Sunday, December 13, 2015

Shrimad BhAgavata in Kannada -Skandha-02-Ch-10(5)

ಚತುರ್ಮುಖನ ಸೃಷ್ಟಿಯ ನಂತರ

ಪ್ರಜಾಪತೀನ್ ಮನೂನ್ ದೇವಾನೃಷೀನ್ ಪಿತೃಗಣಾನ್ ಪ್ರಥಕ್
ಸಿದ್ಧಚಾರಣಗಂಧರ್ವಾನ್ ವಿದ್ಯಾಧ್ರಾಸುರಗುಹ್ಯಕಾನ್ ೩೭

ಕಿನ್ನರಾಪ್ಸರಸೋ ನಾಗಾನ್ ಸರ್ಪಾನ್ ಕಿಂಪುರುಷಾನಪಿ
ಮಾತೃರಕ್ಷಃಪಿಶಾಚಾಂಶ್ಚ ಪ್ರೇತಭೂತವಿನಾಯಕಾನ್ ೩೮

ಕೂಷ್ಮಾಂಡೋನ್ಮಾದವೇತಾಳಾನ್ ಯತುಧಾನಾನ್ ಗ್ರಹಾನಪಿ
ಖಗಾನ್  ಮೃಗಾನ್ ಪಶೂನ್ ವೃಕ್ಷಾನ್ ಗಿರೀನ್ ನೃಪ ಸರೀಸೃಪಾನ್ ೩೯


ವಿವಿಧಾಶ್ಚತುರ್ವಿಧಾ ಯೇಽನ್ಯೇ ಜಲಸ್ಥಲನಭೌಕಸಃ
ಕುಶಲಾಕುಶಲಮಿಶ್ರಾಣಾಂ ಕರ್ಮಣಾಂ ಗತಯಸ್ತ್ವಿಮಾಃ ೪೦

ಚತುರ್ಮುಖನನ್ನು ಸೃಷ್ಟಿಮಾಡಿದ ಭಗವಂತ ನಂತರ ಪ್ರಜಾಪತಿಗಳನ್ನು, ದೇವಾಸುರರನ್ನು, ಮಾನವರನ್ನು, ಸಹಸ್ರಾರು ಋಷಿಗಳನ್ನು, ಪಿತೃದೇವತೆಗಳ ಗುಂಪನ್ನು, ದೇವತೆಗಳ ಪರಿಚಾರಕರಾದ ಸಿದ್ಧರು( ದೇವತೆಗಳ ಗುಣಗಾನ ಮಾಡುವವರು),  ಚಾರಣರು(ದೇವತೆಗಳ ರಥ ಸಾರಥಿಗಳು), ಗಂಧರ್ವರು(ಸಂಗೀತಗಾರರು), ವಿದ್ಯಾಧರರು( ನೃತ್ಯಕಾರರು ಮತ್ತು ಇತರರು), ಅಸುರರು(ರುದ್ರಗಣ ಇತ್ಯಾದಿ), ಗುಹ್ಯಕರು(ಗೂಡಾಚಾರಿಗಳು ಇತ್ಯಾದಿ), ಕಿನ್ನರ, ಕಿಂಪುರುಷ, ಯಕ್ಷರಾಕ್ಷಸರು, ಭೂತ-ಪ್ರೇತ ಪಿಶಾಚಾದಿಗಳು, ಗ್ರಹಗಳು, ಮೃಗ-ಪಕ್ಷಿಗಳು, ವೃಕ್ಷಗಳು, ನದಿ-ಪರ್ವತಗಳು, ಇತ್ಯಾದಿಗಳನ್ನು ಜೀವರುಗಳ ಕರ್ಮಕ್ಕನುಗುಣವಾಗಿ ಸೃಷ್ಟಿ ಮಾಡಿ ಧಾರಣೆ ಮಾಡಿದ.

ಸತ್ತ್ವಂ ರಜಸ್ತಮ ಇತಿ ತಿಸ್ರಃ ಸುರನೃನಾರಕಾಃ
ತತ್ರಾಪ್ಯೇಕೈಕಶೋ ರಾಜನ್ ಭಿದ್ಯಂತೇ ಗತಯಸ್ತ್ರಿಧಾ ೪೧

ಮುಖ್ಯವಾಗಿ ಭಗವಂತ ಮೂರು ತೆರನಾದ ಜೀವರುಗಳ ಸೃಷ್ಟಿ ಮಾಡಿರುವುದನ್ನು ಇಲ್ಲಿ ಶುಕಾಚಾರ್ಯರು ಪರೀಕ್ಷಿತನಿಗೆ ವಿವರಿಸುವುದನ್ನು ನಾವು ಕಾಣುತ್ತೇವೆ. ೧. ಸತ್ವ ಪ್ರಧಾನರಾದ ದೇವತೆಗಳು. ೨. ರಜ ಪ್ರಧಾನರಾದ ಮಾನವರು ಮತ್ತು ೩. ತಮ ಪ್ರಧಾನರಾದ ಅಸುರರು. ಈ ಮೂರು ವಿಧದಲ್ಲಿ ಪ್ರತಿಯೊಂದು ವಿಧದಲ್ಲೂ ಮತ್ತೆ ಸಾತ್ವಿಕ-ರಾಜಸ-ತಾಮಸವೆಂಬ ಮೂರು ವರ್ಗಗಳಿವೆ. ಅವರ ವರ್ಣನೆ ಈ ಕೆಳಗಿನಂತಿದೆ:

