Thursday, January 30, 2014

Shrimad BhAgavata in Kannada -Skandha-02-Ch-02(16)

ಮಹರ್ಲೋಕದಿಂದ ಸತ್ಯಲೋಕದ ತನಕ ಇರುವ ಜೀವನ್ಮುಕ್ತರು  ಯಾವಯಾವ ಸ್ಥಿತಿಯಲ್ಲಿ ಹೋಗಿ ಭಗವಂತನನ್ನು ನೋಡುತ್ತಾರೆ ಎನ್ನುವುದನ್ನು ಶುಕಾಚಾರ್ಯರು ಮುಂದೆ ವಿವರಿಸುವುದನ್ನು ಕಾಣುತ್ತೇವೆ.

ತತೋ ವಿಶೇಷಂ ಪ್ರತಿಪದ್ಯ ನಿರ್ಭಯಸ್ತೇನಾತ್ಮನಾSಪೋSನಲಮೂರ್ಧ್ನಿಚ ತ್ವರನ್
ಜ್ಯೋತಿರ್ಮಯೋ ವಾಯುಮುಪೇತ್ಯ ಕಾಲೇ ವಾಯ್ವಾತ್ಮನಾ ಖಂ ಬೃಹದಾತ್ಮಲಿಂಗಮ್ ೩೧

“ಮೋಕ್ಷ ಮಾರ್ಗದಲ್ಲಿ ಜೀವ ಮೊದಲು ‘ವಿಶೇಷ’ವನ್ನು ಹೋಗಿ ಸೇರುತ್ತಾನೆ” ಎಂದಿದ್ದಾರೆ ಶುಕಾಚಾರ್ಯರು.  ಈ ಹಿಂದೆ ಹೇಳಿದಂತೆ(ಎರಡನೇ ಸ್ಕಂಧದ ಮೊದಲ ಅಧ್ಯಾಯದ ೨೪ನೇ ಶ್ಲೋಕದಲ್ಲಿ): ಪಂಚಭೂತಗಳಲ್ಲಿ ಶಬ್ದ-ಸ್ಪರ್ಶ-ರೂಪ-ರಸ-ಗಂಧ ಈ ಎಲ್ಲಾ ಗುಣಗಳು ಎಲ್ಲಿ ಸಮಾವೇಶಗೋಳ್ಳುತ್ತವೋ ಅದು ‘ವಿಶೇಷ’. ಅಂದರೆ: ಪಂಚಭೂತಗಳಲ್ಲಿ ಅತ್ಯಂತ ಸ್ಥೂಲವಾದ ಮಣ್ಣಿನಲ್ಲಿ  ಸನ್ನಿಹಿತನಾದ ಭಗವಂತನ ಅನಿರುದ್ಧ ರೂಪ ‘ವಿಶೇಷ’. ಅನಿರುದ್ಧನಿಗೆ ಎರಡು ರೂಪಗಳು. ಒಂದು ಪ್ರಥ್ವಿಗತವಾದ ರೂಪ ಹಾಗೂ ಇನ್ನೊಂದು ನೀರಿನಲ್ಲಿರುವ ರೂಪ. ಈ ಹಿಂದೆ ಒಂದನೇ ಸ್ಕಂಧದಲ್ಲಿ ವಿವರಿಸಿದಂತೆ(ಲಯ ಚಿಂತನೆ ೧-೫-೧೦) ಎಲ್ಲಾ ದೇವತೆಗಳು ಬ್ರಹ್ಮ ದೇವರಲ್ಲಿ ಹೋಗಿ ಸೇರುತ್ತಾರೆ. ಇಂತಹ  ಬ್ರಹ್ಮದೇವರ ಜೊತೆಗೆ ಜೀವರು ಮೋಕ್ಷ ಮಾರ್ಗದಲ್ಲಿ ಮುಂದೆ ಸಾಗುತ್ತಿರುತ್ತಾರೆ. ಹೀಗೆ ಸಾಗುವಾಗ ಮೊದಲು ಸಿಗುವಂತಹದ್ದು ಅನ್ನಮಯರೂಪನಾದ ಭಗವಂತನ ಅನಿರುದ್ಧ ರೂಪ. ಈ ಅನ್ನಮಯರೂಪನಾದ ಭಗವಂತನೊಂದಿಗೆ ಕೂಡಿಕೊಂಡು ಜೀವ ಮುಂದೆ ನೀರಿನಲ್ಲಿರುವ ಭಗವಂತನ ರೂಪವನ್ನು ಸೇರುತ್ತಾನೆ. ಪ್ರಥಿವಿಯಲ್ಲಿರುವ ಭಗವಂತನ ರೂಪ ಜಲದಲ್ಲಿರುವ ಭಗವಂತನ ರೂಪದಲ್ಲಿ ಐಕ್ಯವಾಗುತ್ತದೆ.  ಜಲದಲ್ಲಿರುವ ಭಗವಂತನ ರೂಪದಿಂದ ಮುಂದೆ ಹೋದಾಗ ಅಗ್ನಿಯಲ್ಲಿರುವ ಪ್ರಾಣಮಯ ರೂಪ ಕಾಣುತ್ತದೆ. ಇದು ಭಗವಂತನ ಪ್ರದ್ಯುಮ್ನರೂಪ. ಈ ಪ್ರದ್ಯುಮ್ನನಿಗೆ ಮೂರು ರೂಪಗಳು. ಅಗ್ನಿಯಲ್ಲಿರುವ ಪ್ರಾಣಮಯರೂಪ, ಗಾಳಿಯಲ್ಲಿರುವ ಪ್ರಾಣಮಯರೂಪ ಮತ್ತು ಆಕಾಶದಲ್ಲಿರುವ ಪ್ರಾಣಮಯ ರೂಪ.  ಅಗ್ನಿಯಲ್ಲಿರುವ ಭಗವಂತನ ಪ್ರಾಣಮಯ ರೂಪದೊಂದಿಗೆ ಮುನ್ನೆಡೆಯುವ ಜೀವ, ಕ್ರಮವಾಗಿ ಗಾಳಿಯಲ್ಲಿರುವ ಪ್ರಾಣಮಯ ರೂಪ ಮತ್ತು ಆಕಾಶದಲ್ಲಿರುವ ಪ್ರಾಣಮಯ-ಪ್ರದ್ಯುಮ್ನರೂಪದಲ್ಲಿ ಲಯಹೊಂದಿ ಮುಂದೆ ಸಾಗುತ್ತಾನೆ.

