Sunday, June 28, 2015

Shrimad BhAgavata in Kannada -Skandha-02-Ch-07(16)

ಪ್ರಹ್ಲಾದವರದ ನರಸಿಂಹ 

ತ್ರೈವಿಷ್ಟಪೋರುಭಯಹಾರಿ ನೃಸಿಂಹರೂಪಂ ಕೃತ್ವಾ ಭ್ರಮದ್ ಭ್ರುಕುಟಿದಂಷ್ಟ್ರಕರಾಳವಕ್ತ್ರಮ್
ದೈತ್ಯೇಂದ್ರಮಾಶು ಗದಯಾSಭಿಪತಂತಮಾರಾ ದೂರೌ ನಿಪಾತ್ಯ ವಿದದಾರ ನಖೈಃ ಸ್ಫುರಂತಮ್ ೧೪

ಇಲ್ಲಿ ಚತುರ್ಮುಖ ಭಗವಂತನ ನರಸಿಂಹ ಅವತಾರವನ್ನು ನಾರದರಿಗೆ ವಿವರಿಸುತ್ತಾ ಹೇಳುತ್ತಾನೆ:  “ ಇದು ಮೂರು ಲೋಕದ ಭಯವನ್ನು ಪರಿಹರಿಸಿದ ರೂಪ” ಎಂದು.  ಹಿರಣ್ಯಕಶಿಪು ಬ್ರಹ್ಮನಿಂದ ವರ ಪಡೆದು ಮೂರು ಲೋಕಗಳಿಗೂ ಕಂಟಕನಾಗಿ ಬೆಳೆದಾಗ  ಭಗವಂತ: ಕಿಡಿಕಾರುವ ಕಣ್ಣು, ಕೋರೆದಾಡೆಗಳು, ಗಂಟಿಕ್ಕಿದ ಹುಬ್ಬು, ಸಿಟ್ಟಿನಿಂದ ಬೆಂಕಿಯನ್ನುಗುಳುವ ಭಯಂಕರ ಮೋರೆಯ ನರಸಿಂಹ ರೂಪದಿಂದ ಕಾಣಿಸಿಕೊಂಡ.  “ಭಯಂಕರ ರೂಪಿ ಆದರೆ ಭಯಹಾರಿ” ಎನ್ನುತ್ತಾನೆ ಚತುರ್ಮುಖ. ಮೂರುಲೋಕದ ಭಯ ಪರಿಹಾರಕ್ಕಾಗಿಯೇ ಭಗವಂತ ತೊಟ್ಟ ಭಯಂಕರ ರೂಪ ಈ ನರಸಿಂಹ ರೂಪ.
ಭಗವಂತ ಏಕೆ ಈ ರೀತಿ ಭಯಂಕರ ರೂಪಿಯಾಗಿ ಬಂದ ಎಂದರೆ: ಅದು ಅವನಿಗೆ ಅನಿವಾರ್ಯವಾಗಿತ್ತು. ಇದು ಆತನ ಭಕ್ತರೇ ತಂದಿಟ್ಟ ಪರಿಸ್ಥಿತಿ. ಹಿರಣ್ಯಕಶಿಪು ಘೋರ ತಪಸ್ಸು ಮಾಡಿ ಚತುರ್ಮುಖನಲ್ಲಿ ವರವನ್ನು ಬೇಡಿದ: “ನನ್ನನ್ನು ಯಾರೂ ಯಾವ ಆಯುಧದಿಂದಲೂ ಕೊಲ್ಲಬಾರದು, ಹಗಲೂ ಕೊಲ್ಲಬಾರದು, ರಾತ್ರಿಯೂ ಕೊಲ್ಲಬಾರದು. ದೇವತೆಗಳು-ಮನುಷ್ಯರು ಅಥವಾ ಪ್ರಾಣಿಗಳಿಂದ ನನಗೆ ಸಾವು ಬರಬಾರದು. ಕೆಳಗೆ, ಒಳಗೆ, ಭೂಮಿಯ ಮೇಲೆ, ಆಕಾಶದಲ್ಲಿ ನಾನು ಸಾಯಬಾರದು” ಎನ್ನುವ ವರವನ್ನು ಬೇಡಿ ಪಡೆದ. ಈ ಕಾರಣಕ್ಕಾಗಿಯೇ ಭಗವಂತ ಪ್ರಾಣಿಯ ಮುಖವಿರುವ ಆದರೆ ಮನುಷ್ಯ ದೇಹವಿರುವ ನರಸಿಂಹನಾಗಿ ಬರಬೇಕಾಯಿತು. ಒಳಗೂ ಅಲ್ಲ, ಹೊರಗೂ ಅಲ್ಲ- ಹೊಸ್ತಿಲಲ್ಲಿ; ಹಗಲೂ ಅಲ್ಲ, ರಾತ್ರಿಯೂ ಅಲ್ಲ- ಮುಸ್ಸಂಜೆಯಲ್ಲಿ, ಭೂಮಿಯಮೇಲೂ ಅಲ್ಲ, ಆಕಾಶದಲ್ಲೂ ಅಲ್ಲ-ತೊಡೆಯಮೇಲೆ; ಯಾವುದೇ ಆಯುಧ ಬಳಸದೇ ತನ್ನ ಕೈ ಉಗುರಿನಿಂದ ಹಿರಣ್ಯಾಕ್ಷನ ಉದರವನ್ನು ಸೀಳಿ ಕೊಂದ ಭಗವಂತ.  ಚತುರ್ಮುಖ ಕೊಟ್ಟ ವರಕ್ಕೆ ಯಾವುದೇ ಭಂಗಬಾರದಂತೆ  ಅದನ್ನು  ಉಳಿಸಿ ದುಷ್ಟ ಸಂಹಾರ ಮಾಡಿದ ಭಗವಂತನ ವಿಶಿಷ್ಠ ರೂಪ ಈ ನರಸಿಂಹ ರೂಪ.
ಈ ಹಿಂದೆ ಹೇಳಿದಂತೆ ದೇವರು ಮತ್ತು ಧರ್ಮವನ್ನು ಅಧ್ಯಯನ ಮಾಡಬಾರದು ಎಂದು ನಿಷೇಧ ಹೇರಿದವರಲ್ಲಿ ಮೊದಲಿಗ ‘ವೇನ’. ಆತನ ನಂತರ ಈ ರೀತಿಯ ಕಾನೂನನ್ನು ತಂದವ ಹಿರಣ್ಯಕಶಿಪು. ಈತ ತನ್ನ ಮಗನಿಗೆ ಪಾಠ ಹೇಳುವ ಅಧ್ಯಾಪಕರಾದ ಶಂಡಾಮರ್ಕರಿಗೆ  ದೇವರು ಮತ್ತು ಧರ್ಮವನ್ನು ಮಕ್ಕಳ ತಲೆಗೆ ಹಾಕಕೂಡದು ಎಂದು ಕಟ್ಟಪ್ಪಣೆ ಮಾಡಿದ್ದ. ಈ ರೀತಿ ಪ್ರಹ್ಲಾದನ ವಿದ್ಯಾಭ್ಯಾಸ ಗುರುಕುಲದಲ್ಲಿ ನಡೆಯುತ್ತಿರುವಾಗ ಒಮ್ಮೆ ಹಿರಣ್ಯಕಶಿಪು  ತನ್ನ ಮಗ ಏನನ್ನು ಕಲಿತಿದ್ದಾನೆ ಎಂದು ತಿಳಿಯಲಿಕ್ಕೋಸ್ಕರ  ಆತನನ್ನು  ಕರೆದು ತನ್ನ ತೊಡೆಯಮೇಲೆ ಕುಳ್ಳಿರಿಸಿಕೊಂಡು "ಗುರುಕುಲದಲ್ಲಿ ಏನನ್ನು ಕಲಿತೆ" ಎಂದು ಕೇಳುತ್ತಾನೆ. ಆಗ ಪ್ರಹ್ಲಾದ ಹೇಳುತ್ತಾನೆ: “ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ,  ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮ ನಿವೇದನಂ”(ಭಾಗವತ: ೭-೫-೨೩). "ನಾನು ನವವಿಧ ಭಕ್ತಿಯನ್ನು ಕಲಿತೆ" ಎಂದು ಪ್ರಹ್ಲಾದ ಹೇಳಿದಾಗ ಹಿರಣ್ಯಕಶಿಪು ಕೊಪಗೊಂಡು ಆತನ ಗುರುಗಳಾದ ಶಂಡಾಮರ್ಕರನ್ನು ಗದರಿಸುತ್ತಾನೆ. ಅವರು ಹೇಳುತ್ತಾರೆ:  “ಇದ್ಯಾವುದನ್ನೂ ತಾವು ಹೇಳಿ ಕೊಟ್ಟಿಲ್ಲ, ಆದರೆ ಹೇಗೋ ಆತನೇ ಕಲಿತಿದ್ದಾನೆ” ಎಂದು. ಆಗ ತೊಡೆಯಲ್ಲಿ ಕುಳಿತಿದ್ದ ಪ್ರಹ್ಲಾದನನ್ನು ತಳ್ಳಿ, ಅಂಥಹ ವಿದ್ಯೆಯನ್ನು ಕಲಿಯಕೂಡದು ಎಂದು ಎಚ್ಚರಿಕೆಯನ್ನು ಕೊಟ್ಟು ಕಳಿಸುತ್ತಾನೆ ಹಿರಣ್ಯಕಶಿಪು. ನಂತರ ಮರಳಿ ಆರು ತಿಂಗಳ ನಂತರ ಪುನಃ ಮಗನ ವಿದ್ಯೆಯನ್ನು ಪರೀಕ್ಷಿಸಿದಾಗ ಪ್ರಹ್ಲಾದ ಮರಳಿ ಭಗವಂತನ ಕುರಿತು ಮಾತನಾಡುತ್ತಾನೆ. ಆಗ ಕೋಪಗೊಂಡ ಹಿರಣ್ಯಕಶಿಪು “ಯಾರು ನಿನಗೆ ನನ್ನ ಮುಂದೆ ಈ ಮಾತನ್ನಾಡುವ ಧೈರ್ಯ ಕೊಟ್ಟವನು” ಎಂದು ಕೇಳುತ್ತಾನೆ. ಇದಕ್ಕೆ ಉತ್ತರಿಸುತ್ತಾ ಪ್ರಹ್ಲಾದ ಹೇಳುತ್ತಾನೆ: “ನಿನ್ನೊಳಗಿದ್ದು ನಿನಗೆ ಯಾರು ಬಲ ಕೊಟ್ಟಿದ್ದಾನೋ ಅವನೇ ನನ್ನೊಳಗಿದ್ದು ನನಗೆ ಈ ಧೈರ್ಯವನ್ನು ಕೊಟ್ಟಿದ್ದಾನೆ” ಎಂದು. ನ ಕೇವಲಂ ಮೇ ಭವತಶ್ಚ ರಾಜನ್,  ಸ  ವೈ ಬಲಂ ಬಲಿನಾಂ ಚಾಪರೇಷಾಂ (ಭಾಗವತ: ೭-೮-೮).  ಈ ಮಾತನ್ನು ಕೇಳಿ ಕೋಪಗೊಂಡ ಹಿರಣ್ಯಾಕ್ಷ ಅನೇಕ ವಿಧದಲ್ಲಿ ಪ್ರಹ್ಲಾದನನ್ನು ಕೊಲ್ಲಿಸುವ ಪ್ರಯತ್ನ ಮಾಡುತ್ತಾನೆ. ಆದರೆ ಎಲ್ಲಾ ಪ್ರಯತ್ನದಲ್ಲೂ ಆತ ಸೋಲುತ್ತಾನೆ. ಕೊನೆಗೆ ಭಯಭೀತನಾಗಿದ್ದರೂ ಧೈರ್ಯದ ಅಭಿನಯ ಮಾಡುತ್ತಾ ಪ್ರಹ್ಲಾದನಲ್ಲಿ:  “ನಿನ್ನನ್ನು ಕಾಯುವ ಆ ನಿನ್ನ ಭಗವಂತ ಎಲ್ಲೆಡೆ ಇದ್ದಾನೆ ಎಂದಿಯಲ್ಲಾ,  ಆತ ಈ ಕಂಬದಲ್ಲಿಯೂ ಇದ್ದಾನೆಯೋ” ಎಂದು ಕೇಳುತ್ತಾನೆ.  ಆಗ ಪ್ರಹ್ಲಾದ: “ಭಗವಂತ ನನ್ನಲ್ಲಿ, ನಿನ್ನಲ್ಲಿ, ಎಲ್ಲಾಕಡೆ, ಈ ಕಂಬದಲ್ಲಿಯೂ ಕೂಡಾ ಇದ್ದಾನೆ” ಎಂದಾಗ, ಹಿರಣ್ಯಕಶಿಪು ಅಹಂಕಾರ ಮತ್ತು ಭಯದಿಂದ ಕಂಬವನ್ನು ತನ್ನ ಗದೆಯಿಂದ ಚಚ್ಚಲು,  ಕಂಬ ಒಡೆದು ನರಸಿಂಹ ಪ್ರತ್ಯಕ್ಷನಾಗುತ್ತಾನೆ. ಈ ರೀತಿ ಉಗ್ರರೂಪದಲ್ಲಿ ಬಂದು ಹಿರಣ್ಯಕಶಿಪುವನ್ನು  ಎತ್ತಿ ತನ್ನ ತೊಡೆಯಮೇಲಿಟ್ಟುಕೊಂಡು ಉಗುರಿನಿಂದ ಆತನ ದೇಹವನ್ನು  ಬಗೆದು, ಆತನ ಕರುಳನ್ನು ತನ್ನ ಕೊರಳಲ್ಲಿ ಧರಿಸುತ್ತಾನೆ ನರಸಿಂಹ.
ಆಚಾರ್ಯ ಮಧ್ವರು ಭಗವಂತನ ಈ ನರಸಿಂಹ  ಅವತಾರವನ್ನು ೧. ಶಾರ್ದೂಲ ವಿಕ್ರೀಡಿತ ಮತ್ತು   ೨. ಸ್ರಗ್ಧರಾ ಎನ್ನುವ ಎರಡು ಛಂದಸ್ಸಿನಲ್ಲಿ ಅದ್ಭುತವಾಗಿ ಸೆರೆ ಹಿಡಿದು ಈ ರೀತಿ ವರ್ಣಿಸಿದ್ದಾರೆ:   ೧. ಪಾಂತ್ವಸ್ಮಾನ್ ಪುರುಹೂತ ವೈರಿಬಲವನ್ ಮಾತಂಗಮಾದ್ಯದ್ಘಟಾ ಕುಂಭೋಚ್ಛಾದ್ರಿ ವಿಪಾಟನಾಧಿಕಪಟು ಪ್ರತ್ಯೇಕ ವಜ್ರಾಯಿತಾಃ.                ೨. ಶ್ರೀಮತ್ಕ್ಂಠೀರವಾಸ್ಯ ಪ್ರತತಸುನಖರಾ ದಾರಿತಾರಾತಿದೂರ ಪ್ರಧ್ವಸ್ತಧ್ವಾನ್ತಶಾಂತ ಪ್ರವಿತತಮನಸಾ ಭಾವಿತಾಭೂರಿಭಾಗೈಃ.  ಇದು ನರಸಿಂಹ ಅವತಾರವನ್ನು ಎರಡು ಛಂದಸ್ಸಿನಲ್ಲಿ ಸೆರೆ ಹಿಡಿದ ಅತ್ಯದ್ಭುತ ರಚನೆ.
ಹಿರಣ್ಯಕಶಿಪುವಿನ  ಅಂತ್ಯದಿಂದ ತಲೆದಿಂಬಿನ ಕೆಳಗಿನ ವಿತ್ತ ಮೋಹ ಕಳೆಯುವಂತಾಗುತ್ತದೆ. ಸಾಧಕರಿಗೆ ಮೋಹವನ್ನು ಮೀರುವ ಹಂತದಲ್ಲಿ  ಹಾಸಿಗೆಯ ಕೆಳಗೆ, ತಲೆದಿಂಬಿನ ಕೆಳಗೆ ಏನಾದರೂ ಧನವನ್ನು ಇಟ್ಟರೆ ನಿದ್ದೆ ಬರುವುದಿಲ್ಲವಂತೆ. ಹಿರಣ್ಯಕಶಿಪು ಹೊರ ಹೋಗುವಾಗ ಆತ ನಮ್ಮನ್ನು ನಡುಗಿಸಿ ಬಿಡುತ್ತಾನೆ. ಆದರೆ ನಾವು ವಿಚಲಿತರಾಗದೇ ಇದ್ದರೆ  ಆಗ ಹಿರಣ್ಯಕಶಿಪು ಹೊರಟುಹೋಗಿ ನಮ್ಮೊಳಗೆ ನರಸಿಂಹ ಬಂದು ಕೂರುತ್ತಾನೆ. ಮೊದಲು ಮತ್ಸ್ಯನಾಗಿ ಬಂದು ವೇದ ವಾಙ್ಮಯವನ್ನು ಕೊಟ್ಟ ಭಗವಂತ, ಕೂರ್ಮನಾಗಿ  ಸಮಸ್ತ ಶಾಸ್ತ್ರದ ಮಥನೆ ಮಾಡಲು ನಿಂತ. ಆದರೂ ವೇದಾರ್ಥಕ್ಕಿಂತ ದುಡ್ಡು ಮುಖ್ಯವಾದಾಗ ವರಾಹ-ನರಸಿಂಹನಾಗಿ ಬಂದು ವಿತ್ತ(ಹಿರಣ್ಯ) ಮೋಹದಿಂದ ಬಿಡುಗಡೆ ಮಾಡಿದ.  [ನರಸಿಂಹ ಅವತಾರದ  ಕುರಿತಾದ ಸಂಕ್ಷಿಪ್ತ ವಿವರಣೆಯನ್ನಷ್ಟೇ ಇಲ್ಲಿ ನೀಡಲಾಗಿದ್ದು, ಇದರ ಪೂರ್ಣ ವಿವರಣೆಯನ್ನು ಮುಂದೆ ಏಳನೇ ಸ್ಕಂಧದಲ್ಲಿ ಕಾಣಬಹುದು]   

