Sunday, April 26, 2015

Shrimad BhAgavata in Kannada -Skandha-02-Ch-07(02)

ಬ್ರಹ್ಮೋವಾಚ--
ಯತ್ರೋದ್ಯತಃ ಕ್ಷಿತಿತಲೋದ್ಧರಣಾಯ ಬಿಭ್ರತ್ ಕ್ರೌಡೀಂ ತನುಂ ಸಕಲಯಜ್ಞಮಯೀಮನಂತಃ
ಅಂತರ್ಮಹಾರ್ಣವ ಉಪಾಗತಮಾದಿದೈತ್ಯಂತಂ ದಂಷ್ಟ್ರಯಾSದ್ರಿಮಿವ ವಜ್ರಧರೋ ದದಾರ ೦೧

ಸ್ವಾಯಭುವ ಮನ್ವಂತರದ ವರಾಹ ಅವತಾರವನ್ನು ವಿವರಿಸುತ್ತಾ ಚತುರ್ಮುಖ ಹೇಳುತ್ತಾನೆ: “ಭೂಮಿ ಕಕ್ಷೆಯಿಂದ ಕಳಚಿ ನಾಶವಾಗುವ ಸಂದರ್ಭದಲ್ಲಿ ಭಗವಂತ ವರಾಹ ಅವತಾರಿಯಾಗಿ ಬಂದು ಭೂಮಿಯನ್ನು ರಕ್ಷಿಸಿದ ಮತ್ತು ತಡೆಯಲು ಬಂದ ಆದಿದೈತ್ಯ ಹಿರಣ್ಯಾಕ್ಷನನ್ನು ಇಂದ್ರ ವಜ್ರಾಯುಧದಿಂದ ಪರ್ವತವನ್ನು ಭೇದಿಸಿದಂತೆ  ವರಾಹ  ತನ್ನ ಕೋರೆದಾಡೆಯಿಂದ ಸೀಳಿ ಕೊಂದ” ಎಂದು.
ಭಗವಂತನ ಈ ಅವತಾರದಲ್ಲಿ ಇನ್ನೊಂದು ವಿಶೇಷವಿರುವುದನ್ನು ಈ ಶ್ಲೋಕ ವಿವರಿಸುತ್ತದೆ. ಈ ವರಾಹನನ್ನು ಯಜ್ಞವರಾಹ ಎಂದೂ ಕರೆಯುತ್ತಾರೆ. ಭಗವಂತ ಕೇವಲ ಭೂಮಿಯನ್ನು ಮರಳಿ ಕಕ್ಷೆಯಲ್ಲಿಟ್ಟು ರಕ್ಷಿಸಿದ್ದಷ್ಟೇ ಅಲ್ಲ, ಆತ ಈ ಅವತಾರದಲ್ಲಿ ತನ್ನ ರೋಮಕೂಪಗಳನ್ನು ಜಾಡಿಸಿ ಯಜ್ಞಕ್ಕೆ ಬೇಕಾದ ಸಕಲ ಸಲಕರಣೆಗಳನ್ನು ಸೃಷ್ಟಿಮಾಡಿದ. ಹೀಗಾಗಿ ಈತ ಯಜ್ಞ ವರಾಹ ಎಂದು ಹೆಸರಾದ.  
ಮೇಲಿನ ಶ್ಲೋಕದಲ್ಲಿ ಚತುರ್ಮುಖ ವರಾಹನನ್ನು ಅನಂತಃ ಎಂದು ಸಂಬೋಧಿಸಿದ್ದಾನೆ. ಏಕೆಂದರೆ: ಈ ಅವತಾರ ರಾಮ-ಕೃಷ್ಣಾವತಾರಗಳಿಗಿಂತ ಭಿನ್ನ.  ಈ ಹಿಂದೆ ಹೇಳಿದಂತೆ ಸ್ವಾಯಂಭುವ ಮನ್ವಂತರದಲ್ಲಿ ಆದ ವರಾಹ ಅವತಾರವನ್ನು ಭಗವಂತ ಇನ್ನೂ ಸಮಾಪ್ತಿಗೊಳಿಸಿಲ್ಲ.  ಪರಶುರಾಮ, ವೇದವ್ಯಾಸ ಅವತಾರಗಳಂತೆ ವರಾಹ ಅವತಾರ ಕೂಡಾ  ಕಣ್ಮರೆಯಾಗಿ ಇಂದಿಗೂ ಬ್ರಹ್ಮಾಂಡದಲ್ಲಿದೆ. 

Wednesday, April 22, 2015

Shrimad BhAgavata in Kannada -Skandha-02-Ch-07(01)

ಸಪ್ತಮೋSಧ್ಯಾಯಃ

ಜಗತ್ತನ್ನು  ಸೃಷ್ಟಿಸಿದ  ಭಗವಂತ ಈ ಪ್ರಪಂಚದಲ್ಲಿ ತನ್ನನ್ನೇ ತಾನು ಸೃಷ್ಟಿಸಿಕೊಂಡು ನಾನಾ ರೂಪಗಳಿಂದ ಅವತರಿಸಿ ಬಂದಿದ್ದಾನೆ.  ಅಂಥಹ ಭಗವಂತನ ವಿವಿದ ಅವತಾರ ವಿಶೇಷಗಳ ಸಮೀಕ್ಷೆ  ಚತುರ್ಮುಖ-ನಾರದ ಸಂವಾದ ರೂಪದಲ್ಲಿ ಈ ಅಧ್ಯಾಯದಲ್ಲಿ ಸಂಕ್ಷಿಪ್ತವಾಗಿ ಕಾಣಬಹುದು.