ಘ್ರಾಣೇನ ಗಂಧಂ ರಸನೇನ ವೈ ರಸಂ ರೂಪಂ ತು ಚ ದೃಷ್ಟ್ಯಾ ಸ್ಪರ್ಶಂ ತ್ವಚೈವ
ಶ್ರೋತ್ರೇಣ ಚೋಪೇತ್ಯ ನಭೋಗುಣಂ ತತ್  ಪ್ರಾಯೇಣ ನಾವೃತ್ತಿಮುಪೈತಿ ಯೋಗೀ ೩೨

ಹೀಗೆ ಪಂಚಭೂತಗಳಲ್ಲಿ ನಿಯಾಮಕನಾದ ಭಗವಂತನ ಒಂದು ರೂಪ ಇನ್ನೊಂದು ರೂಪದಲ್ಲಿ ಐಕ್ಯಹೊಂದಿ ಮುಂದೆ ಸಾಗುವಾಗ, ಸಮನಾಂತರವಾಗಿ ಏನಾಗುತ್ತದೆ ಎನ್ನುವುದನ್ನು ಶುಕಾಚಾರ್ಯರು ಈ ಶ್ಲೋಕದಲ್ಲಿ ವಿವರಿಸಿದ್ದಾರೆ. ಜೀವ ಪ್ರಥಿವೀಯಲ್ಲಿರುವ ಭಗವಂತನನ್ನು ಸೇರಿದಾಗ ಅಲ್ಲಿ ಗಂಧ ನಿಯಾಮಕ ಭಗವಂತ ‘ವಿಶೇಷ’ನೊಂದಿಗೆ ಸೇರುತ್ತಾನೆ.  ನಂತರ ನೀರಿನಲ್ಲಿರುವ ಭಗವಂತನನ್ನು ಸೇರಿದಾಗ ಅಲ್ಲಿ ನೀರಿನ ಗುಣವಾದ ರಸನಿಯಾಮಕ ಭಗವಂತ ಐಕ್ಯನಾಗುತ್ತಾನೆ.  ಮುಂದೆ ಅಗ್ನಿಯಲ್ಲಿರುವ ಭಗವಂತನ ಪ್ರಾಣಮಯ ರೂಪವನ್ನು ಸೇರಿದಾಗ ಅಲ್ಲಿ ರೂಪ ನಿಯಾಮಕನಾದ ಭಗವಂತ ಐಕ್ಯನಾಗುತ್ತಾನೆ, ನಂತರ ಗಾಳಿಯಲ್ಲಿರುವ ಭಗವಂತನ ಪ್ರಾಣಮಯ ರೂಪವನ್ನು ಸೇರಿದಾಗ ಅಲ್ಲಿ ಸ್ಪರ್ಶ ನಿಯಾಮಕನಾದ ಭಗವಂತ ಐಕ್ಯನಾಗುತ್ತಾನೆ. ಮುಂದೆ  ಆಕಾಶದಲ್ಲಿರುವ ಭಗವಂತನ ಪ್ರಾಣಮಯ ರೂಪವನ್ನು ಸೇರಿದಾಗ ಅಲ್ಲಿ ಶಬ್ದನಿಯಾಮಕ ಭಗವಂತನ ರೂಪ ಐಕ್ಯವಾಗುತ್ತದೆ. ಹೀಗೆ ಪಂಚಭೂತಗಳನ್ನು ದಾಟಿ, ಪಂಚಭೂತಗಳಲ್ಲಿ ಇರತಕ್ಕಂತಹ ಪಂಚತನ್ಮಾತ್ರೆಗಳಲ್ಲಿರುವ ಭಗವಂತ ಹಾಗೂ  ಪಂಚಜ್ಞಾನೇಂದ್ರಿಯಗಳಲ್ಲಿ ಇರತಕ್ಕಂತಹ ಭಗವಂತ ಎಕೀಭೂತನಾಗಿ, ಅವನೊಂದಿಗೆ  ಆಕಾಶಗತನಾದ ಭಗವಂತನ ತನಕ ಹೋದ ಜೀವ ಪ್ರಾಯಃ ಮರಳಿ ಬರುವುದಿಲ್ಲ.
ಇಲ್ಲಿ “ಪ್ರಾಯಃ ಮರಳಿ ಬರುವುದಿಲ್ಲ” ಎಂದಿದ್ದಾರೆ ಶುಕಾಚಾರ್ಯರು. ಏಕೆ ಹೀಗೆ ಹೇಳಿದ್ದಾರೆ ಎಂದರೆ: ನಮಗೆ ತಿಳಿದಂತೆ ಜೀವದ ಜೊತೆಗೆ ಪ್ರಾಣ-ಭಾರತಿಯರು, ಶಿವ-ಪಾರ್ವತಿಯರು ಎಲ್ಲರೂ ಇರುತ್ತಾರೆ. ಇವರೆಲ್ಲರೂ ಮರಳಿ ಬರುತ್ತಾರೆ. ಏಕೆಂದರೆ ಮುಂದಿನ ಕಲ್ಪದಲ್ಲಿ ಪ್ರಾಣ ದೇವರು ಬ್ರಹ್ಮಪದವಿಯನ್ನೂ, ಶಿವ ಶೇಷ ಪದವಿಯನ್ನು ಅಲಂಕರಿಸಿ  ಭಗವಂತನ ಸೃಷ್ಟಿ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಇಂಥಹ ಹೊಣೆಗಾರಿಕೆ ಉಳ್ಳವರನ್ನು ಬಿಟ್ಟರೆ ಉಳಿದವರು ಯಾರೂ ಇಲ್ಲಿಯ ತನಕ ಹೋಗಿ ಮರಳಿ ಬರುವ ಪ್ರಶ್ನೆ ಇಲ್ಲ.

