Monday, March 31, 2014

Shrimad BhAgavata in Kannada -Skandha-02-Ch-04(03)

ಭೂಯೋ ನಮಃ ಸದ್ವೃಜಿನಚ್ಛಿದೇSಸತಾಮಸಂಭವಾಯಾಖಿಲಸತ್ತ್ವಮೂರ್ತಯೇ
ಪುಂಸಾಂ ಪುನಃ ಪಾರಮಹಂಸ್ಯ ಆಶ್ರಮೇ ವ್ಯವಸ್ಥಿತಾನಾಮನುಮೃಗ್ಯ ದಾಶುಷೇ ೧೩

“ಮತ್ತೆ ಮತ್ತೆ ನಮಸ್ಕಾರ” ಎನ್ನುತ್ತಾರೆ ಶುಕಾಚಾರ್ಯರು. ಯಾರು ಸಾತ್ತ್ವಿಕರೋ  ಅವರ ಪಾಪವನ್ನು ತೊಳೆದು, ಅವರ ದುಃಖವನ್ನು(ವೃಜಿನ/ಬೃಜಿನ/ಪಾಪದಿಂದ ಬರುವ ದುಃಖವನ್ನು)ಪರಿಹಾರ ಮಾಡುವವನು; ದುಷ್ಟರಿಗೆ/ತಾಮಸರಿಗೆ ಎಂದೂ ಉನ್ನತಿಯ ಮಾರ್ಗವನ್ನು ತೋರದವನು(ಅಸಂಭವ); ಸರ್ವಗುಣಪೂರ್ಣನು; ಸತ್ತ್ವಸ್ವರೂಪನು; ಗುಣತ್ರಯಗಳ ಸ್ಪರ್ಶವೇ ಇಲ್ಲದ ಜ್ಞಾನಾನಂದಗಳ ಅಖಂಡ ಮೂರ್ತಿ; ತಮ್ಮ ಜೀವನವನ್ನು ಭಗವಂತನ ಉಪಾಸನೆಗೆ ಮೀಸಲಿಡುವ, ತಮ್ಮೊಳಗೆ ಪೂರ್ಣವಾಗಿ ಭಗವಂತನನ್ನು ತುಂಬಿಕೊಂಡವರ(ಪಾರಮಹಂಸ್ಯ) ಚಿಂತನೆಗೆ ನಿಲುಕುವ ಮತ್ತು ಅವರಿಗೆ ಬಯಸಿದ್ದನ್ನು ಕರುಣಿಸುವ  ನಾರಾಯಣನಿಗೆ ನಮಸ್ಕಾರ ಎಂದು ಶುಕಾಚಾರ್ಯರು ಭಗವಂತನನ್ನು ಸ್ತುತಿಸುತ್ತಾರೆ.

ಸ ಏಷ ಆತ್ಮಾSSತ್ಮವತಾಮಧೀಶ್ವರಸ್ತ್ರಯೀಮಯೋ ಧರ್ಮಮಯಸ್ತಪೋಮಯಃ
ಗತವ್ಯಲೀಕೈರಜಶಂಕರಾದಿಭಿರ್ವಿತರ್ಕ್ಯಲಿಂಗೋ ಭಗವಾನ್ ಪ್ರಸೀದತಾಮ್ ೧೯

ಎಲ್ಲರ ಅಂತರ್ಯಾಮಿ, ಎಲ್ಲರ ಸ್ವಾಮಿ ಭಗವಂತ ಮನನಶೀಲ ಜ್ಞಾನಿಗಳಿಗೆ(ಆತ್ಮವಂತರಿಗೆ) ಅಧೀಶ್ವರ. [ಭಗವಂತ ಎಲ್ಲರಿಗೂ ಸ್ವಾಮಿ. ಆದರೆ ಎಲ್ಲರಿಗೂ ಆ ಜ್ಞಾನ ಇರುವುದಿಲ್ಲ ಅಷ್ಟೇ]. ಇಂಥಹ ಭಗವಂತನನ್ನು ಶುಕಾಚಾರ್ಯರು ತ್ತ್ರೀಯೀಮಯಃ, ಧರ್ಮಮಯಃ, ತಪೋಮಯಃ ಎಂದು ಸ್ತುತಿಸಿದ್ದಾರೆ. ತ್ತ್ರೀಯೀಮಯಃ ಎಂದರೆ: ವೇದವೇ ಅವನ ಅರಿವಿಗೆ ಮತ್ತು ಅನುಗ್ರಹಕ್ಕೆ ಪ್ರಧಾನ  ಕಾರಣವಾಗಿರುವವನು; ಧರ್ಮಮಯಃ ಎಂದರೆ: ಧಾರ್ಮಿಕ ಜೀವನವೇ ಅವನ ಅನುಗ್ರಹಕ್ಕೆ ಪ್ರಧಾನ ಕಾರಣವಾಗಿರುವವನು. ತಪೋಮಯಃ ಎಂದರೆ: ತಪಸ್ಸೇ  ಅವನ ಅನುಗ್ರಹಕ್ಕೆ ಪ್ರಧಾನ ಕಾರಣವಾಗಿರುವವನು.
ಕೇವಲ ನಿರ್ವ್ಯಾಜ್ಯ ಭಕ್ತಿಯಿಂದ ಭಗವಂತನನ್ನು ತಿಳಿಯುವುದು ಸಾಧ್ಯ. ಕಪಟ ಭಕ್ತಿ, ಕಪಟ ಪಾಂಡಿತ್ಯದಿಂದ ಜನರನ್ನು ಮೋಸಗೊಳಿಸಬಹುದೇ ಹೊರತು ಭಗವಂತನನ್ನಲ್ಲ. ತಮ್ಮ ನಿರ್ವ್ಯಾಜ್ಯ ಭಕ್ತಿಯಿಂದ ಬ್ರಹ್ಮ-ರುದ್ರಾದಿಗಳು “ಭಗವಂತನ ಇರವು ಹೀಗಿರಬಹುದು” ಎಂದು ಊಹಿಸುತ್ತಾರೆ. ಅಂದರೆ ಅವರಿಗೂ ನಿಶ್ಚಿತರೂಪವಾಗಿ ಭಗವಂತ ಹೀಗೆಯೇ ಎಂದು ಹೇಳುವುದು ಸಾಧ್ಯವಿಲ್ಲ. “ಇಂಥಹ ಭಗವಂತ ನಮಗೆ ಅನುಗ್ರಹ ಮಾಡಲಿ; ನನಗೆ ಇದನ್ನು ಉಪದೇಶ ಮಾಡಿದಂತಹ ವೇದವ್ಯಾಸರೂಪಿ ಭಗವಂತನ ಅನುಗ್ರಹ ನಮ್ಮ ಮೇಲಿರಲಿ; ಆತ  ನನ್ನ ನಾಲಿಗೆಯಲ್ಲಿ ಕುಳಿತು ನನ್ನಿಂದ ನುಡಿಸಲಿ” ಎಂದು ಪ್ರಾರ್ಥಿಸುತ್ತಾರೆ ಶುಕಾಚಾರ್ಯರು.

