Thursday, October 22, 2015

Shrimad BhAgavata in Kannada -Skandha-02-Ch-09(03)

ನ ವರ್ತತೇ ಯತ್ರ ರಜಸ್ತಮಸ್ತಯೋಃ ಸತ್ತ್ವಂ ಚ ಮಿಶ್ರಂ ನ ಚ ಕಾಲವಿಕ್ರಮಃ
ನ ಯತ್ರ ಮಾಯಾ ಕಿಮುತಾಪರೇ ಹರೇರನುವ್ರತಾ ಯತ್ರ ಸುರಾಸುರಾರ್ಚಿತಾಃ ೧೦

“ಭಗವಂತ ಚತುರ್ಮುಖನಿಗೆ ನಿತ್ಯಲೋಕದ ದರ್ಶನ ನೀಡಿದ” ಎನ್ನುವ ಮಾತನ್ನು ಕೇಳಿದಾಗ  ನಮಗೆ ಆ ಲೋಕದ ಕುರಿತು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಮೂಡುತ್ತದೆ. ಇದಕ್ಕಾಗಿ ಶುಕಾಚಾರ್ಯರು ಇಲ್ಲಿ ನಮಗೆ ನಾವಿರುವ ಪ್ರಪಂಚಕ್ಕೂ ಭಗವಂತನ ಲೋಕಕ್ಕೂ ಇರುವ ವ್ಯತ್ಯಾಸವೇನು ಎನ್ನುವುದನ್ನು ವಿವರಿಸಿದ್ದಾರೆ.
ನಾವು ಕಾಣುವ ಈ ನಮ್ಮ ಪ್ರಪಂಚ ಮಣ್ಣು-ನೀರು-ಬೆಂಕಿಯ ಮಿಶ್ರಣ. ಇಲ್ಲಿರುವ ಪ್ರತಿಯೊಂದು ವಸ್ತುಗಳೂ ಕೂಡಾ ಸತ್ವ-ರಜಸ್ಸು-ತಮೋಗುಣಗಳಿಂದಾಗಿದೆ. ಇಲ್ಲಿ ಶುದ್ಧ ಸತ್ವ, ಶುದ್ಧ ರಜಸ್ಸು ಅಥವಾ ಶುದ್ಧ ತಮಸ್ಸು ಎನ್ನುವುದಿಲ್ಲ. ಎಲ್ಲವೂ ಮೂರರ ಮಿಶ್ರಣ. ಆದರೆ ಶುಕಾಚಾರ್ಯರು ಹೇಳುತ್ತಾರೆ: “ವೈಕುಂಠಲೋಕ ತ್ರೈಗುಣ್ಯಮುಕ್ತ” ಎಂದು. ಸತ್ವ-ರಜಸ್ಸು-ತಮೋಗುಣಗಳ ಪ್ರಭಾವ ಅಲಿಲ್ಲ. ಹೀಗಾಗಿ ಅದು ಸಂಪೂರ್ಣ ಅಪ್ರಾಕೃತ.  ಅದು ಕಾಲದ ಪ್ರಭಾವಕ್ಕೊಳಪಟ್ಟು ಬದಲಾವಣೆ ಹೊಂದುವ ಲೋಕವಲ್ಲ. ಮಾಯೆಯ ಪರದೆ ಅಲಿಲ್ಲ. “ಅಲ್ಲಿರುವವರು ಸುರರಿಂದ ಮತ್ತು ಅಸುರರಿಂದ ಅರ್ಚಿತರಾಗುತ್ತಿದ್ದಾರೆ” ಎನ್ನುತ್ತಾರೆ ಶುಕಾಚಾರ್ಯರು. ಇಲ್ಲಿ ಶುಕಾಚಾರ್ಯರು ‘ಅಸುರ’ ಎನ್ನುವ ಪದವನ್ನು ಬಳಸಿರುವುದು ನಮಗೆ ಗೊಂದಲವನ್ನುಂಟುಮಾಡುತ್ತದೆ. ಇದರಿಂದಾಗಿ “ಅಸುರರಿಗೂ ಮೋಕ್ಷ ಸಿಗುವುದೇ?” ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ ಇಲ್ಲಿ ಬಳಸಿರುವ ಅಸುರ ಎನ್ನುವ ಪದಕ್ಕೆ ಬೇರೆ ಅರ್ಥವಿದೆ. “ಮಹದ್ದೇವಾನಾಂ ಅಸುರತ್ವಮೇತುಂ” ಎನ್ನುವ ಮಾತಿದೆ. ವೇದದಲ್ಲೂ ಕೂಡಾ ಅಸುರ ಎನ್ನುವ ಪದ ಬೇರೆ ಅರ್ಥದಲ್ಲಿ ಬಳಕೆಯಾಗಿರುವುದನ್ನು ನಾವು ಕಾಣುತ್ತೇವೆ. ಅಸು=ಪ್ರೇರಣೆ. ಹೀಗಾಗಿ ಎಲ್ಲವನ್ನೂ ಪ್ರೇರಣೆ ಮಾಡುವ ಭಗವಂತ ‘ಅಸು’. ಪ್ರಾಣದೇವರಿಗೂ ‘ಅಸು’ ಎನ್ನುತ್ತಾರೆ. ಹೀಗಾಗಿ ಪ್ರಾಣತತ್ತ್ವದಲ್ಲಿ, ಭಗವಂತನಲ್ಲಿ ಸುಖವನ್ನು ಕಾಣುವವರು ‘ಅಸುರರು’. ‘ನಾಹಂಕರ್ತಾ ಹರಿಃ ಕರ್ತಾ’ ಎಂದು ಭಗವಂತನ ಕರ್ತೃತ್ವಶಕ್ತಿಯ ಅರಿವಿನಿಂದ ಅರ್ಚಿಸುವ ದೇವತೆಗಳನ್ನು,  ಅಂಥಹ ದೇವತೆಗಳಿಂದ ಅರ್ಚಿತರಾಗುವ ಬ್ರಹ್ಮಾದಿಗಳನ್ನು  ಶ್ವೇತದ್ವೀಪದಲ್ಲಿ ಚತುರ್ಮುಖ ಕಾಣುತ್ತಾನೆ. [ಈಗಾಗಲೇ ಕಳೆದುಹೋಗಿರುವ ಅನಂತ ಬ್ರಹ್ಮಕಲ್ಪದಲ್ಲಿ ಮುಕ್ತಿಯನ್ನು ಪಡೆದ ಬ್ರಹ್ಮಾದಿಗಳು ಆತನಿಗೆ ವೈಕುಂಠಲೋಕದಲ್ಲಿ ಕಾಣಿಸುತ್ತಾರೆ].

ಮೋಕ್ಷದಲ್ಲೂ ಕೂಡಾ ತಾರತಮ್ಯವಿದೆ ಎನ್ನುವ ಅಪೂರ್ವವಾದ ವಿಷಯ ಇಲ್ಲಿ ನಮಗೆ ತಿಳಿಯುತ್ತದೆ.  ಅಂದರೆ ಅವರವರ ಸಾಧನೆಗೆ ತಕ್ಕಂತೆ ಸಿದ್ದಿ ಹೊರತು  ಎಲ್ಲರಿಗೂ ಸಮಾನವಾದ ಸಿದ್ದಿ ಎನ್ನುವುದಿಲ್ಲ. ಒಂದು ಕಲ್ಪ ಸಾಧನೆ ಮಾಡುವ ಮನುಷ್ಯನಿಗೂ, ನೂರು ಕಲ್ಪ ಸಾಧನೆ ಮಾಡುವ ಚತುರ್ಮುಖನಿಗೂ ಒಂದೇ ಸಿದ್ದಿ ಅಲ್ಲ. ಯೋಗ್ಯತೆಗನುಗುಣವಾದ  ಸಿದ್ದಿ. ಅಷ್ಟೇ ಅಲ್ಲಾ, ಶುಕಾಚಾರ್ಯರ ಮಾತಿನಿಂದ ತಿಳಿಯುವ ಇನ್ನೊಂದು ವಿಷಯ ಏನೆಂದರೆ: ಮೋಕ್ಷಕ್ಕೆ ಹೋದ ಜೀವ ಭಗವಂತನ ಜೊತೆ ಸೇರಿ ಭಗವಂತನೇ ಆಗಿ ಬಿಡುವುದಿಲ್ಲ, ಬದಲಿಗೆ ಆತ ಸದಾ ಭಗವಂತನೊಂದಿಗಿರುತ್ತಾನೆ. ಮೋಕ್ಷದಲ್ಲಿ ಹಿರಿಯ-ಕಿರಿಯ ಎನ್ನುವ ತಾರತಮ್ಯ ಇದ್ದರೂ ಕೂಡಾ ಅಲ್ಲಿ ಪೈಪೋಟಿ ಜಗಳವಿಲ್ಲ. ಕಿರಿಯರು ಹಿರಿಯರನ್ನು ಸದಾ ಗೌರವದಿಂದ ಕಾಣುತ್ತಾರೆ. ಏಕೆಂದರೆ ತ್ರೈಗುಣ್ಯದ ಮಾಯಪರದೆ ಅಲ್ಲಿಲ್ಲ. ಮೋಕ್ಷದಲ್ಲಿ  ಜ್ಞಾನಾನಂದಪೂರ್ಣನಾದ ಜೀವನಿಗೆ  ತನ್ನ ಸಿದ್ದಿಯ ಎತ್ತರ ಏನು ಎನ್ನುವ ಅರಿವಿರುತ್ತದೆ ಮತ್ತು  ಅದಕ್ಕನುಗುಣವಾಗಿ, ಭಗವಂತನ ಸೇವಕನಾಗಿ(ಹರೇರನುವ್ರತಾ) ಆತನಿರುತ್ತಾನೆ. ಭಗವಂತನ ಅಧೀನತ್ವ ಮೋಕ್ಷದಲ್ಲೂ ಇರುತ್ತದೆ ಎನ್ನುವ ಸತ್ಯ ಈ ಮಾತಿನಿಂದ ಸ್ಪಷ್ಟವಾಗಿ ತಿಳಿಯುತ್ತದೆ.
http://bhagavatainkannada.blogspot.in/

Sunday, October 18, 2015

Shrimad BhAgavata in Kannada -Skandha-02-Ch-09(02)


ಸಂಚಿಂತಯನ್ ದ್ವಕ್ಷರಮೇಕದಾಂಭಸ್ಯುಪಾಶೃಣೋದ್ ದ್ವಿರ್ಗದಿತಂ ವಚೋ ವಿಭುಃ
ಸ್ಪರ್ಶೇಷು ಯತ್ ಷೋಡಶಂ ಏಕವಿಂಶಂ ನಿಷ್ಕಿಂಚನಾನಾಂ ನೃಪ ಯದ್ ಧನಂ ವಿದುಃ ೦೬

