Saturday, July 5, 2014

Shrimad BhAgavata in Kannada -Skandha-02-Ch-05(08)

ಅಹಂಕಾರತತ್ತ್ವದ ಸೃಷ್ಟಿ

ಮಹತಸ್ತು ವಿಕುರ್ವಾಣಾದ್ ರಜಸ್ಸತ್ವೋಪಬೃಂಹಿತಾತ್
ತಮಃಪ್ರಧಾನಸ್ತ್ವಭವದ್ ದ್ರವ್ಯಜ್ಞಾನಕ್ರಿಯಾತ್ಮಕಃ  ೨೩

ಸೋSಹಂಕಾರ ಇತಿ ಪ್ರೋಕ್ತೋ ವಿಕುರ್ವನ್ ಸಮಭೂತ್ ತ್ರಿಧಾ
ವೈಕಾರಿಕಸ್ತೈಜಸಶ್ಚ ತಾಮಸಶ್ಚೇತಿ ಯದ್ಭಿದಾ
ದ್ರವ್ಯಶಕ್ತಿಃ ಕ್ರಿಯಾಶಕ್ತಿರ್ಜ್ಞಾನಶಕ್ತಿರಿತಿ ಪ್ರಭೋ  ೨೪

ಮಹತತ್ತ್ವದ ವಿಕಸನವಾಗುತ್ತಾ ಅಹಂಕಾರ ತತ್ತ್ವದ(Awareness of self) ಸೃಷ್ಟಿಯಾಯಿತು. ಅಹಂಕಾರ ತತ್ತ್ವಕ್ಕೆ ಮೂರು ಮುಖಗಳು. ದ್ರವ್ಯ, ಕ್ರಿಯಾ ಮತ್ತು ಜ್ಞಾನ. ದ್ರವ್ಯ ಎಂದರೆ ಪಂಚಭೂತಗಳು, ಜ್ಞಾನ ಎಂದರೆ ಜ್ಞಾನೇಂದ್ರಿಯಗಳು ಮತ್ತು ಕರ್ಮ ಎಂದರೆ ಕರ್ಮೇಂದ್ರಿಯಗಳು. ಅಹಂಕಾರ ತತ್ತ್ವದ ಸೃಷ್ಟಿಯಿಂದಾಗಿ ಆ ಕಲ್ಪದಲ್ಲಿ ಸೃಷ್ಟಿಯಾಗಬೇಕಾಗಿರುವ ಎಲ್ಲಾ ಜೀವಗಳಿಗೆ ‘ನಾನು’ ಎನ್ನುವ ಎಚ್ಚರ ಜಾಗೃತವಾಯಿತು. ಈ ಸ್ಥಿತಿಯಲ್ಲಿ ಮನಸ್ಸಾಗಲೀ, ಇಂದ್ರಿಯಗಳಾಗಲೀ  ಇನ್ನೂ ಜಾಗೃತವಾಗಿಲ್ಲ. [ಹೇಗೆ ಗರ್ಭದಲ್ಲಿ  ಬ್ರೂಣ ಬೆಳೆಯುತ್ತದೋ ಹಾಗೇ ಈ ಸೃಷ್ಟಿ ಪ್ರಕ್ರಿಯೆ]. ಅಹಂಕಾರ ತತ್ತ್ವ ಮತ್ತೆ ಮೂರು ಮುಖದಲ್ಲಿ ಸೃಷ್ಟಿಯನ್ನು ವಿಸ್ತರಿಸಿತು. ಅವುಗಳೆಂದರೆ ವೈಕಾರಿಕ ಅಹಂಕಾರ, ತೈಜಸ ಅಹಂಕಾರ ಮತ್ತು ತಾಮಸ ಅಹಂಕಾರ [ಅಹಂಕಾರ ತತ್ತ್ವದ ವಿಸ್ತಾರವನ್ನು ಈ ಅಧ್ಯಾಯದ ೩೦  ಮತ್ತು ೩೧ನೇ ಶ್ಲೋಕದಲ್ಲಿ ವಿವರಿಸಿದ್ದು, ಅದನ್ನು ಸೃಷ್ಟಿಯ ವಿಸ್ತಾರದ ಕ್ರಮಾಂಕದಲ್ಲಿ ಇಲ್ಲೇ ವಿಶ್ಲೇಷಿಸಿ ಮುಂದೆ ಹೋಗೋಣ].
ಅಹಂಕಾರತತ್ತ್ವದ ಮೂರು ಮುಖಗಳಿಂದ ಸೃಷ್ಟಿಯ ವಿಸ್ತಾರ