ಏತದೇವಾತ್ಮಭೂ ರಾಜನ್ ನಾರದಾಯೇತಿ ಪೃಚ್ಛತೇ
ವೇದಗರ್ಭೋSಭ್ಯಧಾತ್ ಸರ್ವಂ ಯದಾಹ ಹರಿರಾತ್ಮನಃ ೨೫

ಶುಕಾಚಾರ್ಯರು ಹೇಳುತ್ತಾರೆ: “ಸೃಷ್ಟಿಯ ಆದಿಯಲ್ಲಿ ಭಗವಂತ ಚತುರ್ಮುಖನಿಗೆ ಏನನ್ನು ಉಪದೇಶ ಮಾಡಿದನೋ; ಚತುರ್ಮುಖ ತನ್ನ ಮಾನಸಪುತ್ರ ನಾರದರಿಗೆ ಏನನ್ನು ಉಪದೇಶ ಮಾಡಿದನೋ; ನನ್ನ ತಂದೆ ವೇದವ್ಯಾಸರು ನನಗೆ ಏನು ಉಪದೇಶ ಮಾಡಿದರೋ;  ಅದನ್ನೇ ಯಥಾವತ್ತಾಗಿ ನಾನು ಇನ್ನು ಮುಂದೆ ನಿನಗೆ ಹೇಳಲಿದ್ದೇನೆ” ಎಂದು.  ಭಗವಂತ ಸೃಷ್ಟಿ-ಸ್ಥಿತಿ-ಸಂಹಾರವನ್ನು ಯಾವ ಕಾರಣಕ್ಕಾಗಿ ಮಾಡುತ್ತಾನೆ ಎನ್ನುವ ಪ್ರಶ್ನೆಯನ್ನು ಹಿಂದೆ ನಾರದರು ತಮ್ಮ ತಂದೆ ಚತುರ್ಮುಖನಲ್ಲಿ ಕೇಳಿದ್ದರು. ಅದೇ ಪ್ರಶ್ನೆಯನ್ನು ಇಲ್ಲಿ ಪರೀಕ್ಷಿತ ಶುಕಾಚಾರ್ಯರಲ್ಲಿ ಕೇಳಿದ್ದಾನೆ. ಚತುರ್ಮುಖ ವೇದಗರ್ಭ. ಅಂದರೆ ಸಮಸ್ತ ವೇದಗಳೂ ಆತನ ಗರ್ಭದಲ್ಲಿ ಸದಾ ನೆಲೆಸಿರುತ್ತವೆ. ತನ್ನ ನಾಲ್ಕು ಮುಖಗಳಿಂದ ನಾಲ್ಕು ವೇದಗಳನ್ನು ಅಭಿವ್ಯಕ್ತಗೊಳಿಸಿದವನು ಚತುರ್ಮುಖ. ಇಂಥ ಚತುರ್ಮುಖ ಸ್ವಯಂ ನಾರಾಯಣನಿಂದ ಪಡೆದ ಜ್ಞಾನವನ್ನು ತನ್ನ ಮಗ ನಾರದನಿಗೆ ಉಪದೇಶಿಸಿದ. ಅದೇ ರೀತಿ  ನನ್ನ ತಂದೆ ವೇದವ್ಯಾಸರು ನನಗೆ ಉಪದೇಶಿಸಿದ ಈ ಭಾಗವತವನ್ನು ಯಥಾವತ್ತಾಗಿ ನಾನು ನಿನಗೆ ಹೇಳುತ್ತೇನೆ ಎಂದು ಮಂಗಳಾಚರಣೆ ಮಾಡುತ್ತಾರೆ ಶುಕಾಚಾರ್ಯರು.    

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ದ್ವಿತೀಯಸ್ಕಂಧೇ ಚತುರ್ಥೋSಧ್ಯಾಯಃ
ಭಾಗವತ ಮಹಾಪುರಾಣದ ಎರಡನೇ  ಸ್ಕಂಧದ ನಾಲ್ಕನೇ ಅಧ್ಯಾಯ ಮುಗಿಯಿತು

*********

Sunday, March 30, 2014

Shrimad BhAgavata in Kannada -Skandha-02-Ch-04(02)

ಪರೀಕ್ಷಿತನ ಪ್ರಾರ್ಥನೆಯನ್ನು ಕೇಳಿದ ಶುಕಾಚಾರ್ಯರು ಹೇಳುತ್ತಾರೆ: “ಈ ಉಪದೇಶದ ಹಿಂದೆ ದೊಡ್ಡ ಇತಿಹಾಸವಿದೆ. ಮೊಟ್ಟಮೊದಲು ಸೃಷ್ಟಿಯ ಆದಿಯಲ್ಲಿ ಭಾಗವತದ ಪ್ರಮೇಯವನ್ನು ಸ್ವಯಂ ನಾರಾಯಣ ಚತುರ್ಮುಖನಿಗೆ ಉಪದೇಶಿಸಿದ. ಆನಂತರ ನಾರದರ ನಿವೇದನೆಯಂತೆ, ಸಮಸ್ತ ಮನುಕುಲದ ಉದ್ಧಾರಕ್ಕಾಗಿ  ಭಗವಾನ್ ವೇದವ್ಯಾಸರು ಭಾಗವತ ರಚನೆ ಮಾಡಿದರು. ಹೀಗೆ ವೇದವ್ಯಾಸರಿಂದ ನನಗೆ ಹರಿದು ಬಂದ ಜ್ಞಾನವನ್ನು ನಾನು ನಿನಗೆ ನೀಡುತ್ತಿದ್ದೇನೆ” ಎಂದು.  ಹೀಗೆ ಒಂದು ದೃಷ್ಟಿಯಿಂದ ಸೃಷ್ಟಿಯ ಆದಿಯಿಂದ ಬೆಳೆದುಬಂದ ಜ್ಞಾನ ಪರಂಪರೆ ಅತ್ತ್ಯಂತ ಮಹತ್ತ್ವದ್ದು ಮತ್ತು ಪುರಾತನವಾದುದ್ದು. ಭಗವಂತನಿಂದ ಬಂದ ಹಾಗೂ ಭಗವಂತನ ಬಗೆಗಿನ ಜ್ಞಾನವಾದುದರಿಂದ ಇದು ಭಾಗವತ. “ಅತ್ಯಂತ ರಹಸ್ಯವಾದ ಈ ಜ್ಞಾನ ಪರಂಪರೆಯನ್ನು ನನ್ನ ತಂದೆಯಾದ ವೇದವ್ಯಾಸರಿಂದ ಕೇಳಿದ್ದೇನೆ. ಅದನ್ನೇ ವಿಸ್ತಾರವಾಗಿ ನಿನಗೆ ಹೇಳುತ್ತೇನೆ.  ಹೇಳುವ ಮೊದಲು ನಾವೆಲ್ಲರೂ ಆ ಭಗವಂತನನ್ನು ಧ್ಯಾನ ಮಾಡೋಣ. ನಮ್ಮ ಮನಸ್ಸು ಆ ಭಗವಂತನಲ್ಲಿ ಶ್ರುತಿಗೂಡಲಿ” ಎಂದು ಹೇಳಿ ಪುನಃ ವಿಸ್ತಾರವಾಗಿ ಮಂಗಳಾಚರಣೆ ಮಾಡುತ್ತಾರೆ ಶುಕಾಚಾರ್ಯರು. 
ಶ್ರೀಶುಕ ಉವಾಚ--
ನಮಃ ಪರಸ್ಮೈ ಪುರುಷಾಯ ಭೂಯಸೇ ಸದುದ್ಭವಸ್ಥಾನನಿರೋಧಲೀಲಯಾ
ಗೃಹೀತಶಕ್ತಿತ್ರಿತಯಾಯ ದೇಹಿನಾಮಂರ್ಧ್ರುವಾಯಾನುಪಲಭ್ಯವರ್ತ್ಮನೇ ೧೨