ಈ ಶ್ಲೋಕದಲ್ಲಿನ ಇನ್ನೊಂದು ಮುಖವನ್ನು ನೋಡಿದರೆ: ಈ ಸ್ಥಿತಿಯಲ್ಲಿ ಜೀವ ಅನ್ನಮಯಕೋಶ ಮತ್ತು ಪ್ರಾಣಮಯಕೋಶವನ್ನು ಕಳಚಿಕೊಳ್ಳುತ್ತಾನೆ. ಹಾಗಾಗಿ ಆತ ತನ್ನೆಲ್ಲಾ ಇಂದ್ರಿಯಗಳಿಂದ ಕಳಚಿಕೊಂಡು ನೇರವಾಗಿ ಸ್ವರೂಪಭೂತವಾದ ಇಂದ್ರಿಯಗಳಿಂದ ಎಲ್ಲವನ್ನೂ ಗ್ರಹಿಸುವಂತಾಗುತ್ತದೆ. ಹಾಗಾಗಿ ಈ ಹಂತದಲ್ಲಿ ಜೀವನಿಗೆ ಸ್ವರೂಪದಿಂದಲೇ ಎಲ್ಲಾ ವಿಷಯಾನುಭವಗಳಾಗುತ್ತವೆ.     

Tuesday, January 14, 2014

Shrimad BhAgavata in Kannada -Skandha-02-Ch-02(15)

ನ ಯತ್ರ ಶೋಕೋ ನ ಜರಾ ನ ಮೃತ್ಯುರ್ನಾಧಿರ್ನ ಚೋದ್ವೇಗ ಋತೇ ಕುತಶ್ಚಿತ್
ಯಶ್ಚಿತ್ತತೋದಃ ಕ್ರಿಯಯಾSನಿದಂವಿದಾಂ ದುರಂತದುಃಖಪ್ರಭವಾನುದರ್ಶನಾತ್ ೩೦