ತಾಮಸಾಸ್ತಾಮಸಾ ದೈತ್ಯಾಃ ಪ್ರಧಾನಾ ದೇವಶತ್ರವಃ|
ತಾಮಸಾ ರಾಜಸಾಸ್ತೇಷಾಮನುಗಾಸ್ತೇಷು ಸಾತ್ವಿಕಾಃ|
ಅನಾಕ್ಯಾತಾಸುರಾಃ ಪ್ರೋಕ್ತಾ ಮಾನುಷಾ ದುಷ್ಟಚಾರಿಣಃ|
ರಾಜಸಾಸ್ತಾಮಸಾಶ್ಚೈವ ಮಧ್ಯಾ ರಾಜಸರಾಜಸಾಃ|
ರಾಜಸಾಃ ಸಾತ್ವಿಕಾಸ್ತತ್ರ ಮಾನುಷೇಷೂತ್ತಮಾ ಗಣಾಃ|
ದೇವಾಃ ಪೃಥಗನಾಖ್ಯಾತಾಃ ಸ್ಮೃತಾಃ ಸಾತ್ವಿಕತಾಮಸಾಃ|
ಅತಾತ್ವಿಕಾಸ್ತಥಾಽಽಖ್ಯಾತಾಃ ಸ್ಮೃತಾಃ ಸಾತ್ವಿಕರಾಜಸಾಃ|
ಸಾತ್ವಿಕಾಃ ಸಾತ್ವಿಕಾಸ್ತತ್ರ ತಾತ್ವಿಕಾಃ ಪರಿಕೀರ್ತಿತಾಃ|
ತೇಷಾಂ ಚ ಸಾತ್ವಿಕಾಃ ಶೇಷಗರುತ್ಮದ್ರುದ್ರತತ್ಸ್ತ್ರಿಯಃ|
ತತೋಽಪಿ ದೇವೀ ಬ್ರಹ್ಮಾಣೀ ಬ್ರಹ್ಮಾ ಚೈವ ತತಃ ಸ್ವಯಮ್   
ದೈತ್ಯ ಪ್ರಧಾನರು(ಉದಾಹರಣೆಗೆ ಕಾಲನೇಮಿ) ತಾಮಸರಲ್ಲಿ-ತಾಮಸರು. ಇಂತಹ ದೈತ್ಯ ಪ್ರಧಾನರ ಪರಿವಾರದವರು ತಾಮಸರಲ್ಲಿ-ರಾಜಸರು. ಇನ್ನು ಅಪ್ರಸಿದ್ಧರಾದ ಅಸುರರು ತಾಮಸರಲ್ಲಿ-ಸಾತ್ವಿಕರು. ಅತ್ಯಂತ ನೀಚರಾದ ಮಾನವರು ರಾಜಸರಲ್ಲಿ-ತಾಮಸರು. ಸಂಸಾರ ಚಕ್ರಭ್ರಮಣದಲ್ಲಿರುವ ಮನುಷ್ಯಮಧ್ಯರು ರಾಜಸರಲ್ಲಿ-ರಾಜಸರು. ಭಗವಂತನನ್ನು ಅನುಸರಿಸಿ ಮೋಕ್ಷ ಮಾರ್ಗದಲ್ಲಿ ನಡೆಯುವ ಮಾನವರು ರಾಜಸರಲ್ಲಿ-ಸಾತ್ವಿಕರು. ಅಪ್ರಸಿದ್ಧವಾದ ದೇವತೆಗಳು(ಒಂಬತ್ತು ಕೋಟಿ ದೇವತೆಗಳಲ್ಲಿ ಅನಾಖ್ಯಾತ ದೇವತೆಗಳು)  ಸಾತ್ವಿಕರಲ್ಲಿ-ತಾಮಸರು. ಪ್ರಸಿದ್ಧರಾದ ಆದರೆ ತತ್ತ್ವಾಭಿಮಾನಿ ಅಲ್ಲದ ದೇವತೆಗಳು ಸಾತ್ವಿಕರಲ್ಲಿ-ರಾಜಸರು(ಉದಾಹರಣೆಗೆ ಕರ್ಮ ದೇವತೆಗಳು). ತತ್ತ್ವಾಭಿಮಾನಿ ದೇವತೆಗಳು ಸಾತ್ವಿಕರಲ್ಲಿ ಸಾತ್ವಿಕರು. ಸಾತ್ವಿಕ-ಸಾತ್ವಿಕರಲ್ಲಿಯೂ-ಸಾತ್ವಿಕರು ಗರುಡ-ಶೇಷ-ರುದ್ರರು ಮತ್ತು ಅವರ ಪತ್ನಿಯರು. ಸಾತ್ವಿಕ-ಸಾತ್ವಿಕ-ಸಾತ್ವಿಕರಲ್ಲಿಯೂ- ಸಾತ್ವಿಕರು ಸರಸ್ವತಿ-ಭಾರತೀದೇವಿಯರು. ಇವರೆಲ್ಲರಿಗಿಂತ ಮೇಲಿನ ಸಾತ್ವಿಕ-ಸಾತ್ವಿಕ-ಸಾತ್ವಿಕ-ಸಾತ್ವಿಕರಲ್ಲಿ-ಸಾತ್ವಿಕರು ಬ್ರಹ್ಮ-ವಾಯು
.
ಯದೈವ್ಯೆಕತಮೋSನ್ಯಾಭ್ಯಾಂ ಸ್ವಭಾವ ಉಪಹನ್ಯತೇ
ತದೈವೇದಂ ಜಗದ್  ಧಾತಾ ಭಗವಾನ್ ಧರ್ಮರೂಪಧೃಕ್  
ಪುಷ್ಣಾತಿ ಸ್ಥಾಪಯನ್ ವಿಶ್ವಂ ತಿರ್ಯಙ್ನರಸುರಾದಿಭಿಃ ೪೨

ಭಗವಂತನ ಸೃಷ್ಟಿ ಪ್ರಕ್ರಿಯೆಯನ್ನು ವಿವರಿಸಿದ ಶುಕಾಚಾರ್ಯರು ಇಲ್ಲಿ ಆತ ತಾನು ಸೃಷ್ಟಿಸಿದ ಪ್ರಪಂಚದ ರಕ್ಷಣೆಯನ್ನು ಹೇಗೆ ಮಾಡುತ್ತಾನೆ ಎನ್ನುವುದನ್ನು ವರ್ಣಿಸಿದ್ದಾರೆ. ತ್ರಿವಿಧ ಸಾತ್ವಿಕರಲ್ಲಿ ಯಾರನ್ನಾದರೂ  ರಾಜಸರು ಅಥವಾ ತಾಮಸರು ಬಾಧಿಸಿದಾಗ, ಅಸುರ ಶಕ್ತಿಗಳು ಪ್ರಪಂಚ ನಾಶ ಮಾಡುವ ಸಂಕಲ್ಪ ತೊಟ್ಟಾಗ, ಧರ್ಮ ಸಂಸ್ಥಾಪಕನಾಗಿ  ಭಗವಂತ ಪ್ರಾಣಿ-ನರ-ಸುರ ಇತ್ಯಾದಿ ರೂಪಿಯಾಗಿ ಬಂದು ಲೋಕವನ್ನು ರಕ್ಷಿಸಿ ಪೋಷಿಸುತ್ತಾನೆ.