ಸೃಷ್ಟಿಯ ಆದಿಯಲ್ಲಿ ಭಗವಂತ ತನ್ನ ನಾಭೀಕಮಲದಿಂದ ಚತುರ್ಮುಖನನ್ನು ಸೃಷ್ಟಿ ಮಾಡಿದ.  ಈ ರೀತಿ ಹುಟ್ಟಿದ ಚತುರ್ಮುಖನಿಗೆ ಅಲ್ಲಿ  ಏನೂ ಕಾಣಿಸಲಿಲ್ಲ. ಏಕೆಂದರೆ ಆಗಿನ್ನೂ ಪ್ರಪಂಚ ಸೃಷ್ಟಿಯಾಗಿರಲಿಲ್ಲ. ಆಗ “ನಾನು ಏಕೆ ಹುಟ್ಟಿದೆ? ನನ್ನನ್ನು ಯಾರು ಸೃಷ್ಟಿ ಮಾಡಿದರು? ನನ್ನ ಜನನದ ಉದ್ದೇಶವೇನು?” ಇಂಥಹ ಅನೇಕ ಪ್ರಶ್ನೆಗಳು ಚತುರ್ಮುಖನನ್ನು ಕಾಡಲಾರಂಭಿಸಿದವು. ಈ ರೀತಿ ಚತುರ್ಮುಖ ಗೊಂದಲಗೊಂಡಾಗ ಆತನಿಗೊಂದು ಶಬ್ದ ಕೇಳಿಸಿತಂತೆ. ಆ ಶಬ್ದ “ಸ್ಪರ್ಶಾಕ್ಷರಗಳಲ್ಲಿ ಹದಿನಾರು ಮತ್ತು ಇಪ್ಪತ್ತೊಂದನೇ ಅಕ್ಷರ” ಎಂದಿದ್ದಾರೆ ಶುಕಾಚಾರ್ಯರು! ಅಂದರೆ ಅವನಿಗೆ ಕೇಳಿಸಿದ ಶಬ್ದ ‘ತಪ’. [ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ಥ ದ ಧ ನ ಫ ಬ ಭ ಮ]. ತಪ ಎಂದರೆ ಆಲೋಚನೆ. “ಪ್ರಶ್ನೆ ಬಂದಾಗ ಉತ್ತರಕ್ಕಾಗಿ ಯಾರ್ರ್ಯಾರನ್ನೋ ಕೇಳುವ ಬದಲು ನೀನೇ ಯೋಚಿಸು. ನಿನ್ನ ಪ್ರಶ್ನೆಗೆ ಉತ್ತರ ನಿನಗೇ ಹೊಳೆಯುತ್ತದೆ” ಎನ್ನುವ, ಇಂದಿಗೂ ಅನ್ವಯವಾಗುವ ಅದ್ಭುತ ಸಂದೇಶವಿದು.
[ಇತ್ತೀಚೆಗೆ ಮುದ್ರಣಗೊಂಡ ಅನೇಕ ಪುಸ್ತಕಗಳಲ್ಲಿ  ಈ ಮೇಲಿನ ಶ್ಲೋಕದಲ್ಲಿನ  ಯತ್  ಷೋಡಶ  ಎನ್ನುವ ಪದವನ್ನು ಯಚ್ಛೋಡಶ ಎಂದು ತಪ್ಪಾಗಿ ಮುದ್ರಿಸಿರುವುದು ಕಾಣಸಿಗುತ್ತದೆ.   ಯತ್ +ಷೋಡಶ=ಯಚ್ಛೋಡಶ ಎಂದು ಸಂಸ್ಕೃತದಲ್ಲಿ ಸಂಧಿ ಮಾಡಲು ಬರುವುದಿಲ್ಲ. ಹೀಗಾಗಿ ಇದನ್ನು ಯತ್ ಷೋಡಶ ಎಂದು ಬಿಡಿಯಾಗಿ ಬರೆಯಬೇಕು. ಇನ್ನು ವ್ಯಾಕರಣ ಪುಸ್ತಕಗಳಲ್ಲಿ ‘ತಪ – ಸಂತಾಪೇ’ ಎನ್ನುವ ತಪ್ಪು ಅರ್ಥ ಮುದ್ರಣಗೊಂಡಿದ್ದು,  ಇಲ್ಲಿ ‘ತಪ’ ಎಂದರೆ ಸಂತಾಪವಲ್ಲ, ಬದಲಿಗೆ ಆಲೋಚನೆ]

ದಿವ್ಯಂ ಸಹಸ್ರಾಬ್ದಮಮೋಘದರ್ಶನೋ ಜಿತಾನಿಲಾತ್ಮಾ ವಿಜಿತೋಭಯೇಂದ್ರಿಯಃ
ಅತಪ್ಯತ ಸ್ಮಾಖಿಲಲೋಕತಾಪನಂ ತಪಸ್ತಪೀಯಾಂಸ್ತಪತಾಂ ಸಮಾಹಿತಃ ೦೮

ಭಗವಂತ “ನೀನೇ ಯೋಚಿಸು” ಎಂದು ಹೇಳಿದಾಗ ಚತುರ್ಮುಖ ಯೋಚಿಸಲಾರಂಭಿಸಿದನಂತೆ. “ಆತ ದೇವತೆಗಳ ಒಂದು ಸಾವಿರ ವರ್ಷಗಳಷ್ಟು ಕಾಲ ಯೋಚಿಸಿದ” ಎಂದಿದ್ದಾರೆ ಶುಕಾಚಾರ್ಯರು. ನಮಗೆ ತಿಳಿದಂತೆ ನಮ್ಮ ಒಂದು ವರ್ಷ ದೇವತೆಗಳಿಗೆ ಒಂದು ದಿನವಿದ್ದಂತೆ.  ಹೀಗಾಗಿ ದೇವತೆಗಳ ಒಂದು ಸಾವಿರ ವರ್ಷ ನಮ್ಮ ಕಾಲಮಾನದ ಪ್ರಕಾರ ೩,೬೦,೦೦೦ ವರ್ಷಗಳು. ಆದರೆ ನಮ್ಮ ೧ ಲಕ್ಷ ವರ್ಷ ಚತುರ್ಮುಖನ ಒಂದು  ಸೆಕೆಂಡ್.  ಹೀಗಾಗಿ ದೇವತೆಗಳ ೧ ಸಾವಿರ ವರ್ಷಗಳು ಚತುರ್ಮುಖನ ೩.೬ ಸೆಕೆಂಡ್ ಅಷ್ಟೇ. ಹೀಗೆ  ಯೋಚಿಸಿದ ಚತುರ್ಮುಖನಿಗೆ ತಕ್ಷಣ ಉತ್ತರ ಹೊಳೆಯಿತಂತೆ.
ಚತುರ್ಮುಖನನ್ನು ಇಲ್ಲಿ ಶುಕಾಚಾರ್ಯರು ‘ಅಮೋಘ ದರ್ಶನಃ, ಜಿತಾನಿಲಾತ್ಮಾ ಮತ್ತು ವಿಜಿತೋಭಯೇಂದ್ರಿಯಃ ಎನ್ನುವ ವಿಶೇಷಣ ಬಳಸಿ ಸಂಬೋಧಿಸಿದ್ದಾರೆ.  ಚತುರ್ಮುಖ ಎಂದೂ ತಪ್ಪಾಗಿ ಯೋಚಿಸಲಾರ. ಜ್ಞಾನದ ಕಡೆಗೆ ಆತನ ಪಯಣ ಎಂದೂ ತಪ್ಪಾಗಲು ಸಾಧ್ಯವಿಲ್ಲ. ಪ್ರಾಣಶಕ್ತಿ/ಪ್ರಾಣಾಯಾಮ ಆತನ ಸಹಜ ಧರ್ಮ ಮತ್ತು ಆತ ಇಂದ್ರಿಯಗಳನ್ನು ಸಂಪೂರ್ಣ ಗೆದ್ದವನು. ಅಂತಹ  ಜನ್ಮತಃ  ಸರ್ವಜ್ಞನಾದ, ಶ್ರೇಷ್ಠ ಚಿಂತಕನಾದ  ಚತುರ್ಮುಖ ಇಡೀ ಬ್ರಹ್ಮಾಂಡವನ್ನು ಬೆಳಗಿಸುವ ಶಕ್ತಿಯಾದ, ಜ್ಞಾನರೂಪಿ ಭಗವಂತನನ್ನು ಕುರಿತು  ಆಳವಾದ ಚಿಂತನೆ(ತಪಸ್ಸು) ಮಾಡಿದನಂತೆ. [ಕೆಲವರು  ಇಲ್ಲಿ ಹೇಳಿದ  ‘ಅಖಿಲಲೋಕತಾಪನಂ’ ಎನ್ನುವ ಸಂಬೋಧನೆಯನ್ನು ‘ಇಡೀ ಲೋಕವನ್ನು ಸುಟ್ಟುಬಿಡುವಂತಹ ಉಗ್ರ ತಪಸ್ಸು’  ಎಂದು ವ್ಯಾಖ್ಯಾನ ಮಾಡಿದ್ದಾರೆ. ಆದರೆ ಚತುರ್ಮುಖ ಭಗವಂತನ ಬಗೆಗೆ ಯೋಚಿಸಿದ ಈ ಕಾಲದಲ್ಲಿ ಇನ್ನೂ ಲೋಕದ ಸೃಷ್ಟಿಯೇ ಆಗಿರುವುದಿಲ್ಲ. ಹೀಗಾಗಿ ಮೇಲಿನ ಅರ್ಥ ಅಲ್ಲಿ ಕೂಡುವುದಿಲ್ಲ. ಆದ್ದರಿಂದ  ಅಖಿಲಲೋಕತಾಪನಂ ಎನ್ನುವುದು ‘ಇಡೀ ಬ್ರಹ್ಮಾಂಡವನ್ನು ಬೆಳಗಿಸುವ ಶಕ್ತಿ’ ಎಂದು ಭಗವಂತನನ್ನು ಸಂಬೋಧಿಸುವ ವಿಶೇಷಣ].    

ತಸ್ಮೈ ಸ್ವಲೋಕಂ ಭಗವಾನ್ ಸಭಾಜಿತಃ ಸಂದರ್ಶಯಾಮಾಸ ಪರಂ ನ ಯತ್ ಪದಮ್
ವ್ಯಪೇತಸಂಕ್ಲೇಶವಿಮೋಹಸಾಧ್ವಸಂ ಸಂದೃಷ್ಟವದ್ಭಿರ್ವಿಬುಧೈರಭಿಷ್ಟುತಮ್ ೦೯


ಚತುರ್ಮುಖ ಭಗವಂತನ ಚಿಂತನೆ ಮಾಡಿದಾಕ್ಷಣ, ಆತನ ಚಿಂತನೆಯಿಂದ ಪೂಜಿತನಾದ ಭಗವಂತ ತನ್ನ ನಿತ್ಯಲೋಕವಾದ ಶ್ವೇತದ್ವೀಪದ ದರ್ಶನವನ್ನು ನೀಡುತ್ತಾನೆ. ಎಂಥಹ ಲೋಕವನ್ನು ಚತುರ್ಮುಖ ಕಂಡ ಎನ್ನುವುದರ ಸಂಕ್ಷಿಪ್ತ ಚಿತ್ರಣವನ್ನು ಇಲ್ಲಿ ಶುಕಾಚಾರ್ಯರು ನೀಡಿದ್ದಾರೆ: “ಅದಕ್ಕಿಂತ ಮಿಗಿಲಾದ ಇನ್ನೊಂದು ಸ್ಥಾನ ಇಲ್ಲ” ಎಂದಿದ್ದಾರೆ ಶುಕಾಚಾರ್ಯರು. ಭ್ರಮೆ, ಭಯ ಮತ್ತು ದುಃಖದ ಸ್ಪರ್ಶವೇ ಇಲ್ಲದ ಅದ್ಭುತ ಲೋಕವನ್ನು ಮತ್ತು ಅಲ್ಲಿ ಭಗವಂತನನ್ನು ಸ್ತೋತ್ರಮಾಡುತ್ತಿರುವ ಮುಕ್ತರನ್ನು ಚತುರ್ಮುಖ ಕಂಡನಂತೆ. ಈ ರೀತಿ ತನ್ನ ರೂಪವನ್ನು ತೋರಿದ ಭಗವಂತ ಚತುರ್ಮುಖನಿಗೆ ಉಪದೇಶ ಮಾಡುತ್ತಾನೆ. ತನ್ನ ತಂದೆಯಾದ ವೇದವ್ಯಾಸರಿಂದ ಕೇಳಿ ತಿಳಿದ ಆ ಉಪದೇಶವನ್ನೇ ಇಲ್ಲಿ ಶುಕಾಚಾರ್ಯರು ಪರೀಕ್ಷಿತನಿಗೆ ಉಪದೇಶಿಸಲಿದ್ದಾರೆ. http://bhagavatainkannada.blogspot.in/

Saturday, October 17, 2015

Shrimad BhAgavata in Kannada -Skandha-02-Ch-09(01)

http://bhagavatainkannada.blogspot.in/

ನವಮೋSಧ್ಯಾಯಃ


ಶ್ರೀಶುಕ ಉವಾಚ--
ಆತ್ಮಮಾಯಾಮೃತೇ ರಾಜನ್ ಪರಸ್ಯಾನುಭವಾತ್ಮನಃ
ನ ಘಟೇತಾರ್ಥಸಂಬಂಧಃ ಸ್ವಪ್ನೇ  ದ್ರಷ್ಟುರಿವಾಂಜಸಾ ೦೧

ವಿವರವಾಗಿ ಭಾಗವತವನ್ನು ಉಪದೇಶ ಮಾಡುವ ಮುನ್ನ ಅದ್ಭುತವಾದ ಮಾತೊಂದನ್ನು ಶುಕಾಚಾರ್ಯರು ಹೇಳುವುದನ್ನು ನಾವಿಲ್ಲಿ  ಕಾಣುತ್ತೇವೆ.  ಪುರಾಣ ಅಧ್ಯಯನ ಮಾಡುವಾಗ ನಮ್ಮ ನಿಲುವು ಹೇಗಿರಬೇಕು ಎನ್ನುವುದನ್ನು ಈ ಶ್ಲೋಕ ವಿವರಿಸುತ್ತದೆ. ಈ ಮಾತು ಬಹಳ ವಿಚಿತ್ರವಾಗಿದೆ. ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಜೀವನಿಗೂ ಮತ್ತು ಆತನ ಶರೀರಕ್ಕೂ ಏನೂ ಸಂಬಂಧವಿಲ್ಲ” ಎಂದು. ಅಂದರೆ: “ಇದು ನನ್ನ ದೇಹ” ಎಂದು ಹೇಳುವುದು ತಪ್ಪು, ಏಕೆಂದರೆ ಜೀವದಿಂದ ದೇಹ ತೀರ ವಿಲಕ್ಷಣ. ಅದು ಮಣ್ಣು-ನೀರು-ಬೆಂಕಿಯಿಂದಾಗಿದೆ. ಆದರೆ ಜೀವ ‘ಜ್ಞಾನಸ್ವರೂಪ’ವಾದುದು. ಹೀಗಾಗಿ ಸ್ವರೂಪಭೂತವಾದ ಜೀವಕ್ಕೂ ತ್ರಿಗುಣಾತ್ಮಕವಾದ ಶರೀರಕ್ಕೂ ಸಂಬಂಧವಿಲ್ಲ ಎನ್ನುವ ಮಾತನ್ನು ಶುಕಾಚಾರ್ಯರು ಪರೀಕ್ಷಿತನಿಗೆ ವಿವರಿಸಿದ್ದಾರೆ.