Shrimad BhAgavata in Kannada -Skandha-02-Ch-07(15)

ಭಗವಂತನ ಅವತಾರಗಳನ್ನು ಕಾಲಾನುಕ್ರಮವಾಗಿ ನೋಡುವಾಗ ಕೂರ್ಮಾವತಾರ ಮತ್ತು ವಾಮನ ಅವತಾರಕ್ಕೆ ಸಂಬಂಧಿಸಿದಂತೆ ಒಂದು ಸಮಸ್ಯೆ ಎದುರಾಗುತ್ತದೆ. ನಮಗೆ ತಿಳಿದಂತೆ  ಕೂರ್ಮಾವತಾರದ ನಂತರ ನರಸಿಂಹ ಅವತಾರವಾಗಿದೆ. ಆ ನಂತರ ವಾಮನ ಅವತಾರ. ಹೀಗಾಗಿ ಕಾಲಕ್ರಮಕ್ಕನುಗುಣವಾಗಿ ಇಲ್ಲಿ ಸಮುದ್ರಮಥನವನ್ನು ನರಸಿಂಹ ಮತ್ತು ವಾಮನ ಅವತಾರಕ್ಕೂ ಮೊದಲು ಹೇಳಿದ್ದಾರೆ. ಆದರೆ ಒಂದು ಕಡೆ “ಬಲಿಚಕ್ರವರ್ತಿ ಸಮುದ್ರಮಥನ ಕಾಲದಲ್ಲಿ ದೇವತೆಗಳ ವಿರುದ್ಧ ಹೋರಾಡಿದ್ದ” ಎನ್ನುವ ಕಥೆಯೊಂದಿದೆ. ಈ ಕಥೆ ನಮ್ಮನ್ನು ಗೊಂದಲಗೊಳಿಸುತ್ತದೆ. ವಾಮನಾವತಾರ ಕಾಲದ ಬಲಿಚಕ್ರವರ್ತಿ ಕೂರ್ಮಾವತಾರ ಕಾಲದಲ್ಲಿ ಹೇಗೆ ಬಂದ ಎನ್ನುವುದು ನಮ್ಮ ಗೊಂದಲ. ಈ ವಿಷಯ ಸ್ಪಷ್ಟವಾಗಬೇಕಾದರೆ ನಮಗೆ ಇತಿಹಾಸದಲ್ಲಿ ನಡೆದ ಎರಡು ಸಮುದ್ರಮಥನ ತಿಳಿದಿರಬೇಕು. ಎರಡು ಸಮುದ್ರ ಮಥನಗಳಲ್ಲಿ ಒಂದು ರೈವತ ಮನ್ವಂತರದಲ್ಲಿ ಹಾಗೂ ಇನ್ನೊಂದು ವೈವಸ್ವತ ಮನ್ವಂತರದಲ್ಲಿ ನಡೆದಿದೆ. ಬಲಿ ದೇವತೆಗಳೊಂದಿಗೆ ಹೋರಾಡಿದ ಕಥೆ ರೈವತ ಮನ್ವಂತರಕ್ಕೆ ಸಂಬಂಧಿಸಿದ್ದು. ಆದರೆ ಮೇಲೆ ಹೇಳಿರುವ ಭಗವಂತನ ಕೂರ್ಮಾವತಾರ ಮತ್ತು ಸಮುದ್ರಮಥನ  ವೈವಸ್ವತ ಮನ್ವಂತರದಲ್ಲಿ ನಡೆದಿರುವುದು. ಆದ್ದರಿಂದ ವೈವಸ್ವತ ಮನ್ವಂತರದಲ್ಲಿ ನಡೆದ ಸಮುದ್ರಮಥನ ಪ್ರಹ್ಲಾದನ ಜನನಕ್ಕಿಂತ ಮೊದಲು ಹಾಗೂ ವೈವಸ್ವತ ಮನ್ವಂತರದ ಮತ್ಯಾವತಾರದ ನಂತರ ನಡೆದ ಘಟನೆ. ಈ ಕಾಲದಲ್ಲಿ ಬಲಿ ದೇವತೆಗಳ ವಿರುದ್ಧ ಹೊರಾಡಿರಲಿಲ್ಲ. ಏಕೆಂದರೆ ವೈವಸ್ವತ ಮನ್ವಂತರದ ಸಮುದ್ರ ಮಥನ ಕಾಲದಲ್ಲಿ ಇನ್ನೂ ಬಲಿಯ ಜನನವೇ ಆಗಿರಲಿಲ್ಲ. ಇನ್ನು ರೈವತ ಮನ್ವಂತರದಲ್ಲಿ ಹೇಗೆ ಬಲಿಚಕ್ರವರ್ತಿ ಸಮುದ್ರಮಥನದಲ್ಲಿ ಪಾಲ್ಗೊಂಡಿದ್ದ ಎನ್ನುವುದನ್ನು ವಿವರಿಸುತ್ತಾ ಆಚಾರ್ಯ ಮಧ್ವರು ಹೇಳುತ್ತಾರೆ: ಪ್ರತಿ ಮನ್ವಂತರಂ ಪ್ರಾಯಃ ಪ್ರಹ್ಲಾದಾದ್ಯಾಃ ಪ್ರಜಾತಿರೆಎಂದು. ಅಂದರೆ ಪ್ರಹ್ಲಾದನ ಸಂತತಿ ಪ್ರತಿ ಮನ್ವಂತರದಲ್ಲಿ ಹುಟ್ಟುತ್ತಾರೆ ಎಂದು. ಪ್ರತಿ ಮನ್ವಂತರದಲ್ಲಿ, ಪ್ರತಿ ಯುಗದಲ್ಲಿ, ಪ್ರತಿ ಕಲ್ಪದಲ್ಲಿ  ಕೆಲವು ಘಟನೆಗಳು ಪುನರಾವರ್ತನೆಗೊಳ್ಳುತ್ತವೆ. ಒಟ್ಟಿನಲ್ಲಿ ಹೇಳಬೇಕೆಂದರೆ ರೈವತ ಮನ್ವಂತರದಲ್ಲಿಯೂ ಕೂಡ ಒಬ್ಬ ಬಲಿಚಕ್ರವರ್ತಿ ಇದ್ದ ಹಾಗೂ ಆತ ಸಮುದ್ರ ಮಥನದಲ್ಲಿ ಪಾಲ್ಗೊಂಡಿದ್ದ.    ಈ ಎಲ್ಲಾ ವಿಷಯಗಳನ್ನು  ಸಮಷ್ಟಿಯಾಗಿ ನೋಡಿದಾಗ ನಮ್ಮ ಗೊಂದಲ ಪರಿಹಾರವಾಗುತ್ತದೆ.