ತತಃ ಕಾಲಾಗ್ನಿರುದ್ರಾತ್ಮಾ ಯತ್ ಸೃಷ್ಟಮಿದಮಾತ್ಮನಃ
ಸನ್ನಿಯಚ್ಛತಿ ತತ್ ಕಾಲೇ ಘನಾನೀಕಮಿವಾನಿಲಃ ೪೩

ಸೃಷ್ಟಿಕರ್ತನೇ ಸಂಹಾರ ಕರ್ತ.  ಸೃಷ್ಟಿಯಾದ ಭೂಮಿಯ ಆಯಸ್ಸು ೪೩೨ ಕೋಟಿ  ವರ್ಷಗಳು. ಆ ನಂತರ ಲಯಕಾಲದಲ್ಲಿ ಕಾಲ-ಅಗ್ನಿ-ರುದ್ರರ ಅಂತರ್ಗತ ನರಸಿಂಹ ರೂಪಿಯಾಗಿ  ನಿಲ್ಲುವ ಭಗವಂತ ತಾನೇ ನಿರ್ಮಿಸಿದ ಜಗತ್ತನ್ನು  ಗಾಳಿ ಮೋಡವನ್ನು ಚದುರಿಸುವಂತೆ ಚದುರಿಸಿ  ಲಯಗೊಳಿಸುತ್ತಾನೆ.
ಭಗವಂತನ ಸೃಷ್ಟಿ-ಸ್ಥಿತಿ-ಸಂಹಾರ ಕ್ರಿಯೆಯನ್ನು ವಾಮನ ಪುರಾಣ ಹೀಗೆ ವರ್ಣಿಸಿದೆ:   ಮತ್ಸ್ಯಾದಿರೂಪೀ ಪೋಷಯತಿ ನೃಸಿಂಹೋ ರುದ್ರಸಂಸ್ಥಿತಃ ವಿಲಾಪಯೇದ್ವಿರಿಞ್ಚಸ್ಥಃ ಸೃಜತೇ ವಿಷ್ಣುರವ್ಯಯಃ ಇತಿ ವಾಮನೇ ಮತ್ಸ್ಯಾದಿ ರೂಪದಿಂದ ಭಗವಂತ ಲೋಕವನ್ನು ರಕ್ಷಿಸುತ್ತಾನೆ, ರುದ್ರನಲ್ಲಿ ನರಸಿಂಹನಾಗಿ ನಿಂತು ಲಯಗೊಳಿಸುತ್ತಾನೆ ಮತ್ತು ಮರಳಿ ಬ್ರಹ್ಮನಲ್ಲಿ ನಿಂತು ಆತನೇ ಸೃಷ್ಟಿ ಮಾಡುತ್ತಾನೆ.
ಇತ್ಥಂಭಾವೇನ ಕಥಿತೋ ಭಗವಾನ್ ಭಗವತ್ತಮಃ
ನೇತ್ಥಂಭಾವೇನ ಹಿ ಪರಂ ದ್ರಷ್ಟುಮರ್ಹಂತಿ ಸೂರಯಃ ೪೪

ಇಲ್ಲಿ ಶುಕಾಚಾರ್ಯರು ಪರೀಕ್ಷಿತನಲ್ಲಿ ಹೇಳುತ್ತಾರೆ: ಇಲ್ಲಿಯ ತನಕ ಭಗವಂತನ ಸೃಷ್ಟಿ-ಸ್ಥಿತಿ-ಸಂಹಾರ ಇತ್ಯಾದಿಯ ಬಗ್ಗೆ ಕರಾರುವಕ್ಕಾಗಿ ಹೇಳಿದೆ. ಜ್ಞಾನಿಗಳು ಎಲ್ಲಾ ದೇವಾದಿ ದೇವತೆಗಳಿಗೂ ಹಿರಿಯನಾದ (ಭಗವತ್ತಮಃ) ನಾರಾಯಣನನ್ನು  ಹೀಗೆಯೇ ತಿಳಿದುಕೊಳ್ಳುತ್ತಾರೆ” ಎಂದು. [ಭಗವತ್ತಮಃ ನಾ ಪುರುಷಃ, ಇಲ್ಲಿ ‘ನಾ’ ಎಂದರೆ ಪುರುಷಸೂಕ್ತ ಪ್ರತಿಪಾದ್ಯನಾದ ನಾರಾಯಣ ಎಂದರ್ಥ]

ನ ಚಾಸ್ಯ ಜನ್ಮಕರ್ಮಾಣಿ ಪರಸ್ಯ ನವಿಧೀಯತೇ
ಕರ್ತೃತ್ವಪ್ರತಿಷೇಧಾರ್ಥಂ ಮಾಯಯಾSರೋಪಿತಂ ಹಿ ತತ್೪೫

ಭಗವಂತನ ಜನ್ಮ- ಕರ್ಮಗಳ ಬಗ್ಗೆ, ಆತ ಅವತಾರ ರೂಪದಿಂದ ಬಂದು ಭೂಮಿಯಲ್ಲಿ ತೋರಿದ ಲೀಲೆಗಳ ಬಗ್ಗೆ ಶಾಸ್ತ್ರಗಳು ವಿವರಣೆ ನೀಡುತ್ತವೆ. ಆದರೆ ಆತ ಏಕೆ ಹೀಗೆ ಅವತಾರ ರೂಪಿಯಾಗಿ ಬರುತ್ತಾನೆ? ಇಚ್ಛಾಮಾತ್ರದಿಂದ ಎಲ್ಲವನ್ನೂ ಮಾಡಬಲ್ಲ ಭಗವಂತ ಅವತಾರ ಮಾಡುವ ಉದ್ದೇಶವೇನು ಎನ್ನುವುದನ್ನು ಈ ಶ್ಲೋಕ ವಿವರಿಸುತ್ತದೆ. ಭಗವಂತ ನಮ್ಮ ಮೇಲಿನ ಕಾರುಣ್ಯದಿಂದ, ನಮ್ಮನ್ನು ಈ ಸಂಸಾರ ಬಂಧನದಿಂದ ಮುಕ್ತಿಗೊಳಿಸುವುದಕ್ಕಾಗಿ, ತನ್ನ ಇಚ್ಛೆಇಚ್ಛೆಯಂತೆ, ಅವತಾರರೂಪಿಯಾಗಿ ಬಂದು, ನಮಗೆ ತನ್ನ ಜ್ಞಾನವನ್ನು ನೀಡಿ ಅನುಗ್ರಹಿಸುತ್ತಾನೆ. ಒಂದು ವೇಳೆ ಭಗವಂತ ಯಾವ ಅವತಾರವನ್ನು ತಾಳದೇ ವೈಕುಂಠದಲ್ಲೇ ನಿಂತು ಎಲ್ಲವನ್ನೂ ಮಾಡಿದಿದ್ದರೆ, ಇಂದು ನಮಗೆ ಭಗವಂತನ ಕುರಿತು ಯಾವ ಜ್ಞಾನವೂ ಬರುತ್ತಿರಲಿಲ್ಲ.  