ಎರಡು ಬಾರಿ ವರಾಹನಾದ ವಿಷ್ಣು

ಅಧ್ಯಾಯ ಪ್ರವೇಶಿಸುವ ಮುನ್ನ ಇಲ್ಲಿ ನಾವು ವರಾಹ ಅವತಾರದ ಬಗ್ಗೆ ಸ್ವಲ್ಪ ವಿಶ್ಲೇಷಣೆ ಮಾಡೋಣ.  ಈ ಅಧ್ಯಾಯದ ಮೊದಲ ಶ್ಲೋಕದಲ್ಲಿ ವರಾಹ ಅವತಾರದ ಕುರಿತಾದ ವಿವರಣೆಯನ್ನು ನಾವು ಮುಂದೆ ಕಾಣಲಿದ್ದೇವೆ. ಆದರೆ ಆ ವಿವರಣೆ ನಾವು ದಶಾವತಾರದಲ್ಲಿ ಕಾಣುವ ವೈವಸ್ವತ ಮನ್ವಂತರದ ವರಾಹ ಅವತಾರದ ವಿವರಣೆ ಅಲ್ಲ. ಭಗವಂತ ಎರಡು ಬಾರಿ ವರಾಹ ಅವತಾರದಲ್ಲಿ ಕಾಣಿಸಿದ್ದು, ಇಲ್ಲಿ ಹೇಳಲಿರುವ ವರಾಹ  ಅವತಾರ ಸ್ವಾಯಂಭುವ ಮನ್ವಂತರದಲ್ಲಿ  ನಡೆದ ಮೊತ್ತ ಮೊದಲ ಭಗವಂತನ  ಅವತಾರ. ಆನಂತರ ವೈವಸ್ವತ ಮನ್ವಂತರದಲ್ಲಿ ಮತ್ತೆ ಎರಡನೇ ಬಾರಿ   ವರಾಹನಾಗಿ ಭಗವಂತ ಕಾಣಿಸಿಕೊಂಡಿರುವ ಕಥೆಯನ್ನು ಭಾಗವತದಲ್ಲೇ ಮುಂದೆ ಕಾಣಬಹುದು.  ಸ್ವಾಯಂಭುವ ಮನ್ವಂತರದಲ್ಲಿ ಚತುರ್ಮುಖಬ್ರಹ್ಮನಿಂದ  ಸೃಷ್ಟಿಯಾದ ಹಿರಣ್ಯಾಕ್ಷ-ಹಿರಣ್ಯಕಶಿಪು ಎನ್ನುವ ಆದಿದೈತ್ಯರೇ ಮರಳಿ ವೈವಸ್ವತ ಮನ್ವಂತರದಲ್ಲಿ ಅದೇ ಹೆಸರಿನಿಂದ ದಿತಿ-ಕಾಶ್ಯಪರಲ್ಲಿ ಹುಟ್ಟಿ ಬರುತ್ತಾರೆ.[ಕೆಲವರು ‘ಕಾಶ್ಯಪ’ ಎನ್ನುವ ನಾಮವನ್ನು ‘ಕಶ್ಯಪ’ ಎಂದು ತಪ್ಪಾಗಿ ಉಚ್ಛರಿಸುತ್ತಾರೆ. ಆದರೆ ಹಾಗೆ ಉಚ್ಛರಿಸಬಾರದು. ಏಕೆಂದರೆ ಕಶ್ಯಪ ಎನ್ನುವ ಪದಕ್ಕೆ ಕೆಟ್ಟ ಅರ್ಥವಿದೆ. ಸಂಸ್ಕೃತದಲ್ಲಿ ‘ಕಶ್ಯ’ ಎಂದರೆ ಮದ್ಯ(liquor). ಆದ್ದರಿಂದ ಕಶ್ಯಪ ಎಂದರೆ ‘ಮದ್ಯಸೇವಕ’ ಎಂದಾಗುತ್ತದೆ! ಆದರೆ ಕಾಶ್ಯಪ ಎನ್ನುವುದಕ್ಕೆ ಸಂಸ್ಕೃತದಲ್ಲಿ ಅಪೂರ್ವ ಅರ್ಥವಿದೆ. ಕಾಶ್ಯಮ್ ಪಿಬತೀತಿ ಕಾಶ್ಯಪಃ. ಸಮಸ್ತ ವೇದೊಪನಿಷತ್ತುಗಳಿಂದ ಪ್ರಕಾಶ್ಯಮಾನವಾದ ಭಗವದ್ ತತ್ತ್ವದ ಗುಣಗಾನ ಮಾಡಿದವನು ಕಾಶ್ಯಪ]. ಭಗವಂತ ಆದಿದೈತ್ಯ ಹಿರಣ್ಯಾಕ್ಷನನ್ನು ಕೊಲ್ಲುವುದಕ್ಕಾಗಿ  ವರಾಹ ಅವತಾರ ತಾಳಿದರೆ, ದಿತಿ-ಕಾಶ್ಯಪರ ಪುತ್ರ ಹಿರಣ್ಯಾಕ್ಷನ ವದೆಗಾಗಿ  ವೈವಸ್ವತ ಮನ್ವಂತರದಲ್ಲಿ ಮರಳಿ ಅದೇ ರೂಪದಿಂದ ಕಾಣಿಸಿಕೊಂಡ.  ಮೊದಲ ವರಾಹ ಅವತಾರದಲ್ಲಿ ಭಗವಂತ ಹಿರಣ್ಯಾಕ್ಷನನ್ನು ತನ್ನ ಕೋರೆ ದಾಡೆಗಳಿಂದ ಸೀಳಿ ಕೊಂದರೆ, ಎರಡನೇ ಬಾರಿ ಆತನ ಕಿವಿಯ ಮರ್ಮಸ್ಥಾನಕ್ಕೆ ಮುಷ್ಟಿಯಿಂದ ಗುದ್ದಿ  ಕೊಂದ ಎನ್ನುವ ವಿವರವನ್ನು ನಾವು ಭಾಗವತದಲ್ಲೇ ಕಾಣುತ್ತೇವೆ.  ಈ ಎರಡು ವರಾಹ ಅವತಾರದ ವಿವರ ತಿಳಿಯದೇ ಇದ್ದಾಗ ವರಾಹ ಅವತಾರ ಗೊಂದಲವಾಗುತ್ತದೆ. ಇದನ್ನು ಸ್ಪಷ್ಟಪಡಿಸುತ್ತಾ ಆಚಾರ್ಯ ಮಧ್ವರು ಹೇಳುತ್ತಾರೆ: “ಪ್ರಥಮಂ ದಂಷ್ಟ್ರೀಯ ಹತಃ, ದ್ವಿತಿಯಾತ್ ಕರ್ಣ ತಾಡನಾತ್” ಎಂದು.  ಇನ್ನೊಂದು ಮುಖ್ಯ ವಿಷಯ ಏನೆಂದರೆ: ಸ್ವಾಯಂಭುವ ಮನ್ವಂತರದಲ್ಲಿ ತಳೆದ ವರಾಹವೇ ವೈವಸ್ವತ ಮನ್ವಂತರದಲ್ಲಿ ಬಂದಿದ್ದೇ ಹೊರತು, ಮೊದಲ ಅವತಾರ ಸಮಾಪ್ತಿಮಾಡಿ ಭಗವಂತ ಇನ್ನೊಮ್ಮೆ ವರಾಹನಾಗಿ ಅವತರಿಸಿ ಬಂದಿರುವುದಲ್ಲ. ಹೀಗಾಗಿ ವರಾಹ ಅವತಾರವನ್ನು ಎರಡು ಬಾರಿ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.