ಈ ಹಿಂದೆ ಹೇಳಿದಂತೆ ವರಾಹ ಅವತಾರ ಸ್ವಾಯಂಭುವ ಮನ್ವಂತರದಲ್ಲೇ ನಡೆದಿದ್ದು ಅದೇ ರೂಪ ಮರಳಿ ವೈವಸ್ವತ ಮನ್ವಂತರದಲ್ಲಿ ಕಾಣಿಸಿಕೊಂಡಿರುವುದರಿಂದ, ಮತ್ಸ್ಯಾವತಾರ ಮತ್ತು ಕೂರ್ಮಾವತಾರದ ನಂತರ ವೈವಸ್ವತ ಮನ್ವಂತರದಲ್ಲಿನ ವರಾಹನ ಕುರಿತು ಇಲ್ಲಿ ಮತ್ತೆ ವಿವರಿಸುವುದಿಲ್ಲ. ಇಲ್ಲಿ ಕೂರ್ಮಾವತಾರದ ನಂತರ ನೇರವಾಗಿ ನರಸಿಂಹ ಅವತಾರವನ್ನು ಹೇಳುತ್ತಾರೆ. ಆದರೆ ನಮಗೆ ತಿಳಿದಂತೆ ವರಾಹನನ್ನು ಬಿಟ್ಟು ನರಸಿಂಹನಿಲ್ಲ.  ಕೃಷ್ಣ-ರಾಮರು ಒಂದು ಜೋಡಿಯಾದರೆ ವರಾಹ-ನರಸಿಂಹ ಇನ್ನೊಂದು ಜೋಡಿ. ಓಂಕಾರದಲ್ಲಿ ಅ-ಕಾರ ಮತ್ತು ಉ-ಕಾರ ವಾಚ್ಯರಾಗಿ ಕೃಷ್ಣ-ರಾಮರಿದ್ದರೆ, ಮ-ಕಾರ ಮತ್ತು ನಾದ-ವಾಚ್ಯರಾಗಿ ನರಸಿಂಹ-ವರಾಹರಿದ್ದಾರೆ. ಭಗವಂತನ ಈ ನಾಲ್ಕು ರೂಪಗಳು ಪ್ರಣವ(ಓಂಕಾರ) ಪ್ರತಿಪಾದ್ಯ ರೂಪಗಳಾಗಿವೆ. ಮುಖ್ಯವಾಗಿ  ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರ ಸಂಹಾರಕ್ಕಾಗಿ ಹಾಗೂ ಜಯ-ವಿಜಯರ ಉದ್ದಾರಕ್ಕಾಗಿಯೇ  ಆದ ಭಗವಂತನ ರೂಪಗಳಿವು. ಭಗವಂತ ವರಾಹನಾಗಿ ಹಿರಣ್ಯಾಕ್ಷನನ್ನು ಕೊಂದ ಮತ್ತು ನರಸಿಂಹನಾಗಿ ಹಿರಣ್ಯಕಷಿಪುವನ್ನು ಕೊಂದ. ಈ ದೈತ್ಯರೆ ಪುನಃ ರಾವಣ-ಕುಂಭಕರ್ಣರಾಗಿ ಬಂದಾಗ ಭಗವಂತ ರಾಮನಾಗಿ ಬಂದು ಅವರನ್ನು ನಿಗ್ರಹಿಸಿದ. ನಂತರ ಅದೇ ದೈತ್ಯರು ಶಿಶುಪಾಲ-ದಂತವಕ್ರರಾಗಿ ಬಂದಾಗ ಭಗವಂತ ಶ್ರೀಕೃಷ್ಣ ರೂಪದಲ್ಲಿ ಬಂದು ಅವರ ಹರಣ ಮಾಡಿದ.

ಹಿರಣ್ಯಾಕ್ಷ-ಹಿರಣ್ಯಕಶಿಪು, ಹೆಸರೇ ಸೂಚಿಸುವಂತೆ ಒಬ್ಬ ಚಿನ್ನದ ಮೇಲೆ ಕಣ್ಣಿಟ್ಟವನು ಹಾಗೂ ಇನ್ನೊಬ್ಬ ಚಿನ್ನವನ್ನು ತನ್ನ ತಲೆದಿಂಬಾಗಿರಿಸಿಕೊಂಡವನು. ನಮ್ಮೊಳಗೂ ಈ ದೈತ್ಯರಿದ್ದಾರೆ. ಉಪನಿಷತ್ತಿನಲ್ಲಿ ಹೇಳುವಂತೆ: ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಮ್, ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದ್ರೃಷ್ಟಯೇ. ಸತ್ಯದ ಮೋರೆಯನ್ನು ಚಿನ್ನದ ತಳಿಗೆಯಿಂದ ಮುಚ್ಚಿಕೊಂಡು ನಾವಿಂದು  ಬದುಕುತ್ತಿದ್ದೇವೆ. ಆದ್ದರಿಂದ ಇಂದು ನಮಗೆ ಸತ್ಯ ಬೇಡವಾಗಿದೆ.  ಈ ರೀತಿ ಚಿನ್ನದ ಮೇಲೆ ಕಣ್ಣಿಡದೇ ಚಿನ್ಮಯನ ಮೇಲೆ ಕಣ್ಣಿಡುವಂತಾಗಲು ನಾವು ವರಾಹ-ನರಸಿಂಹನನ್ನು ನಮ್ಮೊಳಗೆ ಆವಿರ್ಭಾವಗೊಳಿಸಿಕೊಳ್ಳಬೇಕು. ಆದರೆ ನರಸಿಂಹ-ವರಾಹ ಉಪಾಸನೆ ಕೃಷ್ಣ-ರಾಮರ ಉಪಾಸನೆಗಿಂತ ಕ್ಲಿಷ್ಟವಾದುದು. ಈ ಉಪಾಸನೆ ಮಾಡುವಾಗ ತುಂಬಾ ಎಚ್ಚರ ಅಗತ್ಯ. ನಮ್ಮಲ್ಲಿ ದೋಷವಿದ್ದಾಗ ಅದು ನಮ್ಮನ್ನೇ ಸುಟ್ಟುಬಿಡುವ ಸಾಧ್ಯತೆ ಇದೆ.  ಆದರೂ ಕೂಡಾ ಪ್ರಹ್ಲಾದವರದ ನರಸಿಂಹ “ಅಭಕ್ತ-ಜನ-ಸಂಹಾರೀ ಭಕ್ತಾನಾಮಭಯಪ್ರದಃ ” ಎನ್ನುವ ಮಾತನ್ನು ನೆನೆದು ನಾವು ನಮ್ಮ ಪ್ರಯತ್ನವನ್ನು  ಮುಂದುವರಿಸಬೇಕು.  ಬನ್ನಿ, ಈ ಹಿನ್ನೆಲೆಯೊಂದಿಗೆ ಚತುರ್ಮುಖನ ಮುಂದಿನ  ಮಾತನ್ನಾಲಿಸೋಣ. 