ಅಯಂ ತೇ  ಬ್ರಹ್ಮಣಃ ಕಲ್ಪಃ ಸವಿಕಲ್ಪ ಉದಾಹೃತಃ
ವಿಧಿಃ ಸಾಧಾರಣೋ ಯತ್ರ ಸರ್ಗಾಃ ಪ್ರಾಕೃತವೈಕೃತಾಃ ೪೬

“ಇಲ್ಲಿಯ ತನಕ  ಬ್ರಹ್ಮನ ಸೃಷ್ಟಿಯಿಂದ  ಹಿಡಿದು, ಪಂಚಭೂತಗಳ ಸೃಷ್ಟಿ, ಬ್ರಹ್ಮಾಂಡದ ಸೃಷ್ಟಿ ಎಲ್ಲಾ ವಿವರಗಳನ್ನು ಸಂಕ್ಷಿಪ್ತವಾಗಿ ನಾನು ನಿನಗೆ ವಿವರಿಸಿದೆ” ಎಂದು ಶುಕಾಚಾರ್ಯರು ಪರೀಕ್ಷಿತನಿಗೆ ಹೇಳಿದರು ಎನ್ನುವಲ್ಲಿಗೆ  ಭಾಗವತದ ಎರಡನೇ ಸ್ಕಂಧ ಮುಕ್ತಾಯವಾಯಿತು.
ಇತಿ ಶ್ರೀಮದ್ಭಾಗವತೇ ಮಹಾ ಪುರಾಣೇ ದ್ವಿತೀಯಸ್ಕಂಧೇ ದಶಮೋSಧ್ಯಾಯಃ
ಭಾಗವತ ಮಹಾ ಪುರಾಣದ ಎರಡನೇ ಸ್ಕಂಧದ ಹತ್ತನೇ ಅಧ್ಯಾಯ ಮತ್ತು ಎರಡನೇ ಸ್ಕಂಧ ಮುಗಿಯಿತು.
ಸಮಾಪ್ತಶ್ಚ ದ್ವಿತೀಯಸ್ಕಂಧಃ

*********

Shrimad BhAgavata in Kannada -Skandha-02-Ch-10(4)

ಮಹತೋಮಯ-ಅಣೋರಣೀಯ

ಏತದ್ ಭಗವತೋ ರೂಪಂ ಸ್ಥೂಲಂ ತೇ ವ್ಯಾಹೃತಂ ಮಯಾ
ಮಹ್ಯಾದಿಭಿಶ್ಚಾವರಣೈರಷ್ಟಭಿರ್ಬಹಿರಾವೃತಮ್ ೩೩

ಅತಃ ಪರಂ ಸೂಕ್ಷ್ಮತಮಮವ್ಯಕ್ತಂ ನಿರ್ವಿಶೇಷಣಮ್
ಅನಾದಿಮಧ್ಯನಿಧನಂ ನಿತ್ಯಂ ವಾಙ್ಮನಸೋಃ ಪರಮ್ ೩೪

ಪಂಚಭೂತಗಳು, ಪ್ರಕೃತಿ, ಅಹಂಕಾರತತ್ತ್ವ ಮತ್ತು ಮಹತತ್ತ್ವ ಎನ್ನುವ  ಎಂಟು ಆವರಣಗಳಿಂದ ಕೂಡಿದ ಬ್ರಹ್ಮಾಂಡ ಅಥವಾ ಬ್ರಹ್ಮನ ಶರೀರ ಮಹತೋಮಯನಾದ ಭಗವಂತನ ಸ್ಥೂಲರೂಪ. ಸ್ಥೂಲಂ ಭಗವತೋ ರೂಪಂ ಬ್ರಹ್ಮದೇಹ ಉದಾಹೃತಃ ಭಗವಂತ ಚತುರ್ಮುಖನೊಳಗೆ ತುಂಬಿರುವುದರಿಂದ ಚತುರ್ಮುಖನ ರೂಪವೂ ಕೂಡಾ ಭಗವಂತನ ಪ್ರತೀಕ. ಹೀಗಾಗಿ ನಾವು ಪ್ರಪಂಚದಲ್ಲಿನ ಪ್ರತಿಯೊಂದು ವಸ್ತುವಿನಲ್ಲಿಯೂ ಕೂಡಾ ಭಗವಂತನನ್ನು ಕಾಣಬೇಕು. ಭಾಗವತದಲ್ಲೇ ಮುಂದೆ ಹೇಳುವಂತೆ: ಸೂರ್ಯೋಽಗ್ನಿರ್ಬ್ರಾಹ್ಮಣಾ ಗಾವೋ ವೈಷ್ಣವಃ ಖಂ ಮರುಜ್ಜಲಂ  ಭೂರಾತ್ಮಾ ಸರ್ವಭೂತಾನಿ ಭದ್ರ ಪೂಜಾಪದಾನಿ ಮೇ (ಭಾಗವತ ೧೧ನೇ ಸ್ಕಂಧ ಶ್ರೀಕೃಷ್ಣ-ಉದ್ಧವ ಸಂವಾದ). ಆದ್ದರಿಂದ ಬ್ರಹ್ಮಾಂಡವೇ ಮಹತೋಮಹೀಯನಾದ ಭಗವಂತನ ಸ್ಥೂಲರೂಪ. ಆದರೆ ಇಂಥಹ ಸ್ಥೂಲರೂಪ ಚಿಂತನೆ ಎಲ್ಲರಿಗೂ ಸಾಧ್ಯವಿಲ್ಲ. ಅದಕ್ಕಾಗಿ ಶುಕಾಚಾರ್ಯರು ಇಲ್ಲಿ ಭಗವಂತನ  ಅಣೋರಣೀಯವಾದ ಸೂಕ್ಷರೂಪದ ವಿವರಣೆಯನ್ನೂ ನೀಡಿದ್ದಾರೆ.
ಪ್ರಪಂಚದಲ್ಲಿ ಮನುಷ್ಯನ ಬುದ್ಧಿಗೆ ಗೋಚರವಾಗುವ ಅತ್ಯಂತ ಸೂಕ್ಷ್ಮವಸ್ತು ಎಂದರೆ ಅದು ಜೀವಸ್ವರೂಪ. ಇಂಥಹ ಅಣುವಿಗೂ ಅಣುವಾಗಿರುವ ಜೀವಸ್ವರೂಪದ ಒಳಗೆ ಬಿಂಬರೂಪಿಯಾಗಿರುವ ಭಗವಂತನ ರೂಪವೇ ಆತನ ಸ್ವರೂಪರೂಪ. ಇಂಥಹ ಭಗವಂತನನ್ನು ತಿಳಿಯಬೇಕಾದರೆ ಮೊದಲು ನಮಗೆ ಆತ್ಮಸಾಕ್ಷಾತ್ಕಾರವಾಗಬೇಕು. ಆತ್ಮಸಾಕ್ಷಾತ್ಕಾರವಾದರೂ ಕೂಡಾ ನಿತ್ಯ ಭಗವಂತನ ದರ್ಶನ ಸಾಧ್ಯವಿಲ್ಲ. ಅವ್ಯಕ್ತನಾದ ಭಗವಂತ ಅಪರೋಕ್ಷ ಜ್ಞಾನಿಗಳಿಗೆ ಎಲ್ಲೋ ಒಮ್ಮೆ ಮಿಂಚಿನಂತೆ ಕಾಣಿಸಿ ಕಣ್ಮರೆಯಾಗುತ್ತಾನೆ. ಭಗವಂತನಲ್ಲಿ ಎಲ್ಲಾ ಗುಣಗಳೂ ಇವೆ. ಆದರೆ ಅದನ್ನು ಮೀರಿಸುವ ಗುಣ ಯಾರಲ್ಲೂ ಇಲ್ಲ. ಭಗವಂತ ಸೃಷ್ಟಿ ಮಾಡುತ್ತಾನೆ. ಆದರೆ ಆತನನ್ನು ಇನ್ನ್ಯಾರೋ ಸೃಷ್ಟಿ ಮಾಡುವುದಿಲ್ಲ. ಭಗವಂತ ಸಂಹಾರ ಮಾಡುತ್ತಾನೆ. ಆದರೆ ಆತನನ್ನು ಯಾರೂ ಸಂಹಾರ ಮಾಡಲು ಸಾಧ್ಯವಿಲ್ಲ. ಭಗವಂತ ಪಾಲನೆ ಮಾಡುತ್ತಾನೆ. ಆದರೆ ಆತನನ್ನು ಪಾಲಿಸುವ ಇನ್ನೊಂದು ಶಕ್ತಿ ಇಲ್ಲ. ಒಟ್ಟಿನಲ್ಲಿ ಹೇಳಬೇಕೆಂದರೆ ನಮ್ಮ ಮಾತು-ಮನಸ್ಸಿಗೆ ನಿಲುಕದ ತತ್ತ್ವ ಆ ಭಗವಂತ. ಅಂತಹ ಭಗವಂತನನ್ನು ಶಬ್ದಗಳಲ್ಲಿ ಸೆರೆಹಿಡಿದು ಖಚಿತವಾಗಿ ಹೇಳುವುದು ಅಸಾಧ್ಯ.