‘ದೈತ್ಯ’ ಎನ್ನುವ ಪದವನ್ನು ನಾವು ಕೇವಲ ದಿತಿಯ ಮಕ್ಕಳು ಎಂದಷ್ಟೇ ತಿಳಿದಾಗ ನಮಗೆ ಮತ್ತೆ ಗೊಂದಲವಾಗುತ್ತದೆ. ದೈತ್ಯ ಎನ್ನುವುದಕ್ಕೆ ದಿತಿಯ ಮಕ್ಕಳು ಎನ್ನುವುದು ಒಂದು ಅರ್ಥ. ಆದರೆ ಅದೇ ಅರ್ಥದಲ್ಲಿ ಅದನ್ನು ಶಾಸ್ತ್ರಕಾರರು ಬಳಸುವುದಿಲ್ಲ. ಆ ಶಬ್ದಕ್ಕೆ ಬೇರೊಂದು ವ್ಯುತ್ಪತ್ತಿ ಕೂಡಾ ಇದೆ.  ಉದಾಹರಣೆಗೆ: ಶ್ರೀಕೃಷ್ಣನನ್ನು ವಾಸುದೇವ ಎಂದು ಕರೆಯುತ್ತಾರೆ. ಇಲ್ಲಿ ವಾಸುದೇವ ಎಂದರೆ ವಸುದೇವನ ಮಗ ಎನ್ನುವುದು ಒಂದು ಅರ್ಥ. ಆದರೆ ವಸುದೇವನ ಮಗನಾಗಿ ಹುಟ್ಟುವ ಮೊದಲು, ಸೃಷ್ಟಿಯ ಆದಿಯಲ್ಲೇ ಭಗವಂತ ವಾಸುದೇವ ರೂಪ ಧರಿಸಿರುವುದು ನಮಗೆಲ್ಲಾ ತಿಳಿದೇ ಇದೆ. ಹೀಗೆ ಒಂದು ಶಬ್ದ ಒಂದು ವಿಶಿಷ್ಠ ಅರ್ಥದಲ್ಲಿ ಈಗ ಬಳಕೆಯಲ್ಲಿದ್ದರೂ ಸಹ, ಅದನ್ನು ಪ್ರಾಚೀನ ಕಾಲದಲ್ಲಿ ಬೇರೊಂದು ಅರ್ಥದಲ್ಲಿ ಬಳಸಿರುವ ಸಾಧ್ಯತೆಯನ್ನೂ ನಾವು ಸಂದರ್ಭಕ್ಕನುಗುಣವಾಗಿ ತಿಳಿದುಕೊಳ್ಳಬೇಕು. ದಿತಿ, ಅದಿತಿ ಎನ್ನುವ ಪದಗಳಿಗೆ ಅನೇಕ ಅರ್ಥಗಳಿವೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಹೇಳುವಂತೆ: “ಸರ್ವಂ ವಾ ಅತ್ತೀತಿ ತದದಿತೇರದಿತಿತ್ವಮ್”.  ಇಲ್ಲಿ ‘ದಿತಿ’ ಅಂದರೆ ತುಂಡರಿಸುವ ಅಥವಾ ನಾಶಮಾಡುವ  ಸ್ವಭಾವ.  ಅಂಥಹ ಸ್ವಭಾವ  ಉಳ್ಳವರು ದೈತ್ಯರು. ಅಂದರೆ ಲೋಕಕಂಟಕರು ಎಂದರ್ಥ.  ಸೃಷ್ಟಿಯ ಆದಿಯಲ್ಲೇ  ಇಂಥಹ ಲೋಕಕಂಟಕರ ಸೃಷ್ಟಿಯಾಗಿತ್ತು . ಸ್ವಾಯಂಭುವ ಮನ್ವಂತರದ ಆದಿದೈತ್ಯರಿಗೂ ಮತ್ತು ವೈವಸ್ವತ ಮನ್ವಂತರದ ದಿತಿಯ ಮಕ್ಕಳಿಗೂ ಇದ್ದ ಇನ್ನೊಂದು ವ್ಯತ್ಯಾಸ ಏನೆಂದರೆ: ವೈವಸ್ವತ ಮನ್ವಂತರದಲ್ಲಿನ  ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರಲ್ಲಿ ಪುಣ್ಯಜೀವಿಗಳಾದ ಜಯ-ವಿಜಯರಿದ್ದಂತೆ(ನಾಲ್ಕು ಜೀವಗಳು ಎರಡು ಶರೀರದಲ್ಲಿ) ಆದಿ ದೈತ್ಯರಲ್ಲಿ ಜಯ-ವಿಜಯರಿರಲಿಲ್ಲ.
ಎರಡು ಬಾರಿ ಭಗವಂತ ವರಾಹ ಅವತಾರ ತಾಳಲು ಕಾರಣ ಮಾತ್ರ ಒಂದೇ ಆಗಿರುವುದು ಈ ಅವತಾರದ ವಿಶೇಷ.  ಭೂಮಿ ತನ್ನ ಕಕ್ಷೆಯಿಂದ ಜಾರಿದಾಗ ಅದನ್ನು ರಕ್ಷಿಸಿ, ಮರಳಿ ಕಕ್ಷೆಯಲ್ಲಿಡಲು ಭಗವಂತ ವರಾಹ ಅವತಾರವಾಗಿದೆ. ಸ್ವಾಯಂಭುವ ಮನ್ವಂತರದಲ್ಲಿ ಯಾರೂ ಭೂಮಿಯನ್ನು ಕಕ್ಷೆಯಿಂದ ಜಾರಿಸಿರಲಿಲ್ಲ. ಅದು ತನ್ನಷ್ಟಕ್ಕೇ ತಾನು ಜಾರಿದಾಗ ಭಗವಂತ  ಅದನ್ನು ರಕ್ಷಿಸಿದ. ಹೀಗೆ ರಕ್ಷಿಸುವಾಗ ತಡೆದ ಆದಿದೈತ್ಯ ಹಿರಣ್ಯಾಕ್ಷನನ್ನು ಭಗವಂತ ವರಾಹ ರೂಪದಲ್ಲಿ, ಕೊರೆದಾಡೆಗಳಿಂದ ತಿವಿದು ಸಂಹಾರ ಮಾಡಿದ. ಎರಡನೇ ಬಾರಿ ವೈವಸ್ವತ ಮನ್ವಂತರದಲ್ಲಿ ಹಿರಣ್ಯಾಕ್ಷನೇ  ಭೂಮಿಯನ್ನು ಕಕ್ಷೆಯಿಂದ ಜಾರಿಸಿ ನಾಶ ಮಾಡಲು ಪ್ರಯತ್ನಿಸಿದಾಗ, ಭಗವಂತ ಮರಳಿ ವರಾಹ ಅವತಾರಿಯಾಗಿ ಬಂದು ಹಿರಣ್ಯಾಕ್ಷನ ಕಿವಿಯ ಮೂಲಕ್ಕೆ ಗುದ್ದಿ ಆತನನ್ನು ಕೊಂದು  ಭೂಮಿಯನ್ನು ರಕ್ಷಿಸಿ ಮರಳಿ ಕಕ್ಷೆಯಲ್ಲಿಟ್ಟ. ವಿಶೇಷ ಏನೆಂದರೆ ಈ ರೀತಿ ಎರಡು ಬಾರಿ ಭೂಮಿ ಕಕ್ಷೆಯಿಂದ ಜಾರಿದ ವಿಷಯವನ್ನು ಇಂದು ವಿಜ್ಞಾನ ಕೂಡಾ ಒಪ್ಪುತ್ತದೆ. ರಷ್ಯನ್ ವಿಜ್ಞಾನಿ ವಿಲಿಕೋವಸ್ಕಿ(Velikovsky) ತನ್ನ “Worlds in collision”  ಎನ್ನುವ ಪುಸ್ತಕದಲ್ಲಿ ಹೇಳುತ್ತಾನೆ : ವೈಜ್ಞಾನಿಕವಾಗಿ ಎರಡು ಬಾರಿ ಭೂಮಿ ತನ್ನ ಕಕ್ಷೆಯಿಂದ ಜಾರಿದ್ದು ನಿಜ, ಆದರೆ ನಮಗೆ ಇದು ಏಕೆ ಎನ್ನುವುದು ತಿಳಿದಿಲ್ಲಎಂದು. ಆತ ಅಲ್ಲಿ ಭಾಗವತವನ್ನು ಉಲ್ಲೇಖಿಸಿ ಹೇಳುತ್ತಾನೆ: ಭಾರತದ ಋಷಿಗಳು ಈ ವಿಚಾರವನ್ನು ತಿಳಿದಿದ್ದರು” ಎಂದು.   [ಇಂದು ನಾವು ಇಂಥಹ ಅಪೂರ್ವ ಅಧ್ಯಾತ್ಮ ವಿಜ್ಞಾನವನ್ನು ಬಿಟ್ಟು ಪಾಶ್ಚ್ಯಾತ್ಯ ವಿಜ್ಞಾನಕ್ಕೆ ಮರುಳಾಗಿ ಬದುಕುತ್ತಿರುವುದು ದುರಾದೃಷ್ಟಕರ].