Saturday, June 20, 2015

Shrimad BhAgavata in Kannada -Skandha-02-Ch-07(14)

ಕೂರ್ಮಾವತಾರ 

ಕ್ಷೀರೋದಧಾವಮರದಾನವಯೂಥಪಾನಾ ಮನ್ಮಥ್ನತಾಮಮೃತಲಬ್ಧಯ ಆದಿದೇವಃ
ಪೃಷ್ಠೇನ ಕಚ್ಛಪವಪುರ್ವಿದಧಾರ ಗೋತ್ರಂ ನಿದ್ರೇಕ್ಷಣೋSದ್ರಿಪರಿವರ್ತಕಷಾಣಕಂಡೂಃ ೧೩

ಇಲ್ಲಿ  ಚತುರ್ಮುಖ  ನಾರದರಿಗೆ ಭಗವಂತನ ಕೂರ್ಮಾವತಾರವನ್ನು ವಿವರಿಸುವುದನ್ನು ಕಾಣುತ್ತೇವೆ. ಇದು ಸಮುದ್ರಮಥನದ ಕಥೆ. ಕಡೆಯಲು ಮಂದರವೇ ಕಡೆಗೋಲು. ಮಂದರ ಪರ್ವತ  ಕಡಲಲ್ಲಿ ಮುಳುಗಿಹೋಗದಂತೆ ಎತ್ತಿ ಹಿಡಿದವ ಕೂರ್ಮರೂಪಿ ಭಗವಂತ. ಈ ಮಥನ ನಡೆದಿರುವುದು ಭೂಮಿಯಲ್ಲಿ ಅಲ್ಲ. ಇಲ್ಲಿ ಸಮುದ್ರ ಎಂದರೆ ಅದು ಕ್ಷೀರ ಸಮುದ್ರ.  ಸೂಕ್ಷ್ಮಪ್ರಪಂಚದಲ್ಲಿ ಸೂಕ್ಷ್ಮಜೀವಿಗಳಿಂದ ನಡೆದ ಮಥನವಿದು.  ಈ ರೀತಿ ಮಂದರ ಪರ್ವತವನ್ನು ಬೆನ್ನಮೇಲೆ ಹೊತ್ತ ಭಗವಂತ  ತುರಿಕೆಯ ಬೆನ್ನನ್ನು ತುರಿಸಿದಾಗ ಸಿಗುವ ಆನಂದವನ್ನು, ನಿದ್ದೆಯ ಕ್ಷಣದ ಆನಂದವನ್ನು ಅನುಭವಿಸಿದ ಎಂದು ಆಲಂಕಾರಿಕವಾಗಿ ಇಲ್ಲಿ ಹೇಳಿದ್ದಾರೆ.
ಈ ಸಮುದ್ರ ಮಥನವನ್ನು  ನಮ್ಮ  ಪಿಂಡಾಂಡದಲ್ಲಿ ಅನ್ವಯ ಮಾಡಿ ನೋಡಿದರೆ: ಇದು ನಮ್ಮ ಹೃದಯ ಸಮುದ್ರದಲ್ಲಿ  ನಡೆಯಬೇಕಾದ ಶಾಸ್ತ್ರಗಳ ಮಥನ.  ನಾವು ನಮ್ಮ ಕುಂಡಲಿಯಲ್ಲಿನ ವಾಸುಕಿಯನ್ನು ಮನಸ್ಸೆಂಬ ಮಂದರ ಪರ್ವತಕ್ಕೆ ಸುತ್ತಿ ಮಥನ ಮಾಡಬೇಕು. ಹೀಗೆ ಮಥನ ಮಾಡುವಾಗ ಮನಸ್ಸು ಕುಸಿಯದಂತೆ ಭಗವಂತನ ಆಶ್ರಯ ಪಡೆಯಬೇಕು. ಈ ರೀತಿ ಶಾಸ್ತ್ರಗಳ ಮಥನ ಮಾಡಿದಾಗ ಮೊದಲು ಬರುವುದು ಸಂಶಯ/ಅಪನಂಬಿಕೆ ಎನ್ನುವ ವಿಷ.     ಹೃದಯದಲ್ಲಿನ ಈ ವಿಷವನ್ನು ಮೊದಲು ಹೊರಕ್ಕೆ ತೆಗೆಯಬೇಕು. ಆನಂತರ ಅಧ್ಯಾತ್ಮದ ಅಮೃತಕ್ಕಾಗಿ ಮಥನ ನಮ್ಮೊಳಗಿರುವ ದೇವಾಸುರರಿಂದ  ನಿರಂತರ ನಡೆಯಬೇಕು.