ಅಮುನೀ ಭಗವದ್ರೂಪೇ ಮಯಾ ತೇ ಹ್ಯನುವರ್ಣಿತೇ
ಉಭೇ ಅಪಿ ನ ಗೃಹ್ಣಂತಿ ಮಾಯಾಸೃSಷ್ಟೇ ವಿಪಶ್ಚಿತಃ ೩೫

ಭಗವಂತನ ಅಣೋರಣೀಯರೂಪ ಮತ್ತು  ಮಹತೋಮಯರೂಪದ ವರ್ಣನೆ ಮಾಡಿದ ಶುಕಾಚಾರ್ಯರು ಹೇಳುತ್ತಾರೆ: “ ಅಜ್ಞಾನದ ಆವರಣದ ಜೊತೆಗೆ ಸೃಷ್ಟಿಯಾದ ಈ ಪ್ರಪಂಚದಲ್ಲಿ ತಿಳುವಳಿಕೆ ಇಲ್ಲದ ಮಂದಿಗೆ ಭಗವಂತನ ಈ ಯಾವ ರೂಪದ ಗ್ರಹಣವೂ ಆಗುವುದಿಲ್ಲ” ಎಂದು.

ಸ ವಾಚ್ಯವಾಚಕತಯಾ ಭಗವಾನ್ ಬ್ರಹ್ಮರೂಪಧೃಕ್
ನಾಮರೂಪಕ್ರಿಯಾ ಧತ್ತೇ ಸಕರ್ಮಾಕರ್ಮಕಃ ಪರಃ ೩೬


ಶಬ್ದಗಳಿಂದ ವರ್ಣಿಸಲಾಗದ ಭಗವಂತನನ್ನು ಶುಕಾಚಾರ್ಯರು ವರ್ಣಿಸುವುದನ್ನು ನಾವಿಲ್ಲಿ ಕಾಣುತ್ತೇವೆ. “ಭಗವಂತ ಸಕರ್ಮಕ ಆದರೂ ಆಕರ್ಮಕಃ” ಎಂದಿದ್ದಾರೆ ಶುಕಾಚಾರ್ಯರು. ಅಂದರೆ ಭಗವಂತ ಎಲ್ಲರೊಳಗಿದ್ದು ಎಲ್ಲವನ್ನೂ ಮಾಡುತ್ತಾನೆ. ಆದರೆ ಯಾವುದೇ ಕರ್ಮದ ಲೇಪ ಆತನಿಗಿಲ್ಲ. ಮೊದಲು ಚತುರ್ಮುಖನ ಒಳಗೆ ಪ್ರವೇಶಿಸಿದ ಭಗವಂತ ಅನೇಕ ರೂಪಿಯಾಗಿ ಸಮಸ್ತ ಪಿಂಡಾಂಡದ ಒಳಗೆ ನೆಲೆಸಿ ಅದಕ್ಕೊಂದು ರೂಪ ಕೊಟ್ಟ. ಈ ರೀತಿ ಸಮಸ್ತ ಬ್ರಹ್ಮಾಂಡ-ಪಿಂಡಾಂಡದಲ್ಲಿ ನೆಲೆಸಿರುವ ಭಗವಂತ ಸರ್ವಶಬ್ದವಾಚ್ಯ. ಪ್ರಪಂಚದಲ್ಲಿನ ಸಮಸ್ತ ನಾಮಗಳೂ ಭಗವಂತನ ಅನ್ವರ್ಥ ನಾಮ. ಪ್ರಪಂಚದ ಸಮಸ್ತ ರೂಪಗಳೂ ಅವನ ಪ್ರತೀಕ. ಹೀಗಾಗಿ ಭಗವಂತನಿಗೆ ಅನ್ವಯವಾಗದ ಯಾವುದೇ ವಿಷಯ ಈ ಪ್ರಪಂಚದಲ್ಲಿಲ್ಲ.