ಮಂಗಳಾಚರಣೆ ಮಾಡುತ್ತಾ ಶುಕಮುನಿಗಳು ಹೇಳುತ್ತಾರೆ: “ಯಾರನ್ನು ಉಪಾಸನೆ ಮಾಡಿದರೆ ಎಲ್ಲವನ್ನೂ ಪಡೆಯಬಹುದೋ ಆ ಪರಮ ಪುರುಷ ಭಗವಂತನಿಗೆ ನಮಸ್ಕಾರ. ಈ ಸತ್ಯವಾದ(ಸತ್) ಪ್ರಪಂಚದ ಉದ್ಭವ-ಸ್ಥಾನ-ನಿರೋಧ ಅಥವಾ ಸೃಷ್ಟಿ-ಸ್ಥಿತಿ-ಸಂಹಾರ ಯಾರಿಗೆ ಒಂದು ಲೀಲೆಯೋ ಅವನಿಗೆ ನಮಸ್ಕಾರ” ಎಂದು. ಹೀಗೆ ಹೇಳುವಾಗ ಇಲ್ಲಿ “ಭಗವಂತ ಇದ್ದದ್ದನ್ನು ಸೃಷ್ಟಿ ಮಾಡಿದ” ಎಂದು ಒಂದು ಮುಖ್ಯವಾದ ಮಾತನ್ನು ಹೇಳುವುದನ್ನು ಕಾಣುತ್ತೇವೆ. ಈ ಮಾತು ಕೆಲವರಿಗೆ ಗೊಂದಲವನ್ನುಂಟುಮಾಡುತ್ತದೆ. ಈ ಮಾತನ್ನು ನಾವು ಅರ್ಥ ಮಾಡಿಕೊಳ್ಳಬೇಕಾದರೆ ನಮಗೆ ‘ಸೃಷ್ಟಿ’ ಎನ್ನುವ ಪದದ ಅರ್ಥ ಏನು ಎನ್ನುವುದು ತಿಳಿದಿರಬೇಕು. ಸೃಷ್ಟಿ ಎಂದರೆ ಇಲ್ಲದ್ದು ಉಂಟಾಗುವುದಲ್ಲ, ಬದಲಿಗೆ ಇರುವ ವಸ್ತುವಿಗೆ ಆಕಾರ ಬರುವುದು. ಕುಂಬಾರನಿಂದ ಮಡಿಕೆ ಸೃಷ್ಟಿಯಾಯಿತು ಎಂದರೆ ಅಲ್ಲಿ ಮಣ್ಣು-ನೀರು ಎಲ್ಲವೂ ಇತ್ತು. ಇದ್ದ ವಸ್ತುಗಳೇ ಸೇರಿ ಅದರಿಂದ ಹೊಸದೊಂದು ಆಕಾರ ನಿರ್ಮಾಣವಾಯಿತು ಅಷ್ಟೇ. ಇದೇ ರೀತಿ ಭಗವಂತ ಇರುವ ವಸ್ತುವಿಗೆ ಆಕಾರ ಕೊಟ್ಟು, ಈ ನಾಮಾತ್ಮಕ ಮತ್ತು ರೂಪಾತ್ಮಕ ಪ್ರಪಂಚವನ್ನು ನಿರ್ಮಾಣ ಮಾಡುತ್ತಾನೆ. ಹೀಗಾಗಿ ಈ ಪ್ರಪಂಚ ಸತ್. ಅಂದರೆ ಇತ್ತು, ಇದ್ದದ್ದಕ್ಕೇ ಒಂದು ಆಕಾರ ಬಂತು. ಪ್ರಪಂಚವನ್ನು ಸೂಕ್ಷ್ಮವಾಗಿ ನೋಡಿದರೆ ಈ ಸತ್ಯ ನಮಗೆ ತಿಳಿಯುತ್ತದೆ. ಉದಾಹರಣೆಗೆ ಹುಟ್ಟುವುದು ಎಂದರೆ ಅಲ್ಲಿ ಕಾಣುವ ಒಂದು ಶರೀರ ಬರುವುದು. ಅದೇ ರೀತಿ ಸಾಯುವುದು ಎಂದರೆ ಕಾಣುವ ಶರೀರ ಹೋಗುವುದು. ಮೂಲತಃ ಜೀವಕ್ಕೆ ಹುಟ್ಟೂ ಇಲ್ಲಾ, ಸಾವೂ ಇಲ್ಲಾ. ಅದು ಅನಾದಿನಿತ್ಯ. ಇದೇ ರೀತಿ ಪ್ರಳಯ ಕಾಲದಲ್ಲಿ ಭೂಮಿ ಸಿಡಿದು ನಾಶವಾಯಿತು ಎಂದರೆ ಕಣ್ಣಿಗೆ ಕಾಣುವ ಭೂಮಿ ಸಿಡಿದು ಕಣ್ಣಿಗೆ-ಕಾಣದ ಅಣು-ಕಣವಾಗಿ ವಾತಾವರಣದಲ್ಲಿ ಪರಮಾಣು ಸಮುದ್ರವಾಗಿರುವುದೇ ಹೊರತು ಇಲ್ಲವಾಗುವುದಲ್ಲ.
ಈ ಶ್ಲೋಕದಲ್ಲಿ ‘ಗೃಹೀತಶಕ್ತಿತ್ರಿತಯಾಯ’ ಎನ್ನುವಲ್ಲಿ  ಸೃಷ್ಟಿ-ಸ್ಥಿತಿ-ಸಂಹಾರ ಮಾಡುವುದಕ್ಕಾಗಿ ಭಗವಂತ ಮೂರು ಶಕ್ತಿಗಳನ್ನು ಪ್ರಪಂಚದಿಂದ ತೆಗೆದುಕೊಳ್ಳುತ್ತಾನೆ ಎಂದು ಹೇಳಿದಂತೆ ಕಾಣುತ್ತದೆ. ಆದರೆ ಇಲ್ಲಿ ಹೇಳುವುದು ಅದನ್ನಲ್ಲ. ಏಕೆಂದರೆ ಪ್ರಕಾಶಸಂಹಿತಾದಲ್ಲಿ ಹೀಗೆ ಹೇಳಿದ್ದಾರೆ: 
ಗೃಹೀತಶಕ್ತಿತ್ರಿತಯಾಯಯೇತಿ
ಇಚ್ಛಾ ಜ್ಞಾನಂ ಕ್ರಿಯಾ ಚೇತಿ ನಿತ್ಯಾಃ ಶಕ್ತಯ ಈಶಿತುಃ
ಸ್ವರೂಪಭೂತಾ ಅಪಿತು ಭೇದವದ್ ವ್ಯಾವಹಾರಿಕಾಃ
-ಇತಿ ಪ್ರಕಾಶಸಂಹಿತಾವಚನಾನ್ನಿತ್ಯ ಗೃಹೀತಶಕ್ತಿತ್ವಮೇವ

ಭಗವಂತ ತನ್ನಲ್ಲಿರುವ ಮೂರು ನಿತ್ಯಶಕ್ತಿಗಳಿಂದ ಎಲ್ಲವನ್ನೂ ಮಾಡುತ್ತಾನೆ. ಅವುಗಳೆಂದರೆ: ಇಚ್ಛಾಶಕ್ತಿ,  ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿ. ಯಾವುದೇ ಒಂದು ಕ್ರಿಯೆ ಆಗಬೇಕಾದರೆ ಬೇಕಾಗಿರುವ ಮೂಲಭೂತ ಆಂತರಿಕ ಶಕ್ತಿಗಳಿವು. ಇವು ಭಗವಂತನ ಸ್ವರೂಪಭೂತ ಶಕ್ತಿಗಳು. [ಸತ್ವ-ರಜಸ್ಸು-ತಮಸ್ಸು ಬಾಹ್ಯ ಶಕ್ತಿಗಳು. ಇವು  ಒಮ್ಮೊಮ್ಮೆ ಶಕ್ತಿಗಳಾಗಿರದೇ ಅಶಕ್ತಿಯಾಗಿ ನಮ್ಮ ದೌರ್ಬಲ್ಯಕ್ಕೆ ಕಾರಣವಾಗುತ್ತವೆ]. ಹೀಗೆ ಭಗವಂತನ ಸ್ವರೂಪಭೂತವಾಗಿರುವ ಮೂರು ಶಕ್ತಿಗಳಿಂದಲೇ ಸೃಷ್ಟಿ-ಸ್ಥಿತಿ-ಸಂಹಾರ ನಡೆಯುತ್ತದೆ. ಪ್ರಾಪಂಚಿಕವಾಗಿ ನೋಡಿದರೂ ಕೂಡಾ ನಮಗೆ ಈ ವಿಷಯ ಸ್ಪಷ್ಟವಾಗಿ ತಿಳಿಯುತ್ತದೆ. ಉದಾಹರಣೆಗೆ ಮಡಕೆಯನ್ನು ಒಬ್ಬ ಕುಂಬಾರ ಮಾಡಬೇಕಾದರೆ ಆ ಮಡಕೆಯನ್ನು ಯಾವ ಮಣ್ಣಿನಿಂದ ಮಾಡಬೇಕು, ಎಷ್ಟು ನೀರು ಹಾಕಬೇಕು, ಎಷ್ಟು ಹದ ಮಾಡಬೇಕು, ಹೇಗೆ ಆಕಾರ ಕೊಡಬೇಕು, ಇತ್ಯಾದಿ ಜ್ಞಾನ ಬೇಕು. ಕೇವಲ ಜ್ಞಾನ ಇದ್ದರೆ ಸಾಲದು, ಮಾಡಬೇಕು ಎನ್ನುವ ಇಚ್ಛೆ ಇರಬೇಕು ಮತ್ತು ಬಾಹ್ಯ ಪರಿಕರಗಳನ್ನು ಬಳಸಿ ಮಾಡಬೇಕು. ಹೀಗೆ ಯಾವುದೇ ಒಂದು ವಸ್ತು ನಿರ್ಮಾಣವಾಗಬೇಕಾದರೆ ಅಲ್ಲಿ ಇಚ್ಛಾಶಕ್ತಿ,  ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳು ಮೂಲಭೂತ ಶಕ್ತಿಗಳಾಗಿರುತ್ತವೆ. ಇವು ಮೊಟ್ಟಮೊದಲು ಸೃಷ್ಟಿಯ ಹಿನ್ನೆಲೆಯಲ್ಲಿ ಭಗವಂತನಲ್ಲಿರುವ ಶಕ್ತಿಗಳು. ಭಗವಂತನ ಜ್ಞಾನವೇ ಆತನ ಇಚ್ಛೆ, ಆತನ ಇಚ್ಛೆಯೇ ಆತನ ಕ್ರಿಯೆ, ಆತನ ಕ್ರಿಯೆಯೇ ಆತನ ಜ್ಞಾನ.   ಇನ್ನು ಈ ಶ್ಲೋಕದಲ್ಲಿ ‘ಗ್ರಹೀತ’ ಎನ್ನುವ ಪದ ಬಳಕೆ ಏಕೆ ಮಾಡಿದರು ಎನ್ನುವುದು ಪ್ರಶ್ನೆ. ಗ್ರಹೀತ ಎಂದರೆ ಇಲ್ಲದೇ ಇರುವುದಲ್ಲ, ಇದ್ದ ಶಕ್ತಿಯನ್ನು ಬೇಕಾದಾಗ ಬಳಸುವುದು.  ಭಗವಂತನಲ್ಲಿ ಈ ಎಲ್ಲಾ ಶಕ್ತಿಗಳೂ ಸದಾ ಇರುತ್ತವೆ. ಆದರೆ ಅಭಿವ್ಯಕ್ತಿ ಮಾತ್ರ ಯಾವಾಗ ಬೇಕೋ ಆವಾಗ ಎನ್ನುವುದನ್ನು ‘ಗ್ರಹೀತ’ ಪದ ಸೂಚಿಸುತ್ತದೆ.