ಈ ಮೇಲಿನ ಮಾತನ್ನು ಅರ್ಥಮಾಡಿಕೊಳ್ಳಲು ಶುಕಾಚಾರ್ಯರು ಸ್ವಪ್ನದ ದೃಷ್ಟಾಂತವನ್ನು ಇಲ್ಲಿ ನೀಡಿದ್ದಾರೆ. ಕನಸಿನಲ್ಲಿ ನಾವು ಏನೇನನ್ನೋ ನೋಡುತ್ತೇವೆ. ಆದರೆ ಎಚ್ಚರವಾದಮೇಲೆ ಅದಾವುದೂ ಅಲ್ಲಿರುವುದಿಲ್ಲ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಹೇಳುವಂತೆ: ನ ತತ್ರ ರಥಾಃ ನ ರಥಯೋಗಾ ನ ಪಂಥಾನೋ ಭವಂತಿ ಅಥ ರಥಾನ್ ರಥಯೋಗಾನ್  ಪಥಃ ಸೃಜತೇ; ನ ತತ್ರಾನಂದಾ ಮುದಃ ಪ್ರಮುದೋ ಭವಂತಿ, ಅಥಾನಂದಾನ್  ಮುದಃ ಪ್ರಮುದಃ ಸೃಜತೇ; ನ ತತ್ರ ವೇಶಾಂತಾಃ ಪುಷ್ಕರಿಣ್ಯಃ ಸ್ರವಂತ್ಯೋ ಭವಂತಿ, ಅಥ ವೇಶಾಂತಾನ್ ಪುಷ್ಕರಿಣೀಃ ಸ್ರವಂತೀಃ ಸೃಜತೇ; ಸ ಹಿ ಕರ್ತಾ” (೪-೩-೧೦).  ಅಂದರೆ- ಅಲ್ಲಿ ರಥವಿಲ್ಲ-ಕುದುರೆಗಳಿಲ್ಲ-ರಸ್ತೆಗಳಿಲ್ಲ, ಆನಂದ-ಹರ್ಷ-ಪ್ರಮೋದಗಳಿಲ್ಲ, ಕೆರೆ-ಸರೋವರ-ನದಿಗಳಿಲ್ಲ. ಆದರೆ ಎಲ್ಲವನ್ನೂ ಸೃಷ್ಟಿಮಾಡಿ ನಮ್ಮ ಅನುಭವಕ್ಕೆ ಬರುವಂತೆ ಮಾಡುತ್ತಾನೆ ಕನಸಿನ ನಿಯಾಮಕನಾದ ತೈಜಸ ನಾಮಕ ಭಗವಂತ. ಇದೇ ರೀತಿ ಜೀವಕ್ಕೆ ದೇಹದ ನಂಟು. ದೇಹ ಬಂದಿರುವುದು ನಮ್ಮ ಇಚ್ಛೆಯಂತೆ ಅಲ್ಲ. ಅದು ಭಗವಂತನ ಇಚ್ಛೆಯಂತೆ ಬಂದಿರುವುದು. ಅಲ್ಲಿ ನಮ್ಮ ಜೀವಸ್ವಭಾವಕ್ಕನುಗುಣವಾಗಿ  ತ್ರಿಗುಣಗಳು ಕೆಲಸ ಮಾಡುತ್ತಿರುತ್ತವೆ ಮತ್ತು ತ್ರಿಗುಣದ ಪರಿಮಾಣ ಮತ್ತು ಪ್ರಭಾವಕ್ಕನುಗುಣವಾಗಿ ಜೀವನದಲ್ಲಿ ಘಟನೆಗಳು ನಡೆಯುತ್ತಿರುತ್ತವೆ.
ನಮಗೆ ಯಾವ ತಾಯಿಯ ಹೊಟ್ಟೆಯಲ್ಲಿ, ಯಾವಪರಿಸರದಲ್ಲಿ  ಹುಟ್ಟಿಬರುತ್ತೇವೆ ಎನ್ನುವುದು ತಿಳಿದಿರುವುದಿಲ್ಲ. ತಂದೆ-ತಾಯಿಯರನ್ನು ನಾವು ಆಯ್ಕೆ ಮಾಡಿಕೊಳ್ಳುವುದಲ್ಲ.  ಹುಟ್ಟಿದ ಮೇಲೂ ನಮಗೆ ದೇಹದ ಮತ್ತು ಪ್ರಪಂಚದ ಅರಿವು ಮೂಡಲು ಸಮಯ ಬೇಕಾಗುತ್ತದೆ. ನಮ್ಮೆಲ್ಲಾ  ಕರ್ಮಗಳು ಜೀವಸ್ವಭಾವಕ್ಕನುಗುಣವಾಗಿ, ಪರಿಸರದ ಪ್ರಭಾವದಲ್ಲಿ, ಸತ್ವ-ರಜಸ್ಸು-ತಮೋಗುಣಗಳೆಂಬ ಮಾಯೆಯ ಮಡಿಲಲ್ಲಿ,   ಭಗವಂತನ ಇಚ್ಛೆಯಂತೆ ನಡೆಯುತ್ತಿರುತ್ತದೆ. ಮಾಯೆಯ ಮುಸುಕು ನಮ್ಮನ್ನು ಆವರಿಸಿಕೊಂಡಿದ್ದು,  ನಾವು ಆ ಮುಸುಕಿನಲ್ಲಿ ಬದುಕುತ್ತಿರುತ್ತೇವೆ.  ಇದನ್ನು “ಆತ್ಮಮಾಯೆ”  ಎಂದು ಕರೆದಿದ್ದಾರೆ ಶುಕಾಚಾರ್ಯರು.  ಶುಕಾಚಾರ್ಯರ ಈ ಮಾತು ಪೂರ್ಣ ಪ್ರಮಾಣದಲ್ಲಿ ಅರ್ಥವಾಗಬೇಕಾದರೆ ನಾವು ಭಾಗವತವನ್ನು ಸಂಪೂರ್ಣ ಅಧ್ಯಯನ ಮಾಡಬೇಕಾಗುತ್ತದೆ.

ಬಹುರೂಪ ಇವಾಭಾತಿ ಮಾಯಯಾ ಬಹುರೂಪಯಾ
ರಮಮಾಣೋ ಗುಣೇಷ್ವಸ್ಯಾ ಮಮಾಹಮಿತಿ ಮನ್ಯತೇ ೦೨

ಒಂದು ಜನ್ಮದಲ್ಲಿ ಮನುಷ್ಯನಾಗಿ ಹುಟ್ಟಿದಮಾತ್ರಕ್ಕೆ  ಪ್ರತಿಜನ್ಮದಲ್ಲಿ ಮನುಷ್ಯನಾಗಿ ಹುಟ್ಟುತ್ತಾನೆ ಎನ್ನುವ ನಿಯಮವಿಲ್ಲ. ಪೂರ್ವಜನ್ಮದ ಸಂಸ್ಕಾರಕ್ಕನುಗುಣವಾಗಿ ಜೀವಿಯ ಮುಂದಿನ ಜನ್ಮ ನಿರ್ಧಾರವಾಗುತ್ತದೆ. ಕ್ರೂರಿಯಾಗಿ ಬದುಕಿದರೆ ಮುಂದಿನ ಜನ್ಮದಲ್ಲಿ ವ್ಯಾಘ್ರನಾಗಬಹುದು; ಕೊಳಕನಾಗಿ ಬದುಕಿದರೆ ಮುಂದಿನ ಜನ್ಮದಲ್ಲಿ ಹಂದಿಯಾಗಬಹುದು; ಅಧ್ಯಯಶೀಲತೆಯನ್ನು ಮರೆತು ಬದುಕಿದವ ಮುಂದೆ ಮರವಾಗಿ ಹುಟ್ಟಬಹುದು.  ಹೀಗಾಗಿ ತ್ರಿಗುಣಗಳ ಪ್ರಭಾವದಿಂದ  ಪೂರ್ವಜನ್ಮದಲ್ಲಿ ನಮ್ಮ ಸ್ವಭಾವಕ್ಕನುಗುಣವಾಗಿ ನಮ್ಮಿಂದ ಏನು ಕರ್ಮ ನಡೆಯಿತೋ, ಅದಕ್ಕನುಗುಣವಾಗಿ ಮುಂದಿನ ಜನ್ಮ. ಈ ಎಲ್ಲಾ ಕಾರಣದಿಂದ ಜನ್ಮದ ಹೆಗ್ಗಳಿಕೆ, ಜಾತಿಯಯ ಹೆಗ್ಗಳಿಕೆ, ನಾನು-ನನ್ನದು ಎನ್ನುವ ಅಹಂಕಾರ-ಮಮಕಾರ  ಎಲ್ಲವೂ ವ್ಯರ್ಥ. ಯಾವುದೂ ಶಾಶ್ವತವಲ್ಲ ಮತ್ತು ಯಾವುದರ ನಿಯಂತ್ರಣವೂ ನಮ್ಮಕೈಯಲಿಲ್ಲ. ಒಂದೊಂದು ಜನ್ಮದಲ್ಲಿ ಒಂದೊಂದು ವೇಷ. ಈ ವೇಷವನ್ನು ತೊಡಿಸುವ ಮಾಯೆ ನಮ್ಮನ್ನು ವಿಧವಿಧವಾಗಿ ಆಡಿಸುತ್ತಿರುತ್ತದೆ.  ಆದರೆ ತ್ರಿಗುಣಗಳ ಮಾಯಾ ಪರದೆಯಲ್ಲಿ ಸಿಲುಕಿದ ನಮಗೆ ಯಾವುದರ ಅರಿವೂ ಇರುವುದಿಲ್ಲ. ಸತ್ಯದ ಸಾಕ್ಷಾತ್ಕಾರವಾಗಲು ನಾವು ಈ ತ್ರಿಗುಣಗಳ ಮಾಯಾ ಪೊರೆಯಿಂದಾಚೆ ಬರಬೇಕು.
ಯರ್ಹಿ ಚಾಯಂ ಮಹಿತ್ವೇ ಸ್ವೇ ಪರಸ್ಮಿನ್ ಕಾಲಮಾಯಯೋಃ
ರಮತೇ ಗತಸಮ್ಮೋಹಸ್ತ್ಯಕ್ತ್ವೋದಾಸ್ತೇ ತದೋಭಯಮ್ ೦೩

ಭಗವಂತನನ್ನು ತಿಳಿಯುವ ಮೊದಲು ನಾವು ನಮ್ಮ ಸ್ವರೂಪವನ್ನು ತಿಳಿದುಕೊಳ್ಳಬೇಕು. ಆ ಅರಿವಿಲ್ಲದೆ ಭಗವಂತನನ್ನು ತಿಳಿಯುವುದು ಸಾಧ್ಯವಿಲ್ಲ. ಸ್ವರೂಪಭೂತವಾದ ಜೀವ  ಸತ್ವ-ರಜಸ್ಸು-ತಮೋಗುಣಳಿಂದಾದ ದೇಹದ ಒಳಗೆ ಬಂಧಿ. ಅನಾದಿ-ಅನಂತವಾಗಿರುವ ಆ ಜೀವ ಕಾಲಬದ್ಧವಲ್ಲ. ತ್ರಿಗುಣಾತ್ಮಕವಾದ ಮಾಯೆಯ ಬಂಧಕ ಶಕ್ತಿಯಿಂದಾಚೆಗೆ ನಿಂತು ನೋಡಿದಾಗ ಮಾತ್ರ ಈ ಸತ್ಯ ತಿಳಿಯುತ್ತದೆ. ಒಮ್ಮೆ ಈ ಸತ್ಯ ತಿಳಿದರೆ ಆಗ ಎಲ್ಲಾ ಭ್ರಮೆ ಹೊರಟು  ಹೋಗುತ್ತದೆ ಮತ್ತು ಆಗ ಸಿಗುವ ಆನಂದಕ್ಕೆ ಸಾಟಿ ಇಲ್ಲ. ಹೀಗಾಗಿ ಮಾಯೆ ತೊಡಿಸಿರುವ ತ್ರಿಗುಣಾತ್ಮಕವಾದ ಕೃತಕ ವೇಷದ ಭ್ರಮೆಯಲ್ಲಿ ಬೀಳದೇ ಅದನ್ನು ಮೀರಿ ಸತ್ಯವನ್ನು ತಿಳಿಯುವ ಪ್ರಯತ್ನ ಮಾಡಬೇಕು.     

