Sunday, June 22, 2014

Shrimad BhAgavata in Kannada -Skandha-02-Ch-05(07)

ಸ ಏಷ ಭಗವಾಂಲ್ಲಿಂಗೈಃ ತ್ರಿಭಿರೇತೈರಧೋಕ್ಷಜಃ
ಸ್ವಲಕ್ಷಿತಗತಿರ್ಬ್ರಹ್ಮನ್ ಸರ್ವೇಷಾಂ ಮಮ ಚೇಶ್ವರಃ ೨೦

ಹಿಂದೆ ದೇಹ, ಕರ್ಮೇಂದ್ರಿಯ ಮತ್ತು ಜ್ಞಾನೇಂದ್ರಿಯಗಳು ನಮಗೆ ಅಹಂಕಾರ-ಮಮಕಾರವನ್ನು ಕೊಟ್ಟು ಬಂಧಿಯಾಗಿಸುತ್ತವೆ ಎಂದು ಹೇಳಿದ  ಚತುರ್ಮುಖ ಇಲ್ಲಿ  ಭಗವಂತನನ್ನು ತಿಳಿಯಲೂ ಕೂಡಾ ಇವೇ ಮೂರು ಸಾಧಕ ಎನ್ನುತ್ತಾನೆ. ಈ ದೃಷ್ಟಿಯಲ್ಲಿ ನೋಡಿದಾಗ ದೇಹ, ಕರ್ಮೇಂದ್ರಿಯ ಮತ್ತು ಜ್ಞಾನೇಂದ್ರಿಯಗಳು ನಮ್ಮನ್ನು ಭಗವಂತನೆಡೆಗೆ ಕೊಂಡೊಯ್ಯುವ, ನಾವು ತಿಳಿಯದ, ನಾವು ಕಾಣದ ಭಗವಂತನನ್ನು ನಮಗೆ ತಿಳಿಸುವ ಅಪೂರ್ವ ಸಾಧನಗಳಾಗಿಯೂ ಕೆಲಸ ಮಾಡುತ್ತವೆ ಎನ್ನುವುದು ತಿಳಿಯುತ್ತದೆ. ಅಹಂಕಾರ-ಮಮಕಾರದ ಅಂಟನ್ನು ತೆಗೆದಾಗ, ಈ ದೇಹ ಭಗವಂತನ ಸಾಧನೆಗಾಗಿ ಇರುವ ಒಂದು ಅಪೂರ್ವ ಸ್ವತ್ತು ಎನ್ನುವ ಭಾವ ಬಂದಾಗ, ಈ ಜನ್ಮದಲ್ಲೇ ಭಗವಂತನನ್ನು ಕಾಣಬೇಕು ಎನ್ನುವ ತುಡಿತ ಬಂದಾಗ, ಅದು ಉದ್ಧಾರದ ಮಾರ್ಗವಾಗುತ್ತದೆ. ಇಂದ್ರಿಯಗಳ ಎಲ್ಲಾ ಕೆಲಸವೂ ಭಗವಂತನ ಪೂಜಾರೂಪ ಎನ್ನುವ ಅನುಸಂಧಾನ ಬಂದಾಗ, ಈ ಮೂರರ ನೆರವಿನಿಂದಲೇ ಅಧೋಕ್ಷಜನಾದ ಭಗವಂತನನ್ನು ಕಾಣಲು ಸಾಧ್ಯವಾಗುತ್ತದೆ. [ಅಧೋಕ್ಷಜಃ ಎಂದರೆ ಅಕ್ಷಗಳಿಗೆ(ಇಂದ್ರಿಯಗಳಿಗೆ) ನಿಲುಕದವ ಆದರೆ ಅಕ್ಷಗಳನ್ನು ತಿರಸ್ಕರಿಸಿದಾಗ ಕಾಣಸಿಗುವ ಭಗವಂತ ಎಂದರ್ಥ].  
ನಮ್ಮ ದೇಹ, ನಮ್ಮ ಅಂಗಾಂಗದಲ್ಲಿ ಕುಳಿತು ನಮ್ಮಿಂದ ಆ ಭಗವಂತ ಕೆಲಸವನ್ನು ಮಾಡಿಸುತ್ತಿದ್ದಾನೆ ಎನ್ನುವ ಅರಿವು ಮೂಡಿದಾಗ ಈ ದೇಹ, ಸರ್ವೇನ್ದ್ರಿಯಗಳು ಭಗವಂತನ ಪೂಜೆಯ ಉಪಕರಣವಾಗುತ್ತವೆ. ಆಗ ಅಹಂಕಾರ-ಮಮಕಾರ ಹತ್ತಿರ ಸುಳಿವುದಿಲ್ಲ. ಈ ರೀತಿ ಭಕ್ತಿಯಿಂದ ಭಜಿಸುವ ಭಕ್ತರಿಗೆ ಆ ಭಗವಂತ ಸ್ವಇಚ್ಛೆಯಿಂದ ತನ್ನನ್ನು ತಾನು ತೋರಿಸಿಕೊಳ್ಳುತ್ತಾನೆ. ನಮ್ಮ ಇಂದ್ರಿಯ, ಮನಸ್ಸು, ದೇಹದ ಅಣು-ಕಣವೂ ಭಗವಂತನೊಂದಿಗೆ ಶ್ರುತಿಗೂಡಬೇಕು.  ಆಗ ಭಗವಂತನ ದರ್ಶನ ಸಾಧ್ಯವಾಗುತ್ತದೆ. ಗೀತೆಯಲ್ಲಿ ಹೇಳುವಂತೆ: ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ ।  ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ॥೯-೨೨॥  ಇಲ್ಲಿ “ನನ್ನ ಸೇವೆಗೆ ಮುಡಿಪಾದವರ ಯೋಗ-ಕ್ಷೇಮದ ಹೊಣೆ ನನ್ನದು” ಎಂದಿದ್ದಾನೆ ಶ್ರೀಕೃಷ್ಣ.  “ಯಾವುದು ನಮ್ಮನ್ನು ಅಹಂಕಾರ-ಮಮಕಾರಗಳಿಂದ ಅಧೋಗತಿಗೆ ತಳ್ಳಬಲ್ಲದೋ, ಅದನ್ನೇ ನಾವು ನಮ್ಮನ್ನು ಭಗವಂತನ ಬಳಿ ಕೊಂಡೊಯ್ಯುವ  ಸಾಧನವಾಗಿ ಬಳಸಬಹುದು. ಓ ಬ್ರಹ್ಮನ್, ಈ ಸಾಧನಗಳನ್ನು ಅಧಿಷ್ಠಾನವಾಗಿ  ಬಳಸಿಕೊಂಡು, ಎಲ್ಲರ ಅಧಿಪತಿಯಾಗಿರುವ, ಆ ನನ್ನ ಅಧಿಪತಿ ಭಗವಂತನನ್ನು ಕಾಣಬಹುದು”  ಎನ್ನುತ್ತಾನೆ ನಾರದನನ್ನು ಕುರಿತು ಚತುರ್ಮುಖ.