ಇಲ್ಲಿ ಶುಕಾಚಾರ್ಯರು ಸತ್ಯಲೋಕದ ವರ್ಣನೆ ಮಾಡಿರುವುದನ್ನು ಕಾಣುತ್ತೇವೆ. ಸತ್ಯಲೋಕವನ್ನು ‘ದ್ವೈಪರಾರ್ಧ್ಯಂ’ ಎನ್ನುತ್ತಾರೆ. ಅಂದರೆ ಪರಕಾಲದಷ್ಟು ಆಯುಸ್ಸು ಇರುವ ಲೋಕ ಎಂದರ್ಥ. ಈ ಶ್ಲೋಕದಲ್ಲಿ  ಸತ್ಯಲೋಕವನ್ನು ‘ಋತಲೋಕ’ ಎಂದು ಕರೆದಿದ್ದಾರೆ. [ಸತ್ಯ ಮತ್ತು ಋತ ಈ ಎರಡು ಪದಗಳನ್ನು ಒಟ್ಟಿಗೆ ಪ್ರಯೋಗ ಮಾಡಿದಾಗ ಋತ ಅಂದರೆ ಯಥಾರ್ಥದ ಅರಿವು, ಸತ್ಯ ಎಂದರೆ  ಅರಿತ ಯಥಾರ್ಥದ ನಡೆ-ನುಡಿ ಎನ್ನುವ ಬೇರೆಬೇರೆ ಅರ್ಥವನ್ನು ಕೊಟ್ಟರೂ ಕೂಡಾ, ಇನ್ನೊಂದು ರೀತಿಯಲ್ಲಿ ಋತ ಎನ್ನುವುದು ಸತ್ಯದ ಪರ್ಯಾಯ ಶಬ್ದ. ಹೀಗಾಗಿ ಇಲ್ಲಿ ಋತಲೋಕ ಎಂದರೆ ಸತ್ಯಲೋಕ].
ಸೃಷ್ಟಿಯಾದ ಲೋಕಗಳಲ್ಲಿ ಮೋಕ್ಷಕ್ಕೆ ಅತ್ಯಂತ ಸದೃಶವಾದ ಲೋಕವೆಂದರೆ ಅದು ಸತ್ಯಲೋಕ. ಇಂತಹ ಸತ್ಯಲೋಕದಲ್ಲಿ ಇರತಕ್ಕಂತಹ ಜೀವಗಳಿಗೆ ದುಃಖವಿಲ್ಲ, ಮುಪ್ಪಿಲ್ಲ, ರೋಗ-ರುಜಿನಗಳಿಲ್ಲ. ಅತೃಪ್ತಿಯ ಭಾವನೆ ಇಲ್ಲ, ಉದ್ವೇಗವಿಲ್ಲ ಮತ್ತು ಸಾವಿಲ್ಲ. [ಇಲ್ಲಿ ಸಾವಿಲ್ಲ ಎನ್ನುವುದು ಸಾಪೇಕ್ಷ. ಏಕೆಂದರೆ ೩೧ ಸಾವಿರದ ೧೦೪ ಸಾವಿರ ಕೋಟಿ ವರ್ಷಗಳ ನಂತರ ಸತ್ಯಲೋಕ ಕೂಡಾ ನಾಶವಾಗುತ್ತದೆ ಮತ್ತು ಸತ್ಯಲೋಕದಿಂದ ಜೀವಗಳು ತಮ್ಮ ಲಿಂಗ ಶರೀರವನ್ನು ತ್ಯಜಿಸಿ ಮೋಕ್ಷವನ್ನು ಸೇರುತ್ತವೆ]. ಸ್ವರ್ಗದಿಂದಾಚೆಗಿನ ಎಲ್ಲಾ ಲೋಕಗಳಲ್ಲಿಯೂ ಈ ಸ್ಥಿತಿ ಇದ್ದರೂ ಕೂಡಾ, ಇವೆಲ್ಲವುದರ ಪರಾಕಾಷ್ಠೆ ಸತ್ಯಲೋಕದಲ್ಲಿರುತ್ತದೆ. ಇಂತಹ ಸತ್ಯಲೋಕದಲ್ಲಿ ಜೀವನ್ಮುಕ್ತರು ಪರಕಾಲದ ಕೊನೆಯ ತನಕ ಇದ್ದು, ನಂತರ  ಮಹಾಪ್ರಳಯದ ಕಾಲದಲ್ಲಿ ಚತುರ್ಮುಖನೊಂದಿಗೆ ಮೋಕ್ಷದಲ್ಲಿ ಭಗವಂತನನ್ನು ಹೋಗಿ ಸೇರುತ್ತಾರೆ.
ಸತ್ಯಲೋಕದಲ್ಲಿಲ್ಲದ ಮಾನಸಿಕ ಉದ್ವೇಗವನ್ನು ನಾವು ಲೌಕಿಕವಾಗಿ ದಿನನಿತ್ಯ ಅನುಭವಿಸುತ್ತೇವೆ. ನಮ್ಮ ಮನಸ್ಸಿನಲ್ಲಿ ಅತೃಪ್ತಿ  ಮನೆ ಮಾಡಿರುತ್ತದೆ. ಇದಕ್ಕೆ ಮುಖ್ಯ ಕಾರಣ ಭಗವಂತನ ಅರಿವಿಲ್ಲದೇ ಇರುವ ಅಜ್ಞಾನ. ಏನನ್ನೋ ಗಳಿಸಬೇಕು  ಎಂದು ಏನೇನನ್ನೋ ಮಾಡಿ, ಸುಖವನ್ನರಸುತ್ತಾ, ದುಃಖದತ್ತ ಪಯಣಿಸುತ್ತಿರುತ್ತೇವೆ ನಾವು!  ಸುಖದ ಮೂಲ ಭಗವಂತ ಎನ್ನುವ ಸತ್ಯವನ್ನು ಅರಿಯದೇ ಇರುವುದೇ ನಮ್ಮೆಲ್ಲಾ ದುಃಖಗಳಿಗೆ ಮೂಲಕಾರಣ. ಆದರೆ ಸತ್ಯಲೋಕವನ್ನು ಸೇರುವ ಜೀವನ್ಮುಕ್ತ- ‘ಭಗವಂತನೊಬ್ಬನೇ ನಿತ್ಯಸತ್ಯ’ ಎನ್ನುವುದನ್ನು ಅರಿತು, ಪ್ರತಿಯೊಂದು ಕ್ಷಣವೂ ಆನಂದದ ಕಡಲಲ್ಲಿ ತೇಲಾಡುತ್ತಿರುತ್ತಾನೆ. ಅವನಿಗೆ ಯಾವ ಮಾನಸಿಕ ಗೊಂದಲ-ಉದ್ವೇಗಳೂ ಇರುವುದಿಲ್ಲ.