ಭಗವಂತನ ಕುರಿತು ಹೇಳಿದಾಗ ಎಲ್ಲರಲ್ಲೂ ಮೂಡುವ ಸರ್ವೇ ಸಾಮಾನ್ಯ ಪ್ರಶ್ನೆ- “ಇಂಥಹ ಪರಮ ಪುರುಷ ಭಗವಂತ ಎಲ್ಲಿದ್ದಾನೆ” ಎನ್ನುವುದು. ಈ ಪ್ರಶ್ನೆಗೆ ಉತ್ತರಿಸುತ್ತಾ ಶುಕಾಚಾರ್ಯರು ಹೇಳುತ್ತಾರೆ: “ಆತ ನಮ್ಮೊಳಗೇ ಸ್ಥಿರವಾಗಿದ್ದಾನೆ” ಎಂದು. ಆತ  ನಮ್ಮೊಳಗೆ ಇರುವುದರಿಂದಲೇ ನಮಗೆ ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳಿರುವುದು.  ದೀಪದ ಅಡಿಯಲ್ಲಿರುವುದು ಹೇಗೆ ಕಾಣುವುದಿಲ್ಲವೋ ಹಾಗೇ ಭಗವಂತ ಬಹಳ ಹತ್ತಿರವಿದ್ದರೂ ಕೂಡಾ, ಅವನನ್ನು ಹೋಗಿ ಸೇರುವ ದಾರಿ ನಮಗೆ ಕಾಣುವುದಿಲ್ಲ. ಹೀಗಾಗಿ ನಮ್ಮ ಹತ್ತಿರವೇ ಇರುವ ಭಗವಂತನನ್ನು ನಾವು ಎಲ್ಲೆಲ್ಲೂ ಹುಡುಕಾಡುತ್ತಿರುತ್ತೇವೆ.  ಇದು ಹೇಗೆಂದರೆ: ಮನೆಯೊಂದರಲ್ಲಿ ಎಲ್ಲಾ ವಿದ್ಯುತ್ ದೀಪಗಳಿದ್ದು, ಅದರ ಮುಖ್ಯ ಒತ್ತುಗುಂಡಿ(Main Switch) ತಿಳಿಯದೇ ಕತ್ತಲಲ್ಲಿ ಒದ್ದಾಡಿದಂತೆ. ಒಮ್ಮೆ ಆ ಗುಂಡಿ ಸಿಕ್ಕರೆ ಎಲ್ಲವೂ ಸುಲಭ. ಆದರೆ ಒತ್ತುಗುಂಡಿ(Switch) ಸಿಗುವ ತನಕ ಒದ್ದಾಟ. ಅಧ್ಯಾತ್ಮ ಸಾಧನೆ  ಎನ್ನುವುದು ಬೆಳಕಿನ ಒತ್ತುಗುಂಡಿಯನ್ನು ಹುಡುಕಿದಂತೆ-ಭಗವಂತನನ್ನು ಸೇರುವ ದಾರಿಯನ್ನು ಹುಡುಕುವ ಕ್ರಿಯೆ. ಒಮ್ಮೆ ದಾರಿ ಸಿಕ್ಕರೆ ಎಲ್ಲವೂ  ಬೆಳ್ಳಂಬೆಳಕು.    

Saturday, March 22, 2014

Shrimad BhAgavata in Kannada -Skandha-02-Ch-04(01)



ಚತುರ್ಥೋSಧ್ಯಾಯಃ

ನೈಮಿಶಾರಣ್ಯದಲ್ಲಿ ಶೌನಕಾದಿಗಳಿಗೆ ಭಾಗವತ ಪ್ರವಚನ ಮಾಡುತ್ತಿರುವ ಉಗ್ರಶ್ರವಸ್ಸು, ಶೌನಕಾದಿಗಳು   ತೋರಿದ ಆಸಕ್ತಿಯನ್ನು ನೋಡಿ ಹೇಳುತ್ತಾರೆ: “ನೀವು ಏನು ಹೇಳಿದಿರೋ ಅದೇ ಮಾತನ್ನು ಪರೀಕ್ಷಿತ ಶುಕಾಚಾರ್ಯರಲ್ಲಿ ಹೇಳಿದ” ಎಂದು. ಈ ಹಿಂದೆ ಹೇಳಿದಂತೆ- ಶುಕಾಚಾರ್ಯರು ಎಲ್ಲವನ್ನೂ ಸಂಕ್ಷಿಪ್ತವಾಗಿ ಹೇಳಿ ಒಂದು ವಿರಾಮ(Pause) ಕೊಡುತ್ತಾರೆ. ಆಗ ಪರೀಕ್ಷಿತ “ಇನ್ನೂ ಈ ಕುರಿತು ವಿವರವಾಗಿ ಹೇಳಿ” ಎಂದು ಕೇಳಿಕೊಳ್ಳುತ್ತಾನೆ.  ಈ ಹಿಂದೆ ಭಗವಂತನನ್ನು  ವಿಜ್ಞಾನತತ್ತ್ವಂ ಗುಣಸನ್ನಿರೋಧಂ’ ಎಂದು ವರ್ಣಿಸಿದ್ದಾರೆ. ಅಂದರೆ ಆತ ಎಲ್ಲಾ ಗುಣಗಳಿಂದ ಅತೀತ. ಹೀಗಿರುವಾಗ ಆತ ತ್ರಿಗುಣವನ್ನು ಬಳಸಿಕೊಂಡು ಸೃಷ್ಟಿ-ಸ್ಥಿತಿ-ಸಂಹಾರವನ್ನು ಏಕೆ ಮಾಡುತ್ತಾನೆ? ಈ ವಿಶ್ವದ ರಚನೆ ಏಕಾಯಿತು? ನಾವೆಲ್ಲರೂ ಈ ವಿಶ್ವದಲ್ಲಿ ಏಕೆ ಹುಟ್ಟಿದೆವು? ನಮ್ಮನ್ನು ಈ ಭೂಮಿಯಲ್ಲಿ ಹುಟ್ಟಿಸುವುದರಿಂದ ಭಗವಂತನಿಗೇನು ಉಪಯೋಗ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಸಿ ಎಂದು ಪರೀಕ್ಷಿತ ಶುಕಾಚಾರ್ಯರಲ್ಲಿ ಕೇಳಿಕೊಳ್ಳುತ್ತಾನೆ.