ಕಾಲಂ ಕರ್ಮ ಸ್ವಭಾವಂ ಚ ಮಾಯೇಶೋ ಮಾಯಯಾ ಸ್ವಯಾ
ಆತ್ಮನ್ ಯದೃಚ್ಛಯಾ ಪ್ರಾಪ್ತಂ ವಿಬುಭೂಷುರುಪಾದದೇ ೨೧

ಕಾಲಾದ್ ಗುಣವ್ಯತಿಕರಾತ್ ಪರಿಣಾಮಸ್ವಭಾವತಃ
ಕರ್ಮಣೋ ಜನ್ಮ ಮಹತಃ ಪುರುಷಾಧಿಷ್ಠಿತಾದಭೂತ್  ೨೨

ಭಗವಂತ ಅನಾದಿ ಅನಂತವಾಗಿರುವ ‘ಜೀವದ’ ದೇಹರಚನೆಯನ್ನು ಅದರ ಸ್ವಭಾವಕ್ಕನುಗುಣವಾಗಿ ಆಯಾ ಕಾಲದಲ್ಲಿ ಮಾಡುತ್ತಾನೆ.  ಇದಕ್ಕಾಗಿ ಆತ ಸೃಷ್ಟಿಯ ಮೂಲದ್ರವ್ಯವಾದ, ಸೂಕ್ಷ್ಮರೂಪದಲ್ಲಿರುವ ಜಡಪ್ರಕೃತಿಯನ್ನು ಬಳಸಿಕೊಳ್ಳುತ್ತಾನೆ.  ಸುಖ-ದುಃಖದ ಭೋಗದಿಂದ ಪುಣ್ಯಪಾಪಗಳ ಸಂಚಯನಕ್ಕಾಗಿ ಭಗವಂತ ಜೀವನಿಗೆ ದೇಹವನ್ನು ನೀಡುತ್ತಾನೆ. ಜೀವದ ಸ್ವಭಾವದಂತೆ ಆಯಾ ಕಾಲದಲ್ಲಿ ಆಯಾ ಕರ್ಮಗಳು ನಡೆಯುತ್ತವೆ.  ಯಾವ ಜೀವ ಯಾವ ಜಡದೊಂದಿಗೆ ಎಂದು ಬೆರೆಯಬೇಕು ಎನ್ನುವುದೇ ‘ಕಾಲ’.  ಸ್ವಭಾವಕ್ಕನುಗುಣವಾಗಿ ನಡೆಯುವ ಕ್ರಿಯೆಯೇ ‘ಕರ್ಮ’. ಭಗವಂತ ಜೀವದ ಸ್ವಭಾವಕ್ಕನುಗುಣವಾಗಿ  ಅದು ವಿಕಸನ ಹೊಂದುವುದಕ್ಕೆ ಮಾಡುವ ವ್ಯವಸ್ಥೆಯೇ ‘ಸೃಷ್ಟಿ’.  ಜೀವ ವಿಕಸನ ಹೊಂದುತ್ತಾ ತನ್ನ ಸ್ವಭಾವದಂತೆ ಕರ್ಮ ಮಾಡಿ, ಕರ್ಮಕ್ಕೆ ತಕ್ಕಂತೆ ಆಯಾ ಕಾಲದಲ್ಲಿ ಫಲವನ್ನು ಪಡೆಯುತ್ತಾನೆ.   ಎಲ್ಲವನ್ನೂ ಭಗವಂತ ಸ್ವ-ಸಾಮರ್ಥ್ಯದಿಂದ, ತನ್ನ ಇಚ್ಛೆಯಂತೆ ಮಾಡುತ್ತಾನೆ. [ಇಲ್ಲಿ ಬಳಕೆಯಾದ  ‘ಯದೃಚ್ಛಯಾ’ ಎನ್ನುವ ಪದದ ಮೇಲ್ನೋಟದ ಅರ್ಥ ‘ಆಕಸ್ಮಿಕ’.  ಆದರೆ ಇಲ್ಲಿ ನಾವು ಈ ಪದದ ಅಂತರಂಗದ ಅರ್ಥವನ್ನು ತೆಗೆದುಕೊಳ್ಳಬೇಕು.   ಯತ್+ಋ+ಇಚ್ಛಾ . ಎಲ್ಲೆಡೆ ವ್ಯಾಪ್ತನಾದ ಭಗವಂತ(ಯತ್) ತನ್ನ ಜ್ಞಾನಸ್ವರೂಪದಿಂದ(ಋ) ಸಮಗ್ರವನ್ನೂ  ತಿಳಿದು ಇಚ್ಛಿಸುತ್ತಾನೆ. ಆತನ ಇಚ್ಛೆಯಂತೆ ಎಲ್ಲವೂ ನಡೆಯುತ್ತದೆ].    

ಮೊಟ್ಟಮೊದಲು ಭಗವಂತ ಮಹತತ್ತ್ವವನ್ನು ಸೃಷ್ಟಿ ಮಾಡಿದ” ಎನ್ನುತ್ತಾನೆ ಚತುರ್ಮುಖ. ಇದು ತ್ರಿಗುಣಗಳ ವೈಷಮ್ಯದ ಕಂಪನದಿಂದ ಉಂಟಾದ ಪ್ರಪಂಚ ಸೃಷ್ಟಿಯ ಮೊಟ್ಟ ಮೊದಲ ವಿಕಾರ.  ಮಹತತ್ತ್ವವನ್ನು ನಿಯಂತ್ರಿಸುವ ಜೀವ ಚತುರ್ಮುಖ.  ಪಿಂಡಾಂಡದಲ್ಲಿ ಮಹತತ್ತ್ವ ಎಂದರೆ  ‘ಚಿತ್ತ’ ಅಥವಾ ‘ವಿಜ್ಞಾನಮಯಕೋಶ’. ಹೀಗಾಗಿ ಇಲ್ಲಿ ಮಹಾತತ್ತ್ವದ ಸೃಷ್ಟಿಯಾಯಿತು ಎಂದರೆ ವಿಶ್ವದ ಸುಪ್ತಪ್ರಜ್ಞೆ ಜಾಗೃತವಾಯಿತು ಎಂದರ್ಥ. ಪ್ರಳಯಕಾಲದಲ್ಲಿ ಇಡೀ ವಿಶ್ವದಲ್ಲಿ ತಮ್ಮ ಇರವಿನ ಅರಿವೂ ಇಲ್ಲದೇ ಇದ್ದ  ಜೀವದಲ್ಲಿ ಸುಪ್ತಪ್ರಜ್ಞೆಯ ವಿಕಾಸದ ಬೀಜಕ್ಷೇಪವೇ ಈ ಮಹತತ್ತ್ವ ಅಥವಾ ಚತುರ್ಮುಖನ ಸೃಷ್ಟಿ. ಸೃಷ್ಟಿಯ ಪ್ರಾರಂಭದಲ್ಲಿ ಮೊಟ್ಟಮೊದಲು ಸರ್ವವ್ಯಾಪ್ತ ಭಗವಂತ ತನ್ನ ಪುರುಷ ನಾಮಕ ರೂಪದಿಂದ ಚತುರ್ಮುಖನನ್ನು ಸೃಷ್ಟಿ ಮಾಡಿ ಆತನೊಳಗೆ ಬ್ರಹ್ಮನಾಮಕನಾಗಿ ಕುಳಿತು ವಿಶ್ವದ ಸುಪ್ತಪ್ರಜ್ಞೆಯನ್ನು ಜಾಗೃತಗೊಳಿಸಿದ. [ಮಹಾತತ್ತ್ವವನ್ನು ಸೃಷ್ಟಿ ಮಾಡಿದ ಭಗವಂತನ ರೂಪ ಮೊದಲನೆಯ ಪುರುಷ ನಾಮಕ ರೂಪ. ನಂತರ ಅಹಂಕಾರ ತತ್ತ್ವ, ಪಂಚಭೂತಗಳನ್ನು ಸೃಷ್ಟಿಮಾಡಿ ಬ್ರಹ್ಮಾಂಡದೊಳಗೆ ಸೇರಿದ ಭಗವಂತನ ರೂಪ ಎರಡನೇ ಪುರುಷ ನಾಮಕ ರೂಪ. ಆನಂತರ ಬ್ರಹ್ಮಾಂಡದಲ್ಲಿ ಪಿಂಡಾಂಡವನ್ನು ಸೃಷ್ಟಿಸಿ ಪ್ರತಿಯೊಂದು ಪಿಂಡಾಂಡದೊಳಗೆ ಸೇರಿದ ಭಗವಂತನ ರೂಪ ಮೂರನೇ ಪುರುಷ ನಾಮಕ ರೂಪ].