ಮಹರ್ಲೋಕದಿಂದ ಸತ್ಯಲೋಕದ ತನಕ ಇರುವ ಜೀವನ್ಮುಕ್ತರು  ಯಾವಯಾವ ಸ್ಥಿತಿಯಲ್ಲಿ ಹೋಗಿ ಭಗವಂತನನ್ನು ನೋಡುತ್ತಾರೆ ಎನ್ನುವುದನ್ನು ಶುಕಾಚಾರ್ಯರು ಮುಂದೆ ವಿವರಿಸುವುದನ್ನು ಕಾಣುತ್ತೇವೆ.

Sunday, January 5, 2014

Shrimad BhAgavata in Kannada -Skandha-02-Ch-02(14)

ಯೋSoತಃ ಪಚತಿ ಭೂತಾನಾಂ ಯಸ್ತಪತ್ಯಂಡಮಧ್ಯಗಃ
ಸೋSಗ್ನಿ ರ್ವೈಶ್ವಾನರೋ ಮಾರ್ಗೋ ದೇವಾನಾಂ ಪಿತೃಣಾಂ ಮುನೇಃ ೨೬

ಮೇಲೆ ವಿವರಿಸಿರುವ ವೈಶ್ವಾನರ ಲೋಕದ ಕುರಿತು ಈ ಶ್ಲೋಕದಲ್ಲಿ ವಿವರಿಸಲಾಗಿದೆ. ಪ್ರತಿಯೊಬ್ಬ ಜೀವನೊಳಗಿದ್ದು ಆತ ಸೇವಿಸಿದ ಆಹಾರವನ್ನು ಪಚನ ಮಾಡಿ, ಅವನ ಜೀವನ ನಿರ್ವಹಣೆಗೆ ಸಹಾಯವಾಗಿರುವ ವೈಶ್ವಾನರನೇ ಈ ಬ್ರಹ್ಮಾಂಡ ಮಧ್ಯದಲ್ಲಿ ಬೆಳಕಾಗಿ ನಿಂತಿದ್ದಾನೆ. ದೇವಯಾನದಲ್ಲಿ ಹೋಗುವವರು, ಪಿತೃಯಾನದಲ್ಲಿ ಹೋಗುವವರು,  ಬ್ರಹ್ಮಯಾನದಲ್ಲಿ ಹೋಗುವವರು, ಎಲ್ಲರೂ ಈ ವೈಶ್ವಾನರ ಲೋಕಕ್ಕೆ ಹೋಗಿಯೇ ಮೋಕ್ಷವನ್ನು ಸೇರಬೇಕು. ಆದ್ದರಿಂದ ಮೋಕ್ಷ ಮಾರ್ಗದಲ್ಲಿ ವೈಶ್ವಾನರಲೋಕ ಬಹಳ ಮುಖ್ಯವಾದ ತಾಣ(Station). 
  
ದೇವಯಾನಂ ಪಿಂಗಲಾಭಿರಹಾ ನ್ಯೇತಿ ಶತಾಯುಷಾ
ರಾತ್ರೀರಿಡಾಭಿಃ ಪಿತೃಣಾಂ ವಿಷುವತ್ತಾಂ ಸುಷುಮ್ನಯಾ ೨೭
  
ಈ ಶ್ಲೋಕ ಇಂದಿನ ಹೆಚ್ಚಿನ ಪುಸ್ತಕಗಳಲ್ಲಿ ಬಿಟ್ಟು ಹೋಗಿದೆ. ಮೇಲ್ನೋಟಕ್ಕೆ ಯಾವ ಅರ್ಥವನ್ನೂ ಸರಿಯಾಗಿ ಈ ಶ್ಲೋಕ  ಹೇಳದೇ ಇರುವುದೇ ಇದಕ್ಕೆ ಕಾರಣವಾಗಿರಬಹುದು.  ಸಂಸ್ಕೃತದ ಮೇಲ್ನೋಟದ ಸಹಜ ಅರ್ಥವನ್ನು ತೆಗೆದುಕೊಂಡು ನೋಡಿದರೆ, ಈ ಶ್ಲೋಕ ಅಸಂಗತವಾದ ಅರ್ಥವನ್ನು ಹೇಳುತ್ತದೆ. ಅದೇನೆಂದರೆ: “ನೂರು ವರ್ಷ ಬದುಕಿದವನು ದೇವಯಾನದಲ್ಲಿ ಹೋಗುತ್ತಾನೆ; ಪಿಂಗಲಾ ನಾಡಿಗಳಿಂದ ಹೋದವನು ಹಗಲುಗಳನ್ನು ಸೇರುತ್ತಾನೆ; ಇಡಾ ನಾಡಿಗಳಿಂದ ಹೋದವನು ರಾತ್ರಿಗಳನ್ನು ಸೇರುತ್ತಾನೆ; ಸುಷುಮ್ನಾದಿಂದ ಹೋದವನು ವಿಷುವತ್ತೆ(ಸಂಕ್ರಮಣದ ಸ್ಥಿತಿ)ಯನ್ನು ಸೇರುತ್ತಾನೆ”. ಈ ಮೇಲ್ನೋಟದ ಅರ್ಥ ಯಾವ ಸಂದೇಶವನ್ನೂ ತಿಳಿಸಿ ಹೇಳುವುದಿಲ್ಲ. ಇಲ್ಲಿ ಹಗಲುಗಳು, ರಾತ್ರಿಗಳು, ಪಿಂಗಲಾ ನಾಡಿಗಳು, ಇಡಾ ನಾಡಿಗಳು, ವಿಷುವತ್ತೆ, ಇತ್ಯಾದಿ ಶಬ್ದಗಳು ಏನನ್ನು ಹೇಳುತ್ತವೆ ಎನ್ನುವುದು ನಿಗೂಢ. ಆದರೆ ಈ ಎಲ್ಲಾ ಸಮಸ್ಯೆಗಳನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ, ಪ್ರಾಚೀನ ಗ್ರಂಥಗಳ ಪ್ರಮಾಣದ ಸಂವಾದವನ್ನು ಕೊಟ್ಟು, ಅತ್ಯದ್ಭುತವಾಗಿ ಈ ಕೆಳಗಿನಂತೆ ಬಿಡಿಸಿ ಹೇಳಿರುವುದನ್ನು ಕಾಣುತ್ತೇವೆ:

ದಕ್ಷಿಣಾಃ ಪಿಂಗಲಾಃ ಸರ್ವಾ ಇಡಾ ವಾಮಾಃ ಪ್ರಕೀರ್ತಿತಾಃ
ನಾಡ್ಯೋSಥ ಮಧ್ಯಮಾ ಪ್ರೋಕ್ತಾ ಸುಷುಮ್ನಾ ವೇದಪಾರಗೈಃ   ಇತಿ ಭಾಗವತ ತಂತ್ರೇ

ದೇವಯಾನಸ್ಯ ಮಾರ್ಗಸ್ಥಾ ಅಹಃಶಬ್ದಾಭಿಸಂಜ್ಞಿತಾಃ
ಪಿತೃಯಾನಸ್ಯ ಮಾರ್ಗಸ್ಥಾ ರಾತ್ರಿಶಬ್ದಾಹ್ವಯಾ ಮತಾಃ ಇತಿ ಬೃಹತ್ತಂತ್ರೇ
ಶತಾಯುರ್ಮರಣಂ ಚೈವ ಕಾಲಿಕಂ ಪರಮಾವೃತ್ತಿಃ
ಇತ್ಯಭಿಧಾನೇ ಪಿಂಗಲಾಭಿಃ ಶತಾಯುಷಾ ಅಹಃಸಂಜ್ಞಂ ಪಿತೃಯಾನಂ
ವಿಷುವತ್ತಾ ಬ್ರಹ್ಮಯಾನೋ ವಿಶೇಷೇಣ ಸುಖಂ ಯತಃ
ಪಿಂಗಲಾ ದೇವಯಾನಂ ಸ್ಯಾತ್ ಪಿಂಗಾಖ್ಯಸುಖದಂ ಯತಃ
ಇಡಾSನ್ನದಾನಾತ್ ಪಿತೃಣಾಮೇವಂ ಮಾರ್ಗಾಃ ಪ್ರಕೀರ್ತಿತಾಃ ಇತಿ ಬ್ರಹ್ಮತರ್ಕೇ