ಮೇಲೆ ಹೇಳಿದಂತೆ ಇದು ಎಂದೋ ನಡೆದು ಹೋದ ಸಮುದ್ರ ಮಥನವಷ್ಟೇ ಅಲ್ಲ. ಅನುದಿನ ನಮ್ಮೊಳಗೆ ನಡೆಯಬೇಕಾದ ಮಥನ. ಇದನ್ನೇ ಪುರಂದರದಾಸರು “ ಶೇಷ ಶಯನನೆ, ಏಳು ಸಮುದ್ರ ಮಥನವ ಮಾಡು” ಎಂದಿದ್ದಾರೆ. ನಮ್ಮ ದೇಹದೊಳಗೆ ಏಳು ಸಮುದ್ರಗಳಿವೆ. ಇವೇ ಏಳು ಶಕ್ತಿಚಕ್ರಗಳು(spiritual centers, ನಿರ್ನಾಳ ಗ್ರಂಥಿಗಳು). ಇದರಲ್ಲಿ ಮೊದಲನೆಯದ್ದು ನಮ್ಮ ಮಲ-ಮೂತ್ರದ್ವಾರದ ಮಧ್ಯದಲ್ಲಿರುವ 'ಮೂಲಾಧಾರ ಚಕ್ರ', ಇದೇ 'ಉಪ್ಪಿನ ಸಮುದ್ರ'. ಎರಡನೆಯದ್ದು ಹೊಕ್ಕುಳಿನಿಂದ ಸ್ವಲ್ಪ ಕೆಳಗಿರುವ 'ಸ್ವಾಧಿಷ್ಠಾನಚಕ್ರ'; ಇದು 'ಕಬ್ಬಿನಹಾಲಿನ ಸಮುದ್ರ'. ಇದು ಬದುಕಿನಲ್ಲಿ ಐಹಿಕ ಸುಖದ ಖುಷಿ ಕೊಡುವ ಚಕ್ರ. ಇದಕ್ಕೂ ಮೇಲೆ ಹೊಕ್ಕುಳಿನ ಭಾಗದಲ್ಲಿ 'ಮಣಿಪೂರ ಚಕ್ರವಿದೆ. ಇದು ಕಾಮದ ಅಮಲಿನ ಸುಖ ಕೊಡುವ 'ಸುರ ಸಮುದ್ರ'. ಇದಕ್ಕೂ ಮೇಲೆ 'ಅನಾಹತ ಚಕ್ರ'. ಇದನ್ನೇ ತುಪ್ಪ/ಬೆಣ್ಣೆಯ ಸಮುದ್ರ ಅಥವಾ ಹೃದಯ ಸಮುದ್ರ ಎನ್ನುತ್ತಾರೆ. ಇಲ್ಲಿಂದ ಮೇಲೆ ಅಧ್ಯಾತ್ಮದ ವಿಶ್ವ (Spiritual world) ತೆರೆದುಕೊಳ್ಳುತ್ತದೆ. ಮೊತ್ತ ಮೊದಲು ಭಕ್ತಿಯ ನವನೀತವನ್ನು ಹೃದಯದಲ್ಲಿ ತುಂಬಿ ಭಗವಂತನಿಗೋಸ್ಕರ ಕಾಯುವ ಸಾಧನೆ ಪ್ರಾರಂಭವಾಗುವುದೇ ಇಲ್ಲಿಂದ. ಇನ್ನೂ ಮೇಲಕ್ಕೆ ಹೋದರೆ 'ವಿಶುದ್ಧಿಚಕ್ರ'. ಅಥವಾ ಮೊಸರಿನ ಸಮುದ್ರ. ಇಲ್ಲಿ ಜ್ಞಾನಿಯು ತ್ರಿಕಾಲದರ್ಶಿಯಾಗುತ್ತಾನೆ. ಅದರಿಂದಾಚೆಗೆ ಕ್ಷೀರಸಾಗರ ಅಥವಾ ಆಜ್ಞಾಚಕ್ರ. ಇದು ಭ್ರೂ- ಮಧ್ಯದಲ್ಲಿ ಭಗವಂತನನ್ನು ಕಾಣುವಂತಹದ್ದು. ಇದೇ ಕ್ಷೀರ ಶಾಯಿಯಾದ ಭಗವಂತನ ದರ್ಶನ. ಇದರಿಂದಾಚೆಗೆ ಸಹಸ್ರಾರ ಅಥವಾ ಅಮೃತಸಾಗರ. ಇವು ಮನುಷ್ಯನ ಬದುಕನ್ನು ನಿರ್ಧರಿಸುವ ಏಳು ಮಹಾಸಮುದ್ರಗಳು. ಇಂತಹ ಅಂತರಂಗದ ಸಮುದ್ರದಲ್ಲಿ ನೆಲೆಸಿ ನಮ್ಮನ್ನು ಎತ್ತರಕ್ಕೇರಿಸುವ ಭಗವಂತ ಮಹೋದಧಿಶಯಃ. ನಮ್ಮೊಳಗಿನ ದೇವಾಸುರರಿಂದ ಮಥನ ನಡೆದು, ವಿಷ ಕಳೆದು  ಅಮೃತ ಬರಲು  ನಮಗೆ ಈ ಭಗವಂತನ ನೆರವು ಬೇಕು. ಕೂರ್ಮನಾಗಿ, ಮೂಲಾಧಾರನಾಗಿ ನಿಂತು ಆತ ನಡೆಸಬೇಕು. ಸಪ್ತಸಾಗರಗಳ ಮಥನ ನಡೆದಾಗ ಅಲ್ಲಿ ಅಮೃತಕಲಶ ಹಿಡಿದು ಧನ್ವಂತರಿ ಮೇಲೆದ್ದು ಬರುತ್ತಾನೆ.  [ಕೂರ್ಮಾವತಾರ ಕುರಿತಾದ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ನೀಡಲಾಗಿದ್ದು, ಇದರ ಪೂರ್ಣ ವಿವರಣೆಯನ್ನು ಮುಂದೆ ಎಂಟನೇ ಸ್ಕಂಧದಲ್ಲಿ ಕಾಣಬಹುದು. ಕೂರ್ಮಾವತಾರದ ಜೊತೆಗೆ ನಡೆದ ಮೋಹಿನಿ ಅವತಾರವನ್ನು ಇಲ್ಲಿ ವಿವರಿಸಿಲ್ಲ.  ಧನ್ವಂತರಿ ಅವತಾರ ಎರಡು ಬಾರಿ ನಡೆದಿದ್ದು ಅದನ್ನು ಸಮೀಕರಿಸಿ ಮುಂದೆ ಹೇಳುತ್ತಾರೆ. ಎರಡು ಧನ್ವಂತರಿಯಲ್ಲಿ ಮೊದಲನೆಯದು ಸಮುದ್ರಮಥನದಲ್ಲಿ  ಬಂದ ಸಾಕ್ಷಾತ್ ಭಗವಂತನ ಅವತಾರ ಹಾಗೂ ಎರಡನೆಯದು ವೈದ್ಯಶಾಸ್ತ್ರವನ್ನು ಪರಿಚಯಿಸಿದ, ಆಯುರ್ವೇದ ಪ್ರವರ್ತಕನಾದ ಕಾಶೀರಾಜನಲ್ಲಿ ಧನ್ವಂತರಿಯಾಗಿ ನಡೆದ ಭಗವಂತನ ಆವೇಶಾವತಾರ].

Thursday, June 4, 2015

Shrimad BhAgavata in Kannada -Skandha-02-Ch-07(13)

ಮತ್ಸ್ಯಾವತಾರ

ಮತ್ಸ್ಯೋ ಯುಗಾಂತಸಮಯೇ ಮನುನೋಪಲಬ್ಧಃ ಕ್ಷೋಣೀಮಯೋ ನಿಖಿಲಜೀವನಿಕಾಯಕೇತಃ
ವಿಸ್ರಂಸಿತಾನುರುಭಯೇ ಸಲಿಲೇ ಮುಖಾನ್ಮ ಆದಾಯ ತತ್ರ ವಿಜಹಾರ ಹ ವೇದಮಾರ್ಗಾನ್ ೧೨