ಆತ್ಮತತ್ತ್ವವಿಶುದ್ಧ್ಯರ್ಥಂ ಯದಾಹ ಭಗವಾನೃತಮ್
ಬ್ರಹ್ಮಣೇSದರ್ಶಯದ್ ರೂಪಮವ್ಯಲೀಕವ್ರತಾದೃತಃ ೦೪


ಆತ್ಮ- ಪರಮಾತ್ಮ ಎಂದರೇನು ಎನ್ನುವ ಆತ್ಮತತ್ತ್ವದ ಅರಿವನ್ನು ನಮಗೆ ತಿಳಿಯಪಡಿಸುವುದಕ್ಕೋಸ್ಕರವೇ ಮೊಟ್ಟಮೊದಲು, ಸೃಷ್ಟಿಯ ಆದಿಯಲ್ಲಿ ಭಗವಂತ ಈ ಜ್ಞಾನವನ್ನು ಚತುರ್ಮುಖನಿಗೆ ಉಪದೇಶಿಸಿದ. ಈ ಜಗತ್ತಿನ ಮೊದಲ ಜೀವ ಚತುರ್ಮುಖನ ಧ್ಯಾನಕ್ಕೆ ಮೆಚ್ಚಿದ ಭಗವಂತ ಆತನಿಗೆ ದರ್ಶನ ನೀಡಿದ ಮತ್ತು ವಿಶ್ವದ ರಹಸ್ಯವನ್ನು ಆತನಿಗೆ ಉಪದೇಶಿಸಿದ. ಇಲ್ಲಿ ಪರೀಕ್ಷಿತನಿಗೆ ಭಾಗವತವನ್ನು ಉಪದೇಶಿಸಲಿರುವ ಶುಕಾಚಾರ್ಯರು ಹೇಳುತ್ತಾರೆ: “ ಈ ರೀತಿ ಸ್ವಯಂ ಭಗವಂತನಿಂದ ಚತುರ್ಮುಖನಿಗೆ ಉಪದೇಶಿಸಲ್ಪಟ್ಟ ಅಪೂರ್ವವಾದ ಯಥಾರ್ಥ ಜ್ಞಾನವನ್ನು ನಾನು ನಿನಗೆ ಉಪದೇಶಿಸುತ್ತೇನೆ” ಎಂದು.    

Monday, October 12, 2015

Shrimad BhAgavata in Kannada -Skandha-02-Ch-08(02)



ಪುರುಷಾವಯವೈರ್ಲೋಕಾಃ ಸಪಾಲಾಃ ಪೂರ್ವಕಲ್ಪಿತಾಃ
ಲೋಕೈರಮುಷ್ಯಾವಯವಾಃ ಸಪಾಲೈರಿತಿ ಶುಶ್ರುಮಃ ೧೧

ಭಗವಂತನ ಕಥೆಯನ್ನು ಹೇಳುವಾಗ ಕೇವಲ ಭಗವಂತನ ಕುರಿತು ಹೇಳಲು ಸಾಧ್ಯವಿಲ್ಲ. ಭಗವಂತನ ಕಥೆಯನ್ನು ತಿಳಿಯಬೇಕಾದರೆ ಅಲ್ಲಿ ಆತನ ಪರಿವಾರವನ್ನೂ ತಿಳಿದುಕೊಳ್ಳಬೇಕಾಗುತ್ತದೆ ಮತ್ತು ಜೊತೆಗೆ ಪ್ರಪಂಚವನ್ನು ಸೃಷ್ಟಿಸಿದ ಭಗವಂತನ ಗುಣಾನುಸಂಧಾನದಿಂದ ಪ್ರಪಂಚವನ್ನೂ ತಿಳಿದುಕೊಳ್ಳಬೇಕಾಗುತ್ತದೆ. ಇದನ್ನು ಬಿಟ್ಟು ಪ್ರಪಂಚ ಮಿಥ್ಯ ಎಂದುಕೊಂಡರೆ ಭಗವಂತನ ಗುಣಾನುಸಂಧಾನ ಮಾಡಲು ಸಾಧ್ಯವಿಲ್ಲ.
ಶಾಸ್ತ್ರಗಳು ಹೇಳುವಂತೆ ಭಗವಂತ ಸೃಷ್ಟಿಪೂರ್ವದಲ್ಲಿ ಮೊತ್ತಮೊದಲು ಪುರುಷರೂಪವನ್ನು  ಧರಿಸಿದ. ಪುರುಷರೂಪ ಎಂದರೆ ಅದು ಮನುಷ್ಯನ ಅವಯವಗಳನ್ನು ಹೋಲುವ ರೂಪ. ಇದು ಭಗವಂತನ ಅನಂತ ರೂಪಗಳಲ್ಲಿ ಒಂದು. ಆದರೆ ಆ ರೂಪದ ವಿಶೇಷತೆ ಏನೆಂದರೆ: ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷ: ಸಹಸ್ರಪಾತ್. ಇಲ್ಲಿ ಭಗವಂತನಿಗೆ ಸಹಸ್ರಾರು ತಲೆಗಳು, ಸಹಸ್ರಾರು ಕೈ-ಕಾಲುಗಳು. ಹೀಗೆ ಸಹಸ್ರಾರು ಅಂಗಾಂಗಗಳುಳ್ಳ ಈ ರೂಪ ಇಡೀ ಬ್ರಹ್ಮಾಂಡವನ್ನು ತುಂಬಿ ನಿಲ್ಲುವ ಅದ್ಭುತ ರೂಪ. ಭಗವಂತನ ಶಿರಸ್ಸಿನಿಂದ ಸ್ವರ್ಗದ ಸೃಷ್ಟಿಯಾಯಿತು, ನಾಭಿಯಿಂದ ಅಂತರಿಕ್ಷದ ಸೃಷ್ಟಿ ಮತ್ತು ಪಾದದಿಂದ ಭೂಮಿಯ ಸೃಷ್ಟಿಯಾಯಿತು ಎನ್ನುತ್ತದೆ ಪುರುಷಸೂಕ್ತ. ನಾಭ್ಯಾಆಸೀದಂತರಿಕ್ಷಂ ಶೀರ್ಷ್ಣೋದ್ಯೌಃಸಮವರ್ತತ.  ಪದ್ಭ್ಯಾಂಭೂಮಿರ್ದಿಶಃ ಶ್ರೋತ್ರಾತ್ತಥಾಲೋಕಾಃ ಅಕಲ್ಪಯನ್ ।।೧೪।। . ಆದರೆ ಶಾಸ್ತ್ರಗಳಲ್ಲಿ ಇನ್ನು ಕೆಲವೆಡೆ  ಭೂಮಿಯೇ ಭಗವಂತನ ಪಾದ, ಭಗವಂತನ ತಲೆಯೇ ಸ್ವರ್ಗ, ಆಕಾಶ ಭಗವಂತನ ಹೃದಯಭಾಗ ಎನ್ನುವ ವಿವರಣೆ ಬರುತ್ತದೆ. ಇಲ್ಲಿ ಪರೀಕ್ಷಿತನ ಪ್ರಶ್ನೆ ಏನೆಂದರೆ: ಲೋಕಗಳೇ ಭಗವಂತನ  ಅವಯವಗಳೋ ಅಥವಾ ಭಗವಂತನ ಅವಯವಗಳಿಂದ ಲೋಕಗಳ ಸೃಷ್ಟಿಯಾಯಿತೋ ಎನ್ನುವುದು.  “ಸೃಷ್ಟಿ ಎಂದರೇನು? ‘ಭಗವಂತ ಸೃಷ್ಟಿ ಮಾಡುತ್ತಾನೆ” ಎನ್ನುವುದರ ಅರ್ಥವೇನು? ಪ್ರಪಂಚಕ್ಕೂ ಭಗವಂತನಿಗೂ ನಡುವೆ ಇರುವ ಸಂಬಂಧವೇನು? ಈ ಪ್ರಪಂಚವೇ ಭಗವಂತನ ರೂಪವೋ ಅಥವಾ ಭಗವಂತ ಪ್ರಪಂಚಕ್ಕಿಂತ ಭಿನ್ನನಾಗಿ ನಿಂತು ಪ್ರಪಂಚಕ್ಕೆ ರೂಪ ನೀಡುತ್ತಾನೋ? ನಾವು ಭಗವಂತನ ಪರಿಕಲ್ಪನೆ ಹೇಗೆ ಮಾಡಬೇಕು ಎನ್ನುವುದನ್ನು ನನಗೆ ವಿವರಿಸಿ ಹೇಳಿ”  ಎಂದು ಶುಕಾಚಾರ್ಯರನ್ನು ಕೇಳುತ್ತಾನೆ ಪರೀಕ್ಷಿತ.
ಈ ಶ್ಲೋಕದಲ್ಲಿ ಶುಶ್ರುಮಃ  ಎನ್ನುವ ಪದಪ್ರಯೋಗವಿದೆ. ‘ಕೇಳಿದ್ದೆ’ ಎಂದು ಭೂತಕಾಲದಲ್ಲಿ ಹೇಳುವಾಗ  ಶುಶ್ರುಮ ಎಂದು ಹೇಳಬೇಕು. ಆದರೆ ಇಲ್ಲಿ ವಿಸರ್ಗವನ್ನು ಸೇರಿಸಿ ಹೇಳಲಾಗಿದೆ. ಇದು ಎರಡು ಕಾಲಗಳನ್ನು ಒಟ್ಟು ಮಾಡಿ ಪ್ರಯೋಗಿಸುವ ಚಮತ್ಕಾರ. ಅಂದರೆ ಹಿಂದೆ ಕೇಳಿರುವುದಷ್ಟೇ ಅಲ್ಲ, ಈಗಲೂ ಕೂಡಾ ಅದೇ ಮಾತನ್ನು ಹೇಳುತ್ತಾರೆ ಎನ್ನುವ ಅರ್ಥದಲ್ಲಿ ಶುಶ್ರುಮಃ ಎನ್ನುವ ಪದಪ್ರಯೋಗ ಮಾಡಿದ್ದಾರೆ ವ್ಯಾಸರು. [“ಭೂಮಿ ಭಗವಂತನ ಪಾದವೆಂದು ಹೇಳುತ್ತಾರೆ ಮತ್ತು ಭಗವಂತನ ಪಾದದಿಂದ ಭೂಮಿ ಸೃಷ್ಟಿಯಾಯಿತೆಂದೂ ಹೇಳುತ್ತಾರೆ. ಈ ಮಾತನ್ನು ಹಿಂದೆಯೂ ಶಾಸ್ತ್ರಕಾರರು ಹೇಳಿರುವುದನ್ನು ನಾನು ಕೇಳಿದ್ದೆ ಮತ್ತು ಈಗಲೂ ಕೂಡಾ ಕೇಳುತ್ತಿದ್ದೇನೆ” ಎಂದು ಪರೀಕ್ಷಿತ ಹೇಳಿದ ಎನ್ನುವುದನ್ನು  ಶುಶ್ರುಮಃ ಪದ ಸೂಚಿಸುತ್ತದೆ ]   