ವೈಕಾರಿಕಾನ್ಮನೋ ಜಜ್ಞೇ ದೇವಾ ವೈಕಾರಿಕಾ ದಶ
ದಿಗ್ವಾತಾರ್ಕಪ್ರಚೇತೋSಶ್ವಿವಹ್ನೀಂದ್ರೋಪೇಂದ್ರಮಿತ್ರಕಾಃ  ೩೦

ತೈಜಸಾತ್ತು ವಿಕುರ್ವಾಣಾದಿಂದ್ರಿಯಾಣಿ ದಶಾಭವನ್
ಜ್ಞಾನಶಕ್ತಿಃ ಕ್ರಿಯಾಶಕ್ತಿರ್ಬುದ್ಧಿಃ ಪ್ರಾಣಶ್ಚತೈಜಸೌ  ೩೧

ವೈಕಾರಿಕ ಅಹಂಕಾರ ಎಂದರೆ  ಸಾತ್ತ್ವಿಕ ಅಹಂಕಾರ. ಇದು ವಿವಿಧಕಾರಕ ಸೃಷ್ಟಿ.  ಅಂದರೆ ವಿವಿಧ ಕ್ರಿಯಾಕಾರಕರಾಗಿರುವ  ಮನಸ್ಸು ಮತ್ತು ಹತ್ತು ಇಂದ್ರಿಯಾಭಿಮಾನಿ ದೇವತೆಗಳ(ವೈಕಾರಿಕರ) ಸೃಷ್ಟಿ.  ವೈಕಾರಿಕ ಅಹಂಕಾರದ ಸೃಷ್ಟಿಯಿಂದಾಗಿ ಆ ಕಲ್ಪದಲ್ಲಿ ಸೃಷ್ಟಿಯಾಗಬೇಕಾಗಿರುವ ಎಲ್ಲಾ ಜೀವಗಳ ಲಿಂಗ ಶರೀರದಲ್ಲಿ ಸುಪ್ತವಾಗಿದ್ದ ಮನೋಮಯಕೋಶ ಜಾಗೃತವಾಗಿ ಜೀವಗಳಲ್ಲಿ ಮನಸ್ಸು ಕೆಲಸ ಮಾಡಲು ಪ್ರಾರಂಭಿಸಿತು. ಮಹಾತತ್ತ್ವದ(ಚಿತ್ತದ) ದೇವತೆಗಳು ಬ್ರಹ್ಮ ಮತ್ತು ವಾಯು(ಪ್ರಾಣ)ವಾದರೆ ಗರುಡ-ಶೇಷ-ರುದ್ರರು ಮನೋಭಿಮಾನಿ ದೇವತೆಗಳು. ಆದರೆ ಶಿವ ವಿಶೇಷವಾಗಿ ಮನೋಭಿಮಾನಿ.  ಮಹತತ್ತ್ವದಲ್ಲಿ ಭಗವಂತ ವಾಸುದೇವ ರೂಪದಲ್ಲಿದ್ದಾನೆ. ಅಹಂಕಾರ ತತ್ತ್ವದಲ್ಲಿ ಭಗವಂತ ಸಂಕರ್ಷಣ ರೂಪದಲ್ಲಿದ್ದಾನೆ. ಬುದ್ಧಿಯಲ್ಲಿ ಪ್ರದ್ಯುಮ್ನರೂಪಿ ಭಗವಂತನಿದ್ದರೆ, ಮನಸ್ಸಿನಲ್ಲಿ ಅನಿರುದ್ಧರೂಪದಲ್ಲಿ ಭಗವಂತನಿದ್ದಾನೆ. ಅಹಂಕಾರತತ್ತ್ವದಲ್ಲಿ ಸಂಕರ್ಷಣ ರೂಪಿ ಭಗವಂತನಿರುವುದರಿಂದ ಶೇಷನನ್ನೂ ಅದರ ಅಭಿಮಾನಿ ದೇವತೆ ಎಂದು ಶಾಸ್ತ್ರಕಾರರು ಹೇಳುತ್ತಾರೆ.