ಇಲ್ಲಿ ಭಗವಂತ ಏಕೆ ವರಾಹರೂಪವನ್ನೇ ತೊಟ್ಟ ? ಬೇರೆ ರೂಪ ಏಕೆ ತೊಡಲಿಲ್ಲ ಎನ್ನುವುದು ಕೆಲವರ ಪ್ರಶ್ನೆ. ಈ ರೀತಿ ಪ್ರಶ್ನಿಸುವ ಮೊದಲು ನಾವು ತಿಳಿಯಬೇಕಾದ ವಿಷಯ ಏನೆಂದರೆ:  ಭಗವಂತ ತಾನು ಯಾವ ರೂಪದಲ್ಲಿ ಬರಬೇಕು ಎನ್ನುವುದನ್ನು ಆತನೇ ನಿರ್ಧರಿಸುತ್ತಾನೆ. ಅದು ಅವನ ಇಚ್ಛೆ. ಭಗವಂತನ ವರಾಹ ರೂಪ ಎಲ್ಲರಿಗೂ ಹೊರಗಣ್ಣಿಗೆ ಕಾಣಿಸಿಕೊಂಡ ರೂಪವಲ್ಲ. ಈ ರೂಪವನ್ನು ಚತುರ್ಮುಖ, ಸ್ವಾಯಂಭುವ ಮನು, ಹಿರಣ್ಯಾಕ್ಷ ಕಂಡಿದ್ದಾರೆ. ಅದೇ ರೂಪವನ್ನು ಜ್ಞಾನಿಗಳು ಧ್ಯಾನದಲ್ಲಿ ಕಂಡು ನಮಗೆ ‘ವರಾಹ’ ಎಂದು ವಿವರಿಸಿದ್ದಾರೆ.
ವರಾಹ ಅವತಾರಕ್ಕೆ ಸಂಬಂಧಿಸಿ ಒಂದು ತಪ್ಪು ಕಲ್ಪನೆ  ಸಾಮಾನ್ಯ ಜನರಲ್ಲಿದೆ. ಅದೇನೆಂದರೆ: ಭಾರತೀಯರು ಭೂಮಿ ಚಪ್ಪಟೆಯಾಗಿದೆ ಎಂದು ತಿಳಿದಿದ್ದರು ಮತ್ತು ವರಾಹ ಅವತಾರಕ್ಕೆ ಯಾವುದೇ ವೈಜ್ಞಾನಿಕ ಪುಷ್ಟೀಕರಣ ಇಲ್ಲ ಎಂದು. ಇದಕ್ಕೆ ಒಂದು ಕಾರಣವೂ ಇದೆ.  ಅದೇನೆಂದರೆ: ಭಗವಂತನ ಈ ಅವತಾರವನ್ನು ಕಕ್ಷೆ, ಗುರುತ್ವಾಕರ್ಷಣ ಶಕ್ತಿ, ಇತ್ಯಾದಿ ವಿಷಯದ ಅರಿವಿಲ್ಲದ ಚಿಕ್ಕ ಮಕ್ಕಳಿಗೆ ವಿವರಿಸುವಾಗ, ಅವರಿಗೆ ಗ್ರಹಣವಾಗುವಂತೆ ಸರಳೀಕರಣ ಮಾಡಿ  “ಹಿರಣ್ಯಾಕ್ಷ ಭೂಮಿಯನ್ನು  ಚಾಪೆಯಂತೆ ಮಡಚಿ ಬಗಲಿನಲ್ಲಿಟ್ಟುಕೊಂಡು ಹೋದ” ಎಂದು ವಿವರಿಸಿದ್ದಾರೆ. ಆದರೆ ಇದೇ ನಿಜವಲ್ಲ. ನಮ್ಮ ಪ್ರಾಚೀನ ಋಷಿಗಳಿಗೆ ಭೂಮಿಯ ಆಕಾರದ ಬಗ್ಗೆ, ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಪೂರ್ಣ ತಿಳುವಳಿಕೆ ಇತ್ತು. ಅದು ಇಂದಿನ ಪಾಶ್ಚ್ಯಾತ್ಯರು ಕಂಡುಕೊಂಡ ಹೊಸ ವಿಚಾರವೇನೂ ಅಲ್ಲ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಆರ್ಯಭಟ ಆಕೃಷ್ಟಿ ಶಕ್ತಿಶ್ಚ ಮಹೀಎಂದು ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಹೇಳಿರುವುದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬೇಕು. ಭೂಮಿಯನ್ನು ಭೂಗೋಲಎಂದು ಕರೆದಿದ್ದ ನಮ್ಮ ಪ್ರಾಚೀನ ಋಷಿಗಳು, ಭೂಮಿ ದುಂಡಗಿದೆ ಎಂದು ತಿಳಿದಿದ್ದರು ಎನ್ನುವುದು ಅವರು ಬಳಸಿರುವ ಗೋಲಎನ್ನುವ ಪದದಿಂದಲೇ ತಿಳಿಯುತ್ತದೆ. ದುರಾದೃಷ್ಟವಶಾತ್ ಇಂದು ನಮಗೆ ನಮ್ಮ ಪೂರ್ವಿಕರು ಕೊಟ್ಟ ಅಪೂರ್ವ ವಿಜ್ಞಾನದ ಬಗ್ಗೆ ಯಾವುದೇ ತಿಳುವಳಿಕೆ/ಗೌರವ ಇಲ್ಲಾ. ಭೂಮಿಯಲ್ಲಿ ಅಪಾನಶಕ್ತಿ(ಗುರುತ್ವಾಕರ್ಷಣ ಶಕ್ತಿ) ಇರುವುದರಿಂದ ಅದು ತನ್ನ ಕಕ್ಷೆಯಲ್ಲಿ, ಭೌತಿಕವಾಗಿ ನಿರಾಲಂಬವಾಗಿ ನಿಂತಿದೆ. ಇಂತಹ ಪ್ರಕೃತಿಸತ್ಯ ಹಿಂದೆ ಋಷಿಗಳಿಗೆ ಸ್ಫುರಣವಾಗುತ್ತಿತ್ತು. ಭಾರತದ ಗಣಿತಪದ್ಧತಿ (ಜ್ಯೋತಿಷ್ಯ ಶಾಸ್ತ್ರ) ಸಂಪೂರ್ಣ ಭೂಮಿಯ ಹಾಗೂ ಗ್ರಹಗೋಲಗಳ ಚಲನೆಗೆ ಅನುಗುಣವಾಗಿದೆ. ಇದು ಇಂದಿನ ಪಾಶ್ಚ್ಯಾತ್ಯ ಗಣಿತದಿಂದ ಬಂದಿದ್ದಲ್ಲ. ಸುಮಾರು ೫೦೦೦ ವರ್ಷಗಳ ಹಿಂದೆ ಮಹಾಭಾರತ ಯುದ್ಧದ ಸಮಯದಲ್ಲಿ ಹದಿಮೂರು ದಿನಗಳ ಅಂತರದಲ್ಲಿ ಎರಡು ಗ್ರಹಣ ಸಂಭವಿಸುತ್ತದೆ ಹಾಗೂ ಅದು ಯುದ್ಧ ಮತ್ತು ಯುದ್ಧದ ಪರಿಣಾಮ(ಸರ್ವನಾಶ)ವನ್ನು ಸೂಚಿಸುತ್ತದೆ ಎಂದು ವೇದವ್ಯಾಸರು ಯುದ್ಧಕ್ಕೂ ಮೊದಲೇ ಧೃತರಾಷ್ಟ್ರನಿಗೆ ಹೇಳಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಪ್ರಾಚೀನ ಕಾಲದಿಂದಲೂ ಭಾರತದ ಜ್ಯೋತಿಷ್ಯಶಾಸ್ತ್ರ ಕರಾರುವಕ್ಕಾಗಿ ಗ್ರಹಣ ಸಂಭವಿಸುವ ಕಾಲವನ್ನು ಗುರುತಿಸುವ ಗಣಿತವಾಗಿತ್ತು. ಹೀಗಾಗಿ ಭಾರತೀಯರು ಎಂದೂ ಭೂಮಿ ಚಪ್ಪಟೆಯಾಗಿದೆ ಎಂದು ತಿಳಿದಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ವರಾಹ ಅವತಾರದಲ್ಲಿ ಬರುವ ಇನ್ನೊಂದು ಸಂಶಯ ಎಂದರೆ:  ಅಲ್ಲಿ ಭೂಮಿ ಕಕ್ಷೆಯಿಂದ ಕಳಚಿಕೊಂಡು  ನೀರಿನಲ್ಲಿ ಮುಳುಗುವ ಪ್ರಸಂಗ ಬಂದಾಗ ವರಾಹ ಅವತಾರವಾಯಿತು ಎನ್ನುತ್ತಾರೆ. ಇಲ್ಲಿ ಎಲ್ಲರಿಗೂ ಬರುವ ಸರ್ವೇ ಸಾಮಾನ್ಯ ಪ್ರಶ್ನೆ ಎಂದರೆ: “ಸಮುದ್ರಗಳಿರುವುದು ಭೂಮಿಯ ಮೇಲೆ. ಹೀಗಿರುವಾಗ ಅನೇಕ ಸಮುದ್ರಗಳಿರುವ ಇಂಥಹ  ಭೂಮಿ ಮುಳುಗುವ ಇನ್ನೊಂದು ಸಮುದ್ರ ಎಲ್ಲಿದೆ” ಎನ್ನುವುದು. ಈ ರೀತಿ ಪ್ರಶ್ನೆ ಮಾಡುವವರಿಗೆ ಪ್ರಳಯ ಸಮುದ್ರದ ಕಲ್ಪನೆ ಇರುವುದಿಲ್ಲ. ಶಾಸ್ತ್ರಕಾರರು ಎಂದೂ ಭೂಮಿ ನೀರಿನ ಸಮುದ್ರದಲ್ಲಿ ಮುಳುಗುವ ಪರಿಸ್ಥಿತಿ ಬಂತು ಎಂದು ಹೇಳಲಿಲ್ಲ. ಬದಲಾಗಿ ಅವರು “ಕಾರಣೋದಕ” ಎಂದಿದ್ದಾರೆ. ಅಂದರೆ ನೀರು ಯಾವುದರಿಂದ ಮುಂದೆ ನಿಷ್ಪನ್ನವಾಗುತ್ತದೋ ಅದಕ್ಕೆ ಕಾರಣೀಭೂತವಾದ ಮೂಲದ್ರವ್ಯ ವಾತಾವರಣದಲ್ಲಿ ತುಂಬಿರುವ ಸ್ಥಿತಿ. ಸೃಷ್ಟಿ ಪೂರ್ವದಲ್ಲಿ ಸೃಷ್ಟಿಗೆ ಬೇಕಾದ ಸಮಸ್ತ ಮೂಲದ್ರವ್ಯಗಳೂ ಪರಮಾಣು ಸಮುದ್ರ ರೂಪದಲ್ಲಿದ್ದು, ಸೃಷ್ಟಿಕರ್ತ ನಾರಾಯಣ ಆ ಪ್ರಳಯಸಮುದ್ರದಲ್ಲಿ ಪವಡಿಸಿದ್ದ ಎನ್ನುವ ಮಾತನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ವರಾಹ ಅವತಾರ ಆಗುವಾಗ ಪೂರ್ಣಪ್ರಮಾಣದ ಸ್ಥೂಲ ಪ್ರಪಂಚ ನಿರ್ಮಾಣ ಆಗಿರಲಿಲ್ಲ. ಅಂತಹ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು.  ನಮಗೆ ತಿಳಿದಂತೆ ಭೂಮಿ ಕಕ್ಷೆಯಿಂದ ಸ್ವಲ್ಪ ಜಾರಿದರೂ ಸಾಕು. ಅದು ಇತರ ಗ್ರಹ-ಗೋಲಗಳಿಗೆ ಡಿಕ್ಕಿ ಹೊಡೆದು ನಾಶವಾಗಿ ಹೋಗುತ್ತದೆ.  ವಿಶ್ವದ ರಚನೆ ಯಶಸ್ವಿಯಾಗಬಾರದು ಎಂದು ಬಯಸಿದವನು ಹಿರಣ್ಯಾಕ್ಷ. ಆದರೆ ಭೂಮಿಯನ್ನು ಮರಳಿ ಕಕ್ಷೆಯಲ್ಲಿಟ್ಟು ವಿಶ್ವ ರಚನೆ ಮಾಡಿದ ವಿಶ್ವಕರ್ಮ ಆ ಭಗವಂತ.
ಹಂದಿಗೆ ‘ಭೂದಾರ’ ಎನ್ನುವ ಹೆಸರಿದೆ. ಭೂದಾರ ಎಂದರೆ ನೆಲದ ಒಳಗಿರುವ ಗಡ್ಡೆಗಳನ್ನು ತನ್ನ ಮುಖದ ತುದಿಯಲ್ಲಿನ ಚಿಕ್ಕ ದಾಡೆಯಿಂದ ಅಗೆದು ತಿಂದು ಬದುಕುವ ಪ್ರಾಣಿ. ಇದೇ ಶಬ್ದವನ್ನು ಶಾಸ್ತ್ರಕಾರರು ಭಗವಂತನ ವರಾಹ ಅವತಾರದ ವಿಶೇಷ ನಾಮವಾಗಿ ಬಳಸುತ್ತಾರೆ. ಆದರೆ ಅಲ್ಲಿ ಈ ಪದದ ಅರ್ಥ ಮಾತ್ರ ವಿಶಿಷ್ಠವಾಗಿದೆ. ಸಂಸ್ಕೃತದಲ್ಲಿ ‘ದಾರ’ ಎಂದರೆ ಹೆಂಡತಿ ಎಂದರ್ಥ.  ಭೂದಾರ ಎಂದರೆ ತನ್ನ ಹೆಂಡತಿಯಾದ ಭೂದೇವಿಯನ್ನು ರಕ್ಷಿಸಿ ಉದ್ದರಿಸಲು ಭಗವಂತ ತಾಳಿದ ಅವತಾರ.
ಗಾಯತ್ತ್ರಿ ಮಂತ್ರದಲ್ಲಿ ‘ತತ್ಸವಿತುರ್ವರೇಣ್ಯಮ್’ ಎನ್ನುವಲ್ಲಿನ ‘ವರೇಣ್ಯಮ್’ ಎನ್ನುವ ಪದದ ಅರ್ಥ ಹಾಗೂ ವರಾಹ ಎನ್ನುವ ಪದದ ಅರ್ಥ ಒಂದೇ ಆಗಿದೆ.  ವರೇಣ್ಯಂ/ವರಾಹ ಎಂದರೆ ಎಲ್ಲರೂ ಆಶ್ರಯಿಸಬೇಕಾದ, ಎಲ್ಲಕ್ಕಿಂತ ಹಿರಿದಾದ ಶಕ್ತಿ ಎಂದರ್ಥ. ವೈದಿಕ ಸಂಸ್ಕೃತದಲ್ಲಿ ಮೋಡವನ್ನೂ ಕೂಡಾ ವರಾಹ ಎಂದು ಕರೆಯುತ್ತಾರೆ.  ಮೋಡವೂ ಕೂಡಾ ಎತ್ತರದಲ್ಲಿರುತ್ತದೆ ಮತ್ತು ನಾವೆಲ್ಲರೂ ಅದನ್ನು ಆಶ್ರಯಿಸಿಕೊಂಡೇ ಬದುಕುತಿದ್ದೇವೆ. ಹಾಗಾಗಿ ಮೋಡಕ್ಕೆ ಆ ಹೆಸರು. ಭೂಮಿಯನ್ನು ಮರಳಿ ಕಕ್ಷೆಯಲ್ಲಿಟ್ಟು ನಮಗೆಲ್ಲರಿಗೂ ರಕ್ಷಣೆ ನೀಡಿರುವ ಭಗವಂತ ಜ್ಞಾನಿಗಳಿಗೆ  ಕಾಣಿಸಿಕೊಂಡ ರೂಪದಲ್ಲೇ  ಹಂದಿ ಇರುವುದರಿಂದ ಅದಕ್ಕೂ ವರಾಹ ಎನ್ನುವ ಹೆಸರು ಬಂತೇ ವಿನಃ ಈ ಪದದ ವ್ಯತ್ಪತ್ತಿಗೂ ಮತ್ತು ಆ ಪ್ರಾಣಿಗೂ ಯಾವುದೇ ಸಂಬಂಧವಿಲ್ಲ. ಕೇವಲ ರೂಪ ಸಾಮ್ಯದಿಂದ ಆ ಪ್ರಾಣಿಗೂ ಆ ಹೆಸರು ಬಂತು ಅಷ್ಟೇ.  ಬನ್ನಿ, ಈ ಹಿನ್ನೆಲೆಯೊಂದಿಗೆ ಚತುರ್ಮುಖ-ನಾರದ ಸಂವಾದವನ್ನಾಲಿಸೋಣ.