ಯಸ್ಮಿನ್ ಕರ್ಮಸಮಾವಾಪೋ ಯಥಾ ಯೇನೋಪಗೃಹ್ಯತೇ
ಗುಣಾನಾಂ ಗುಣಿನಾಂ ಚೈವ ಪರಿಮಾಣಂ ಸುವಿಸ್ತರಮ್  ೧೪

ಎಲ್ಲರನ್ನೂ ಕಾಡುವ ಅತ್ಯಂತ ಮುಖ್ಯವಾದ ಪ್ರಶ್ನೆಯೊಂದನ್ನು ಪರೀಕ್ಷಿತ ಶುಕಾಚಾರ್ಯರ ಮುಂದಿಡುವುದನ್ನು ನಾವಿಲ್ಲಿ ಕಾಣುತ್ತೇವೆ. ನಮಗೆ ತಿಳಿದಂತೆ ಕರ್ಮಕ್ಕೆ ತಕ್ಕಂತೆ ನಮಗೆ ಸುಖ-ದುಃಖದ ಫಲ ದೊರೆಯುತ್ತದೆ. ಪಾಪ ಮಾಡಿದರೆ ನರಕ,  ಪುಣ್ಯ ಮಾಡಿದರೆ ಸ್ವರ್ಗ ಎನ್ನುವುದು ಸಮಸ್ತ ಶಾಸ್ತ್ರಗಳ ಸಾರ. ಆದರೆ ಇನ್ನೊಂದೆಡೆ ನಾಹಂ ಕರ್ತಾ ಹರಿಃ ಕರ್ತಾ ಎನ್ನುತ್ತಾರೆ. ಅಂದರೆ “ನಾನು ಮಾಡಿದೆ ಎಂದರೆ ಅದು ಅಹಂಕಾರವಾಗುತ್ತದೆ, ಎಲ್ಲವನ್ನೂ ಮಾಡಿಸುವವನು ಆ ಭಗವಂತ” ಎನ್ನುತ್ತವೆ ಶಾಸ್ತಗಳು. ಇಲ್ಲಿ ಪರೀಕ್ಷಿತನ ಪ್ರಶ್ನೆ ಏನೆಂದರೆ: “ನಾವು ಏನನ್ನೂ ಮಾಡಿಲ್ಲ, ಎಲ್ಲವನ್ನೂ ಭಗವಂತನೇ ಮಾಡಿಸಿದ ಎಂದಮೇಲೆ, ಭಗವಂತ ನಮ್ಮ ಮೂಲಕ ಮಾಡಿಸುವ ಕರ್ಮದ ನಂಟು ನಮಗೇಕೆ?” ಎನ್ನುವುದು.
ಕರ್ಮ ಎನ್ನುವುದು ಜಡ. ಹೀಗಾಗಿ  ಕರ್ಮದಿಂದ ನೇರವಾಗಿ ಸುಖ-ದುಃಖ ಬರಲಾರದು. ಆದರೆ ಕರ್ಮದ ಮೂಲಕವೇ ಎಲ್ಲವೂ ನಡೆಯುತ್ತದೆ. ಕರ್ಮ ಮಾಡಿಸುವವನೂ ಭಗವಂತ, ಕರ್ಮದ ಫಲ ಕೊಡುವವನು ಭಗವಂತ. ಹೀಗಿರುವಾಗ ಕರ್ಮ ಮಾಡಿಸಿದ ಭಗವಂತನಿಗೆ ಫಲ ಸೇರದೇ ನಮಗೇಕೆ ಸೇರುತ್ತದೆ? ಭಗವಂತನೇಕೆ ನಮ್ಮಿಂದ ಕೇವಲ ಒಳ್ಳೆಯ ಕರ್ಮಗಳನ್ನು ಮಾಡಿಸುವುದಿಲ್ಲ? ಕೆಟ್ಟ ಕರ್ಮಗಳನ್ನು ನಮ್ಮಿಂದ ಮಾಡಿಸುವ ಭಗವಂತ ನಮಗೇಕೆ ಅದರ ದುಃಖದ ಫಲವನ್ನು ಕೊಡುತ್ತಾನೆ ಎನ್ನುವುದು ಪರೀಕ್ಷಿತನ ಪ್ರಶ್ನೆ.
ಈ ಹಿಂದೆ ಅನೇಕ ಬಾರಿ ವಿಶ್ಲೇಶಿಸಿದಂತೆ ತ್ರಿಗುಣಗಳು ಮನುಷ್ಯನ ಮೇಲೆ ತಮ್ಮ ಪ್ರಭಾವವನ್ನು ಸದಾ ಬೀರುತ್ತಿರುತ್ತವೆ. ಭಗವಂತ ನಮ್ಮ ಮುಖೇನ ಕರ್ಮ ಮಾಡಿಸುವುದು ನಮ್ಮ ಅರಿವಿಗೆ ಬಾರದಿದ್ದರೂ ಕೂಡಾ, ಗುಣತ್ರಯಗಳ ಪ್ರಭಾವದ ಅರಿವು ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ಈ ಪ್ರಪಂಚದಲ್ಲಿರುವ ಪ್ರತಿಯೊಂದು ಜಡ ವಸ್ತುವೂ ಕೂಡಾ ತ್ರಿಗುಣಗಳ (ಮಣ್ಣು-ನೀರು-ಬೆಂಕಿಯ) ಮಿಶ್ರಣದಿಂದಲೇ ನಿರ್ಮಾಣವಾಗಿದೆ. “ಸೃಷ್ಟಿಯಲ್ಲಿ ಗುಣದ ಪರಿಮಾಣ ಮತ್ತು ಪ್ರಭಾವ ಹೇಗೆ ಕೆಲಸ ಮಾಡುತ್ತದೆ? ಗುಣಗಳು ಯಾವ ಪ್ರಮಾಣದಲ್ಲಿ ಸೃಷ್ಟಿಯಲ್ಲಿ ವಿಸ್ತಾರವಾಗಿವೆ? ಮನುಷ್ಯರಲ್ಲಿ ಯಾವ-ಯಾವ ಗುಣಗಳು ಯಾವ ಯಾವ ಪ್ರಮಾಣದಲ್ಲಿವೆ? ಗುಣಗಳ ಪ್ರಭಾವದಿಂದ ಜೀವಗಳ ಮೇಲೆ ಆಗುವ ಪರಿಣಾಮವೇನು ಮತ್ತು ಅದು ಯಾವ ಪ್ರಮಾಣದಿಂದಾಗುತ್ತದೆ ಎನ್ನುವುದನ್ನು ನನಗೆ ವಿಸ್ತಾರವಾಗಿ ವಿವರಿಸಿ” ಎಂದು ಕೇಳುತ್ತಿದ್ದಾನೆ ಪರೀಕ್ಷಿತ.

ನೃಣಾಂ ಸಾಧಾರಣೋ ಧರ್ಮಃ ಸವಿಶೇಷಶ್ಚ ಯಾದೃಶಃ
ಶ್ರೇಣೀನಾಂ ರಾಜರ್ಷೀಣಾಂ ಚ ಧರ್ಮಃ ಕೃಚ್ಛ್ರೇಷು ಜೀವತಾಮ್ ೧೮

ಮುಂದುವರಿದು ಪರೀಕ್ಷಿತ ಕೇಳುತ್ತಾನೆ: “ಮನುಷ್ಯನ ಸಮಾಜ ಧರ್ಮ ಯಾವುದು? ಸ್ವಭಾವತಃ ವ್ಯಕ್ತಿಯ ವಿಶೇಷ ಧರ್ಮ ಯಾವುದು?” ಎಂದು. ಪ್ರಜಾಪಾಲನೆ, ಜನರನ್ನು ಧರ್ಮದ ಮಾರ್ಗದಲ್ಲಿ ನಡೆಸುವ ಜವಾಬ್ಧಾರಿ ರಾಜನದು.   ಹೀಗಾಗಿ ಪ್ರಜೆಗಳಿಂದ ತಪ್ಪಾದರೆ ಅದರ ಪಾಲೂ ರಾಜನಿಗೆ ಸಲ್ಲುತ್ತದೆ. ಇನ್ನು ಸೈನಿಕರಾದವರು ಯುದ್ಧದಲ್ಲಿ ಪ್ರಾಣದ ಹಂಗು ತೊರೆದು ಹೋರಾಡಬೇಕಾಗುತ್ತದೆ; ಎದುರಾಳಿಯನ್ನು ಆತನ ಯೋಗ್ಯತೆ ಏನೇ ಇದ್ದರೂ ಕೊಲ್ಲಬೇಕಾಗುತ್ತದೆ. ಆದ್ದರಿಂದ   ಸೈನಿಕರ ಮತ್ತು ರಾಜರ್ಷಿಗಳ ಜೀವನ ತುಂಬಾ ಕಷ್ಟ.  ಅಂಥಹ ಸೈನಿಕರ ಮತ್ತು ರಾಜರ್ಷಿಗಳ ಧರ್ಮದ ನಡೆ ಯಾವುದು ಎನ್ನುವುದನ್ನು ನನಗೆ ವಿವರಿಸಿ ಹೇಳಬೇಕೆಂದು ಪರೀಕ್ಷಿತ ಕೇಳಿಕೊಳ್ಳುತ್ತಾನೆ. [ಈ ಪ್ರಶ್ನೆಗೆ ಉತ್ತರ ಏಳನೇ ಸ್ಕಂಧದಲ್ಲಿ ಬರುತ್ತದೆ].

ತತ್ತ್ವಾನಾಂ ಪರಿಸಂಖ್ಯಾನಂ ಲಕ್ಷಣಂ ಹೇತುಲಕ್ಷಣಂ
ಪುರುಷಾರಾಧನವಿಧಿರ್ಯೋಗಸ್ಯಾಧ್ಯಾತ್ಮಿಕಸ್ಯ ಚ ೧೯

ಪ್ರಪಂಚದಲ್ಲಿ ಒಟ್ಟು ಎಷ್ಟು ಪದಾರ್ಥಗಳಿವೆ ಮತ್ತು ಅದರ ಗುಣಲಕ್ಷಣಗಳೇನು? ಈ ಪ್ರಪಂಚಕ್ಕೆ ಹೇತುವಾಗಿರುವ ಭಗವಂತನ ಗುಣಲಕ್ಷಣಗಳೇನು? ಭಗವಂತನ ಪೂಜೆ ಎಂದರೇನು? ಅವನನ್ನು ಹೇಗೆ ಯಾವ ಪ್ರತೀಕದಲ್ಲಿ ಪೂಜೆ ಮಾಡಬೇಕು? ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸುವುದು ಹೇಗೆ ಎನ್ನುವುದು ಪರೀಕ್ಷಿತನ ಪ್ರಶ್ನೆ.

ಯೋಗೇಶ್ವರೈಶ್ವರ್ಯಗತಿಂ ಲಿಂಗಭಂಗಂ ಚ ಯೋಗಿನಾಮ್
ವೇದೋಪವೇದಧರ್ಮಾಣಾಮಿತಿಹಾಸಪುರಾಣಯೋಃ ೨೦

“ಯೋಗಸಿದ್ಧರಿಗೆ(ಸನಕಾದಿಗಳಂಥಹ) ಸಿದ್ಧಿ [ಉದಾ: ಅಣಿಮಾ, ಮಹಿಮಾದಂತಹ ಅಷ್ಟಸಿದ್ಧಿಗಳು] ಹೇಗೆ ದೊರಕುತ್ತದೆ? ಅದು ಹೇಗೆ ಸಾಧ್ಯ ಎನ್ನುವುದನ್ನು ನನಗೆ ತಿಳಿಸಿಕೊಡಿ” ಎಂದು ಕೇಳುತ್ತಾನೆ ಪರೀಕ್ಷಿತರಾಜ.
ನಮಗೆ ತಿಳಿದಂತೆ ಮನುಷ್ಯನಿಗೆ ಮೂರು ಶರೀರಗಳಿವೆ ೧. ಕಾಣುವ ಸ್ಥೂಲ ಶರೀರ, ೨. ಸತ್ತ ಮೇಲೆ ಪುಣ್ಯಪಾಪಗಳನ್ನು ಅನುಭವಿಸಲು ಬೇಕಾಗಿರುವ ಸೂಕ್ಷ್ಮ ಶರೀರ ಮತ್ತು  ೩. ಅನಾದಿ-ಅನಂತವಾಗಿ ಬಂದಿರುವ ಲಿಂಗ ಶರೀರ.  ಜೀವ ಮೋಕ್ಷಕ್ಕೆ ಹೋಗುವಾಗ ಮಾತ್ರ ಲಿಂಗಶರೀರದಿಂದ ಬಿಡುಗಡೆ ಹೊಂದುತ್ತಾನೆ. ಹಾಗಾಗಿ ಇಲ್ಲಿ ಪರೀಕ್ಷಿತ ಕೇಳುತ್ತಾನೆ: “ನನಗೆ ಮತ್ತೆ ಹುಟ್ಟು ಬರಬಾರದು. ನಾನು ಲಿಂಗಶರೀರದಿಂದ ಕಳಚಿಕೊಳ್ಳಬೇಕು. ಅದು ಹೇಗೆ ಸಾಧ್ಯ ಎನ್ನುವುದನ್ನು ತಿಳಿಸಿಕೊಡಿ” ಎಂದು.
ವೇದಗಳು, ಉಪವೇದಗಳು(ಶಿಲ್ಪಕಲೆ, ಲಲಿತಕಲೆ ಇತ್ಯಾದಿ), ಇತಿಹಾಸ-ಪುರಾಣಗಳು, ಇವೆಲ್ಲವುದರ ರಚನೆ ಹೇಗಾಯಿತು ಎನ್ನುವುದನ್ನು ನನಗೆ ತಿಳಿಯಬೇಕೆಂಬ ಅಪೇಕ್ಷೆಯನ್ನು ಪರೀಕ್ಷಿತ ಶುಕಾಚಾರ್ಯರ ಮುಂದಿಡುತ್ತಾನೆ.