Shrimad BhAgavata in Kannada -Skandha-02-Ch-10(3)

ದ್ರವ್ಯಂ ಕರ್ಮ ಚ ಕಾಲಶ್ಚ ಸ್ವಭಾವೋ ಜೀವ ಏವ ಚ
ಯದನುಗ್ರಹತಃ ಸಂತಿ ನ ಸಂತಿ ಯದುಪೇಕ್ಷಯಾ ೧೨

ಪರೀಕ್ಷಿತನಿಗೆ ಭಾಗವತ ಉಪದೇಶ ಮಾಡುತ್ತಿರುವ ಶುಕಾಚಾರ್ಯರು ಇಲ್ಲಿ ಒಂದು ಮಹತ್ವದ ವಿಷಯವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಜಗತ್ತಿನ ಸೃಷ್ಟಿ ಮಾಡಲು ಭಗವಂತ ಯಾವಯಾವ ವಸ್ತುಗಳನ್ನು ಬಳಸುತ್ತಾನೆ ಎನ್ನುವ ವಿಷಯ ಈ ಶ್ಲೋಕದಲ್ಲಿದೆ. “ಭಗವಂತ ತನ್ನ ಅಧೀನವಾಗಿರುವ ದ್ರವ್ಯ, ಕರ್ಮ, ಕಾಲ , ಸ್ವಭಾವ ಮತ್ತು ಜೀವರನ್ನು ಬಳಸಿ ಸೃಷ್ಟಿ ಮಾಡುತ್ತಾನೆ” ಎಂದಿದ್ದಾರೆ ಶುಕಾಚಾರ್ಯರು. ಜೀವಗಳಿಗೆ ಅವುಗಳದ್ದೇ ಆದ ಸ್ವಭಾವವಿದೆ. ಆ ಸ್ವಭಾವಕ್ಕೆ ತಕ್ಕಂತೆ ಜೀವದ ಕರ್ಮ ನಡೆಯುತ್ತದೆ. ಜೀವಗಳ ಪಾಪ-ಪುಣ್ಯಗಳು ಪಕ್ವವಾಗುವ ಕಾಲ ಬಂದಾಗ ಅದಕ್ಕನುಗುಣವಾಗಿ ಮಣ್ಣು-ನೀರು-ಬೆಂಕಿಯಿಂದಾದ(ದ್ರವ್ಯದಿಂದಾದ) ಸ್ಥೂಲ ಶರೀರವನ್ನು ಜೀವ ಭಗವಂತನಿಂದ ಪಡೆಯುತ್ತಾನೆ.
ಮೇಲಿನ ಮಾತಿನಿಂದ ನಮಗೆ ಸ್ಪಷ್ಟವಾಗಿ ತಿಳಿಯುವುದೇನೆಂದರೆ: ಅನಂತ ಜೀವದ ಹರವು ಅನಂತ ಕಾಲದಲ್ಲಿ ನಿರಂತರವಾಗಿರುತ್ತದೆ. ಆತ್ಮ ಎಂದೆಂದಿಗೂ ಅಜರಾಮರ. ಪ್ರತಿಯೊಂದು ಜೀವಕ್ಕೆ ಅದರದ್ದೇ ಆದ ಸ್ವಭಾವವಿರುತ್ತದೆ. ಜೀವ ಒಂದು ಬೀಜದಂತೆ. ಭಗವಂತ ಒಬ್ಬ ತೋಟಗಾರನಂತೆ. ಆತ ಈ ಪ್ರಪಂಚವೆಂಬ ತೋಟವನ್ನು ಸೃಷ್ಟಿ ಮಾಡಿ, ಜೀವವನ್ನು ಆ ತೋಟದಲ್ಲಿ ಬಿತ್ತಿ ಅದಕ್ಕೊಂದು ಅಸ್ತಿತ್ವವನ್ನು ಕೊಡುತ್ತಾನೆ. ಆಗ ಜೀವದ ಇರವಿಗೆ ಒಂದು ಅರ್ಥ ಬರುತ್ತದೆ. ಪ್ರತಿಯೊಂದು ಜೀವ ತನ್ನ  ಸ್ವಭಾವಕ್ಕನುಗುಣವಾಗಿ ಈ ಪ್ರಪಂಚದಲ್ಲಿ ಬೆಳೆಯುತ್ತವೆ. ಒಂದು ಜೀವದ ಸ್ವಭಾವ ಇನ್ನೊಂದು ಜೀವದ ಸ್ವಭಾವಕ್ಕಿಂತ ಭಿನ್ನ. ಈ ಕಾರಣದಿಂದಾಗಿ ಈ ಪ್ರಪಂಚ ಇಷ್ಟೊಂದು ವೈವಿದ್ಯಪೂರ್ಣ.

ಚತುರ್ಮುಖನ ಸೃಷ್ಟಿ

ಏಕೋ ನಾನಾತ್ವಮನ್ವಿಚ್ಛನ್ ಯೋಗತಲ್ಪಾತ್ ಸಮುತ್ಥಿತಃ
ವೀರ್ಯಂ ಹಿರಣ್ಮಯಂ ದೇವೋ ಮಾಯಯಾ ವ್ಯಸೃಜತ್ ತ್ರಿಧಾ ೧೩

ಅಧಿದೈವಮಥಾಧ್ಯಾತ್ಮಮಧಿಭೂತಮಿತಿ ಪ್ರಭುಃ
ಪುನಸ್ತತ್ ಪೌರುಷಂ ವೀರ್ಯಂ ತ್ರಿಧಾSಭಿದ್ಯತ ತಚ್ಛೃಣು ೧೪

ಭಗವಂತನ ಸೃಷ್ಟಿ ಪ್ರಕ್ರಿಯೆಯನ್ನು ನಮಗೆ ಅರ್ಥವಾಗುವಂತೆ ಪಾರಿಭಾಷಿಕವಾಗಿ ಶುಕಾಚಾರ್ಯರು ವರ್ಣಿಸಿರುವುದನ್ನು ನಾವಿಲ್ಲಿ ಕಾಣುತ್ತೇವೆ. ಅಗಾಧವಾದ ನೀರಿನ ಮೇಲೆ ಮಲಗಿದ್ದ ಭಗವಂತ ಸೃಷ್ಟಿಮಾಡಬೇಕೆಂದು  ಇಚ್ಛಿಸಿ ಜ್ಞಾನಾನಂದಮಯವಾದ ತನ್ನ ವೀರ್ಯದಿಂದ ಚತುರ್ಮುಖನನ್ನು ಸೃಷ್ಟಿಸಿದ. ಹೀಗೆ ಸೃಷ್ಟಿಯಾದ ಚತುರ್ಮುಖನಿಗೆ ಮೂರು ರೂಪಗಳನ್ನು ಭಗವಂತ ನೀಡಿದ.  ಚತುರ್ಮುಖನಿಗೆ ಮೊದಲು ಅಧಿಭೂತವಾಗಿ ಬ್ರಹ್ಮಾಂಡದ ಶರೀರ ಬಂತು. ಅಧ್ಯಾತ್ಮವಾಗಿ ಆತ ಜೀವ ಕಲಾಭಿಮಾನಿ ಎನಿಸಿದ. ಅಧಿದೈವವಾಗಿ ಸತ್ಯಲೋಕದದ ಒಡೆಯ ಚತುರ್ಮುಖನಾದ.
ಅಂತಃ ಶರೀರ ಆಕಾಶೇ ಪುರುಷಸ್ಯ ವಿಚೇಷ್ಟತಃ
ಓಜಃ ಸಹೋ ಬಲಂ ಜಜ್ಞೇ ತತಃ ಪ್ರಾಣೋ ಮಹಾನಭೂತ್ ೧೫