Sunday, June 8, 2014

Shrimad BhAgavata in Kannada -Skandha-02-Ch-05(06)

ಸತ್ತ್ವಂ ರಜಸ್ತಮ ಇತಿ ನಿರ್ಗುಣಸ್ಯ ಗುಣಾಸ್ತ್ರಯಃ
ಸ್ಥಿತಿಸರ್ಗನಿರೋಧೇಷು ಗೃಹೀತಾ ಮಾಯಯಾ ವಿಭೋಃ ೧೮

ಭಗವಂತನ  ಸೃಷ್ಟಿ-ಪಾಲನೆ-ಸಂಹಾರದ ಕುರಿತು ಇಲ್ಲಿ ಚತುರ್ಮುಖ ಬ್ರಹ್ಮ ವಿವರಿಸುವುದನ್ನು  ಕಾಣುತ್ತೇವೆ. ಸ್ವಯಂ ತ್ರಿಗುಣಾತೀತನಾದುದರಿಂದ ಭಗವಂತನ ಮೇಲೆ ತ್ರಿಗುಣಗಳ ಪ್ರಭಾವವಿಲ್ಲ. ಆದರೆ ತ್ರಿಗುಣಗಳನ್ನು ಬಳಸಿಕೊಂಡು ಭಗವಂತ ಸೃಷ್ಟಿ-ಸ್ಥಿತಿ-ಸಂಹಾರವನ್ನು ಮಾಡುತ್ತಾನೆ.  ಪಾಲನೆ(ಸ್ಥಿತಿ)ಗೆ  ಸತ್ವಗುಣ, ಸೃಷ್ಟಿಗೆ ರಜೋಗುಣ  ಮತ್ತು ಸಂಹಾರಕ್ಕೆ ತಮೋಗುಣವನ್ನು ಭಗವಂತ ಬಳಸುತ್ತಾನೆ. ಈ ಮೂರು ಕ್ರಿಯೆ ಒಂದಕ್ಕೊಂದು ಪರಸ್ಪರ ಸಂಬಂಧವಿರುವ ಕ್ರಿಯೆ. ಉದಾಹರಣೆಗೆ ಅಜ್ಞಾನ ತಮೋಗುಣ. ಅದನ್ನು ನಾಶ ಮಾಡಿದರೆ ಜ್ಞಾನ ಬರುತ್ತದೆ. ಹಾಗಾಗಿ ಅಜ್ಞಾನದ ಸಂಹಾರ ಎಂದರೆ ಅದು ಜ್ಞಾನದ ಸೃಷ್ಟಿ. ಹೀಗೆ  ಸೃಷ್ಟಿಯ ಮೊಟ್ಟೆಯಲ್ಲೇ ಸಂಹಾರದ ಬೀಜವಿರುತ್ತದೆ. ತ್ರಿಗುಣಗಳು ಎಲ್ಲಾ ಕಾಲದಲ್ಲೂ ಭಗವಂತನ ಅಧೀನ. ಸರ್ವಸಮರ್ಥನಾದ ಭಗವಂತ ತನ್ನ ಇಚ್ಛೆಯಂತೆ ಗುಣತ್ರಯಗಳನ್ನು ಬಳಸಿ ಸೃಷ್ಟಿ-ಸ್ಥಿತಿ-ಸಂಹಾರ ಮಾಡುತ್ತಾನೆ. ಪಾಲನೆಯಲ್ಲಿ ಯಾರನ್ನೂ ಬಳಸಿಕೊಳ್ಳದ ಭಗವಂತ, ಸೃಷ್ಟಿ ಕಾರ್ಯದಲ್ಲಿ ಚತುರ್ಮುಖನನ್ನು, ಸಂಹಾರ ಕಾರ್ಯದಲ್ಲಿ ಶಿವನನ್ನು ಉಪಕರಣವಾಗಿ ಬಳಸುತ್ತಾನೆ.
ತ್ರಿಗುಣಗಳ ಸಮಷ್ಟಿಯಿಂದ ನಮ್ಮ ದೇಹ ರಚನೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವೂ ತ್ರಿಗುಣಾತ್ಮಕವಾಗಿರುತ್ತದೆ. ಇಷ್ಟೇ ಅಲ್ಲದೇ ಹೊರಗಿನಿಂದ ತ್ರಿಗುಣಗಳು ವ್ಯಕ್ತಿಯಮೇಲೆ ನಿರಂತರ ಪ್ರಭಾವಬೀರುತ್ತಿರುತ್ತವೆ.

ಕಾರ್ಯಕಾರಣಕರ್ತೃತ್ವೇ ದ್ರವ್ಯಜ್ಞಾನಕ್ರಿಯಾಶ್ರಯಾಃ
ಬಧ್ನಂತಿ ನಿತ್ಯದಾ ಮುಕ್ತಂ ಮಾಯಿನಂ ಪುರುಷಂ ಗುಣಾಃ ೧೯

ವಾಸ್ತವಿಕವಾದ ಆದರೆ ನಾವು ಮರೆತಿರುವ ಒಂದು ವಿಚಾರವನ್ನು ಚತುರ್ಮುಖ ಇಲ್ಲಿ ನೆನಪಿಸುವುದನ್ನು ಕಾಣುತ್ತೇವೆ.  ಚತುರ್ಮುಖ ಹೇಳುತ್ತಾನೆ: “ಈ ದೇಹದಲ್ಲಿರುವ ಜೀವ ವಸ್ತುತಃ ಮಾಯಿ” ಎಂದು. ಮಾಯಿ ಎಂದರೆ ಅಜ್ಞಾನದ ಬಂಧನವಿಲ್ಲದ   ಜ್ಞಾನಸ್ವರೂಪ ಎಂದರ್ಥ. ಜೀವ ಈ ದೇಹ ಇಂದ್ರಿಯ ಇವೆಲ್ಲವುದಕ್ಕಿಂತ ಭಿನ್ನ. ಅದು ಸದಾ ಜ್ಞಾನರೂಪ ಮತ್ತು ಅದಕ್ಕೆ ಅಂಟುವಿಕೆ ಎನ್ನುವುದು ಇಲ್ಲವೇ ಇಲ್ಲ. ಆದರೆ ಜೀವನನ್ನು ತ್ರಿಗುಣಗಳು ದೇಹದಲ್ಲಿ ಕಟ್ಟಿಹಾಕಿ ತಮ್ಮ ಪ್ರಭಾವವನ್ನು ಬೀರುತ್ತಿರುತ್ತವೆ. ಮಣ್ಣು-ನೀರು-ಬೆಂಕಿಯಿಂದಾದ ಶರೀರ, ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯ ಈ ಮೂರು ತ್ರಿಗುಣಗಳ ಕಾರ್ಯಕ್ಷೇತ್ರ. ಅವು ಇಲ್ಲಿ  ಕುಳಿತು  ಏಕಕಾಲದಲ್ಲಿ ತಮ್ಮ ಪ್ರಭಾವವನ್ನು ಬೀರುತ್ತಿರುತ್ತವೆ. ಶರೀರದಲ್ಲಿ ತಮೋಗುಣ, ಕರ್ಮೇಂದ್ರಿಯದಲ್ಲಿ  ರಜೋಗುಣ  ಮತ್ತು ಜ್ಞಾನೇಂದ್ರಿಯದಲ್ಲಿ ಸತ್ವಗುಣ ಕುಳಿತು ಜೀವನನ್ನು ಬಂಧನಕ್ಕೆ ತಳ್ಳುತ್ತವೆ. ಏಕಕಾಲದಲ್ಲಿ ತ್ರಿಗುಣಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ.
ನಮ್ಮ ದೇಹ ಪ್ರತಿಕ್ಷಣ ವಿಕಾರಕ್ಕೆ ಒಳಗಾಗುತ್ತದೆ ಮತ್ತು ಅದರ ಮುಖೇನ ತಮೋಗುಣ ಕೆಲಸ ಮಾಡುತ್ತದೆ. ಹೀಗಾಗಿ ನಾನಾ ವಿಧವಾದ ಕಾರ್ಯಗಳನ್ನು ದೇಹದ ಮೂಲಕ ಮಾಡಿ ನಾನಾ ವಿಧದ ದುಃಖವನ್ನು ನಾವು ಅನುಭವಿಸುತ್ತೇವೆ.
ರಜೋಗುಣದ ಕಾರ್ಯಕ್ಷೇತ್ರ ಕರ್ಮೇಂದ್ರಿಯಗಳು. ಈ ಕರ್ಮೇಂದ್ರಿಯಗಳಿಂದ ನಾವು ಅನೇಕ ಚಟುವಟಿಕೆಗಳನ್ನು ಮಾಡುತ್ತೇವೆ. ಕರ್ಮಗಳನ್ನು ಮಾಡಿ ಕೊನೆಗೆ ‘ನಾನು ಮಾಡಿದೆ’ ಎನ್ನುವ ಅಹಂಕಾರ-ಮಮಕಾರಕ್ಕೆ ಬಲಿಯಾಗಿ ರಜೋಗುಣದ ಬಂಧಿಯಾಗುತ್ತೇವೆ.   

ಸತ್ವಗುಣ ನಮ್ಮ ಜ್ಞಾನೇಂದ್ರಿಯದ ಮೇಲೆ ಕೆಲಸ ಮಾಡುತ್ತದೆ. ನಮ್ಮ ಜ್ಞಾನೇಂದ್ರಿಯಗಳು ನಮಗೆ ಅಂತರಂಗದ ಆನಂದದ ಭೋಕ್ತೃತ್ವವನ್ನು ಕೊಡುತ್ತವೆ. ಆದರೆ  ಅದೇ ಭೋಕ್ತೃತ್ವ ಕೊನೆಗೆ ಭಾದಕವಾಗಿ  ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಇದಕ್ಕೆ ಉದಾಹರಣೆ  ಕಣ್ಣು.  ಸಂಜೆಯ ಹೊತ್ತು ಸಮುದ್ರ ತಟಿಯಲ್ಲಿ ಕುಳಿತು ಸೂರ್ಯಾಸ್ತ ನೋಡುವುದರಲ್ಲಿ ಸಿಗುವ ಆನಂದ ಅಪರಿಮಿತ. ನಾವು ಎಲ್ಲವನ್ನೂ ಮರೆತು ಆ ಆನಂದವನ್ನು ಅನುಭವಿಸುತ್ತೇವೆ. ಆದರೆ ಶಾಸ್ತ್ರಗಳಲ್ಲಿ ಹೇಳುವಂತೆ:  ನೇಕ್ಷೇತ ಉದ್ಯಂತಮಾದಿತ್ಯಂ ನಾಸ್ತಂ ಯನ್ತಂ ಕದಾಚನ ನೋಪರಕ್ತಂ ನ ವಾರಿಸ್ಥಂ ನ ಮಧ್ಯಂ ನಭಾಸೋ ಗತಮ್. ಸೂರ್ಯನ ಸಂಜೆಯ ಕೆಂಪಾದ ಈ ಕಿರಣಗಳಲ್ಲಿ ಮಂದೇಹ ಎನ್ನುವ ದುಷ್ಟಶಕ್ತಿ ಕೆಲಸ ಮಾಡುತ್ತಿರುತ್ತದೆ ಮತ್ತು ಅದು ಕ್ರಮೇಣ ನಮ್ಮ ಚಟುವಟಿಕೆಗಳನ್ನು ಕುಂಠಿತಗೊಳಿಸುತ್ತದೆ.  ಇದಕ್ಕಾಗಿ ಪ್ರಾಚೀನರು ಸೂರ್ಯೋದಯ ಮತ್ತು ಸೂರ್ಯಾಸ್ತ ಕಾಲದಲ್ಲಿ ಅರ್ಗ್ಯ ಕೊಟ್ಟು ದೇವರನ್ನು ಪ್ರಾರ್ಥನೆ ಮಾಡುವ ಸಂಪ್ರದಾಯವನ್ನು ಚಾಲ್ತಿಗೆ ತಂದರು. ಶಾಸ್ತ್ರ ನೀರಿನಿಂದ ಪ್ರತಿಫಲಿಸುವ ಸೂರ್ಯ ಮತ್ತು ಗ್ರಹಣಕಾಲದ ಸೂರ್ಯನನ್ನು ಬರಿಗಣ್ಣಿನಿಂದ ಕಾಣುವುದನ್ನು ನಿಷೇಧಿಸುತ್ತದೆ. [ಹಿಂದೆ ಸೂರ್ಯಗ್ರಹಣವನ್ನು ನೀರಿಗೆ ಗೋಮಯ ಬೆರೆಸಿ ಅದರ ಮುಖೇನ ನೋಡುತ್ತಿದ್ದರು ಮತ್ತು ಗ್ರಹಣದ ಸಮಯವನ್ನಾಧರಿಸಿ ಗಣಿತಬದ್ಧವಾಗಿ ಪಂಚಾಂಗ ಸಿದ್ಧಪಡಿಸುತ್ತಿದ್ದರು]. ಒಟ್ಟಿನಲ್ಲಿ ಹೇಳಬೇಕೆಂದರೆ ಸತ್ವಗುಣ ಜ್ಞಾನವನ್ನು-ಸಂತೋಷವನ್ನು ಕೊಟ್ಟರೂ, ಕೊನೆಗೆ ಅದರಿಂದ ಬರುವ ಅಹಂಕಾರ ಮಮಕಾರ ನಮ್ಮನ್ನು ಬಂಧಿಯನ್ನಾಗಿಸುತ್ತದೆ.  