ಸೂತ ಉವಾಚ--
ಆತ್ಮಜಾಯಾತ್ಮಜಾಗಾರ ಪಶುದ್ರವಿಣಬಂಧುಷು
ರಾಜ್ಯೇ ಚಾವಿಕಲೇ ನಿತ್ಯಂನಿರೂಢಾಂ ಮಮತಾಂ ಜಹೌ ೦೨

ಪರೀಕ್ಷಿತ ಈ ರೀತಿ ಪ್ರಶ್ನೆ ಮಾಡುವಾಗ ಆತನ ಮನಃಸ್ಥಿತಿ ಹೇಗಿತ್ತು ಎನ್ನುವುದನ್ನು ಇಲ್ಲಿ ಸೂತರು ವಿವರಿಸುವುದನ್ನು ಕಾಣುತ್ತೇವೆ. “ಆತ ತನ್ನ ದೇಹ, ಪತ್ನಿ, ಮಕ್ಕಳು, ಮನೆ, ಪಶು, ಸಂಪತ್ತು, ಬಂಧುಗಳು, ದೇಶ, ಎಲ್ಲವುದರ  ಮೋಹ ತೊರೆದು ನಿರ್ಮಲ ಮನಸ್ಕನಾಗಿದ್ದ” ಎನ್ನುತ್ತಾರೆ ಸೂತರು(ಉಗ್ರಶ್ರವಸ್ಸು).  ಈ ಮಾತನ್ನು ಕೇಳಿದಾಗ ನಮಗೊಂದು ಸಂಶಯ ಬರುತ್ತದೆ. ಅದೇನೆಂದರೆ ಈ ಹಿಂದೆ ಒಂದನೇ ಸ್ಕಂಧದಲ್ಲಿ,  ಶುಕಾಚಾರ್ಯರ ಆಗಮನಕ್ಕೂ ಮೊದಲು ಆತ ಎಲ್ಲಾ ಮೋಹವನ್ನು ತೊರೆದು ಗಂಗಾತೀರಕ್ಕೆ ಬಂದಿದ್ದ ಎಂದು ಹೇಳಲಾಗಿದೆ.[ ಮುನಿವ್ರತೋ ಮುಕ್ತಸಮಸ್ತಸಂಗಃ-೦೧-೧೯-೦೭]. ಹಾಗಾಗಿ ಪುನಃ ಇಲ್ಲಿ ಶುಕಾಚಾರ್ಯರ ಉಪದೇಶ ಕೇಳಿದ ಮೇಲೆ ನಿರೂಢಾಂ ಮಮತಾಂ ಜಹೌ ಎಂದು ಏಕೆ  ಹೇಳಿದರು ಎನ್ನುವುದು ನಮಗೆ ತಿಳಿಯುವುದಿಲ್ಲ. ಈ ನಮ್ಮ ಗೊಂದಲ ಪರಿಹರಿಸುತ್ತಾ ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಹೇಳುತ್ತಾರೆ:  ಅನ್ಯೇಷಾಂ ನಿತ್ಯಂ ನಿರೂಢಾಂ ತದಾ ವಿಶೇಷತೋ  ಜಹೌ” ಎಂದು. ಅಂದರೆ ಬೇರೆಯವರಿಂದ ಎಂದೂ ಬಿಡಲಾಗದಂತಹ ಮಮತೆಯನ್ನು ಪರೀಕ್ಷಿತ ಮೊದಲೇ ಬಿಟ್ಟಿದ್ದರಿಂದ ಆತನಲ್ಲಿ ಯಾವುದೇ ಮೋಹದ ಲವಲೇಶ ಇರಲಿಲ್ಲ ಎನ್ನುವುದು ಮೇಲಿನ ಶ್ಲೋಕದ ತಾತ್ಪರ್ಯ.

ಸಂಸ್ಥಾಂ ವಿಜ್ಞಾಯ ಸನ್ನ್ಯಸ್ಯ ಕರ್ಮ ತ್ರೈವರ್ಗಿಕಂ ಚ ಯತ್
ವಾಸುದೇವೇ ಭಗವತಿ ಸ್ವಾತ್ಮಭಾವಂ ದೃಢಂ ಗತಃ ೦೪