ಯಥಾತ್ಮತಂತ್ರೋ ಭಗವಾನ್ ವಿಕ್ರೀಡತ್ಯಾತ್ಮಮಾಯಯಾ
ವಿಸೃಜ್ಯ ಚ ಯಥಾ ಮಾಯಾಮುದಾಸ್ತೇ ಸಾಕ್ಷಿವದ್ ವಿಭುಃ ೨೩

ಭಗವಂತ ಇನ್ನಾರದೋ ನಿಯಮಕ್ಕೆ ಬದ್ಧನಾಗಿರುವವನಲ್ಲ. ಆದರೆ ಆತ ತನ್ನ ನಿಯಮಕ್ಕೆ ತಾನು ಬದ್ಧ. ಅದನ್ನು ಆತ ಎಂದೂ ಮೀರುವುದಿಲ್ಲ. ಇಂಥಹ ಭಗವಂತ ಏಕೆ ಸೃಷ್ಟಿ-ಸಂಹಾರಗಳನ್ನು ಮಾಡುತ್ತಾನೆ? ಆತನ ಸೃಷ್ಟಿಯ ಹಿಂದಿನ ಉದ್ದೇಶವೇನು? ಆತನ ಸೃಷ್ಟಿಯಲ್ಲಿ ಏಕೆ ಎಲ್ಲರೂ ಜ್ಞಾನಾನಂದಪೂರ್ಣರಾಗಿಲ್ಲ? ಸೃಷ್ಟಿಯಲ್ಲಿನ ಅಂತರದ ಹಿಂದಿನ ರಹಸ್ಯವೇನು? ಭಗವಂತನ ಇಚ್ಛೆ/ಜ್ಞಾನ/ಮಹಿಮೆಯಿಂದ(ಮಾಯೆಯಿಂದ) ಮತ್ತು ಭಗವಂತನ ಅಧೀನವಾಗಿರುವ ಮಾಯಾಶಕ್ತಿಯಿಂದ ನಡೆಯುವ ಈ ಸೃಷ್ಟಿ-ಸಂಹಾರ ಕಾರ್ಯದ ಹಿಂದಿನ ಉದ್ದೇಶವೇನಂಬುದನ್ನು ತಿಳಿಯಬೇಕೆಂದು ಪರೀಕ್ಷಿತ ಅಪೇಕ್ಷಿಸುತ್ತಾನೆ.
ಎಲ್ಲವನ್ನೂ ಮಾಡುವ ಭಗವಂತ ಪ್ರಳಯಕಾಲದಲ್ಲಿ ಮಾಯಶಕ್ತಿಯನ್ನು ವಿಸರ್ಜಿಸಿ ಪ್ರಳಯಜಲದಲ್ಲಿ ಯೋಗನಿದ್ರೆಯಲ್ಲಿರುತ್ತಾನೆ. ಹೀಗೆ ಆತ ಎಲ್ಲಾ ಆಗುಹೋಗುಗಳಿಗೆ ನಿರ್ಲಿಪ್ತ ಪ್ರೇಕ್ಷಕನಾಗಿರುತ್ತಾನೆ. ಆತ ಸರ್ವಸಮರ್ಥ ಮತ್ತು ಸರ್ವಗತ(ವಿಭುಃ).  ಹೀಗಾಗಿ ಆತ ಎಲ್ಲವನ್ನೂ ಮಾಡಲು ಶಕ್ಯ. ಆದರೂ ಕೂಡಾ ಏನೂ ಮಾಡದವನಂತೆ ನಿರ್ಲಿಪ್ತನಾಗಿ ಎಲ್ಲವುದಕ್ಕೂ ಸಾಕ್ಷೀ ಪುರುಷನಾಗಿರುವ ಭಗವಂತನ ನಡೆಯ  ಹಿಂದಿನ ಅಧ್ಯಾತ್ಮ ಸಂದೇಶ ಏನು ಎನ್ನುವುದು ಇಲ್ಲಿ ಪರೀಕ್ಷಿತ ತಿಳಿಯ ಬಯಸಿದ್ದಾನೆ.

ಅತ್ರ ಪ್ರಮಾಣಂ ಹಿ ಭವಾನ್  ಪರಮೇಷ್ಠೀ ಯಥಾSSತ್ಮಭೂಃ
ಅಪರೇ ಹ್ಯನುತಿಷ್ಠಂತಿ ಪೂರ್ವೇಷಾಂ ಪೂರ್ವಜೈಃ ಕೃತಮ್ ೨೫

ತನ್ನೆಲ್ಲಾ ಪ್ರಶ್ನೆಗಳನ್ನೂ ಶುಕಾಚಾರ್ಯರ ಮುಂದಿಟ್ಟ ಪರೀಕ್ಷಿತ ಹೇಳುತ್ತಾನೆ: “ಈ ನನ್ನ ಪ್ರಶ್ನೆಗೆ ಉತ್ತರಿಸುವ ಪೂರ್ಣ ಅಧಿಕಾರ ನಿಮಗಿದೆ. ಏಕೆಂದರೆ ಹೇಗೆ ಚತುರ್ಮುಖ ಈ ಜ್ಞಾನವನ್ನು ನೇರವಾಗಿ ಭಗವಂತನಿಂದ ಪಡೆದನೋ  ಹಾಗೇ ನೀವೂ ವ್ಯಾಸರೂಪಿಯಾದ ಭಗವಂತನಿಂದ ಈ ಜ್ಞಾನವನ್ನು ಪಡೆದಿದ್ದೀರಿ. ನಮಗಾಗಲೀ ನಮ್ಮ ಪೂರ್ವಿಕರಿಗಾಗಲೀ ಈ ಸಾಮರ್ಥ್ಯವಿಲ್ಲ. ನಾವು ಕೇವಲ ಕೇಳಿ ತಿಳಿದು ಅನುಷ್ಠಾನ ಮಾಡುವವರು. ಹೀಗಾಗಿ ಎಲ್ಲವನ್ನು ತಿಳಿದ ನೀವು ನನ್ನ ಪ್ರಶ್ನೆಗಳಿಗೆ ಉತ್ತರಿಸಿ ನನ್ನನ್ನು ಉದ್ಧಾರ ಮಾಡಬೇಕು” ಎಂದು ಪ್ರಾರ್ಥಿಸುತ್ತಾನೆ ಪರೀಕ್ಷಿತ.

ಸೂತ ಉವಾಚ--
ಸ ಉಪಾಮಂತ್ರಿತೋ ರಾಜ್ಞಾ ಕಥಾಯಾಮಿತಿ ಸತ್ಪತೇಃ
ಬ್ರಹ್ಮರಾತೋ ಭೃಶಂ ಪ್ರೀತೋ ವಿಷ್ಣುರಾತೇನ ಸಂಸದಿ ೨೭

ಆಹ ಭಾಗವತಂ ನಾಮ ಪುರಾಣಂ ವೇದಸಮ್ಮಿತಮ್
ಬ್ರಹ್ಮಣೇ ಭಗವತ್ಪ್ರೋಕ್ತಂ ಬ್ರಹ್ಮಕಲ್ಪ ಉಪಾಗತೇ ೨೮

ಯದ್ಯತ್ ಪರೀಕ್ಷಿದ್ ಋಷಭಃ ಪಾಂಡೂನಾಮನುಪೃಚ್ಛತಿ
ಆನುಪೂರ್ವ್ಯೇಣ ತತ್ ಸರ್ವಮಾಖ್ಯಾತುಮುಪಚಕ್ರಮೇ ೨೯

ನೈಮಿಶಾರಣ್ಯದಲ್ಲಿ ಭಾಗವತವನ್ನು ಶೌನಕಾದಿಗಳಿಗೆ ಹೇಳುತ್ತಿರುವ ಉಗ್ರಶ್ರವಸ್ಸು ಹೇಳುತ್ತಾರೆ: “ಪರೀಕ್ಷಿತನ ಮಾತನ್ನು ಕೇಳಿದ ಶುಕಾಚಾರ್ಯರಿಗೆ ಅತ್ಯಂತ ಸಂತೋಷವಾಯಿತು” ಎಂದು. ಈ ಹಿಂದೆ ಹೇಳಿದಂತೆ ಜ್ಞಾನಿಗಳಿಗೆ ಹೇಳಬೇಕು ಎನಿಸಿದರೂ ಕೂಡಾ ಕೇಳುವ ಯೋಗ್ಯತೆಯುಳ್ಳ ಶಿಷ್ಯರು ಸಿಗುವುದು ದುರ್ಲಭ. ಹೀಗಿರುವಾಗ ಇಲ್ಲಿ ಸಮಸ್ತ ವಿದ್ವಾಂಸರ ಸಮ್ಮುಖದಲ್ಲಿ  ನಿಂತು,  ಜ್ಞಾನಿಗಳ/ಸಜ್ಜನರ ಪಾಲಕನಾದ ಭಗವಂತನ ಲೀಲೆಗಳನ್ನು, ಅದರಲ್ಲಿ ಬರುವ ಸಂಶಯ ಪರಿಹರಿಸಿ ಹೇಳಬೇಕು ಎಂದು ಕೇಳುತ್ತಿರುವ ಪರೀಕ್ಷಿತನನ್ನು ಕಂಡು ಶುಕಾಚಾರ್ಯರಿಗೆ ಬಹಳ ಸಂತೋಷವಾಯಿತು.
ಜ್ಞಾನಿಗಳ ಜ್ಞಾನಿ, ಮಹಾಜ್ಞಾನಿಯಾದ ಶುಕಾಚಾರ್ಯರನ್ನು ಇಲ್ಲಿ   ಉಗ್ರಶ್ರವಸ್ಸು ಬ್ರಹ್ಮರಾತಃ ಎಂದು ಕರೆದಿದ್ದಾರೆ. ವ್ಯಾಸರಿಂದ ನೇರ ಉಪದೇಶ ಪಡೆದ,  ಪ್ರತಿಯೊಬ್ಬರ ಮನಸ್ಸನ್ನು ನಿಯಂತ್ರಿಸುವ ಶಿವಶಕ್ತಿಯಾದ ಶುಕಾಚಾರ್ಯರು, ಚತುರ್ಮುಖನಿಂದ ದತ್ತರಾದ ಗುರುಗಳಾಗಿದ್ದರು. ಸಮಸ್ತ ಜ್ಞಾನಿಗಳ ಸಂಶಯವನ್ನು ಪರಿಹರಿಸಬಲ್ಲ ಮಹಾಜ್ಞಾನಿಯಾದ ಅವರಿಗೆ ಇದು ಅನ್ವರ್ಥನಾಮ. ಅದೇ ರೀತಿ ತಾಯಿಯ ಗರ್ಭದಲ್ಲೇ ಭಗವಂತನ ದರ್ಶನ ಪಡೆದು, ಭಗವಂತನಿಂದ ರಕ್ಷಿಸಲ್ಪಟ್ಟು ಹುಟ್ಟಿದ ಪರೀಕ್ಷಿತನನ್ನು ಉಗ್ರಶ್ರವಸ್ಸು ವಿಷ್ಣುರಾತಃ ಎಂದು ಸಂಬೋಧಿಸಿದ್ದಾರೆ.
ವಿಷ್ಣುರಾತನ ಪ್ರಶ್ನೆಯಿಂದ ಸಂತೋಷಗೊಂಡ ಬ್ರಹ್ಮರಾತರು  ಹೇಳುತ್ತಾರೆ: “ನಿನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಭಾಗವತದಲ್ಲಿದೆ. ಅಂಥಹ ಪ್ರಸಿದ್ಧವಾದ, ವೇದತುಲ್ಯವಾದ  ಭಾಗವತ ಪುರಾಣವನ್ನು ನಾನು ನಿನಗೆ ಹೇಳುತ್ತೇನೆ” ಎಂದು.
ಈಗಾಗಲೇ ಹೇಳಿದಂತೆ ಈ ಸಂಬಾಷಣೆ ನಡೆದಾಗ ಪರೀಕ್ಷಿತನಿಗೆ ಸುಮಾರು ಅರವತ್ತೈದು ವರ್ಷ. ಈ ಸಂಭಾಷಣೆ ನಡೆದದ್ದು ನಾವಿರುವ ಈ ಕಲಿಯುಗದಲ್ಲೇ.  ಇದಕ್ಕೂ ಮೊದಲು ಶುಕಾಚಾರ್ಯರಿಗೆ ವೇದವ್ಯಾಸ ರೂಪದಲ್ಲಿ ಭಗವಂತ ಭಾಗವತ ಪುರಾಣವನ್ನು ಉಪದೇಶಿಸಿದ್ದ. ಆದರೆ ಅದು ಕೇವಲ ಭಗವಂತ ಮತ್ತು ಶಿವನ ನಡುವಿನ ಸಂವಾದವಾಗಿತ್ತು. ಹೀಗಾಗಿ ಮನುಷ್ಯಲೋಕದಲ್ಲಿ ಭಾಗವತ ಅವತರಿಸಿದ್ದು ಕಲಿಯುಗ ಪ್ರಾರಂಭವಾಗಿ ಅರವತ್ತೈದು ವರ್ಷಗಳ ನಂತರ.
ಭಾಗವತ ಪುರಾಣ ವೇದಗಳಿಗೆ ಸಾಟಿಯಾದ ಪುರಾಣ. ವೇದದಲ್ಲಿ  ಅರ್ಥವಾಗದೇ ಇರುವ ವಿಷಯಗಳನ್ನು ಭಾಗವತ ಬಿಚ್ಚಿಡುತ್ತದೆ. ಇಂಥಹ ಭಾಗವತವನ್ನು ಮೊತ್ತಮೊದಲು, ಮಹಾಪ್ರಳಯದ ನಂತರ, ಈ ಜಗತ್ತಿನ ಮೊದಲ ಜೀವ ಚತುರ್ಮುಖನಿಗೆ  [ಚತುರ್ಮುಖ ಸೃಷ್ಟಿಯಾದ ಬ್ರಹ್ಮಕಲ್ಪದಲ್ಲಿ] ಭಗವಂತ ಉಪದೇಶಿಸಿದ. “ಅಂಥಹ ಭಾಗವತನ್ನು ನಾನು ನಿನಗೆ ಉಪದೇಶಿಸುತ್ತಾನೆ” ಎಂದು ಶುಕಾಚಾರ್ಯರು ಪರೀಕ್ಷಿತನಿಗೆ ಹೇಳಿದರು ಎನ್ನುವಲ್ಲಿಗೆ ಎಂಟನೇ ಅಧ್ಯಾಯ ಕೊನೆಗೊಳ್ಳುತ್ತದೆ.    