Sunday, June 1, 2014

Shrimad BhAgavata in Kannada -Skandha-02-Ch-05(05)

ದ್ರವ್ಯಂ ಕರ್ಮ ಚ ಕಾಲಶ್ಚ ಸ್ವಭಾವೋ ಜೀವ ಏವ ಚ
ವಾಸುದೇವಾತ್ ಪರೋ ಬ್ರಹ್ಮನ್  ನ ಚಾನ್ಯೋSರ್ಥೋSಸ್ತಿ ತಾತ್ತ್ವತಃ ೧೪

ಮೊದಲ ಸ್ಕಂಧದಲ್ಲಿ ವಿಶ್ಲೇಶಿಸಿದಂತೆ  ಭಾಗವತದ ಹಲವು ಶ್ಲೋಕಗಳಲ್ಲಿ ನಾವು ವೇದಮಂತ್ರದ ಭಾಗವನ್ನು  ಕಾಣಬಹುದು.  ಈ ಮೇಲಿನ ಶ್ಲೋಕವೂ ಕೂಡಾ ವೇದ ಮಂತ್ರದ ಭಾಗವಾಗಿದೆ. ವೇದದಲ್ಲಿ ಹೀಗೆ ಹೇಳಿದ್ದಾರೆ: ದ್ರವ್ಯಂ ಕರ್ಮಚ ಕಾಲಶ್ಚ ಸ್ವಭಾವೋ  ಜೀವ ಏವ ಚ   ಯದನುಗ್ರಹತಃ ಸಂತಿ ನ ಸಂತಿ ಯದುಪೇಕ್ಷಯ  ಈ ವೇದ ಮಂತ್ರದ ಪೂರ್ವಾರ್ಧವೇ ಮೇಲಿನ ಶ್ಲೋಕದ ಪೂರ್ವಾರ್ಧವಾಗಿರುವುದನ್ನು ಇಲ್ಲಿ ನಾವು ಕಾಣುತ್ತೇವೆ.
ದ್ರವ್ಯ, ಕರ್ಮ, ಕಾಲ, ಸ್ವಭಾವ ಮತ್ತು ಜೀವ ಈ ಐದರ  ಸಮಷ್ಟಿ  ಈ ಪ್ರಪಂಚ. ಸೃಷ್ಟಿಗೂ ಮೊದಲು ಜೀವನಿದ್ದ, ಅವನಿಗೆ ಅವನದೇ ಆದ ಸ್ವಭಾವವಿತ್ತು. ಆದರೆ ಅದರ ಅಭಿವ್ಯಕ್ತಿ ಆತನಿಗಿರಲಿಲ್ಲ. ಹೇಗೆ ಒಂದು ಬೀಜದಲ್ಲಿ ಮರವಾಗಿ ಬೆಳೆಯುವ ಶಕ್ತಿ ಹುದುಗಿರೋತ್ತದೋ ಹಾಗೇ ಜೀವನಲ್ಲಿ ಅವನದೇ ಆದ ಜೀವಸ್ವಭಾವ ಅನಾದಿನಿತ್ಯವಾಗಿ ಹುದುಗಿರುತ್ತದೆ. ಹೇಗೆ ಬೀಜವನ್ನು ಬಿತ್ತದೇ ಇದ್ದರೆ ಆ ಬೀಜದೊಳಗಿನ ಶಕ್ತಿ ಅಭಿವ್ಯಕ್ತಿ ಸಾಧ್ಯವಿಲ್ಲವೋ ಹಾಗೇ ಭಗವಂತ ಸೃಷ್ಟಿ ಮಾಡದೇ ಇದ್ದರೆ ಜೀವಸ್ವಭಾವದ ಅಭಿವ್ಯಕ್ತಿ ಸಾಧ್ಯವಿಲ್ಲ. ಹೇಗೆ ಪ್ರತಿಯೊಂದು ವಿಧದ ಬೀಜ ಬಿತ್ತನೆಗೆ ಬೇರೆ ಬೇರೆ ಕಾಲವಿದೆಯೋ ಹಾಗೇ ಪ್ರತಿಯೊಂದು ಜೀವದ ಅಭಿವ್ಯಕ್ತಿಗೆ ಒಂದು ಕಾಲವಿದೆ. ಸೃಷ್ಟಿಯಲ್ಲಿ ಯಾವ-ಯಾವ ಸ್ವಭಾವ ಯಾವ-ಯಾವ ಕಾಲದಲ್ಲಿ ಸೃಷ್ಟಿಯಾಗಬೇಕು ಎನ್ನುವುದು ಭಗವಂತನ ನಿಯಮ ಮತ್ತು ಅದರಂತೆ ಎಲ್ಲವೂ ಸೃಷ್ಟಿಯಾಗುತ್ತದೆ.   ಸ್ವಭಾವದ ಅಭಿವ್ಯಕ್ತಿಯಾಗುವ ಕಾಲ ಬಂದಾಗ ಭಗವಂತ ಜೀವನಿಗೆ ಮಣ್ಣು-ನೀರು-ಬೆಂಕಿಯ ಸಮಷ್ಟಿಯಿಂದಾದ(ದ್ರವ್ಯ) ದೇಹ ಕೊಡುತ್ತಾನೆ. ಹೀಗೆ ಜನ್ಮತಳೆದ ಜೀವ ತನ್ನ ಸ್ವಭಾವಕ್ಕನುಗುಣವಾಗಿ ಕರ್ಮವನ್ನು ಮಾಡುತ್ತಾನೆ. ಈ ಎಲ್ಲಾ ಕ್ರಿಯೆಗಳು ಭಗವಂತನ ಅಧೀನವಾಗಿ ಅವನ ಇಚ್ಛೆಯಂತೆ ನಡೆಯುತ್ತದೆ.
ಇಲ್ಲಿ ಹೇಳಿರುವ ‘ಜೀವರಲ್ಲಿ’ ಚತುರ್ಮುಖನೂ ಒಬ್ಬ. ಹೀಗಾಗಿ ಚತುರ್ಮುಖನನ್ನು ಸೃಷ್ಟಿ ಮಾಡಿದ ಭಗವಂತನಿಗಿಂತ ಮಿಗಿಲಾದ ಅಥವಾ ಅದಕ್ಕೆ ಸಮನಾದ(ತದ್ವತ್/ತಾತ್ತ್ವತಃ) ಇನ್ನೊಂದು ಶಕ್ತಿ ಇಲ್ಲ. ಈ ಶ್ಲೋಕದಲ್ಲಿ  ಚತುರ್ಮುಖ ನಾರದರನ್ನು ‘ಬ್ರಹ್ಮನ್’ ಎಂದು ಸಂಬೋಧಿಸಿರುವುದನ್ನು ಕಾಣುತ್ತೇವೆ.  ‘ಬ್ರಹ್ಮನ್’ ಎಂದರೆ ಭಗವಂತನನ್ನು ತಿಳಿದ ಜ್ಞಾನಿ ಎಂದರ್ಥ. “ಭಗವಂತನನ್ನು ತಿಳಿದ ನಿನಗೆ ಎಲ್ಲವೂ ತಿಳಿದಿದೆ, ಆದರೂ ಪ್ರಪಂಚದ ಜನರ ಸಂದೇಹ ನಿವಾರಣೆಗಾಗಿ, ಅವರ ಮೇಲಿನ ಕಾರುಣ್ಯದಿಂದ ಈ ರೀತಿ ನೀನು ಪ್ರಶ್ನೆ ಮಾಡಿದ್ದೀಯ” ಎನ್ನುವ ಧ್ವನಿ ಆ ಸಂಬೋಧನೆಯ ಹಿಂದಿದೆ.
ಒಟ್ಟಿನಲ್ಲಿ ಹೇಳಬೇಕೆಂದರೆ- “ಆ ಭಗವಂತನೇ ಎಲ್ಲರ ಜಗದ್ಗುರು, ಆತನೇ ಎಲ್ಲವುದರ ಸೂತ್ರದಾರ, ಆತ ಕುಣಿಸಿದಂತೆ ನಾವು ಕುಣಿಯುತ್ತೇವೆ. ಅಂಥಹ ಭಗವಂತನಿಗೆ ನಮ್ಮ ನಮಸ್ಕಾರ. ಆತನನ್ನು ಬಿಟ್ಟು ಜಗತ್ತಿನಲ್ಲಿ ಯಾವುದೇ ಅಸ್ತಿತ್ತ್ವವಿಲ್ಲ” ಎಂದಿದ್ದಾನೆ ಚತುರ್ಮುಖ. ಚತುರ್ಮುಖನ ಈ ಮಾತನ್ನು ಕೇಳಿದಾಗ ನಮಗೊಂದು ಸಂಶಯ ಬರುತ್ತದೆ. ವೇದ ಪುರಾಣಗಳಲ್ಲಿ ಹಲವು ಕಡೆ ಚತುರ್ಮುಖನೇ ಸೃಷ್ಟಿ ಮಾಡಿದ ಎನ್ನುವಂತೆ ಹೇಳಿದ್ದಾರೆ. ಉದಾಹರಣೆಗೆ ಋಗ್ವೇದದಲ್ಲಿ ಹೇಳುವಂತೆ: ಪ್ರಜಾಪತೇ ನ ತ್ವದೇತಾನ್ಯನ್ಯೋ ವಿಶ್ವಾ ಜಾತಾನಿ ಪರಿ ತಾ ಬಭೂವ (೧೦.೧೨೧.೧೦). ಪ್ರಜಾಪತಿ ಎನ್ನುವ ಹೆಸರು ಚತುರ್ಮುಖನಿಗೂ ಇರುವುದರಿಂದ ಇಲ್ಲಿ ಮೇಲ್ನೋಟಕ್ಕೆ ಚತುರ್ಮುಖನೇ ಆದಿಪುರುಷ ಎನ್ನುವ ಅರ್ಥ ಮೇಲ್ನೋಟಕ್ಕೆ ಕಾಣುತ್ತದೆ. ಈ ರೀತಿಯ ಸಮಸ್ಯೆಗೆ  ಸ್ವಯಂ ಚತುರ್ಮುಖನೇ ಉತ್ತರ ಹೇಳಿರುವುದನ್ನು ಮುಂದಿನ ಶ್ಲೋಕದಲ್ಲಿ ಕಾಣಬಹುದು.