ಅನುಪ್ರಾಣಂತಿ ಯಂ ಪ್ರಾಣಾಃ ಪ್ರಾಣಂತಂ ಸರ್ವಜಂತುಷು
ಅಪಾನಂತಮಪಾನಂತಿ ನರದೇವಮಿವಾನುಗಾಃ ೧೬

ಪ್ರಾಣೇನ ಕ್ಷಿಪತಾ ಕ್ಷುತ್ತೃಡಂತರಾ ಜಾಯತೇ ವಿಭೋಃ
ಪಿಪಾಸತೋ ಜಕ್ಷತಶ್ಚ ಪ್ರಾಙ್ಮುಖಂ ನಿರಭಿದ್ಯತ ೧೭

ಮುಖತಸ್ತಾಲು ನಿರ್ಭಿಣ್ಣಂ ಜಿಹ್ವಾ ತತ್ರೋಪಜಾಯತೇ
ತತೋ ನಾನಾರಸೋ ಜಜ್ಞೇ ಜಿಹ್ವಯಾ ಯೋಽಧಿಗಮ್ಯತೇ ೧೮

ವಿವಕ್ಷೋರ್ಮುಖತೋ ಭೂಮ್ನೋ ವಹ್ನಿರ್ವಾಗ್ ವ್ಯಾಹೃತಂ ತಯೋಃ
ಜಲೇ ವೈ ತಸ್ಯ ಸುಚಿರಂ ನಿರೋಧಃ ಸಮಜಾಯತ೧೯

ನಾಸಿಕೇ ನಿರಭಿದ್ಯೇತಾಂ ದೋಧೂಯತಿ ನಭಸ್ವತಿ
ತತ್ರ ವಾಯುರ್ಗಂಧವಹೋ ಘ್ರಾಣೋ ನಸಿ ಜಿಘೃಕ್ಷತಃ ೨೦

ಯದಾತ್ಮನಿ ನಿರಾಲೋಕ ಆತ್ಮಾನಂ ಚ ದಿದೃಕ್ಷತಃ
ನಿರ್ಭಿಣ್ಣೇ  ಅಕ್ಷಿಣೀ ತಸ್ಯ ಜ್ಯೋತಿಶ್ಚಕ್ಷುರ್ಗುಣಗ್ರಹಃ ೨೧

ಬೋಧ್ಯಮಾನಸ್ಯ ಋಷಿಭಿರಾತ್ಮನಸ್ತಜ್ಜಿಘೃಕ್ಷತಃ
ಕರ್ಣೌ ಚ ನಿರಭಿದ್ಯೇತಾಂ ದಿಶಃ ಶ್ರೋತ್ರಂ ಗುಣಗ್ರಹಃ ೨೨

ವಸ್ತುನೋ ಮೃದುಕಾಠಿನ್ಯ ಲಘುಗುರ್ವೋಷ್ಣಶೀತತಾಮ್
ಜಿಘೃಕ್ಷತಸ್ತ್ವಙ್ ನಿರ್ಭಿಣ್ಣಾ ತಸ್ಯಾಂ ರೋಮಮಹೀರುಹಾಃ
ತತ್ರ ಚಾಂತರ್ಬಹಿರ್ವಾತಸ್ತ್ವಚಾ ಲಬ್ಧಗುಣಾವೃತಃ ೨೩

ಹಸ್ತೌ ರುರುಹತುಸ್ತಸ್ಯ ನಾನಾಕರ್ಮಚಿಕೀರ್ಷಯಾ
ತಯೋಸ್ತು ಬಲವಾನಿಂದ್ರ ಆದಾನಮುಭಯಾಶ್ರಯಮ್೨೪
ಗತಿಂ ಚಿಕೀರ್ಷತಃ ಪಾದೌ ರುರುಹಾತೇSಭಿಕಾಮತಃ
ಪದ್ಭ್ಯಾಂ ಯಜ್ಞಃ ಸ್ವಯಂ ಹವ್ಯಂ ಕರ್ಮ ಯತ್  ಕ್ರಿಯತೇ ನೃಭಿಃ೨೫

ನಿರಭಿದ್ಯತ ಶಿಶ್ನೋ ವೈ ಪ್ರಜಾನಂದಾಮೃತಾರ್ಥಿನಃ
ಉಪಸ್ಥ ಆಸೀತ್ ಕಾಮಾನಾಂ ಪ್ರಿಯಂ ತದುಭಯಾಶ್ರಯಮ್೨೬

ಉತ್ಸಿಸೃಕ್ಷೋರ್ಧಾತುಮಲಂ ನಿರಭಿದ್ಯತ ವೈ ಗುದಮ್
ತತಃ ಪಾಯುಸ್ತತೋ ಮಿತ್ರ ಉತ್ಸರ್ಗ ಉಭಯಾಶ್ರಯಃ೨೭

ಆಸಿಸೃಕ್ಷೋ ಪುರಃ ಪುರ್ಯಾಂ ನಾಭಿದ್ವಾರಮಪಾವೃತಮ್  
ತತೋ ಪಾನಸ್ತತೋ ಮೃತ್ಯುಃ ಪೃಥಕ್ತ್ವಮುಭಯಾಶ್ರಯಮ್ ೨೮

ಆದಿತ್ಸೋರನ್ನಪಾನಾನಾಂ ಅಸೃಕ್ ಕುಕ್ಷ್ಯಂತ್ರನಾಡಿಕೇ
ನದ್ಯಃ ಸಮುದ್ರಾಶ್ಚ ತಯೋಸ್ತೃಪ್ತಿಃ ಪುಷ್ಟಿಸ್ತದಾಶ್ರಯೇ೨೯