Saturday, April 18, 2015

Shrimad BhAgavata in Kannada -Skandha-02-Ch-06(10)

ಆದ್ಯೋSವತಾರಃ ಪುರುಷಃ ಪರಸ್ಯ ಕಾಲಃ ಸ್ವಭಾವಃ ಸದಸನ್ಮನಶ್ಚ
ದ್ರವ್ಯಂ ವಿಕಾರೋ ಗುಣ ಇಂದ್ರಿಯಾಣಿ ವಿರಾಟ್ ಸ್ವರಾಟ್ ಸ್ಥಾಸ್ನು ಚರಿಷ್ಣು ಭೂಮ್ನಃ  ೪೧

ಅಹಂ ಭವೋ ಯಜ್ಞ ಇಮೇ ಪ್ರಜೇಶಾ ದಕ್ಷಾದಯೋ ಯೇ ಭವದಾದಯಶ್ಚ
ಸ್ವರ್ಲೋಕಪಾಲಾಃ ಖಗಲೋಕಪಾಲಾ ನೃಲೋಕಪಾಲಾಸ್ತಳಲೋಕಪಾಲಾಃ  ೪೨

ಗಂಧರ್ವವಿದ್ಯಾಧರಚಾರಣೇಶಾ ಯೇ ಯಕ್ಷರಕ್ಷೋರಗನಾಗನಾಥಾಃ
ಯೇ ವಾ ಋಷೀಣಾಂ ಋಷಭಾಃ ಪಿತೃಣಾಂ ದೈತ್ಯೇಂದ್ರಸಿದ್ಧೇಶ್ವರದಾನವೇಂದ್ರಾಃ  ೪೩

ಅನ್ಯೇ ಚ ಯೇ ಪ್ರೇತಪಿಶಾಚಭೂತ ಕೂಷ್ಮಾಂಡಯಾದೋಮೃಗಪಶ್ವಧೀಶಾಃ
ಯತ್ ಕಿಂ ಚ ಲೋಕೇ ಭಗವನ್ಮಹಸ್ವದೋಜಃಸಹಸ್ವದ್ ಬಲವತ್ ಕ್ಷಮಾವತ್
ಹ್ರೀಶ್ರೀವಿಭೂತ್ಯಾತ್ಮವದದ್ಭುತಾರ್ಣಂ ತತ್ ತತ್ಪರಂ ರೂಪವದಸ್ವರೂಪಮ್  ೪೪

