಧ ತನ್ಮಾತ್ರಾ
ಪರಿಣಾಮವಾದ ಮಣ್ಣಿನ ಸೃಷ್ಟಿಯಾಯಿತು. ನೀರು ಹಿಮಗಲ್ಲಿನ ಬಂಡೆಯಾಗಿ, ಮಣ್ಣಾಗಿ, ಭೂಮಿಯಾಯಿತು.
ಹೀಗೆ ಪಂಚಜ್ಞಾನೇಂದ್ರಿಯಗಳು, ಪಂಚಭೂತಗಳು, ಪಂಚತನ್ಮಾತ್ರೆಗಳು ಸೃಷ್ಟಿಯಾದವು.
ಇಲ್ಲಿ
ಪ್ರತಿಯೊಂದು ಹಂತದಲ್ಲೂ ಒಂದನ್ನು ಹಿಂದಿನುದರ ಅನುಗತ ಎಂದು ಹೇಳಿರುವುದನ್ನು ಕಾಣುತ್ತೇವೆ. ಅಂದರೆ:
ಮೊದಲು ಕೇವಲ ಶಬ್ದವಿತ್ತು. ನಂತರ ವಾಯುವಿನ ಸೃಷ್ಟಿಯಾಯಿತು. ವಾಯುವಿನಲ್ಲಿ ಶಬ್ದವೂ ಇದೆ,
ಸ್ಪರ್ಶವೂ ಇದೆ. ನಂತರ ಅಗ್ನಿ. ಅಲ್ಲಿ ಶಬ್ದ-ಸ್ಪರ್ಶದ ಜೊತೆಗೆ ರೂಪವಿದ್ದರೆ, ನಂತರ ಸೃಷ್ಟಿಯಾದ
ನೀರಿನಲ್ಲಿ ಶಬ್ದ-ಸ್ಪರ್ಶ-ರೂಪದ ಜೊತೆಗೆ ರಸ ಹುಟ್ಟಿಕೊಂಡಿತು. ಕೊನೆಯಲ್ಲಿ ಹುಟ್ಟಿದ
ಮಣ್ಣಿನಲ್ಲಿ ಮೇಲಿನ ನಾಲ್ಕು ಗುಣಗಳ ಜೊತೆಗೆ ಗಂಧ ಸೇರಿತು. ಹೀಗೆ ಪಂಚಗುಣಗಳು ಉಪೇತವಾದ ಪ್ರಪಂಚ
ಸೃಷ್ಟಿಯಾಯಿತು. [ಇನ್ನೂ ಬ್ರಹ್ಮಾಂಡ ಸೃಷ್ಟಿ ಆಗಿಲ್ಲ, ಇದು ಕೇವಲ ಮೂಲವಸ್ತುವಿನ(raw material) ಸೃಷ್ಟಿ ಎನ್ನುವುದನ್ನು
ಓದುಗರು ಇಲ್ಲಿ ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕು].
No comments:
Post a Comment