“ತನ್ನ ಸಾವಿನ ವಿಷಯದಲ್ಲಿ ಸ್ಪಷ್ಟವಾದ ಅರಿವನ್ನು ಪಡೆದಿದ್ದ ಪರೀಕ್ಷಿತ, ತ್ರಿವರ್ಗ(ಐಹಿಕ ಧರ್ಮ-ಅರ್ಥ-ಕಾಮ)ವನ್ನು ಬಿಟ್ಟು, ಸಮಸ್ತ ಗುಣಪೂರ್ಣನಾಗಿರುವ ವಾಸುದೇವನೇ  ತನ್ನ ‘ಆತ್ಮಾ’ ಎಂದು ಗಟ್ಟಿಯಾಗಿ ತಿಳಿದುಕೊಂಡ” ಎನ್ನುತ್ತಾರೆ ಸೂತರು. ಇಲ್ಲಿ “ಪರೀಕ್ಷಿತ ತನ್ನ ಆತ್ಮ ವಾಸುದೇವ ಎಂದು ದೃಢವಾಗಿ ತಿಳಿದುಕೊಂಡ” ಎಂದಿದ್ದಾರೆ. ಈ ಮಾತು ನಮಗೆ ಪೂರ್ಣ ಅರ್ಥವಾಗಬೇಕಾದರೆ ನಾವು ಆತ್ಮ ಪದದ ಮೂಲ ಅರ್ಥವೇನೆಂದು ತಿಳಿಯಬೇಕು. ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ ॥೭-೧೯॥  ವಾಸುದೇವನೇ ಸರ್ವ, ಆತನೇ ನಿಜವಾದ ಆತ್ಮ ಎನ್ನುತ್ತದೆ ಗೀತೆ. ಆತ್ಮ ಎನ್ನುವ ಪದದ ಅರ್ಥವನ್ನು ಭಾರತ ಹೀಗೆ ವರ್ಣಿಸುತ್ತದೆ:  ಯಚ್ಚಾಪ್ನೋತಿ ಯದಾದತ್ತೇ ಯಚ್ಚಾತ್ತಿ ವಿಷಯಾನಿಹ|  ಯಚ್ಚಾಸ್ಯ ಸನ್ತತೋ ಭಾವಸ್ತಸ್ಮಾದಾತ್ಮೇತಿ ಭಣ್ಯತೇಇತಿ|  ಅಂದರೆ ಎಲ್ಲವನ್ನೂ ಪಡೆದವನು ಆತ್ಮ. ವಾಮನ ಪುರಾಣದಲ್ಲಿ ಹೇಳುವಂತೆ: ಆಪ್ತೇಃ ಸರ್ವಗುಣಾನಾಂ ಯ ಆತ್ಮಣಾಮತಯಾ ಹರಿಂ ಉಪಾಸ್ತೇ ನಿತ್ಯಶೋ ವಿದ್ವಾನ್ ಆಪ್ತಕಾಮಸ್ತದಾ ಭವೇತ್  ಸರ್ವಗುಣಪೂರ್ಣನಾದ ಭಗವಂತ ಆತ್ಮ. ಅವನ ಮುಂದೆ ನಾವೆಲ್ಲರೂ ಅನಾತ್ಮರು. [ಜಡದೊಂದಿಗೆ ಹೋಲಿಸಿದಾಗ ನಾವು ಆತ್ಮರು. ಆದರೆ ನಮಗಿಂತ ದೊಡ್ಡ ಆತ್ಮ ಆ ಪರಮಾತ್ಮ]. ಹೀಗಾಗಿ ಆತ್ಮಾ ಎಂದರೆ ಸರ್ವಗುಣಪೂರ್ಣ, ಸರ್ವಾಂತರ್ಯಾಮಿ. ಏಷ ತೇ ಆತ್ಮಾ ಅಂತರ್ಯಾಮಿ ಅಮೃತಃ. ನಮ್ಮೊಳಗಿದ್ದು ನಮ್ಮನ್ನು ನಿಯಮಿಸುವ ಭಗವಂತ ಆತ್ಮ. ಇದನ್ನೇ ಬ್ರಹ್ಮಸೂತ್ರದಲ್ಲಿ ಹೀಗೆ ಹೇಳಿದ್ದಾರೆ  : ಓಂ ಆತ್ಮೇತಿ ತೋಪಗಚ್ಚಂತಿ ಗ್ರಾಹಯಂತಿ ಚ ಓಂ  ೩-೪೮೭ ಒಟ್ಟನಲ್ಲಿ ಹೇಳಬೇಕೆಂದರೆ: ಸಚ್ಚಿದಾನಂದಸ್ವರೂಪನಾದ ಭಗವಂತನೇ ಸರ್ವಗುಣಪೂರ್ಣ. ಆತನೇ ನಮ್ಮೆಲ್ಲರ ಅಂತರ್ಯಾಮಿ. ಆದ್ದರಿಂದ ಅವನೇ ನಮ್ಮ  ಸ್ವಾಮಿ ಎನ್ನುವ ಭಾವನೆ ಹೊಂದುವುದೇ ಆತ್ಮಜ್ಞಾನವನ್ನು ಹೊಂದುವುದು. ಇದನ್ನೇ ಗೀತೆಯಲ್ಲಿ ವಾಸುದೇವಂ ಸರ್ವಂ ಎಂದಿದ್ದಾರೆ. ಸರ್ವಂ ಎಂದರೆ ಪರಿಪೂರ್ಣ ವಸ್ತು. ಭಗವಂತನೊಬ್ಬನೇ ಪರಿಪೂರ್ಣ, ಉಳಿದಿದ್ದೆಲ್ಲಾವೂ ಅಪೂರ್ಣ. ಹೀಗೆ ಪರೀಕ್ಷಿತ ಸರ್ವಾಂತರ್ಯಾಮಿಯೂ, ಸರ್ವಗುಣಪೂರ್ಣನೂ ಆದ ಭಗವಂತನೊಬ್ಬನೇ ತನ್ನ ಆತ್ಮ ಎಂದು ಗಟ್ಟಿಯಾಗಿ ನಂಬಿದ. “ಭಗವಂತನೇ ಆತ್ಮ, ಅವನ ಅನಂತರ ಕೆಳಗಿನ ಮಟ್ಟದಲ್ಲಿ ಉಳಿದವರಿದ್ದಾರೆ. ಹೀಗಾಗಿ ಭಗವಂತನೇ ನನಗೆ ಸ್ವಾಮಿ, ಅವನೇ ನಿಯಾಮಕ, ಅವನಲ್ಲಿ ನಾನು ಶರಣುಹೋಗಿದ್ದೇನೆ. ಅವನನ್ನು ಬಿಟ್ಟು ಇನ್ನೇನನ್ನೂ ನಾನು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ” ಎಂದು ತೀರ್ಮಾನ ಮಾಡಿದ ಪರೀಕ್ಷಿತ, ಭಗವಂತನ ಕುರಿತು ಇನ್ನೂ ಹೆಚ್ಚಿಗೆ ಹೇಳಿ ಎಂದು ಶುಕಾಚಾರ್ಯರಲ್ಲಿ ಪ್ರಾರ್ಥಿಸುತ್ತಾನೆ.  

Tuesday, March 18, 2014

Shrimad BhAgavata in Kannada -Skandha-02-Ch-03(04)

ಆಯುರ್ಹರತಿ ವೈ ಪುಂಸಾಂ ಉದ್ಯನ್ನಸ್ತಂ ಚ ಯನ್ನಸೌ
ತಸ್ಯರ್ತೇ ಯಃ ಕ್ಷಣೋ ನೀತ ಉತ್ತಮಶ್ಲೋಕವಾರ್ತಯಾ ೧೭