ನಿದಿಧ್ಯಾಸೋರಾತ್ಮಮಾಯಾಂ ಹೃದಯಂ ನಿರಭಿದ್ಯತ
ತತೋ ಮನಶ್ಚಂದ್ರ ಇತಿ ಸಂಕಲ್ಪಃ ಕಾಮ ಏವ ಚ ೩೦

ತ್ವಕ್ಚರ್ಮಮಾಂಸರುಧಿರ ಮೇದೋಮಜ್ಜಾಸ್ಥಿಧಾತವಃ
ಭೂಮ್ಯಪ್ತೇಜೋಮಯಾಃ ಸಪ್ತ ಪ್ರಾಣೋ ವ್ಯೋಮಾಂಬುವಾಯುಭಿಃ ೩೧

ಗುಣಾತ್ಮಕಾನೀಂದ್ರಿಯಾಣಿ ಭೂತಾದಿಪ್ರಭವಾ ಗುಣಾಃ
ಮನಃ ಸರ್ವವಿಕಾರಾತ್ಮಾ ಬುದ್ಧಿರ್ವಿಜ್ಞಾನರೂಪಿಣೀ೩೨

ಯಾವ ರೀತಿ ಚತುರ್ಮುಖನ ಸೃಷ್ಟಿಯಾಯಿತು ಎನ್ನುವುದನ್ನು ಬಹಳ ವಿಚಿತ್ರವಾಗಿ ಇಲ್ಲಿ ವಿವರಿಸಿರುವುದನ್ನು ಕಾಣುತ್ತೇವೆ. ಭಗವಂತನ ರೇತಸ್ಸಿನಿಂದ, ಬ್ರಹ್ಮಾಂಡವೆಂಬ ಅಂಡದಲ್ಲಿ ಚತುರ್ಮುಖ ಬೆಳೆಯುತ್ತಿದ್ದಾನೆ. ಯಾವ ರೀತಿ ತಾಯಿಯ ಗರ್ಭದಲ್ಲಿ ಮಗು ಬೆಳೆಯುತ್ತದೋ ಹಾಗೆ ಚತುರ್ಮುಖ ಬ್ರಹ್ಮಾಂಡದಲ್ಲಿ ಬೆಳೆಯುತ್ತಿದ್ದಾನೆ. ಬಾಯಿ ಹುಟ್ಟಿತು ನಂತರ  ಹಸಿವೆ ಹುಟ್ಟಿತು.  ನಾಲಿಗೆ ಬಂತು. ಮಾತು ಹುಟ್ಟಿತು(ವಾಗ್ದೇವತೆ ಸರಸ್ವತಿ ಮತ್ತು ಅಧಿಷ್ಠಾನವಾಗಿ ಅಗ್ನಿಯ ಸೃಷ್ಟಿ). ಇದೇ ರೀತಿ ಮೂಗು, ಘ್ರಾಣೇಂದ್ರಿಯ, ಕಣ್ಣು, ಕಿವಿ, ಚರ್ಮ, ಹಸ್ತಗಳು, ಲಿಂಗ, ಪಾಯು, ಹೊಟ್ಟೆ, ಕರುಳು, ಹೃದಯ, ಮನಸ್ಸು, ಕಾಮ, ಸಂಕಲ್ಪ, ತ್ವಕ್, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ, ಶಬ್ದಾದಿ ಗುಣಗಳು, ಮನಸ್ಸು, ಬುದ್ಧಿಯ ಬೆಳವಣಿಗೆಯಾಯಿತು. ಮುಂದೆ ಲೋಕದಲ್ಲಿ ಯಾವ ರೀತಿ ಜೀವಿಗಳ ಸೃಷ್ಟಿ ಆಗಬೇಕೋ ಅದಕ್ಕೆ ಮಾದರಿಯಾಗಿ ಎಲ್ಲಾ ಅಂಗಾಂಗ ಮತ್ತು ಇಂದ್ರಿಯಗಳ ಸೃಷ್ಟಿ ಚತುರ್ಮುಖ ಬ್ರಹ್ಮನ ಶರೀರದಲ್ಲಾಯಿತು.

ಇಲ್ಲಿ  ಚತುರ್ಮುಖ ಮಲವಿಸರ್ಜನೆ ಮಾಡ ಬಯಸಿದಾಗ ಗುದ, ಪಾಯು ಮತ್ತು ಅದರ ಅಭಿಮಾನಿ ದೇವತೆ ಮಿತ್ರನಿಂದಾಗಿ ವಿಸರ್ಜನೆ ಕ್ರಿಯೆ ನಡೆಯಿತು ಎನ್ನುವ ವಿವರಣೆ ಬಂದಿದೆ(ಶ್ಲೋಕ ೨೭). ದಿವ್ಯ ಶರೀರಿಯಾದ ಚತುರ್ಮುಖನಲ್ಲಿ ನಿಸ್ಸಾರವಾದುದು ಯಾವುದೂ ಇಲ್ಲ. ಹೀಗಿರುವಾಗ ಆತನ ಶರೀರದಲ್ಲಿ ಪಾಯು ಇಂದ್ರಿಯದ ಸೃಷ್ಟಿ ಏಕೆ ಎನ್ನುವ ಪ್ರಶ್ನೆ ಇಲ್ಲಿ ನಮಗೆ ಬರುತ್ತದೆ. ಈ ಪ್ರಶ್ನೆಗೆ ಪ್ರಮಾಣ ಸಹಿತ ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ವಿವರಣೆ ನೀಡಿರುವುದನ್ನು ನಾವು ಕಾಣಬಹುದು. ಮಲಾದಿಕಂ ಕದಾಚಿತ್ ತು ಬ್ರಹ್ಮಾಲೋಕಾಭಿಪತ್ತಯೇ| ಆತ್ಮನೋ ನಿರ್ಮಮೇ ಕಾಮಾತ್ ಸರ್ವೇಷಾಮಭವತ್ ತತಃ| ವಶಿತ್ವಾತ್ ತಸ್ಯ ದಿವ್ಯಾತ್ವಾದಿಚ್ಛಯಾ ಭವತಿ ಪ್ರಭೋಃ  ಇತಿ ಚ  ವಿಸರ್ಜನೇಂದ್ರಿಯದ ಅಗತ್ಯ ಚತುರ್ಮುಖನಿಗಿಲ್ಲ. ಆದರೆ ಲೋಕದಲ್ಲಿ ಜೀವಿಗಳಿಗಿದೆ. ಒಟ್ಟಿನಲ್ಲಿ, ಮೇಲೆ ಹೇಳಿದಂತೆ: ಮುಂದೆ ಲೋಕದಲ್ಲಿ ಯಾವ ರೀತಿ ಜೀವಿಗಳ ಸೃಷ್ಟಿ ಆಗಬೇಕೋ ಅದಕ್ಕೆ ಮಾದರಿಯಾಗಿ ಚತುರ್ಮುಖ ಬ್ರಹ್ಮನ ಶರೀರ ನಿರ್ಮಾಣವಾಯಿತು.