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ದ್ವಿತೀಯಸ್ಕಂಧೇ ಅಷ್ಟಮೋSಧ್ಯಾಯಃ
ಭಾಗವತ ಮಹಾಪುರಾಣದ ಎರಡನೇ  ಸ್ಕಂಧದ ಎಂಟನೇ ಅಧ್ಯಾಯ ಮುಗಿಯಿತು

*********

Sunday, October 11, 2015

Shrimad BhAgavata in Kannada -Skandha-02-Ch-08(01)

http://bhagavatainkannada.blogspot.in/

ಅಷ್ಟಮೋSಧ್ಯಾಯಃ


ನಾಲ್ಕನೇ ಅಧ್ಯಾಯದಲ್ಲಿ ಈಗಾಗಲೇ ನೋಡಿದಂತೆ ಪರೀಕ್ಷಿತರಾಜ ಶುಕಾಚಾರ್ಯರಲ್ಲಿ “ಸೃಷ್ಟಿ ವಿನ್ಯಾಸದ ಬಗೆ  ಮತ್ತು ಸೃಷ್ಟಿಯ ಉದ್ದೇಶ ಏನು” ಎನ್ನುವ ಪ್ರಶ್ನೆ ಮಾಡಿದ್ದ. ಪರೀಕ್ಷಿತನ  ಪ್ರಶ್ನೆಗೆ ಚತುರ್ಮುಖ-ನಾರದ ಸಂವಾದ ರೂಪದಲ್ಲಿ ಉತ್ತರಿಸಿದ ಶುಕಾಚಾರ್ಯರು, ಸೃಷ್ಟಿಯ ಸಂಕ್ಷಿಪ್ತ ವಿವರಣೆಯ ಜೊತೆಗೆ ಭಗವಂತನ ಅವತಾರಗಳ ಸಂಕ್ಷಿಪ್ತ ಚಿತ್ರಣವನ್ನೂ  ನೀಡಿದರು. ಇಲ್ಲಿ ಈ ಅಧ್ಯಾಯ ಮತ್ತೆ ಪರೀಕ್ಷಿತನ  ಪ್ರಶ್ನೆಯೊಂದಿಗೆ ಪ್ರಾರಂಭವಾಗುತ್ತದೆ.
ಪರೀಕ್ಷಿತ ಕೇಳಿ ತಿಳಿಯಬೇಕಾಗಿದ್ದ ವಿಷಯಗಳು ಅನೇಕವಾಗಿದ್ದರೂ ಕೂಡಾ, ಆತನಲ್ಲಿದ್ದ ಸಮಯ ಕೇವಲ ಏಳು ದಿನಗಳು ಮಾತ್ರ. ಹೀಗಾಗಿ ಭಗವಂತನ ಅವತಾರಗಳ ಸಂಕ್ಷಿಪ್ತ ವಿವರಣೆಯ ನಂತರ ಆತ ಮತ್ತೆ ಪ್ರಶ್ನೆ ಮಾಡುತ್ತಾನೆ.  ಆತನ ಈ ಪ್ರಶ್ನೆಗೆ ಉತ್ತರ ರೂಪವಾಗಿ ಶುಕಾಚಾರ್ಯರು ಭಾಗವತ ಪುರಾಣವನ್ನು ಬಿತ್ತರ ಮಾಡುತ್ತಾರೆ. ಹೀಗಾಗಿ ಈವರೆಗೆ ನಾವು ನೋಡಿರುವ ವಿಷಯ ಕೇವಲ ಹಿನ್ನೆಲೆಯಾಗಿದ್ದು, ನಿಜವಾದ ಭಾಗವತ ಪರೀಕ್ಷಿತ ರಾಜನ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಮುಂದಿನ ಅಧ್ಯಾಯದಿಂದ ಆರಂಭವಾಗಲಿದೆ. ಬನ್ನಿ, ಇಂಥಹ ಅಪೂರ್ವವಾದ ಭಗವಂತನ ಕಥೆಯ ಬಿತ್ತರಕ್ಕೆ ಕಾರಣವಾದ ಪರೀಕ್ಷಿತನ ಪ್ರಶ್ನೆಗಳೇನು ಎನ್ನುವುದನ್ನು  ಈ ಅಧ್ಯಾಯದಲ್ಲಿ ನೋಡೋಣ. 

ಭಾಗವತ ಬಿತ್ತರಕ್ಕಾಗಿ ಪರೀಕ್ಷಿತನ ಪ್ರಶ್ನೆಗಳು

ರಾಜೋವಾಚ--
ಬ್ರಹ್ಮಣಾ ಚೋದಿತೋ ಬ್ರಹ್ಮನ್ ಗುಣಾಖ್ಯಾನೇಽಗುಣಸ್ಯ ಚ
ಯಸ್ಮೈಯಸ್ಮೈ ಯಥಾ ಪ್ರಾಹ ನಾರದೋ ದೇವದರ್ಶನಃ ೦೧

ಪರೀಕ್ಷಿತ ಕೇಳುತ್ತಾನೆ: “ಚತುರ್ಮುಖನಿಂದ ನಾರದರಿಗೆ  ಉಪದೇಶಿಸಲ್ಪಟ್ಟ ಜ್ಞಾನ ಮುಂದೆ ಹೇಗೆ ಇತರರಿಗೆ ಉಪದೇಶಿಸಲ್ಪಟ್ಟಿತು?” ಎಂದು. ಲೋಕದಲ್ಲಿ ಈ ಜ್ಞಾನ ಪರಂಪರೆ ಹೇಗೆ ಮುಂದುವರಿಯಿತು ಎನ್ನುವುದನ್ನು ತಿಳಿಸಿ ಎಂಬುದಾಗಿ ಪರೀಕ್ಷಿತ ಶುಕಾಚಾರ್ಯರನ್ನು ಕೇಳುವುದರೊಂದಿಗೆ ಎಂಟನೇ ಅಧ್ಯಾಯ ಆರಂಭವಾಗುತ್ತದೆ.

ಏತದ್ ವೇದಿತುಮಿಚ್ಛಾಮಿ ತತ್ತ್ವಂ ವೇದವಿದಾಂ ವರ
ಹರೇರದ್ಭುತವೀರ್ಯಸ್ಯ ಕಥಾ ಲೋಕಸುಮಂಗಳಾಃ ೦೨

ಕಥಯಸ್ವ ಮಹಾಭಾಗ ಯಥಾSಹಮಖಿಲಾತ್ಮನಿ
ಕೃಷ್ಣೇ ನಿವೇಶ್ಯ ನಿಃಸಂಗಂ ಮನಸ್ತ್ಯಕ್ಷ್ಯೇ ಕಳೇಬರಮ್ ೦೩


ಪರೀಕ್ಷಿತ ಹೇಳುತ್ತಾನೆ: “ಇಡೀ ಜಗತ್ತಿಗೆ ಮಾಂಗಲಿಕವಾಗಿರುವ ಭಗವಂತನ ಕಥೆಯನ್ನು ವಿಸ್ತಾರವಾಗಿ ನಾನು ಕೇಳಬೇಕು” ಎಂದು.  ನಮಗೆ ತಿಳಿದಂತೆ ಪರೀಕ್ಷಿತ ತಾಯಿಯ ಉದರದಲ್ಲಿದ್ದಾಗಲೇ ಭಗವಂತನ ದರ್ಶನ ಪಡೆದು, ಭಗವಂತನನಿಂದ ರಕ್ಷಿಸಲ್ಪಟ್ಟು ಹುಟ್ಟಿದವ. ನಂತರ ಸುಮಾರು ೩೫ ವರ್ಷಗಳ ಕಾಲ ಶ್ರೀಕೃಷ್ಣನ ಒಡನಾಡಿಯಾಗಿ ಪರೀಕ್ಷಿತ ಬೆಳೆದಿದ್ದ. ಶ್ರೀಕೃಷ್ಣ ಅವತಾರ ಸಮಾಪ್ತಿ ಮಾಡಿದ ಮೇಲೆ ಸುಮಾರು ೩೦ ವರ್ಷಗಳ ಕಾಲ ಪರೀಕ್ಷಿತ ಧರ್ಮದಿಂದ ರಾಜ್ಯ ಪಾಲನೆ ಮಾಡಿದ್ದ. ಪರೀಕ್ಷಿತನ ತಂದೆ ಅಭಿಮನ್ಯುವಿನ ತಾಯಿ ಸುಭದ್ರೆ ಶ್ರೀಕೃಷ್ಣನ ತಂಗಿ. ಹೀಗಾಗಿ ಆತ ಸಂಬಂಧದಿಂದ ಮತ್ತು ಕಾಲತಃ ಶ್ರೀಕೃಷ್ಣನಿಗೆ ಹತ್ತಿರದವನಾಗಿದ್ದ. ಆದ್ದರಿಂದ ಆತನಿಗೆ ಶ್ರೀಕೃಷ್ಣ ಎಂದರೆ ಎಲ್ಲರ ಅಂತರ್ಯಾಮಿಯಾದ ಭಗವಂತ ಎನ್ನುವ ಸತ್ಯ ತಿಳಿದಿತ್ತು. ಆತ ಹೇಳುತ್ತಾನೆ: “ಈ ಏಳು ದಿನಗಳಲ್ಲಿ ನನ್ನ ಮನಸ್ಸು ಹೊರಪ್ರಪಂಚದ ಸೆಳೆತಕ್ಕೊಳಗಾಗದೇ ಸಂಪೂರ್ಣವಾಗಿ ಶ್ರೀಕೃಷ್ಣನಲ್ಲಿ ನೆಲೆಗೊಳ್ಳಬೇಕು. ಅಂಥಹ ಚಿಂತನೆಯನ್ನು ಕೊಡಬಲ್ಲ ಶ್ರೀಕೃಷ್ಣನ ಕಥೆಯನ್ನು ಬಿತ್ತರಿಸಿ ಹೇಳಿ. ನಾನು ಆ ಭಗವಂತನ ಚಿಂತನಾ ಸ್ಥಿತಿಯಲ್ಲೇ ದೇಹತ್ಯಾಗ ಮಾಡಬೇಕು” ಎಂದು. ಈ ಹಿಂದೆ ವಿಶ್ಲೇಶಿಸಿದಂತೆ ಪ್ರಾಣೋತ್ಕ್ರಮಣ ಕಾಲದಲ್ಲಿ ನಮ್ಮ ಮನಸ್ಸು ಏನನ್ನು ಚಿಂತಿಸುತ್ತದೋ ಅದನ್ನೇ ಜೀವ ಮುಂದೆ ಪಡೆಯುತ್ತದೆ. ಗೀತೆಯಲ್ಲೂ ಕೂಡಾ ಶ್ರೀಕೃಷ್ಣ ಇದೇ ಮಾತನ್ನು ಹೇಳಿದ್ದಾನೆ: ಯಂ ಯಂ ವಾSಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಳೇಬರಮ್ । ತನ್ತಮೇವೈತಿ ಕೌಂತೇಯ ಸದಾ ತದ್ ಭಾವಭಾವಿತಃ           ॥೮-೬॥ ಕೊನೆಯಲ್ಲಿ ಯಾವ ಯಾವ ವಿಷಯವನ್ನು ನೆನೆಯುತ್ತಾ ದೇಹವನ್ನು ತೊರೆಯುತ್ತಾನೋ ಅದರಲ್ಲೇ ಅನುಗಾಲ ಬೇರೂರಿದ ಸಂಸ್ಕಾರದಿಂದ ಅದನ್ನೆ ಪಡೆಯುತ್ತಾನೆ”. ಈ ವಿಷಯವನ್ನು ಅರಿತಿದ್ದ ಪರೀಕ್ಷಿತ ತಾನು ಕೊನೆಗಾಲದಲ್ಲಿ ಕೇವಲ ಭಗವಂತನ ಚಿಂತನೆಯಲ್ಲೇ ನಿಲ್ಲಬಲ್ಲ ಭಗವಂತನ ಕಥೆಯನ್ನು ವಿಸ್ತಾರವಾಗಿ ಕೇಳಬೇಕು ಎನ್ನುವ ಅಭಿಲಾಷೆಯನ್ನು ಶುಕಾಚಾರ್ಯರ ಮುಂದಿಡುತ್ತಾನೆ. ಈ ಕಾರಣದಿಂದಲೇ ಭಾಗವತದಲ್ಲಿ ಭಗವಂತನ ಅವತಾರಗಳ, ವಿಶೇಷವಾಗಿ ದಶಾವತಾರಗಳ ವಿಸ್ತಾರವಾದ ವಿವರಣೆಯನ್ನು ಶುಕಾಚಾರ್ಯರು ನೀಡುವುದನ್ನು ನಾವು ಕಾಣುತ್ತೇವೆ.    