ಉಗ್ರಶ್ರವಸ್ಸಿನ ಮಾತನ್ನು ಕೇಳಿದ ಶೌನಕರು ತಾವಿನ್ನೂ ಅನೇಕ ಅಪೂರ್ವ ವಿಚಾರವನ್ನು ಭಾಗವತದಿಂದ ತಿಳಿಯಬೇಕೆಂದು ಅಪೇಕ್ಷಿಸುತ್ತಾ ಒಂದು ಕಾವ್ಯಮಯವಾದ ಸುಂದರವಾದ ಮಾತನ್ನು ಹೇಳುವುದನ್ನು ಈ ಶ್ಲೋಕದಲ್ಲಿ ಕಾಣುತ್ತೇವೆ.
ಯಾವುದು ನಿತ್ಯ ನಡೆಯುತ್ತದೋ ಅದೆಲ್ಲವೂ ನಮಗೆ ಅಭ್ಯಾಸವಾಗಿ ಹೋಗುತ್ತದೆ ಮತ್ತು ಕ್ರಮೇಣ ಅದನ್ನು ನಾವು ಯಾಂತ್ರಿಕವಾಗಿ ನೋಡಲಾರಂಭಿಸುತ್ತೇವೆ. ಚಿಕ್ಕ ವಯಸ್ಸಿನಲ್ಲಿ ನಮ್ಮ ತಂದೆ-ತಾಯಿ ಹೇಳಿ ಕೊಟ್ಟಂತೆ ನಾವು ಅನೇಕ ಅನುಷ್ಠಾನಗಳನ್ನು ಮಾಡುತ್ತೇವೆ. ಆದರೆ ಆ ಆಚಾರದ ಹಿಂದಿನ ವಿಜ್ಞಾನವೇನು ಎನ್ನುವುದನ್ನು ನಾವೆಂದೂ ಯೋಚಿಸಿರುವುದಿಲ್ಲ. ಇದರಿಂದಾಗಿ ನಮ್ಮೆಲ್ಲಾ ಅನುಷ್ಠಾನಗಳೂ  ಯಾಂತ್ರಿಕವಾಗುತ್ತಾ ಹೋಗುತ್ತವೆ. ಪ್ರಕೃತಿಯಲ್ಲಿ ನಡೆಯುವ ಒಂದೊಂದು ಕ್ರಿಯೆಯ ಹಿಂದೆ ನಾವು ಕಲಿಯಬೇಕಾದ ಪಾಠ ಅನೇಕ. ಸೂಕ್ಷ್ಮವಾಗಿ  ನೋಡಿದಾಗ ಮಾತ್ರ ಅದು ನಮಗೆ ತಿಳಿಯುತ್ತದೆ.  ಉದಾಹರಣೆಗೆ ಸೂರ್ಯೋದಯ-ಸೂರ್ಯಾಸ್ತ ಇದು ನಿತ್ಯ ನಮ್ಮ ಕಣ್ಣಮುಂದೆ ನಡೆಯುವ ಕ್ರಿಯೆ. ಇದು ನಮಗೆ ಸರ್ವೇ ಸಾಮಾನ್ಯ ವಿಷಯ. ಇದರ ಬಗ್ಗೆ ನಾವೆಂದೂ ಆಳವಾಗಿ ಚಿಂತಿಸಿರುವುದಿಲ್ಲ. ಆದರೆ ಈ ವಿಷಯವನ್ನು ಸೂಕ್ಷ್ಮವಾಗಿ ನೋಡಿದರೆ ಇದರಲ್ಲಿ ಅನೇಕ ವಿಷಯಗಳು ಅಡಗಿರುವುದು ತಿಳಿಯುತ್ತದೆ. ಸೂರ್ಯನಿಗೆ ಪ್ರಸಿದ್ಧವಾದ ಹೆಸರು ಆದಿತ್ಯ. ಈ ಆದಿತ್ಯ ಪದದ ಅರ್ಥ ಅತ್ಯಂತ ಅಪೂರ್ವ. ಆದತ್ತೇ ಇತೀ ಆದಿತ್ಯಃ. ಅಂದರೆ ಸೆಳೆದುಕೊಳ್ಳುವವ, ಸ್ವೀಕರಿಸುವವನು ಅಥವಾ ಬದುಕನ್ನು ಕೊಡುವವನು  ಎಂದರ್ಥ.  ನೆಲದಲ್ಲಿರುವ ನೀರನ್ನು ಸೂರ್ಯ ಆವಿಯಾಗಿಸಿ ಸ್ವೀಕಾರ ಮಾಡುತ್ತಾನೆ ಮತ್ತು ಅದರಿಂದ ಇಳೆಗೆ ಮಳೆ ಕೊಟ್ಟು ನಮಗೆ ಬದುಕನ್ನು ನೀಡುತ್ತಾನೆ. ಆದಿತ್ಯಾತ್‌ ಜಾಯತೇ ವೃಷ್ಟಿಃ ವೃಷ್ಟೇರನ್ನಂ ತತಾಃ ಪ್ರಜಾಃ. ಮಳೆ ಕೊಟ್ಟು, ಅನ್ನ(ಆಹಾರ) ಕೊಟ್ಟು, ಬದುಕನ್ನು ಕೊಡುವವನು ಆದಿತ್ಯ.  ಇವೆಲ್ಲವುದರ ಜೊತೆಗೆ ಒಂದು ಸೂರ್ಯೋದಯದಿಂದ ಇನ್ನೊಂದು ಸೂರ್ಯೋದಯದ ನಡುವೆ ಆತ ನಮ್ಮ ಆಯುಸ್ಸಿನ ಇಪ್ಪತ್ನಾಲ್ಕು ಗಂಟೆಗಳನ್ನೂ ಕೂಡಾ ಹೀರಿ, ನಮ್ಮನ್ನು ಇಪ್ಪತ್ನಾಲ್ಕು ಗಂಟೆಗಳಷ್ಟು ಕಾಲ ಸಾವಿಗೆ ಸಮೀಪ ಮಾಡುತ್ತಾನೆ. ಇದು ಸೂರ್ಯೋದಯ ಅಥವಾ ಸೂರ್ಯಾಸ್ತದಲ್ಲಿ ನಾವು ತಿಳಿಯಬೇಕಾದ ಪಾಠ. ಇದೇ ವಿಚಾರವನ್ನು ಇಲ್ಲಿ ಶೌನಕರು ಉಗ್ರಶ್ರವಸ್ಸರಲ್ಲಿ ಹೇಳುತ್ತಿದ್ದಾರೆ: “ಪ್ರತಿಯೊಂದು ಸೂರ್ಯೋದಯವಾದಾಗಲೂ ನಾವು ನಮ್ಮ ಅಪೂರ್ವವಾದ ಸಮಯವನ್ನು ವ್ಯರ್ಥವಾಗಿ ಕಳೆದುಕೊಳ್ಳುತ್ತಿದ್ದೇವೆ  ಎನ್ನುವ ಅರಿವು ಮೂಡುತ್ತದೆ.   ಕಳೆದುಹೋದ ಕಾಲವನ್ನು  ಮರಳಿ ಪಡೆಯಲು ಸಾಧ್ಯವಿಲ್ಲ ನಿಜ, ಆದರೆ ಉಳಿದ ಕಾಲವನ್ನು ಆ ಸರ್ವೋತ್ತಮ ತತ್ತ್ವ ಭಗವಂತನ ಬಗೆಗೆ ತಿಳಿಯುವುದರಲ್ಲಿ ಕಳೆದು ಇರುವ ಆಯುಸ್ಸಿನ ಪ್ರತಿಕ್ಷಣವನ್ನೂ ಸಾರ್ಥಕಪಡಿಸಿಕೊಳ್ಳಬೇಕು ಎನ್ನುವುದು ನಮ್ಮ ಇಚ್ಛೆ. ಹೀಗಾಗಿ ನೀವು ನಿಮ್ಮ ಉಪದೇಶವನ್ನು ನಿಲ್ಲಿಸದೇ ಮುಂದುವರಿಸಬೇಕು” ಎಂದು ಶೌನಕರು ಪ್ರಾರ್ಥಿಸುತ್ತಾರೆ.     

ತರವಃ ಕಿಂ ನ ಜೀವಂತಿ ಭಸ್ತ್ರಾಃ ಕಿಂ ನ ಶ್ವಸಂತ್ಯುತ
ನ ಖಾದಂತಿ ನ ಮೇಹಂತಿ ಕಿಂ ಗ್ರಾಮಪಶವೋSಪರೇ ೧೮

ಕೇವಲ ಬದುಕುವುದು ಒಂದು ಸಾಧನೆ ಅಲ್ಲ. ಕಾಡಿನಲ್ಲಿರುವ ಮರಗಳೂ ನೂರಾರು ವರ್ಷ ಬದುಕುತ್ತವೆ. ಮನುಷ್ಯರಾಗಿ ಹುಟ್ಟಿದ ನಮಗೆ ಆ ಭಗವಂತ ಪೂರ್ಣತೆಯನ್ನು ಪಡೆದ ಶರೀರವನ್ನು ಕೊಟ್ಟಿದ್ದಾನೆ.  ಇಂತಹ ಶರೀರವನ್ನು ಕೇವಲ ಉಸಿರಾಡುತ್ತಾ ಬದುಕುವುದಕ್ಕೆ ಉಪಯೋಗಿಸುವುದು ಬಸ್ತ್ರಾದಂತೆ ವ್ಯರ್ಥ. [ಬಸ್ತ್ರಾ ಎಂದರೆ  ಕುಲುಮೆಯಲ್ಲಿ ಇದ್ದಿಲು ಹಾಕಿ ಗಾಳಿ ಊದುವ ಯಂತ್ರ. ಇದನ್ನು ಕಮ್ಮಾರರು ಕಬ್ಬಿಣ ಕಾಯಿಸಲು ಬಳಸುತ್ತಾರೆ]. ಅಮೂಲ್ಯವಾದ ನಮ್ಮ ಆಯುಸ್ಸನ್ನು ಕೇವಲ ತಿನ್ನುವುದು, ಕುಡಿಯುವುದು, ಮೈಥುನ ಇತ್ಯಾದಿಯಲ್ಲಿ ಕಳೆಯಬಾರದು. ಏಕೆಂದರೆ ಬೀದಿಯಲ್ಲಿರುವ ನಾಯಿ ಕೂಡಾ ಈ ಎಲ್ಲವನ್ನೂ ಮಾಡುತ್ತದೆ. ಮನುಷ್ಯರಾಗಿ ಮನೋಮಯ ಮತ್ತು ವಿಜ್ಞಾನಮಯಕೊಶವನ್ನು ಭಗವಂತನಿಂದ ಉಡುಗೊರೆಯಾಗಿ ಪಡೆದ ನಾವು ಅದನ್ನು ಉಪಯೋಗಿಸಿಕೊಂಡು ಮೇಲೇರುವುದನ್ನು ಕಲಿಯಬೇಕು.