ಇಲ್ಲಿ ಪಿಂಗಲಾ ನಾಡಿಗಳು ಎಂದರೆ ದೇಹದ ಬಲಭಾಗದಲ್ಲಿರುವ ನಾಡಿಗಳು ಎಂದರ್ಥ. ಅದೇ ರೀತಿ ಇಡಾ ನಾಡಿಗಳು ಎಂದರೆ ಎಡಬದಿಯ ನಾಡಿಗಳು. ದೇಹದ ಬಲಬದಿಯ ನಾಡಿಗಳಿಂದ ಜೀವ ಉತ್ಕ್ರಮಣವಾಗುವುದು ದೇವಯಾನ ಮತ್ತು ಎಡಬದಿಯ ನಾಡಿಗಳಿಂದ ಉತ್ಕ್ರಮಣವಾಗುವುದು ಪಿತೃಯಾನ. ಇದಲ್ಲದೆ ಈ ಹಿಂದೆ ಹೇಳಿದಂತೆ ನಡುವಿನ ಸುಷುಮ್ನಾದ ಮೂಲಕ ಸಹಸ್ರಾರದಿಂದ ದೇಹ ಉತ್ಕ್ರಮಣವಾಗುವುದು ಬ್ರಹ್ಮಯಾನ. ದೇವಯಾನದಲ್ಲಿ ಹೋದವರು ಹಗಲುಗಳನ್ನು ಸೇರುತ್ತಾರೆ ಎಂದರೆ-ಬೆಳಕಿನ ದಾರಿಯಲ್ಲಿರುವ ಎಲ್ಲಾ ದೇವತೆಗಳನ್ನು ಹೋಗಿ ಸೇರುತ್ತಾರೆ ಎಂದರ್ಥ. ಈ ಹಿಂದೆ ಹೇಳಿದಂತೆ: ಅಗ್ನಿ, ಜ್ಯೋತಿ,  ಆತಿವಾಹಿಕ ವಾಯು, ಹಗಲಿನ ದೇವತೆ, ಶುಕ್ಲಪಕ್ಷದ ದೇವತೆ, ಪೂರ್ಣಿಮೆಯ ದೇವತೆ, ಉತ್ತರಾಯಣದ ದೇವತೆ, ಸಂವತ್ಸರದ ದೇವತೆ, ಮಿಂಚಿನ ದೇವತೆ, ವರುಣ, ದಕ್ಷಪ್ರಜಾಪತಿ, ಸೂರ್ಯ, ಚಂದ್ರ, ವೈಶ್ವಾನರ, ಇಂದ್ರ, ಧ್ರುವ, ಭಾರತಿ ಮತ್ತು ಮುಖ್ಯಪ್ರಾಣ-ಇವರೆಲ್ಲರೂ ಬೆಳಕಿನ ದಾರಿಯ ದೇವತೆಗಳು. ಇದೇ ರೀತಿ ರಾತ್ರಿಗಳನ್ನು ಹೋಗಿ ಸೇರುತ್ತಾರೆ ಎಂದರೆ ಕತ್ತಲಿನ ಮಾರ್ಗದ ದೇವತೆಗಳನ್ನು ಹೋಗಿ ಸೇರುತ್ತಾರೆ ಎಂದರ್ಥ.
ಈ ಶ್ಲೋಕದಲ್ಲಿ  ಬಳಸಿರುವ  ‘ಶತಾಯುಷಾ’ ಪದದ ಅರ್ಥ ‘ನೂರುವರ್ಷ ಆಯುಸ್ಸು’ ಎಂದಲ್ಲ. ಒಬ್ಬ ವ್ಯಕ್ತಿ ಎಷ್ಟು ಕಾಲ ಬದುಕಬೇಕೋ ಅಷ್ಟುಕಾಲ ಬದುಕಿ ಸಾಯುವುದನ್ನು ಇಲ್ಲಿ ‘ಶತಾಯುಷಾ’ ಎಂದಿದ್ದಾರೆ. ಮಧ್ಯದಲ್ಲಿ ಯಾವುದೋ ದುರಂತದಿಂದ ಸಾಯದೇ, ಬದುಕಬೇಕಾದಷ್ಟು ದಿನಗಳನ್ನು ಪೂರ್ಣ ಅನುಭವಿಸಿ ಸಾಯುವುದು ಕಾಲಿಕ ಮರಣ.
ಇಲ್ಲಿ ‘ವಿಷುವತ್ತಾ’ ಎಂದರೆ  ‘ಬ್ರಹ್ಮಯಾನ’ ಎಂದರ್ಥ. ವಿಶಿಷ್ಟವಾದ ಸುಖವನ್ನು ಕೊಡುವ ನೇರ ಮೋಕ್ಷದ ದಾರಿ ‘ವಿಷುವತ್ತಾ’ .  ಇದೇ ರೀತಿ ಪಿಂಗಲಾ ಎಂದರೆ ‘ಪಿಂಗಾಖ್ಯಸುಖದಂ ಯತಃ’-ನಮ್ಮಲ್ಲಿ ಆನಂದದ ಬಲವನ್ನು ತುಂಬಿಸುವ ನಾಡಿ-ಪಿಂಗಲಾ. ಹಾಗೇ ಇಡಾ ಎಂದರೆ ಭೋಗಪ್ರದವಾದ ನಾಡಿ ಎಂದರ್ಥ. ಒಟ್ಟಿನಲ್ಲಿ ಹೇಳಬೇಕೆಂದರೆ ಈ ಶ್ಲೋಕ ಮೂರು ವಿಧದ ಯಾನವನ್ನು ವಿವರಿಸುವ ಅದ್ಭುತ ಶ್ಲೋಕ. ಇಲ್ಲಿ ನಮಗೆ ಒಂದು ಹೊಸ ವಿಷಯ ತಿಳಿಯುತ್ತದೆ. ಅದೇನೆಂದರೆ: ಸಾಮಾನ್ಯವಾಗಿ ಜ್ಞಾನಿಗಳು ದೇವಯಾನದಲ್ಲೂ ಹಾಗೂ ಅಜ್ಞಾನಿಗಳು ಪಿತೃಯಾನದಲ್ಲೂ ಹೋಗುತ್ತಾರೆ ಎನ್ನುವುದು ನಂಬಿಕೆ. ಆದರೆ ಇಲ್ಲಿ ಕೆಲವೊಮ್ಮೆ ಪಿತೃಯಾನದಲ್ಲಿ ಕೂಡಾ  ಜ್ಞಾನಿಗಳು ಹೋಗುತ್ತಾರೆ ಎನ್ನುವ ವಿಷಯ ತಿಳಿಯುತ್ತದೆ.

ತದ್ವಿಶ್ವನಾಭಿಂ ತ್ವಭಿಪದ್ಯ ವಿಷ್ಣೋರಣೀಯಸಾ ವಿರಜೇನಾತ್ಮನೈಕಮ್ 
ನಮಸ್ಕೃತಂ ಬ್ರಹ್ಮವಿದಾಮುಪೈತಿ ಕಲ್ಪಾಯುಷೋ ವಿಬುಧಾ ಯದ್ ರಮಂತೇ ೨೮