ಸಾತ್ತ್ವಿಕ ಅಹಂಕಾರ ನಿಯಾಮಕನಾದ ಶಿವನಿಂದ ಮನಸ್ಸು ಮತ್ತು ಹತ್ತು ಇಂದ್ರಿಯಾಭಿಮಾನಿ ದೇವತೆಗಳ ಸೃಷ್ಟಿಯಾಯಿತು. (೧) ಕಿವಿಯ ಅಭಿಮಾನಿಯರು ದಿಗ್ಧೇವತೆಗಳು. [ಪೂರ್ವದಿಕ್ಕಿಗೆ ಮಿತ್ರ, ಪಶ್ಚಿಮದಿಕ್ಕಿಗೆ    ವರುಣ, ಉತ್ತರ ದಿಕ್ಕಿಗೆ ಕುಬೇರ ಮತ್ತು ದಕ್ಷಿಣ ದಿಕ್ಕಿಗೆ ಯಮ ಅಭಿಮಾನಿ ದೇವತೆಗಳು. ಇವರೆಲ್ಲರ ಮುಖಂಡ ಹಾಗೂ  ಶೋತ್ರಾಭಿಮಾನಿ ಸೋಮ(ಚಂದ್ರ)]. (೨) ಸ್ಪರ್ಶದ ದೇವತೆ ವಾಯು. ಇಲ್ಲಿ ವಾಯು ಎಂದರೆ ಪ್ರಧಾನ ವಾಯು(ಪ್ರಾಣ) ಅಲ್ಲ. ಸ್ಪರ್ಶ ಶಕ್ತಿಯನ್ನು ಕೊಡುವವನು ಅಹಂಪ್ರಾಣ. (೩) ಕಣ್ಣಿನ ದೇವತೆ ಅರ್ಕ(ಸೂರ್ಯ). (೪)ನಾಲಿಗೆ ಅಥವಾ ರಸದ ಅಭಿಮಾನಿ ದೇವತೆ ಪ್ರಚೇತ(ವರುಣ). (೫) ಮೂಗಿನ ಅಥವಾ ಗಂಧದ ಅಭಿಮಾನಿ ದೇವತೆ ಆಶ್ವೀದೇವತೆಗಳು. (೬) ಬಾಯಿ ಅಥವಾ ವಾಗೀನ್ದ್ರಿಯದ ದೇವತೆ ವಹ್ನಿ(ಅಗ್ನಿ). (೭) ಕೈಯ ಅಭಿಮಾನಿ ದೇವತೆ ಇಂದ್ರ. (೮) ಕಾಲಿನ ಅಭಿಮಾನಿ ದೇವತೆಯಾಗಿ ಸ್ವಯಂ ಭಗವಂತನೇ ಉಪೇಂದ್ರನಾಗಿ ಶಿವನಿಂದ ಹುಟ್ಟಿದ. ಇಂದ್ರ ಪುತ್ರ ಜಯಂತ ಕೂಡಾ ಕಾಲಿನ ಅಭಿಮಾನಿ ದೇವತೆ. (೯) ದೇಹಕ್ಕೆ ಬೇಡವಾದುದನ್ನು ಹೊರ ಹಾಕುವ ಪಾಯುವಿನ ಅಭಿಮಾನಿ ಮಿತ್ರ ಹಾಗೂ (೧೦) ಮೂತ್ರ ಮತ್ತು ರೇತಸ್ಸಿನ ವಿಸರ್ಜನೆ ಹಾಗೂ ರೇತಸ್ಸಿನ ಸ್ವೀಕಾರದ ಜನನೇಂದ್ರಿಯದ ಅಭಿಮಾನಿ ಸಂತಾನ ದೇವತೆಯಾದ ದಕ್ಷಪ್ರಜಾಪತಿ.   ಹೀಗೆ ಹತ್ತು ಮಂದಿ ಅಭಿಮಾನಿ ದೇವತೆಗಳು ವೈಕಾರಿಕ ಅಹಂಕಾರದಿಂದ ಸೃಷ್ಟಿಯಾದರು.
ತಾಮಸಾದಪಿ ಭೂತಾದೇರ್ವಿಕುರ್ವಾಣಾದಭೂನ್ನಭಃ
ತಸ್ಯ ಮಾತ್ರಾಗುಣಃ ಶಬ್ದೋ ಲಿಂಗಂ ಯದ್ ದ್ರಷ್ಟೃದೃಶ್ಯಯೋಃ  ೨೫