ಪ್ರಾಧಾನ್ಯತೋ ಯಾನೃಷಯ ಆಮನಂತಿ ಲೀಲಾವತಾರಾನ್ ಪುರುಷಸ್ಯ ಭೂಮ್ನಃ
ಆಪೀಯತಾಂ ಕರ್ಮಕಷಾಯಶೋಷಾನನುಕ್ರಮಿಷ್ಯೇ ತ ಇಮಾನ್ ಸುಪೇಶಲಾನ್  ೪೫

ಭಗವಂತನಿಗೆ ಮುಖ್ಯವಾಗಿ ಮೂರು ರೂಪಗಳು. ೧. ಸ್ವರೂಪ (ರಾಮ, ಕೃಷ್ಣ, ನರಸಿಂಹ..ಇತ್ಯಾದಿ), ೨. ವಿಭೂತಿ (ಉದಾ: ಅರ್ಜುನನನಲ್ಲಿ ಭಗವಂತ ವಿಶೇಷ ವಿಭೂತಿಯಾಗಿ ನಿಂತಿದ್ದ) ಮತ್ತು ೩. ಅಂತರ್ಯಾಮಿ ರೂಪ.  ಭಗವಂತನ ಪುರುಷರೂಪ ಆತನ ಮೊಟ್ಟಮೊದಲ ಸ್ವರೂಪ ಅವತಾರ.
ಭಗವಂತ ‘ಕಾಲ’ದಲ್ಲಿ ತುಂಬಿದ್ದಾನೆ. ಕಾಲ ಎನ್ನುವುದು ತುಂಬಾ ವಿಚಿತ್ರವಾದುದು. ಯಾವುದ್ಯಾವುದೋ ಕಾಲದಲ್ಲಿ ಏನೇನೋ ನಡೆಯುತ್ತದೆ. ಯಾವ ಕಾಲದಲ್ಲಿ ಏನೇನು ನಡೆಯಬೇಕೋ ಅದು ಆ ಕಾಲದಲ್ಲಿ ನಡೆದೇ ನಡೆಯುತ್ತದೆ. ಹೀಗೆ ಕಾಲ ಎನ್ನುವುದು ಜಗತ್ತಿನ ಮೂಲಶಕ್ತಿಯಾಗಿ ನಿಂತುಬಿಟ್ಟಿದೆ. ಭಗವಂತ ಕಾಲನಿಯಾಮಕನಾಗಿ ಕಾಲದೊಳಗೆ ನಿಂತಿದ್ದಾನೆ. ಇನ್ನು ಸ್ವಭಾವ. ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಸ್ವಭಾವವಿದೆ. ಆ ಸ್ವಭಾವವನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ.  “ಅಂತಹ ಸ್ವಭಾವದೊಳಗೆ ಸ್ವಭಾವ ನಿಯಾಮಕನಾಗಿ ಭಗವಂತನ ವಿಭೂತಿ ತುಂಬಿದೆ” ಎನ್ನುತ್ತಾನೆ ಚತುರ್ಮುಖ.
“ಸತ್, ಅಸತ್ ಮತ್ತು  ಮನಸ್ಸಿನಲ್ಲಿ ಭಗವಂತನ ವಿಭೂತಿ ತುಂಬಿದೆ” ಎಂದಿದ್ದಾನೆ ಚತುರ್ಮುಖ. ಉಪನಿಷತ್ತಿನಲ್ಲಿ ಹೇಳುವಂತೆ ‘ಸತ್’ ಎಂದರೆ ಪ್ರಾಣಶಕ್ತಿ ( “ಸದಿತಿ ಪ್ರಾಣಃ”). ಭಗವಂತ ಪ್ರಾಣತತ್ತ್ವದಲ್ಲಿ ತುಂಬಿ ಇಡೀ ಜಗತ್ತನ್ನು ಉಸಿರಾಡಿಸುವ ಮಹಾಶಕ್ತಿಯಾಗಿ ನಿಂತಿದ್ದಾನೆ.  ಅಸತ್ ಎಂದರೆ ಮೂಲಪ್ರಕೃತಿ.  ಪ್ರಳಯಕಾಲದಲ್ಲಿ ಜಡಪ್ರಕೃತಿ ಕಣ್ಣಿಗೆ ಕಾಣದ ಪರಮಾಣು ಸಮುದ್ರ ರೂಪದಲ್ಲಿತ್ತು. ಮೂಲಪ್ರಕೃತಿಯಲ್ಲಿ ವಿಭೂತಿಯಾಗಿ ನಿಂತ ಭಗವಂತನಿಂದಾಗಿ  ಅದು ಸತ್ತ್ವ-ರಜಸ್ಸು-ತಮೋಗುಣಗಳ ಜೊತೆಗೆ ಕಂಪನಗೊಂಡು ಬ್ರಹ್ಮಾಂಡ ರೂಪದಲ್ಲಿ ಬೆಳೆದು ನಿಂತಿತು.
ಮನಸ್ಸೆನ್ನುವುದು ಒಂದು ಅತ್ಯಂತ ವಿಸ್ಮಯವಾದ ವಸ್ತು. ಅನೇಕಾನೇಕ ವಿಷಯಗಳನ್ನು ಗ್ರಹಿಸಿ ಅದನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಮನಸ್ಸಿಗಿದೆ. ಮಾನವನ ಮೆದುಳಿನಲ್ಲಿ ಸುಮಾರು ಹನ್ನೆರಡು ಬಿಲಿಯನ್ ಜೀವಕೊಶಗಳಿವೆ. ಇವು ಅಷ್ಟೇ ಸಂಖ್ಯೆಯ ವಿಷಯಗಳನ್ನು ಹಿಡಿದಿಟ್ಟುಕೊಳ್ಳಬಲ್ಲವು. ಎಲ್ಲಿಯತನಕ ಎಂದರೆ: ಮುಂದೆ ಏನಾಗುತ್ತದೆ ಎನ್ನುವ ವಿಷಯವನ್ನೂ ಕೂಡಾ ಮನಸ್ಸು ಗ್ರಹಿಸಬಲ್ಲುದು. “ಈ ಶಕ್ತಿ ಮನಸ್ಸಿನಲ್ಲಿ ಭಗವಂತನ ವಿಭೂತಿಯಿಂದಾಗಿ ಅಭಿವ್ಯಕ್ತವಾಗಿದೆ” ಎಂದಿದ್ದಾನೆ ಚತುರ್ಮುಖ.
“ಪಂಚಭೂತಗಳಲ್ಲಿ, ಗುಣತ್ರಯಗಳಲ್ಲಿ, ಇಂದ್ರಿಯಗಳಲ್ಲಿ ಭಗವಂತನ ವಿಭೂತಿ ತುಂಬಿದೆ” ಎನ್ನುತ್ತಾನೆ ಚತುರ್ಮುಖ. ಈ ಪ್ರಪಂಚದಲ್ಲಿ ಎಲ್ಲಿ ನೋಡಿದರೂ ಕಾಣುವುದು ಪಂಚಭೂತಗಳ ಅನಂತ ವೈಭವ. ಪಂಚಭೂತಗಳು ಹೀಗೆ ಅನಂತ ವೈವಿದ್ಯಗಳಿಂದ ರೂಪುಗೊಳುವಂತೆ ಅದರಲ್ಲಿ ಶಕ್ತಿಯಾಗಿ ಭಗವಂತನ  ವಿಭೂತಿ ಅಡಗಿದೆ. ಈ ಪಂಚಭೂತಗಳು ವಿಕಾರಗೊಂಡು ಬ್ರಹ್ಮಾಂಡ ರಚನೆಯಾಗುವಂತೆ  ಮಾಡಿರುವುದು ಆ ವಿಶಿಷ್ಟವಾದ ವಿಭೂತಿ.  ಇದೇ ರೀತಿ ಪ್ರತೀ ಇಂದ್ರಿಯಗಳ ಒಳಗೆ ಇಂದ್ರಿಯ ಶಕ್ತಿಯಾಗಿ ಭಗವಂತನ ವಿಭೂತಿ ಅಡಗಿದೆ.
ಸಮಸ್ತ ವೇದಗಳ ನಿಯಾಮಕಶಕ್ತಿಯಾಗಿ ವಿಭೂತಿ ರೂಪದಲ್ಲಿ ಭಗವಂತ ಗರುಡನಲ್ಲಿ ತುಂಬಿದ್ದಾನೆ. ಇಂದ್ರನಲ್ಲಿ ವಿಶಿಷ್ಠ ಶಕ್ತಿಯಾಗಿ ತುಂಬಿರುವ ಭಗವಂತ ಆತನಿಗೆ ದೇವಲೋಕದ ಒಡೆತನವನ್ನು ನೀಡಿದ್ದಾನೆ. ಸ್ಥಿರ ಜಗತ್ತು(ಉದಾ: ಅಶ್ವತ್ಥ, ನೆಲ್ಲಿ, ದರ್ಭೆ ಇತ್ಯಾದಿ ಮರಗಳು)  ಚಲಿಸುವ  ಜಗತ್ತು(ಉದಾ: ನದಿಗಳು, ಪ್ರಾಣಿ-ಪಕ್ಷಿಗಳು) ಎಲ್ಲದರಲ್ಲೂ ಭಗವಂತ ವಿಭೂತಿಯಾಗಿ ತುಂಬಿದ್ದಾನೆ. “ಇಷ್ಟೇ ಅಲ್ಲ, ನನ್ನಲ್ಲಿ, ಶಿವನಲ್ಲಿ, ಯಜ್ಞಾಭಿಮಾನಿ ಜಯಂತನಲ್ಲಿ, ಲೋಕಪಾಲಕರಲ್ಲಿ, ಪ್ರಜಾಪತಿಗಳಲ್ಲಿ, ಅಪರೋಕ್ಷಜ್ಞಾನಿಗಳಲ್ಲಿ, ಮೂರು ಲೋಕಗಳಲ್ಲಿ, ಹೀಗೆ ಎಲ್ಲೆಡೆ ಭಗವಂತ ವಿಶೇಷ ವಿಭೂತಿಯಾಗಿ ತುಂಬಿದ್ದಾನೆ” ಎಂದಿದ್ದಾನೆ ಚತುರ್ಮುಖ.  
ಒಬ್ಬನಲ್ಲಿ ಇನ್ನೊಬ್ಬರಲ್ಲಿಲ್ಲದ ಅಸಾಧಾರಣ ಶಕ್ತಿ ತುಂಬಿದ್ದರೆ ಅದು ಭಗವಂತನ ವಿಶೇಷ ವಿಭೂತಿಯ ಅಭಿವ್ಯಕ್ತಿ. ಉದಾಹರಣೆಗೆ ಭಾಗ್ಯಶಾಲಿ/ಒಳ್ಳೆಯವ್ಯಕ್ತಿ ಎನಿಸುವುದು,  ಇನ್ನೊಬ್ಬರನ್ನು ಮಣಿಸುವ ಶಕ್ತಿ, ಇನ್ನೊಬ್ಬರಿಗೆ ಮಣಿಯದ ಶಕ್ತಿ, ಶಾಂತ ಸ್ವಭಾವ (ಧರ್ಮರಾಯನಂತೆ), ತನ್ನ ತಪ್ಪಿನ ಅರಿವಾದಾಗ ಅದಕ್ಕಾಗಿ ನಾಚುವ ಸ್ವಭಾವ, ಸೌಂದರ್ಯ, ಗಟ್ಟಿಮನಸ್ಸು, ಛಲ, ಜ್ಞಾನ, ಬಲ, ಸಂಪತ್ತು,  ಎಲ್ಲವೂ ಭಗವಂತನ ವಿಭೂತಿಯ ಅಭಿವ್ಯಕ್ತಿ. ಭಗವಂತ  ಎಲ್ಲಾ ಗುಣಗಳ ಹಾಗೂ ವಿಸ್ಮಯಗಳ ನೆಲೆ. ಆತನ ಒಂದೊಂದು ಗುಣಗಳ ಕಿಡಿ ಒಂದೊಂದು ವಸ್ತುವಿನಲ್ಲಿ ಅಭಿವ್ಯಕ್ತವಾಗುತ್ತದೆ. ಒಟ್ಟಿನಲ್ಲಿ ಹೇಳಬೇಕೆಂದರೆ: ಎಲ್ಲಿ ಮೂಗಿನ ಮೇಲೆ ಬೆರಳನ್ನಿಟ್ಟು ಕಣ್ಣರಳಿಸಿ  ನೋಡುವ ವಿಸ್ಮಯವಿದೆಯೋ ಅಲ್ಲಿ ಆ ಶಕ್ತಿಯಾಗಿ ಭಗವಂತ ತುಂಬಿದ್ದಾನೆ ಎಂದು ತಿಳಿಯಬೇಕು. ಆದರೆ ಇದು ಭಗವಂತನ ವಿಶೇಷ ಶಕ್ತಿಯ  ಪ್ರತೀಕ(ವಿಭೂತಿ) ಅಷ್ಟೇ.  ಅದು ಭಗವಂತನ ಸ್ವರೂಪರೂಪವಲ್ಲ.
ಭಗವಂತನ ವಿಭೂತಿಯನ್ನು ಹೇಳಿ ಮುಗಿಸಲು ಸಾಧ್ಯವಿಲ್ಲ. ಅದು ಅನಂತ. ಆದರೆ ಜ್ಞಾನಿಗಳು ಭಗವಂತನ ಸ್ವರೂಪಾವತಾರಗಳು ಎಂದು ಪರಿಗಣನೆ ಮಾಡಿರುವುವಂತಹ, ಈ ಕಲ್ಪದ ಮುಖ್ಯವಾದ ಸುಮಾರು ಮೂವತ್ತು  ಸ್ವರೂಪಾವತಾರಗಳನ್ನು ಭಾಗವತ ಉಲ್ಲೇಖ ಮಾಡುತ್ತದೆ. ಆದರೆ ಅವಷ್ಟೇ ಭಗವಂತನ ಸ್ವರೂಪಭೂತ ರೂಪಗಳಲ್ಲ. ಇವು ಆತನ ಸ್ವರೂಪರೂಪಗಳಲ್ಲಿ ಸದಾ ಉಪಾಸನೆ ಮಾಡಬೇಕಾದ ಪ್ರಧಾನ ರೂಪಗಳು. ಯುಗ-ಯುಗಗಳಲ್ಲಿ ಒಂದು ವಿಶೇಷ ರೂಪದಲ್ಲಿ ಭೂಮಿಯಲ್ಲಿ ಮನುಷ್ಯರ ಕಣ್ಣಿಗೆ ಗೋಚರನಾಗಿ, ಮನುಷ್ಯರಂತೆ ನಲಿದಾಡಿದ್ದಾನೆ ಭಗವಂತ. “ಕಿವಿ ಬೊಗಸೆಯಲ್ಲಿ ಭಗವಂತನ ಚರಿತೆಯನ್ನು ಪಾನಮಾಡುವವರಲ್ಲಿನ ಸಮಸ್ತಕೊಳೆಯನ್ನು ತೊಳೆದುಬಿಡುವ ಆ ಭಗವಂತನ ಅವತಾರದ ಜ್ಞಾನಧಾರೆಯನ್ನು ನಾನೀಗ ನಿನಗೆ ಹೇಳುತ್ತೇನೆ” ಎಂದು ಚತುರ್ಮುಖ ನಾರದರಿಗೆ ಹೇಳಿದ ಎನ್ನುವಲ್ಲಿಗೆ ಈ ಅಧ್ಯಾಯ ಕೊನೆಗೊಳ್ಳುತ್ತದೆ.