ಈ ಶ್ಲೋಕ ವೈಶ್ವಾನರ ಲೋಕದ ನಂತರದ ಸ್ಥಿತಿಯನ್ನು ವಿವರಿಸುತ್ತದೆ.  ವೈಶ್ವಾನರಲೋಕದ ನಂತರ, ಸಮಸ್ತ ಜಗತ್ತಿಗೂ ಕೇಂದ್ರಬಿಂದು ಮತ್ತು ಆಧಾರವಾಗಿರುವ ಭಗವಂತನ ಶಿಂಶುಮಾರರೂಪವನ್ನು ಕಂಡು, ಇಷ್ಟು ಕಾಲ ತನ್ನನ್ನು ಧಾರಣೆ ಮಾಡಿದ ಆ ವಿಶ್ವಶಕ್ತಿಗೆ ಕೃತಜ್ಞತೆ ಸಲ್ಲಿಸಿ, ಆತನ ಅನುಮತಿ-ಮಾರ್ಗದರ್ಶನದಂತೆ ಮುಂದೆ ಸಾಗುತ್ತಾನೆ ಜೀವ. ಈ ಹಂತದಲ್ಲಿ ಸೃಷ್ಟವಾದ ಪ್ರಪಂಚದಲ್ಲೇ ಅತ್ಯಂತ ಸೂಕ್ಷ್ಮಲೋಕವಾದ ಸತ್ಯಲೋಕವನ್ನು ಸೇರಲು  ಬೇಕಾದ ಅತ್ಯಂತ ಸೂಕ್ಷ್ಮಸ್ಥಿತಿಯನ್ನು ಜೀವ ಹೊಂದಿರುತ್ತಾನೆ. ಇಲ್ಲಿ ಶುಕಾಚಾರ್ಯರು “ಕಲ್ಪ ಜೀವಿಗಳಾಗಿರುವ  ಜ್ಞಾನಿಗಳು ಇರತಕ್ಕಂತಹ ಲೋಕದತ್ತ ಜೀವ ಪಯಣಿಸುತ್ತಾನೆ” ಎಂದಿದ್ದಾರೆ. ಇದರರ್ಥ ಸ್ವರ್ಗದಿಂದ ಮೇಲಿರುವ ಲೋಕಗಳು. ಅಂದರೆ ಮಹಾರ್ಲೋಕ, ಜನರ್ಲೋಕ, ತಪರ್ಲೋಕ, ಸತ್ಯಲೋಕ. ಈ ಗುಂಪಿಗೆ ಸ್ವರ್ಗಲೋಕ ಸೇರಿಲ್ಲ. ಏಕೆಂದರೆ ಅಲ್ಲಿ ಕಲ್ಪಜೀವಿಗಳು ಇರಲು ಸಾಧ್ಯವಿಲ್ಲ.  ಕಾರಣವೇನೆಂದರೆ ಸ್ವರ್ಗದ ಆಯುಸ್ಸು ಕೇವಲ ಒಂದು ಮನ್ವಂತರಕಾಲ. ಒಂದು ಮನ್ವಂತರದ ಇಂದ್ರ ಇನ್ನೊಂದು ಮನ್ವಂತರದಲ್ಲಿರುವುದಿಲ್ಲ. ಹೀಗಾಗಿ ಸ್ವರ್ಗದಲ್ಲಿರುವವರ ಅವಧಿ ಹೆಚ್ಚೆಂದರೆ ಒಂದು ಮನ್ವಂತರ ಕಾಲ ಮಾತ್ರ. ಅಂದರೆ ೩೦ ಕೋಟಿ ೮೫ ಲಕ್ಷದ ೭೦ ಸಾವಿರ ವರ್ಷಗಳು. ಸ್ವರ್ಗವನ್ನು ದಾಟಿ ಧ್ರುವಲೋಕದಲ್ಲಿ ಶಿಂಶುಮಾರನನ್ನು ಕಂಡು, ಮಹಾರ್ಲೋಕದತ್ತ ಪಯಣಿಸುವ ಜೀವ,  ಮಹಾರ್ಲೋಕದಲ್ಲಿ ಹೆಚ್ಚೆಂದರೆ ಒಂದು ದಿನಕಲ್ಪದಷ್ಟು ಕಾಲ ಇರಬಹುದು. ಅಂದರೆ ೧೪ ಮನ್ವಂತರಗಳ ಕಾಲ ಅಥವಾ ೪೩೨ ಕೋಟಿ ವರ್ಷಗಳಷ್ಟು ಕಾಲ .  ಆದರೆ ಸತ್ಯಲೋಕದ ಆಯಸ್ಸು ಬ್ರಹ್ಮದೇವರ ಒಂದು ಕಲ್ಪ. ಅಂದರೆ ೩೧ ಸಾವಿರದ ೧೦೪ ಸಾವಿರ ಕೋಟಿ ವರ್ಷ. ಇದನ್ನು ‘ಪರಕಾಲ’ ಎನ್ನುತ್ತಾರೆ. ಇದು ಬ್ರಹ್ಮದೇವರ ನೂರು ವರ್ಷ. ಇಷ್ಟು ಕಾಲದ ನಂತರ ಈ ಸೃಷ್ಟಿ ನಾಶವಾಗುತ್ತದೆ. ಮತ್ತೆ ಮರಳಿ ಸೃಷ್ಟಿ ನಿರ್ಮಾಣವಾಗಲು ಇನ್ನೊಂದು ಪರಕಾಲ ಬೇಕು. ನಮಗೆ ಈ ಕಾಲದ ಅಳತೆಯನ್ನು ಗ್ರಹಿಸಲು ಸಾಧ್ಯವಾಗದಿದ್ದರೂ ಕೂಡಾ, ಬ್ರಹ್ಮದೇವರಿಗೆ ಇದು ನೂರು ವರ್ಷವಿದ್ದಂತೆ ಮತ್ತು ಭಗವಂತನಿಗೆ ಇದೊಂದು ಕ್ಷಣವಿದ್ದಂತೆ.