Monday, October 5, 2015

Shrimad BhAgavata in Kannada -Skandha-02-Ch-07(38)

http://bhagavatainkannada.blogspot.in/

    ಸ ಶ್ರೇಯಸಾಮಪಿ ವಿಭುರ್ಭಗವಾನ್ ಯತೋSಸ್ಯ ಭಾವಸ್ವಭಾವವಿಹಿತಸ್ಯ ಸತಃ ಪ್ರಸಿದ್ಧಃ
    ದೇಹೇ ಸ್ವಧಾತುವಿಗಮೇ ತು ವಿಶೀರ್ಯಮಾಣೇ ವ್ಯೋಮೇವ ತತ್ರ ಪುರುಷೋ ನ ವಿಶೀರ್ಯತೇSಜಃ ೪೯

ಭಗವಂತನ ಗುಣಲಕ್ಷಣಗಳ ವರ್ಣನೆ ಮಾಡಿದ ಚತುರ್ಮುಖ ಮುಂದುವರಿದು ಹೇಳುತ್ತಾನೆ: “ನಮ್ಮ ಬದುಕಿನ ಅತ್ಯಂತ ದೊಡ್ಡ ಶ್ರೇಯಸ್ಸು ಎಂದರೆ ಮುಕ್ತಿ.  ಅದರಾಚೆಗೆ ಯಾವ ಪುರುಷಾರ್ಥವೂ ಇಲ್ಲ. ಮೋಕ್ಷಕ್ಕಾಗಿಯೇ ಧರ್ಮ-ಅರ್ಥ-ಕಾಮಗಳಿರುವುದು.  ಇಂಥಹ ಮೋಕ್ಷವನ್ನು ಕರುಣಿಸುವ ಸಾಮರ್ಥ್ಯವಿರುವುದು ಕೇವಲ ಭಗವಂತನೊಬ್ಬನಿಗೆ ಮಾತ್ರ.  ಯಾರಿಗೆ ಭಕ್ತಿ ಎನ್ನುವುದು ಸಹಜ ಸ್ವಭಾವವೋ ಅವನಿಗೆ ಭಗವಂತ ಮೋಕ್ಷ ಕರುಣಿಸುತ್ತಾನೆ. ಹೀಗಾಗಿ ನಮ್ಮ ಭಕ್ತಿ ಸಂಕಟ ಬಂದಾಗ ಮಾತ್ರ ಹುಟ್ಟುವ ಭಕ್ತಿಯಾಗದೇ ಅದು ನಮ್ಮ ಸ್ವಭಾವವಾಗಬೇಕು. ಆಗ ಅದು ನಮ್ಮನ್ನು ಮೋಕ್ಷಕ್ಕೆ ಕೊಂಡೊಯ್ಯಬಲ್ಲುದು” ಎಂದು.
ಭಗವಂತ ನಮ್ಮೊಂದಿಗೆ ನಮ್ಮ ದೇಹದಲ್ಲೇ ಇದ್ದಾನೆ. ಆದರೆ ಜೀವನಿಗಾಗಲಿ, ಭಗವಂತನಿಗಾಗಲೀ ಸಾವು ಎನ್ನುವುದಿಲ್ಲ. ಜೀವ ದೇಹವನ್ನು ಪಡೆದು ವ್ಯಕ್ತವಾಗುವುದನ್ನು ಜನನ ಎನ್ನುತ್ತಾರೆ(ಜನಿ ಪ್ರಾದುರ್ಭಾವೇ). ಜೀವ ದೇಹವನ್ನು ಬಿಟ್ಟು ಅವ್ಯಕ್ತವಾಗುವುದನ್ನು ಸಾವು ಎನ್ನುತ್ತಾರೆ. ಹೀಗಾಗಿ ಜೀವ ಮತ್ತು ಭಗವಂತ ಆಕಾಶದಂತೆ ನಾಶವಿಲ್ಲ ತತ್ತ್ವ. ದೇಹವನ್ನು ಕಳಚಿಕೊಂಡಾಗ ಜೀವ ಸಪ್ತಧಾತುಗಳಿಂದ ಅಥವಾ ಪಂಚಭೂತಗಳಿಂದ ಕಳಚಿಕೊಳ್ಳುತ್ತದೆ ಹೊರತು ನಾಶವಾಗುವುದಿಲ್ಲ. ಭಗವಂತ ಅನಾದಿ ಅನಂತ.  ಇಂಥಹ ಸರ್ವಗತನಾದ ಭಗವಂತನನ್ನು ನಾಶಮಾಡುವುದಾಗಲೀ, ವಿಚ್ಚೇದ ಮಾಡುವುದಾಗಲೀ ಸಾಧ್ಯವಿಲ್ಲ. ಯಾವ ಜೀವ ಮರಳಿ ದೇಹವನ್ನು ಸೇರುವ ಪ್ರಾರಾಬ್ಧ ಕರ್ಮವನ್ನು ಕಳಚಿಕೊಳ್ಳುತ್ತದೋ ಅದು  ಭಗವಂತನನ್ನು ಸೇರುತ್ತದೆ.  

ಸೋSಯಂ ತೇSಭಿಹಿತಸ್ತಾತ ಭಗವಾನ್ ಭೂತಭಾವನಃ
ಸಮಾಸೇನ ಹರೇರ್ನಾನ್ಯದನ್ಯಸ್ಮಾತ್ ಸದಸಚ್ಚ ಯತ್ ೫೦
ತನ್ನ ಮಗನಾದ ನಾರದನಿಗೆ ಭಗವಂತನ ಕುರಿತು  ವಿವರಿಸುತ್ತಿರುವ ಚತುರ್ಮುಖ, ಈ ಅಧ್ಯಾಯದಲ್ಲಿ ಭಗವಂತನ ಕುರಿತಾದ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳನ್ನೂ ಬಿಚ್ಚಿಟ್ಟಿದ್ದಾನೆ. “ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾದ, ನಮ್ಮ ಮನಸ್ಸಿನ ಭಾವನೆಗಳನ್ನು ಪ್ರೇರಣೆ ಮಾಡುವ, ನಮಗೆ ದೇಹದ ಸಂಯೋಗ ವೀಯೋಗವನ್ನೀಯುವ,  ಸರ್ವಾಂತರ್ಯಾಮಿ ಭಗವಂತನ ಕುರಿತು ಎಷ್ಟು ಹೇಳಬಹುದೋ ಅಷ್ಟನ್ನು ಅಡಕವಾಗಿ(in nutshell) ವಿವರಿಸಿದ್ದೇನೆ” ಎನ್ನುತ್ತಾನೆ ಚತುರ್ಮುಖ.  ಮುಂದುವರಿದು ಚತುರ್ಮುಖ ಹೇಳುತ್ತಾನೆ: “ ಎಲ್ಲಕ್ಕಿಂತ ಭಿನ್ನನಾದ ಭಗವಂತನಿಗಿಂತ ಭಿನ್ನವಾದ ಯಾವುದೇ ಸತ್ ಅಥವಾ ಅಸತ್ ಇಲ್ಲ” ಎಂದು.  “ಭಗವಂತ ಎಲ್ಲಕ್ಕಿಂತ ಭಿನ್ನ, ಆದರೆ ಯಾವುದೂ ಭಗವಂತನಿಗಿಂತ ಭಿನ್ನ ಅಲ್ಲ”.   ಅಂದರೆ ಭಗವಂತ ಎಲ್ಲಕ್ಕಿಂತ ಭಿನ್ನವಾದ, ಅನಾದಿ-ಅನಂತವಾದ ಸ್ವತಂತ್ರ ತತ್ತ್ವ. ಈ ಪ್ರಪಂಚದಲ್ಲಿ ಉಳಿದ ಎಲ್ಲವೂ ಭಗವಂತನ ಅಧೀನ. ಆದ್ದರಿಂದ  ಭಗವಂತನನ್ನು ಬಿಟ್ಟು ಯಾವುದೂ ಇಲ್ಲ.

ನೃಜನ್ಮನಿ ನ ತುಷೇತ ಕಿಂ ಫಲಂ ಯಮನಶ್ವರೇ
ಕೃಷ್ಣೇ ಯದ್ಯಪವರ್ಗೇಶೇ ಭಕ್ತಿಃ ಸ್ಯಾನ್ನಾನಪಾಯಿನೀ ೫೩

ಎಲ್ಲವನ್ನೂ ವಿವರಿಸಿದ ಚತುರ್ಮುಖ ಕೊನೆಗೊಂದು ಎಚ್ಚರವನ್ನು ನೀಡುತ್ತಾನೆ. “ಕೇವಲ ಮನುಷ್ಯನಾಗಿ ಹುಟ್ಟುವುದು ಸಾರ್ಥಕ್ಯವಲ್ಲ.  ಅದಕ್ಕಾಗಿ ಹೆಮ್ಮೆ ಪಟ್ಟು ಉಪಯೋಗವಿಲ್ಲ. ಮೋಕ್ಷಪ್ರದನಾದ ಭಗವಂತನಲ್ಲಿ ಸ್ಥಿರವಾದ ಮತ್ತು  ಶಾಶ್ವತವಾದ  ಭಕ್ತಿ  ಇದ್ದರೆ ಮಾತ್ರ ಭಗವಂತ ಪ್ರಸನ್ನನಾಗುತ್ತಾನೆ ಹಾಗೂ ಅದರಿಂದ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ” ಎಂದು.

ಕಿಂ ಸ್ಯಾದ್ ವರ್ಣಾಶ್ರಮಾಚಾರೈಃ ಕಿಂ ದಾನೈಃ  ಕಿಂ ತಪಃ ಶ್ರುತೈಃ
ಸರ್ವಾಘಘ್ನೋತ್ತ ಮಶ್ಲೋಕೇ ನ ಚೇದ್ ಭಕ್ತಿರ ಧೋಕ್ಷಜೇ ೫೪

“ಭಗವಂತನ ಎಚ್ಚರವಿಲ್ಲದ ವರ್ಣಾಶ್ರಮ ಧರ್ಮ ಪಾಲನೆ, ದಾನ, ವ್ರತಾನುಷ್ಠಾನ, ಶಾಸ್ತ್ರಚಿಂತನೆ, ಇತ್ಯಾದಿ ಎಲ್ಲವೂ ವ್ಯರ್ಥ. ನಮ್ಮ ಸಮಸ್ತ ಪಾಪಗಳನ್ನು ಪರಿಹಾರ ಮಾಡುವವನು ಆ ಅಧೋಕ್ಷಜ(ಯಾರ ಕಣ್ಣಿಗೂ ಗೋಚರಿಸದೇ ಎಲ್ಲರೊಳಗೂ ನೆಲೆಸಿರುವ ಭಗವಂತ ಅಧೋಕ್ಷಜ).  ಆದ್ದರಿಂದ ಮನುಷ್ಯಜನ್ಮ ಸಾರ್ಥಕವಾಗಬೇಕಾದರೆ ನಾವು ಭಗವಂತನ ಬಗೆಗೆ ತಿಳಿಯಲು ಪ್ರಯತ್ನ ಮಾಡಬೇಕು ಮತ್ತು ತಿಳಿದು ಆತನಲ್ಲಿ ಭಕ್ತಿಯಿಂದ ಶರಣಾಗಬೇಕು” ಎಂದು ಚತುರ್ಮುಖ ನಾರದರಿಗೆ ವಿವರಿಸಿದ ಎನ್ನುವಲ್ಲಿಗೆ ಇಡೀ ಭಾಗವತದ ಸಾರ ಸಂಗ್ರಹ ರೂಪವಾದ, ಚತುರ್ಮುಖ ನಾರದ ಸಂವಾದ ರೂಪದ ಏಳನೇ ಅಧ್ಯಾಯ ಮುಕ್ತಾಯವಾಯಿತು.

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ದ್ವಿತೀಯಸ್ಕಂಧೇ ಸಪ್ತಮೋSಧ್ಯಾಯಃ
ಭಾಗವತ ಮಹಾಪುರಾಣದ ಎರಡನೇ  ಸ್ಕಂಧದ ಏಳನೇ ಅಧ್ಯಾಯ ಮುಗಿಯಿತು

*********
Download e-Book(first draft) Here