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ದ್ವಿತೀಯಸ್ಕಂಧೇ ಷಷ್ಠೋSಧ್ಯಾಯಃ
ಭಾಗವತ ಮಹಾಪುರಾಣದ ಎರಡನೇ  ಸ್ಕಂಧದ ಆರನೇ ಅಧ್ಯಾಯ ಮುಗಿಯಿತು

*********

Saturday, April 4, 2015

Shrimad BhAgavata in Kannada -Skandha-02-Ch-06(09)

ವಿಶುದ್ಧಂ ಕೇವಲಂ ಜ್ಞಾನಂ ಪ್ರತ್ಯಕ್ ಸಮ್ಯಗವಸ್ಥಿತಮ್
ಸತ್ಯಂ ಪೂರ್ಣಮನಾದ್ಯಂತಂ ನಿರ್ಗುಣಂ ನಿತ್ಯಮದ್ವಯಮ್  ೩೯

ಋತಂ ವಿಂದಂತಿ ಮುನಯಃ ಪ್ರಶಾಂತಾತ್ಮೇಂದ್ರಿಯಾಶಯಾಃ
ಯದಾ ತದೈವಾಸತ್ತರ್ಕೈಸ್ತಿರೋಧೀಯೇತ ವಿಪ್ಲುತಮ್  ೪೦

ಇಲ್ಲಿ ಚತುರ್ಮುಖ  ತಾನು ನಿರಂತರ ಹೃದಯದಲ್ಲಿ ಕಾಣುವ ಭಗವಂತನ ವರ್ಣನೆ ಮಾಡುವುದನ್ನು ಕಾಣುತ್ತೇವೆ. ಭಗವಂತ ‘ವಿಶುದ್ಧಃ’ ಅಂದರೆ ಅವನಿಗೆ ದೋಷದ ಸ್ಪರ್ಶವಿಲ್ಲ. ಆತ ಅತ್ಯಂತ ಪವಿತ್ರ. “ಸಾಕ್ಷೀ ಚೇತಾ ಕೇವಲೋ ನಿರ್ಗುಣಶ್ಚ”  ಭಗವಂತನೊಬ್ಬನೇ ಪೂರ್ಣ ಶುದ್ಧ, ಪವಿತ್ರ. ಆತನನ್ನು ಬಿಟ್ಟು ಅಂತಹದ್ದೇ ಇನ್ನೊಂದಿಲ್ಲ. ಏಕೆಂದರೆ:  ಆತ ಜ್ಞಾನಸ್ವರೂಪ. ಎಲ್ಲಾ  ಅಶುದ್ಧತೆಯನ್ನೂ ಸುಡುವ ಜ್ಞಾನಶಕ್ತಿ ಆ ಭಗವಂತ. ಅಂತಹ ಭಗವಂತನನ್ನು ನಾವು ಎಲ್ಲೋ ಹುಡುಕುವ ಅಗತ್ಯವಿಲ್ಲ. ಏಕೆಂದರೆ ಆತ  ನಮ್ಮ ಅಂತರ್ಯಾಮಿಯಾಗಿ ನಮ್ಮೊಳಗೇ ತುಂಬಿದ್ದಾನೆ.
ಭಗವಂತ ಎಲ್ಲೇ ಇದ್ದರೂ ಕೂಡಾ ದೋಷದ ಸ್ಪರ್ಶ ಅವನಿಗಿಲ್ಲ. ಎಲ್ಲಾ ಮಂಗಲದ ನೆಲೆ, ಜ್ಞಾನಾನಂದ ಸ್ವರೂಪ ಆ ಭಗವಂತ. ಮುಕ್ತರು-ಅಮುಕ್ತರು, ಆನಂದದಲ್ಲಿರುವವರು, ದುಃಖಿಗಳು, ಹೀಗೆ ಎಲ್ಲರಿಗೂ ನೆಲೆ ಆ ಭಗವಂತ. ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣ ಆ ಭಗವಂತ. ಆತನೊಬ್ಬನೇ ಈ ಪ್ರಪಂಚದಲ್ಲಿ ಪೂರ್ಣ, ಉಳಿದಿದೆಲ್ಲವೂ ಅಪೂರ್ಣ.  
ಭಗವಂತನಿಗೆ ಆದಿ-ಅಂತ್ಯ ಎನ್ನುವುದಿಲ್ಲ. ಆದಿ-ತುದಿ ಎನ್ನುವುದು, ಹುಟ್ಟು-ಸಾವು ಎನ್ನುವುದು ಗುಣತ್ರಯಗಳ ಸ್ಪರ್ಶದಿಂದ ಬರುವಂತಹದ್ದು. ಜೀವ ಅನಾದ್ಯಂತವಾದರೂ ಕೂಡಾ, ಆತನಿಗೆ ತ್ರೈಗುಣ್ಯದ ಸ್ಪರ್ಶವಿರುವ ದೇಹ ಬಂದು ಹೋಗುತ್ತಿರುತ್ತದೆ. ಆದರೆ ಭಗವಂತನಿಗೆ ಎಂದೂ ತ್ರೈಗುಣ್ಯಗಳ ಸ್ಪರ್ಶವಿಲ್ಲ. ಇಂಥಹ ಭಗವಂತನಿಗೆ ಸಾಟಿಯಾದ ಇನ್ನೊಂದು ಶಕ್ತಿ ಇಂದೂ ಇಲ್ಲಾ, ಇನ್ನೆಂದಿಗೂ ಇಲ್ಲಾ.  ಭಗವಂತ ತನಗೆ ಮಾತ್ರ ತಾನು ಪೂರ್ಣ ತಿಳಿದವನು. ಆತನನ್ನು ಇತರರು ಎಂದೆಂದಿಗೂ ಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲಾ. ಭಗವಂತನ ಕುರಿತು ಈ ಎಲ್ಲಾ ವಿಷಯವನ್ನು ಅರಿತವನು ಆತನನ್ನು ಸಾಕ್ಷಾತ್ಕರಿಸಿಕೊಳ್ಳಬಲ್ಲ.

ನಮ್ಮ ದೇಹ-ಮಾತು-ಮನಸ್ಸು ಎಲ್ಲವೂ ಪ್ರಶಾಂತವಾಗಿ ಭಗವಂತನಲ್ಲಿ ನೆಲೆಗೊಳ್ಳಬೇಕು. ದೇಹ ಭಗವಂತನ ಆರಾಧನೆಗೊಸ್ಕರ, ಇಂದ್ರಿಯಗಳು ಭಗವಂತನ ಅರಿವಿಗೋಸ್ಕರ, ಮನಸ್ಸು ಭಗವಂತನ ಚಿಂತನೆಗೋಸ್ಕರ, ಹೀಗೆ ಸರ್ವಸ್ವವೂ ಭಗವನ್ಮಯವಾದಾಗ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ಆಗ ಮನಸ್ಸಿನಲ್ಲಿನ ಗೊಂದಲ ಪರಿಹಾರವಾಗುತ್ತದೆ. ಅರ್ಥಶೂನ್ಯವಾದ ಪ್ರಾಪಂಚಿಕ ತರ್ಕಗಳಿಂದ ಗೊಂದಲಕ್ಕೊಳಗಾದ ಮನಸ್ಸು ಸ್ವಚ್ಛವಾಗುತ್ತದೆ. ಭಗವಂತನ ಅರಿವು ಬರಲು, ಎಲ್ಲಾ ಗೊಂದಲಗಳಿಂದ ಪಾರಾಗಲು, ನಾವು ಭಗವಂತನಲ್ಲಿ ಶರಣಾಗಬೇಕು. ಸತ್ಯದ ಅರಿವು ಕೊಡು ಎಂದು ಆತನನ್ನು ಪ್ರಾರ್ಥಿಸಬೇಕು.  ಸತ್ಯವನ್ನು ನಾವೇ ಆವಿಷ್ಕಾರ ಮಾಡುತ್ತೇವೆ ಎಂದರೆ ಅದು  ಸಾಧ್ಯವಿಲ್ಲ. ಅದನ್ನು  ಭಗವಂತ ನಮ್ಮ ತಲೆಯಲ್ಲಿ ಹೊಳೆಸಬೇಕು(Intuitive flash, ನ್ಯೂಟನ್ ನಿಗೆ ಸೇಬುಹಣ್ಣು ಬಿದ್ದಾಗ ವಿಷಯ ಹೊಳೆದಂತೆ, ಆರ್ಕೀಮೆಡಿಸ್ ನಿಗೆ ನೀರಿನತೊಟ್ಟಿಯಲ್ಲಿ ವಿಷಯ ಹೊಳೆದಂತೆ). ಹೀಗೆ ಭಗವಂತನಿಂದ ಬರುವ ಅರಿವು ನಮ್ಮನ್ನು ಎಲ್ಲಾ ಗೊಂದಲಗಳಿಂದ ಪಾರು ಮಾಡಬಲ್ಲದು.