ತೈಜಸ ಅಹಂಕಾರದಿಂದ ಹತ್ತು ಇಂದ್ರಿಯಗಳು ಜಾಗೃತಗೊಂಡವು  ಹೀಗೆ ಮುಂದೆ ನಿರ್ಮಾಣವಾಗುವ ಬ್ರಹ್ಮಾಂಡದಲ್ಲಿ ಹುಟ್ಟಿಬರುವ ಜೀವಗಳ ಚಿತ್ತ, ಮನಸ್ಸು, ಅಹಂಕಾರ, ಪಂಚಜ್ಞಾನೇಂದ್ರಿಯಗಳು ಮತ್ತು ಪಂಚ ಕರ್ಮೇಂದ್ರಿಯಗಳು ಜಾಗೃತಗೊಂಡವು. ತಾಮಸ ಅಹಂಕಾರದಿಂದ ಪಂಚಭೂತಗಳ ಸೃಷ್ಟಿಯಾಯಿತು. ಪಂಚಭೂತಗಳಲ್ಲಿ ಮೊದಲು ಆಕಾಶದ ಸೃಷ್ಟಿಯಾಯಿತು.
ಇಲ್ಲಿ ನಮಗೆ ಒಂದು ಪ್ರಶ್ನೆ ಕಾಡಬಹುದು. ಅದೇನೆಂದರೆ ಪಂಚಭೂತಗಳ ಸೃಷ್ಟಿಯಲ್ಲಿ ಆಕಾಶದ ಸೃಷ್ಟಿ ಅಂದರೇನು? ಎಂದು. ಮೂಲತಃ  ಆಕಾಶದ ಸೃಷ್ಟಿ ವಾಸ್ತವ ಅಲ್ಲ ಇದು ಸಾಪೇಕ್ಷವಾಗಿ. ಅಂತರಿಕ್ಷ (Space) ಮೊದಲೇ ಇತ್ತು. ಅದರಲ್ಲಿ ಭಗವಂತ ತನ್ನ ರೂಪವನ್ನು ಆವಿರ್ಭಾವ ಗೊಳಿಸುವುದೇ ಆಕಾಶದ ಸೃಷ್ಟಿ. ಬಣ್ಣವಿಲ್ಲದ ಅಂತರಿಕ್ಷದಲ್ಲಿ  ಕಣ್ಣಿಗೆ ಕಾಣದ ನೀಲ ವರ್ಣದ(Ultraviolet)’ ಆಕಾಶ ಸೃಷ್ಟಿಯಾಯಿತು. (ಇತ್ತೀಚೆಗೆ ವಿಜ್ಞಾನ ಕಂಡುಕೊಂಡ Ultraviolet ವಿಷಯವನ್ನು  ಹದಿಮೂರನೇ ಶತಮಾನದಲ್ಲೇ ಆಚಾರ್ಯ ಮಧ್ವರು ವಿವರಿಸಿ ಹೇಳಿರುವುದನ್ನು ಓದುಗರು ಗಮನಿಸಬೇಕು. Space is not created but Ether is created).  ಆಕಾಶದ ಸೃಷ್ಟಿಯೊಂದಿಗೆ ಆಕಾಶದ ಅಸಾಧಾರಣ ಗುಣವಾದ(Exclusive quality) ಶಬ್ದದ ಸೃಷ್ಟಿಯಾಯಿತು. ಅಂದರೆ ಈ ಕಲ್ಪದಲ್ಲಿ ಸೃಷ್ಟಿಯಾಗಬೇಕಾಗಿರುವ ಜೀವಜಾತಗಳಿಗೆ ನಾದದ ಅನುಭವ ಪ್ರಾರಂಭವಾಯಿತು.