ಈಗ ನಡೆಯುತ್ತಿರುವುದು  ಏಳನೇ ವೈವಸ್ವತ ಮನ್ವಂತರ. ಈ ಮನ್ವಂತರದ ಆದಿಯಲ್ಲಿ ನಡೆದ ಭಗವಂತನ ಅವತಾರವೇ ಮತ್ಸ್ಯಾವತಾರ.  ಸೂರ್ಯಪುತ್ರನಾದ ವೈವಸ್ವತ ಮನು ಪೂರ್ವ ಜನ್ಮದಲ್ಲಿ ಸತ್ಯವ್ರತನೆಂಬ ಹೆಸರಿನ ರಾಜರ್ಷಿಯಾಗಿದ್ದ. ಒಮ್ಮೆ ಆತ ಅರ್ಘ್ಯ ನೀಡುತ್ತಿದ್ದಾಗ ಬೊಗಸೆಯಲ್ಲಿನ ಅರ್ಘ್ಯಜಲದಲ್ಲಿ ಒಂದು ಪುಟ್ಟ ಮೀನು ಕಾಣಿಸಿತು. ಆ ಮೀನನ್ನು ಆತ ಒಂದು ಪಾತ್ರೆಯಲ್ಲಿಟ್ಟ. ಮೀನು ಪಾತ್ರೆಯ ಗಾತ್ರಕ್ಕೆ ಬೆಳೆಯಿತು. ಕೊಳಕ್ಕೆ ಬಿಟ್ಟ. ಅದು ಕೊಳದ ಆಕಾರದಷ್ಟು ಬೆಳೆದು ನಿಂತಿತು. ನಂತರ ಕಡಲಿಗೆ ಬಿಟ್ಟ. ಅಲ್ಲಿ ಮಹಾ ಮತ್ಸ್ಯವಾಗಿ ಭಗವಂತ ಮನುವಿಗೆ ವಿಶ್ವರೂಪದರ್ಶನ ನೀಡಿದ. ಈ ರೀತಿ ಕಾಣಿಸಿಕೊಂಡ ಭಗವಂತ ಮನುವಿಗೆ ಹೇಳುತ್ತಾನೆ: “ಇನ್ನು ಪ್ರಳಯವಾಗಿ ಎಲ್ಲವೂ ಮುಳುಗಿ ಹೋಗುತ್ತದೆ. ಆದರೆ ನೀನು ಆ ಪ್ರಳಯಕ್ಕೆ ಸಿಕ್ಕಿ ಸಾಯುವ ಅಗತ್ಯವಿಲ್ಲ. ನಿನ್ನನ್ನು ನಾನು ರಕ್ಷಣೆ ಮಾಡುತ್ತೇನೆ. ನೀನು ಮುಂದಿನ ಮನ್ವಂತರದ ಪ್ರವೃತ್ತಿಗೆ ಬೇಕಾದ ಎಲ್ಲಾ ಸಾರ ಸಂಗ್ರಹವನ್ನು ಹಿಡಿದುಕೊಂಡು, ಮುಂದಿನ ಮನ್ವಂತರದಲ್ಲಿ  ಜ್ಞಾನ ದಾನ ಮಾಡಬೇಕಾದ ಋಷಿಗಳ ಜೊತೆಗೆ ಸಮುದ್ರ ತೀರದಲ್ಲಿ ನಿಂತು ಕಾಯುತ್ತಿರು. ಪ್ರಳಯ ಕಾಲದಲ್ಲಿ ಸಮುದ್ರ ಉಕ್ಕೇರಿ ಊರೂರು ಮುಳುಗುತ್ತದೆ. ಆಗ ನೀನು ನಿಂತಲ್ಲಿಗೆ ಒಂದು ದೋಣಿ ಬರುತ್ತದೆ. ಆ ಭೂ ರೂಪದ ದೋಣಿಯನ್ನು ನನ್ನ ಮೂಗಿನ ಮೇಲಿನ   ಕೊಂಬಿಗೆ ಕಟ್ಟಿಬಿಡು. ನಾನು ನಿನ್ನನ್ನು ರಕ್ಷಿಸುತ್ತೇನೆ” ಎಂದು. ಹೀಗೆ ಪ್ರಳಯಕಾಲದಲ್ಲಿ ಮತ್ಸ್ಯ ರೂಪದಲ್ಲಿ ಕಾಣಿಸಿಕೊಂಡ ಭಗವಂತ ಮನುವನ್ನು ರಕ್ಷಿಸಿದ್ದಷ್ಟೇ ಅಲ್ಲ, ಮನುವಿಗೆ ಮತ್ತು ಋಷಿಗಳಿಗೆ  ಜ್ಞಾನೋಪದೇಶವನ್ನೂ ಮಾಡಿದ. ಹೀಗೆ ಭಗವಂತ ಮನುವಿಗೆ ಮಾಡಿದ ಉಪದೇಶವೇ ಮತ್ಸ್ಯಪುರಾಣ. ಪ್ರಳಯಕಾಲದಲ್ಲಿ ಮನುವನ್ನು ರಕ್ಷಣೆ ಮಾಡಿ,  ಪ್ರಳಯದಿಂದ ಪಾರು ಮಾಡಿಸಿ, ಮುಂದಿನ ಮನ್ವಂತರಕ್ಕೆ ಅನುವು ಮಾಡಿಕೊಟ್ಟು ಅದೃಶ್ಯನಾದ ಭಗವಂತ. ಹೀಗೆ ಸಮಸ್ತ ಜೀವ ನಿಕಾಯಗಳಿಗಾಗಿ ಪ್ರಳಯಕಾಲದಲ್ಲೂ  ಜ್ಞಾನೋಪದೇಶ ಮಾಡಿದ ಅವತಾರ ಈ ಮತ್ಸ್ಯಾವತಾರ.
ಇದಲ್ಲದೆ ಕಲ್ಪ ಪ್ರಳಯ ಕಾಲದಲ್ಲಿ ಚತುರ್ಮುಖನ ಬಾಯಿಯಿಂದ ಕೆಳಕ್ಕೆ ಜಾರಿದ ವೇದಗಳನ್ನು ಹಯಗ್ರೀವ ಎನ್ನುವ ಅಸುರ ಅಪಹಾರ ಮಾಡುತ್ತಾನೆ.  ಇದರಿಂದಾಗಿ ಮುಂದಿನ ಕಲ್ಪದಲ್ಲಿ ವೇದ ಪರಂಪರೆಯೇ ನಾಶವಾಗುವ ಪರಿಸ್ಥಿತಿ ಎದುರಾಗುತ್ತದೆ. ಆಗ ಭಗವಂತ ಮತ್ಸ್ಯರೂಪನಾಗಿ ಬಂದು ಹಯಗ್ರೀವಾಸುರನನ್ನು ಕೊಂದು, ವೇದಾಭಿಮಾನಿ ದೇವತೆಗಳನ್ನು ರಕ್ಷಿಸಿದ ಮತ್ತು ಸೃಷ್ಟಿಯ ಆದಿಯಲ್ಲಿ ವೇದವನ್ನು ಚತುರ್ಮುಖನಿಗೆ ನೀಡಿದ. ಈ ಕುರಿತಾದ ಹೆಚ್ಚಿನ ವಿವರಣೆಯನ್ನು ಎಂಟನೇ ಸ್ಕಂಧದಲ್ಲಿ  ಕಾಣಬಹುದು.

ಇಲ್ಲಿ “ಚತುರ್ಮುಖನ ಬಾಯಿಯಿಂದ ವೇದ ಕೆಳಕ್ಕೆ ಜಾರಿತು ಮತ್ತು ಅದನ್ನು ಅಸುರ ಅಪಹರಿಸಿದ” ಎನ್ನುವ ಮಾತನ್ನು ಕೆಲವರು ಗೊಂದಲ ಮಾಡಿಕೊಳ್ಳುತ್ತಾರೆ. ವೇದ ಈ ರೀತಿ ಜಾರಿ ಬೀಳುವ ವಸ್ತು ಅಥವಾ ಪುಸ್ತಕವೇ ?  ಇತ್ಯಾದಿ ಪ್ರಶ್ನೆ ಕೆಲವರದ್ದು.   ಈ ಮಾತು  ಅರ್ಥವಾಗಬೇಕಾದರೆ ಈ ಹಿಂದೆ ಒಂದನೇ ಸ್ಕಂಧದಲ್ಲಿ ವಿವರಿಸಿದ ಪುರಾಣದ ಮೂರು ಭಾಷೆ ಮತ್ತು ನಿರೂಪಣೆಯ ಏಳು ವಿಧ ನಮಗೆ ತಿಳಿದಿರಬೇಕಾಗುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ: ಇಲ್ಲಿ ವೇದಗಳ ಅಪಹಾರ ಎಂದರೆ ವೇದಾಭಿಮಾನಿ ದೇವತೆಗಳ ಅಪಹಾರ.    