ನಾರಾಯಣಪರಾ ವೇದಾ ದೇವಾ ನಾರಾಯಣಾಂಗಜಾಃ
ನಾರಾಯಣಪರಾ ಲೋಕಾ ನಾರಾಯಣಪರಾ ಮಖಾಃ ೧೫

ನಾರಾಯಣಪರೋ ಯೋಗೋ ನಾರಾಯಣಪರಂ ತಪಃ
ನಾರಾಯಣಪರಂ ಜ್ಞಾನಂ ನಾರಾಯಣಪರಾ ಗತಿಃ ೧೬

ಈ ಮಂತ್ರ ನಾರಾಯಣ ಉಪನಿಷತ್ತಿನ ಅರ್ಥಾನುರೂಪವಾಗಿದೆ. [ಈ ಕುರಿತು ಈಗಾಗಲೇ ಒಂದನೇ ಸ್ಕಂಧದಲ್ಲಿ ಸ್ವಲ್ಪ ಮಟ್ಟಿಗೆ ವಿಶ್ಲೇಶಿಸಿದ್ದೇವೆ. ಉಲ್ಲೇಖಿತ: ೦೧.೦೨.೨೯] ಮಹಾನಾರಾಯಣ ಉಪನಿಷತ್ತಿನಲ್ಲಿ ಹೇಳಿರುವ ಮಾತನ್ನೇ ಇಲ್ಲಿ ಚತುರ್ಮುಖನ ಅನುಸಂಧಾನವಾಗಿ ಭಾಗವತ ನಮ್ಮ ಮುಂದಿಡುತ್ತದೆ. ಇಲ್ಲಿ ‘ನಾರಾಯಣ ಪರಾಃ ವೇದಾಃ’ ಎಂದಿದ್ದಾರೆ.  ನಮಗೆ ತಿಳಿದಂತೆ ವೇದದಲ್ಲಿ ಅನೇಕ ದೇವತೆಗಳ ಉಲ್ಲೇಖ ಬರುತ್ತದೆ ಮತ್ತು ಆ ದೇವತೆಯೇ ಪರಶಕ್ತಿ  ಎಂದು ವೇದ ಹೇಳುವಂತೆ ಕಾಣುತ್ತದೆ. ಆದರೆ  ಮುಖ್ಯಾರ್ಥವಾಗಿ ವೇದದ ಯಾವ ಮಂತ್ರ ತೆಗೆದುಕೊಂಡರೂ ಕೂಡಾ ಅದು ಹೇಳುವುದು ನಾರಾಯಣನನ್ನೇ ಹೊರತು ಇನ್ಯಾರನ್ನೋ ಅಲ್ಲ. [ಈ ಕುರಿತು ಇನ್ನೂ ಹೆಚ್ಚಿನ ವಿವರಣೆಯನ್ನು ಓದುಗರು ಮೊದಲ ಸ್ಕಂಧದ  ಭಾಗವತದ ಮಂಗಲ ಪದ್ಯದಲ್ಲಿ ಕಾಣಬಹುದು. ಉಲ್ಲೇಖಿತ: ೦೧.೦೧.೦೧].   ‘ನಾರಾಯಣ’ ಎನ್ನುವ ಭಗವಂತನ ನಾಮದ ಶಬ್ದನಿಷ್ಪತ್ತಿ ಕೂಡಾ ಇದನ್ನೇ ಹೇಳುತ್ತದೆ. ‘ನಾರ’ ಎಂದರೆ ಅರ(ದೋಷ) ಇಲ್ಲದ್ದು. ಅಂದರೆ ವೇದ. ಅಯನ ಎಂದರೆ ತಿಳಿಯಲ್ಪಡುವವನು.  ಆದ್ದರಿಂದ ನಾರಾಯಣ ಎಂದರೆ ವೇದಗಳಿಂದ ತಿಳಿಯಲ್ಪಡುವ, ಸರ್ವವೇದ ಪ್ರತಿಪಾದ್ಯ ವಾಸುದೇವ.
 ‘ದೇವಾ ನಾರಾಯಣಾಂಗಜಾಃ’. ದೇವತೆಗಳು ಭಗವಂತನ ಅಂಗಭೂತರು.  ವೇದದಲ್ಲಿ ಹೇಳುವಂತೆ: ಅನ್ಗಾನ್ಯನ್ಯಾ ಸಾತ್ಮಾನ್ಗಾನ್ಯನ್ಯಾ ದೇವತಾಃ.  ಹೇಗೆ ಒಬ್ಬ ರಾಜನಿಗೆ ಸಾವಿರಾರು ಮಂದಿ ಪರಿವಾರದವರಿರುತ್ತಾರೋ ಹಾಗೇ ದೇವತೆಗಳು ಭಗವಂತನ ಪರಿವಾರ. ಹೀಗಾಗಿ ವೇದದಲ್ಲಿ ದೇವತೆಗಳ ವರ್ಣನೆ ಬಂದರೆ ಅದು ಮುಖ್ಯಾರ್ಥದಲ್ಲಿ ಭಗವಂತನ ವರ್ಣನೆ, ಆತನ ಪರಿವಾರದ ವರ್ಣನೆ. ದೇವತೆಗಳು ಭಗವಂತನ ಪರಿವಾರಭೂತರೇ ಹೊರತು ಅವರೇ ಸರ್ವಶಕ್ತರಲ್ಲ.  ನಾರಾಯಣನ ಮಹಿಮೆಯನ್ನು ತೋರಿಸುವುದಕ್ಕಾಗಿ ಇತರ ವಿಷಯಗಳನ್ನು ವೇದ ಹೇಳುತ್ತದೆಯೇ ಹೊರತು ಅದೇ ಮುಖ್ಯಾರ್ಥವಲ್ಲ. ಹಾಗೆ ಹೇಳುವುದರ ಮುಖ್ಯ ಉದ್ದೇಶ ಭಗವಂತನ ಪಾರಮ್ಯವನ್ನು ತಿಳಿಸಿ ಹೇಳುವುದು. ಹೀಗಾಗಿ ನಾವು ವೇದದ ಯಾವುದೇ ಸೂಕ್ತವನ್ನು ತೆಗೆದು ನೋಡಿದರೂ ಕೂಡಾ,  ಅಲ್ಲಿರುವ ಶಬ್ದ ಯಾವುದೇ ಆಗಿದ್ದರೂ ಕೂಡಾ, ಅದು ನಾರಾಯಣನನ್ನು ಹೇಳುವ ಪದವಾಗಿರುತ್ತದೆ ಎನ್ನುವುದನ್ನು ತಿಳಿದಿರಬೇಕು.  ವೇದದಲ್ಲಿನ ಪ್ರತಿಯೊಂದು ಪದಕ್ಕೂ ಯೋಗಾರ್ಥವಿದೆ. ಅದನ್ನು ರೂಢಾರ್ಥದಲ್ಲಿ ಅಲ್ಲಿ ಬಳಸಿರುವುದಿಲ್ಲ. ಹೀಗಾಗಿ ವೇದಾಧ್ಯಯನ ಮಾಡುವಾಗ ಪ್ರತೀ ಶಬ್ದವನ್ನೂ ಅದರ ನಿರ್ವಚನದಿಂದ ತಿಳಿದು ಗ್ರಹಣ ಮಾಡಿಕೊಳ್ಳಬೇಕಾಗುತ್ತದೆ. ಯೋ ದೇವಾನಾಂ ನಾಮಧಾ ಏಕ ಏವ ತಂ ಸಂಪ್ರಶ್ನಂ ಭುವನಾ ಯಂತ್ಯನ್ಯಾ  ಋಗ್ವೇದ- ೧೦.೦೮೨.೦೩ ಎಲ್ಲಾ ಶಬ್ದಗಳೂ ಪೂರ್ಣ ಅನ್ವಯವಾಗುವುದು ಆ ಭಗವಂತನಲ್ಲಿ. ಅಂಥಹ ಭಗವಂತ ತನ್ನ ನಾಮವನ್ನೇ ಇನ್ನೊಬ್ಬರಿಗೆ ಕೊಟ್ಟ. ಈ ರೀತಿ ವೈದಿಕವಾದ ಪ್ರಕ್ರಿಯೆಯಿಂದ ಪ್ರತಿಯೊಂದ ಶಬ್ದದ ಅರ್ಥ ನಿರ್ವಚನ ಮಾಡುತ್ತಾ, ಅದರ ಪೂರ್ಣಾರ್ಥದಲ್ಲಿ ನಾವು ಆ ಶಬ್ದವನ್ನು ಅನುಸಂಧಾನ ಮಾಡಿದಾಗ ಸಮಸ್ತ ವೇದಗಳೂ ನಾರಾಯಣ ಪರವಾಗಿರುವುದು ಕಾಣುತ್ತದೆ.  ಹೀಗೆ ಸಮಸ್ತ ವೇದಗಳೂ ಅಂತತಃ ಹೇಳುವುದು ನಾರಾಯಣನನ್ನೇ. [ಈ ಕುರಿತು ಇನ್ನೂ ಹೆಚ್ಚಿನ ವಿವರಣೆಯನ್ನು ಓದುಗರು ಮೊದಲ ಸ್ಕಂಧದ  ಎರಡನೇ ಅಧ್ಯಾಯದಲ್ಲಿ ಕಾಣಬಹುದು. ಉಲ್ಲೇಖಿತ: ೦೧.೦೨.೨೯].
ನಾರಾಯಣಪರಾ ಮಖಾಃ ಎನ್ನುವಲ್ಲಿ ಮಖಾಃ ಎಂದರೆ ಯಜ್ಞ. “ಯಜ್ಞಗಳಿಂದ ಆರಾಧಿಸಬೇಕಾದ ಸಂಗತಿಗಳೆಲ್ಲವೂ ನಾರಾಯಣ ಪರ” ಎಂದಿದ್ದಾನೆ ಚತುರ್ಮುಖ. ಯಜ್ಞದ ಮೂಲ ಉದ್ದೇಶ  ಭಗವಂತನ ಅನುಗ್ರಹ ಹೊರತು ಲೌಕಿಕ ಫಲಗಳಲ್ಲ. ಇದೇ ರೀತಿ ನಾರಾಯಣಪರಾ ಲೋಕಾಃ  ಎನ್ನುವಲ್ಲಿ ಲೋಕಾಃ ಎಂದರೆ ತಿಳುವಳಿಕೆ ಇರುವ ಜನರು ಎಂದರ್ಥ.  ತಿಳಿದವರಿಗೆ(ಜ್ಞಾನಿಗಳಿಗೆ) ತಿಳಿದಿದೆ ನಾರಾಯಣನೊಬ್ಬನೇ ಹಿರಿಯ ವಸ್ತು ಎನ್ನುವುದು. [ಈ ಎಲ್ಲಾ ವಿಷಯಗಳನ್ನು ಶಾಸ್ತ್ರ ಸ್ಪಷ್ಟವಾಗಿ ಹೇಳಿದರೂ ಕೂಡಾ ಇಂದು ಇವೆಲ್ಲವೂ ಕೇವಲ ಪೂಜಾ ಸಂಕಲ್ಪದಲ್ಲಿ ಮಾತ್ರ ಉಳಿದುಕೊಂಡು ಬಿಟ್ಟಿದೆ. ಭಗವದ್ ಪ್ರೇರಣಾಯಾ ಭಗವದ್ ಪ್ರೀತ್ಯರ್ಥಂ ಎನ್ನುವ ಸಂಕಲ್ಪ  ಸ್ಪಷ್ಟವಾಗಿ ಮೇಲಿನ ಮಾತನ್ನು ಹೇಳುತ್ತದೆ. ಪೂಜೆಯ ಕೊನೆಯಲ್ಲಿ ಕೃಷ್ಣಾರ್ಪಣಮಸ್ತು ಎಂದು ಅರ್ಪಿಸುವ ಉದ್ದೇಶವೂ ಇದೇ. ಆದರೆ ಇಂದು ಸಂಕಲ್ಪದ ಮೂಲ ಉದ್ದೇಶ ತಿಳಿಯದೇ ಏನೇನೋ ಐಹಿಕ ಕಾಮನೆಗಳನ್ನು ಜನ ತಮ್ಮ ಸಂಕಲ್ಪದಲ್ಲಿ   ಸೇರಿಸಿಕೊಂಡು ಬಿಟ್ಟಿದ್ದಾರೆ].
“ಯೋಗ, ತಪಸ್ಸು ಎಲ್ಲವೂ ನಾರಾಯಣ ಪರ”  ಎಂದಿದ್ದಾನೆ ಚತುರ್ಮುಖ. ಯಮ-ನಿಯಮ-ಪ್ರಾಣಾಯಾಮ ಇತ್ಯಾದಿ ಎಲ್ಲವೂ ಮನಸ್ಸನ್ನು ಏಕಾಗ್ರಗೊಳಿಸುವ ಸಾಧನ. ಏಕಾಗ್ರ ಮನಸ್ಸಿನಿಂದ ಭಗವಂತನ ಚಿಂತನೆ ಮಾಡುವುದಕ್ಕಾಗಿ ಈ ಎಲ್ಲಾ ಸಾಧನಗಳಿರುವುದು. ಎಲ್ಲಾ ಯೋಗಗಳ ಕೊನೆಯ ಗುರಿ ಆ ಭಗವಂತ. ತಪಸ್ಸು ಎಂದರೆ  ನಿರಂತರವಾಗಿ ಆಳವಾದ ಚಿಂತನೆ ಮಾಡಿ ಸತ್ಯವನ್ನು(ಸತ್ಯ ನಾಮಕನಾದ ನಾರಾಯಣನನ್ನು) ತಿಳಿಯುವುದೇ ಆಗಿದೆ.
ಜಗತ್ತಿನ ಮೂಲಸತ್ಯ ಆ ನಾರಾಯಣ ಎಂದು ತಿಳಿಯುವುದೇ ನಿಜವಾದ ಜ್ಞಾನ. ಅರಿವಿನ ಕೊನೆ ಆ ಭಗವಂತ. ನಾವು ಈ ಪ್ರಪಂಚವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ಪ್ರತಿಯೊಂದನ್ನೂ ಪರಮಾಣುವಿನ ತನಕ ತಿಳಿಯುವ ಪ್ರಯತ್ನ ಮಾಡಬಹುದು. ಆದರೆ ಹಾಗೆ ಮಾಡುವುದರಿಂದ ಅದು ಏಕೆ ಆ ರೀತಿ ಇದೆ ಎನ್ನುವುದು ತಿಳಿಯುವುದಿಲ್ಲ. ಆದ್ದರಿಂದ ಎಲ್ಲಾ ಮುಖಗಳಿಂದ ಸತ್ಯ ತಿಳಿಯಬೇಕಾದರೆ  ಎಲ್ಲವುದಕ್ಕೂ ಕಾರಣೀಭೂತವಾಗಿರುವ ಮೂಲಶಕ್ತಿಯನ್ನು ಅರಿಯಬೇಕು. ಆ ಮೂಲಶಕ್ತಿ ಭಗವಂತನೇ ನಮ್ಮ ಜ್ಞಾನದ ಕೊನೆ. ನಮ್ಮ ಸಾಧನೆಯ ಕೊನೇ ಗುರಿ ಆ ಭಗವಂತ. ಹಾಗಾಗಿ ನಮ್ಮ ಎಲ್ಲಾ  ನಡೆಯೂ ಆ ಭಗವಂತನನ್ನು ಸೇರುವುದಕ್ಕೆ ಪೋಷಕವಾಗಿರಬೇಕು.