Tuesday, June 2, 2015

Shrimad BhAgavata in Kannada -Skandha-02-Ch-07(12)

ಈವರೆಗೆ ಸ್ವಾಯಂಭುವ ಮನ್ವಂತರದಲ್ಲಿ ನಡೆದ ಹಲವು ಅವತಾರಗಳ ವಿವರಣೆಯನ್ನು ನೋಡಿದೆವು. ಇದರಲ್ಲಿ ಕೆಲವು ಅವತಾರಗಳನ್ನು ಪುನಃ ವಿಸ್ತಾರವಾಗಿ ಭಾಗವತ ಮುಂದೆ ವಿವರಿಸುತ್ತದೆ. ಆದರೆ ಇನ್ನು ಕೆಲವು ಅವತಾರಗಳ ವಿವರಣೆ/ಉಲ್ಲೇಖ ಮುಂದೆ ಬರುವುದಿಲ್ಲ. ವಿಶೇಷವಾಗಿ ಭಾಗವತ ಈ ಮನ್ವಂತರದ ದಶಾವತಾರದ ವಿವರಣೆಯನ್ನು ವಿಸ್ತಾರವಾಗಿ ನೀಡುತ್ತದೆ. ದಶಾವತಾರಕ್ಕೆ ಸೇರದ ಮೂರು ಅವತಾರಗಳಿವೆ. ಅವುಗಳೆಂದರೆ: ಸಮುದ್ರ ಮಥನ ಕಾಲದಲ್ಲಿ ನಡೆದ ಧನ್ವಂತರಿ ಮತ್ತು ಮೋಹಿನಿ ಅವತಾರ ಹಾಗೂ ಈ ಮನ್ವಂತರದ ಬಹಳ ಮುಖ್ಯವಾದ ಅವತಾರವಾದ ವ್ಯಾಸಾವತಾರ. ಮೋಹಿನಿ ಭಗವಂತನ ಮೋಹಕ ರೂಪಗಳಲ್ಲಿ ಒಂದಾಗಿರುವುದರಿಂದ ಆ ಕುರಿತ ವಿವರಣೆ ಈ ಅಧ್ಯಾಯದಲ್ಲಿ ಬರುವುದಿಲ್ಲ. ಉಳಿದಂತೆ ಧನ್ವಂತರಿ ಮತ್ತು ವ್ಯಾಸಾವತಾರ ಕುರಿತಾದ ವಿವರಣೆಯೊಂದಿಗೆ ದಶಾವತಾರದ ಸಂಕ್ಷಿಪ್ತ ವಿವರಣೆಯನ್ನು ಈ ಅಧ್ಯಾಯದಲ್ಲಿ ಇನ್ನು ಮುಂದೆ ಕಾಣಬಹುದು.

ಸ್ವಾಯಂಭುವ ಮನ್ವಂತರದಲ್ಲಿ ನಡೆದ ವರಾಹ ಅವತಾರವನ್ನು ಭಗವಂತ ಸಮಾಪ್ತಿಗೊಳಿಸದೇ ಇರುವುದರಿಂದ ಇದು ದಶಾವತಾರಗಳಲ್ಲಿ ಮೊದಲನೇ ಅವತಾರವೆಂದು ಪರಿಗಣಿಸಿದ್ದಾರೆ ಎನ್ನುವುದನ್ನು ಈ ಹಿಂದೆ ನೋಡಿದ್ದೆವು. ಆದರೆ ಈ ರೀತಿ ನೋಡಿದರೆ ಅನುಕ್ರಮವಾಗಿ ಮತ್ಸ್ಯಾವತಾರಕ್ಕೂ ಮೊದಲು ಕೂರ್ಮಾವತಾರವನ್ನು ಹೇಳಬೇಕಾಗುತ್ತದೆ. ಏಕೆಂದರೆ ಕೂರ್ಮಾವತಾರ ಮೊದಲು ರೈವತ ಮನ್ವಂತರದಲ್ಲಾಗಿದ್ದು, ವೈವಸ್ವತ ಮನ್ವಂತರದಲ್ಲಿ ಎರಡನೇ ಬಾರಿ ಭಗವಂತ ಕೂರ್ಮರೂಪಿಯಾಗಿ ಬಂದಿರುವುದನ್ನು ನಾವು ಕಾಣುತ್ತೇವೆ. ಹೀಗೆ ನೋಡಿದಾಗ ಇನ್ನೊಂದು ಸಮಸ್ಯೆ ಬರುತ್ತದೆ. ಅದೇನೆಂದರೆ ಭಾಗವತದ ಎಂಟನೇ ಸ್ಕಂಧದಲ್ಲಿ ಹೇಳುವಂತೆ: ಮತ್ಸ್ಯಾವತಾರ ಕೂರ್ಮಾವತಾರಕ್ಕಿಂತ ಮೊದಲು ಕಲ್ಪಾದಿಯಲ್ಲೇ ಒಮ್ಮೆ ನಡೆದಿದೆ. ಹೀಗಾಗಿ ನಾವು ಅನುಕ್ರಮದಲ್ಲಿ ನೋಡುವಾಗ ಹಿಂದೆ ನಡೆದ ಅವತಾರವನ್ನು ತೆಗೆದುಕೊಂಡು ಹೇಳಿದರೆ ಸರಿ ಹೊಂದುವುದಿಲ್ಲ. ಈ ಮಾತಿಗೆ ವರಾಹ ಅವತಾರ ಮಾತ್ರ ಅಪವಾದ ಏಕೆಂದರೆ: ಕೆಲವೊಮ್ಮೆ ಭಗವಂತ ತನ್ನ ಅವತಾರ ರೂಪವನ್ನು ಮೂಲ ರೂಪದಲ್ಲಿ ಅಂತರ್ಭಾವಗೊಳಿಸಿಬಿಡುತ್ತಾನೆ. ಆಗ ನಾವು ಅವತಾರ ಸಮಾಪ್ತಿಯಾಯಿತು ಎನ್ನುತ್ತೇವೆ. ಆದರೆ ಈ ಹಿಂದೆ ಹೇಳಿದಂತೆ: ಸ್ವಾಯಂಭುವ ಮನ್ವಂತರದಲ್ಲಿ ನಡೆದ ವರಾಹ ಅವತಾರವನ್ನು ಭಗವಂತ ಸಮಾಪ್ತಿಗೊಳಿಸಿಲ್ಲ. ಆದರೆ ಕಲ್ಪಾದಿಯಲ್ಲಿ ನಡೆದ ಮತ್ಸ್ಯಾವತಾರ, ರೈವತ ಮನ್ವಂತರದಲ್ಲಿ ನಡೆದ ಕೂರ್ಮಾವತಾರವನ್ನು ಭಗವಂತ ಸಮಾಪ್ತಿಗೊಳಿಸಿ, ಮರಳಿ ವೈವಸ್ವತ ಮನ್ವಂತರದಲ್ಲಿ ಅದೇ ರೂಪದಿಂದ ಅವತರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ನೋಡಿದಾಗ: ಚಾಕ್ಷುಷ ಮನ್ವಂತರ ಮತ್ತು ವೈವಸ್ವತ  ಮನ್ವಂತರದ ಸಂಧಿಕಾಲದಲ್ಲಿ ನಡೆದ ಮತ್ಸ್ಯಾವತಾರದ ನಂತರ  ವೈವಸ್ವತ ಮನ್ವಂತರದಲ್ಲಿ ಕೂರ್ಮಾವತಾರವಾಗಿದೆ. ಈ ಅನುಕ್ರಮಣಿಕೆಯಲ್ಲಿ ನೋಡಿದಾಗ, ಈ ಮನ್ವಂತರದಲ್ಲಿ  ಮೊದಲು  ಮತ್ಸ್ಯಾವತಾರವಾಗಿದ್ದು, ಆನಂತರ ಕೂರ್ಮಾವತಾರವಾಗಿರುವುದನ್ನು ನಾವು ಕಾಣಬಹುದು. ಬನ್ನಿ, ಈ ಹಿನ್ನೆಲೆಯೊಂದಿಗೆ ನಾವು ಚತುರ್ಮುಖ-ನಾರದ ಸಂವಾದವನ್ನಾಲಿಸೋಣ.