ಮೇಲಿನ ಎರಡು ಶ್ಲೋಕಗಳಲ್ಲಿ ಚತುರ್ಮುಖ ಬ್ರಹ್ಮ  ವೇದ-ಶಾಸ್ತ್ರಗಳ ಸಮಷ್ಟಿ  ಚಿತ್ರಣವನ್ನು ನಮ್ಮ ಮುಂದಿರಿಸಿರುವುದನ್ನು ನಾವು ನೋಡಿದೆವು. “ತಿಳಿದುಕೊಳ್ಳಬೇಕಾಗಿರುವುದರ ಕೊನೆ ಆ ನಾರಾಯಣ; ಹೋಗಿ ಸೇರಬೇಕಾದ, ಮತ್ತೆ ಮರಳಿ ಬಾರದ ತಾಣ ಆ ನಾರಾಯಣ. ಇಂಥಹ ಭಗವಂತ  ನನ್ನನ್ನು ಸೃಷ್ಟಿ ನಿರ್ಮಾಣಕ್ಕೆ ಸಾಧನವಾಗಿ(instrument) ಬಳಸುತ್ತಾನೆ.  ಹೀಗಿರುವಾಗ ನಾನೆಲ್ಲಿಯ ಜಗದ್ಗುರು” ಎಂದು ನಾರದರನ್ನು ಪ್ರಶ್ನಿಸುತ್ತಾನೆ ಚತುರ್ಮುಖ.