ಶ್ವವಿಡ್ವರಾಹೋಷ್ಟ್ರಖರೈಃ ಸ ತುಲ್ಯಃ  ಪುರುಷಃ ಪಶುಃ
ನ ಯತ್ಕರ್ಣಪಥೋಪೇತೋ ಜಾತು ನಾಮ ಗದಾಗ್ರಜಃ ೧೯

ಯಾರು ಚಿಂತನೆಗೆ ತನ್ನನ್ನು ಒಡ್ಡಿಕೊಳ್ಳುವುದಿಲ್ಲ, ಚಿಂತನೆಯಿಂದ ಭಗವಂತನೆಂಬ ಅಪೂರ್ವ ಸತ್ಯವನ್ನು ತಿಳಿಯುವ ಪ್ರಯತ್ನ ಮಾಡುವುದಿಲ್ಲ, ಅವರು ಬೀದಿಯಲ್ಲಿ ತಿರುಗುವ ಹಂದಿ-ನಾಯಿ-ಕತ್ತೆಗಳಿಗಿಂತ ಬೇರೆಯಾದ ಜೀವ ಎನಿಸುವುದಿಲ್ಲ. “ಮನುಷ್ಯರಾಗಿ ಹುಟ್ಟಿದ ನಾವು ಮನುಷ್ಯ ಎನ್ನುವುದಕ್ಕೆ ಸಾರ್ಥಕವಾಗುವ ರೀತಿಯಲ್ಲಿ ಬದುಕನ್ನು ಬದುಕಬೇಕು.  ಹೀಗಾಗಿ ಶುಕಾಚಾರ್ಯರು ಪರೀಕ್ಷಿತನಿಗೆ ಮುಂದೆ ಏನು ಹೇಳಿದರು ಎನ್ನುವುದನ್ನು ನಮಗೆ ತಿಳಿಸಿ ಹೇಳಿ” ಎಂದು ಶೌನಕರು ಉಗ್ರಶ್ರವಸ್ಸಿನಲ್ಲಿ ಕೇಳಿಕೊಳ್ಳುತ್ತಾರೆ. “ಬಾಲ್ಯದಲ್ಲೇ ಆಟವಾಡಲು ಕೃಷ್ಣನ ವಿಗ್ರಹವನ್ನು ಕೇಳುತ್ತಿದ್ದವ ಪರೀಕ್ಷಿತ. ಎಲ್ಲವನ್ನೂ ಬಿಟ್ಟು ಭಗವಂತನ ಬೆನ್ನು ಹತ್ತಿದ ಮಹಾಜ್ಞಾನಿ ಶುಕಾಚಾರ್ಯರು. ಇಂಥಹ ಇಬ್ಬರು ಸೇರಿದಾಗ ನಡೆದ ಸಂಭಾಷಣೆಯನ್ನು ನಿರಂತರ ಕೇಳಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎನ್ನುವುದು ನಮ್ಮ ಅಭಿಲಾಷೆ. ಹಾಗಾಗಿ ಶುಕಾಚಾರ್ಯರ ಉಪದೇಶದ  ಮುಂದಿನ ಭಾಗವನ್ನು ನಮಗೆ ವಿವರಿಸಿ ಹೇಳಿ” ಎಂದು ಕೇಳುತ್ತಾರೆ ಶೌನಕರು.

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ದ್ವಿತೀಯಸ್ಕಂಧೇ ತೃತಿಯೋSಧ್ಯಾಯಃ
ಭಾಗವತ ಮಹಾಪುರಾಣದ ಎರಡನೇ  ಸ್ಕಂಧದ ಮೂರನೇ ಅಧ್ಯಾಯ ಮುಗಿಯಿತು

*********

Tuesday, March 11, 2014

Shrimad BhAgavata in Kannada -Skandha-02-Ch-03(03)

ಧರ್ಮಾರ್ಥಮುತ್ತಮಶ್ಲೋಕಂ ತಂತುಂ ತನ್ವನ್ ಪಿತೃನ್ ಯಜೇತ್  ॥೦೮

ಜೀವನದಲ್ಲಿ ಧರ್ಮಕ್ಕೆ ಚ್ಯುತಿ ಆಗದಂತೆ ನಡೆದುಕೊಳ್ಳಬೇಕು ಎನ್ನುವ ಕಾಮನೆ ಉಳ್ಳವರು ಜಗತ್ತಿನ ಧಾರಕ ಶಕ್ತಿಯಾದ ಭಗವಂತನ ಆರಾಧನೆ ಮಾಡಬೇಕು. ಎಲ್ಲರೂ ಬದುಕಬೇಕು ಹಾಗೂ ಎಲ್ಲರೊಂದಿಗೆ ನಾನೂ ಬದುಕಬೇಕು ಎನ್ನುವುದು ಧರ್ಮ. ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದು, ಎಲ್ಲರೂ ಒಂದಾಗಿ ಉನ್ನತಿಕೆಯನ್ನು ಸಾಧಿಸುವುದು-ಧರ್ಮ. ಪದ್ಮಾಪುರಾಣದಲ್ಲಿ ಹೇಳುವಂತೆ: ಸ್ಮರ್ತವ್ಯ ಸತತಂ ವಿಷ್ಣುಃ ವಿಸ್ಮರ್ತವ್ಯೋ ನಜಾನಚಿತ್ ಸರ್ವೇ ವಿಧಿ ನಿಷೇಧಾಸ್ಯುಃ ಏತಯೋರ್ ಏವ ಕಿಂಕರಃ. ಯಾವ ಕ್ರಿಯೆ ಭಗವಂತನ ಸ್ಮರಣೆಗೆ ಪೂರಕವಾಗುತ್ತದೋ ಅದು ಧರ್ಮ,  ಭಗವಂತನನ್ನು ಮರೆತು ನಡೆಯುವ ನಡೆ ಅಧರ್ಮ. ಧರ್ಮದ ಅರಿವು ಬರಲು ಜಗತ್ತಿನ  ಧಾರಕ ಶಕ್ತಿಯಾದ ನಾರಾಯಣನನ್ನು ಆರಾಧಿಸಬೇಕು.
ಧರ್ಮದ ನಡೆಯಲ್ಲಿ ನಡೆಯುವಂತಾಗಲು, ಧರ್ಮದ ಪರಂಪರೆಯ ವಂಶ ಮುಂದುವರಿಕೆಗಾಗಿ ಪಿತೃದೇವತೆಗಳನ್ನು ಅವರ ಅಂತರ್ಯಾಮಿ ಭಗವಂತನ ಚಿಂತನೆಯೊಂದಿಗೆ ಆರಾಧನೆ ಮಾಡಬೇಕು.  

ಗ್ರಾಮಕಾಮೋ ಯಜೇತ್ ಸೋಮಮಕಾಮಃ ಪುರುಷಂ ಪುಮಾನ್  ೦೯

ಗ್ರಾಮ್ಯಸುಖಕ್ಕಾಗಿ(ವಂಶಾಭಿವೃದ್ಧಿಗೆ ಪೂರಕವಾದ ಲೈಂಗಿಕ ಸ್ವಾಸ್ಥ್ಯ/ಸುಖಕ್ಕಾಗಿ) ಸೋಮನ ಆರಾಧನೆ ಮಾಡಬೇಕು.  ಸೋಮ ಎಂದರೆ ಚಂದ್ರ.  ಸೋಮೋ ಪವಮಾನೋ ದೇವತಾ-ಚಂದ್ರನ ಅಂತರ್ಯಾಮಿ ಪವಮಾನ. ಪವಮಾನನ ಅಂತರ್ಯಾಮಿ ಭಗವಂತ. ಸೋಮನ ಅಂತರ್ಯಾಮಿ ಭಗವಂತನನ್ನು ಧನ್ವಂತರಿಯಲ್ಲಿ ಹೀಗೆ ವರ್ಣಿಸಿದ್ದಾರೆ: ಚಂದ್ರೌಘಕಾಂತಿಂ ಅಮೃತೋರು ಕರೈರ್ಜಗಂತಿ ಸಂಜೀವಯಂತಂ ಅಮಿತಾತ್ಮ ಸುಖಂ ಪರೇಶಮ್|  ಜ್ಞಾನಂ ಸುಧಾಕಲಶಮೇವ ಚ ಸಂದಧಾನಂ ಶೀತಾಂಶು ಮಂಡಲಗತಂ ಸ್ಮರತಾತ್ಮ ಸಂಸ್ಥಮ್ ||||  ಗ್ರಾಮ್ಯಕಾಮ ಇಷ್ಟಾರ್ಥಸಿದ್ಧಿಗಾಗಿ  ಸೋಮನೊಳಗೆ ಸೋಮನಾಗಿರುವ ಪ್ರಾಣ-ನಾರಾಯಣರ ಆರಾಧನೆ ಮಾಡಬೇಕು. ಇದೇ ರೀತಿ ದೇವರ ಅನುಗ್ರಹ ಪ್ರಾಪ್ತಿಗಾಗಿ ಭಗವಂತನ ಪುರುಷ ರೂಪವನ್ನು(ಪುರುಷಸೂಕ್ತ ಪ್ರತಿಪಾಧ್ಯನಾದ ಭಗವಂತನನ್ನು) ಆರಾಧಿಸಬೇಕು.
ಇಲ್ಲಿಯ ತನಕ ನಾವು ಶುಕಾಚಾರ್ಯರಿಂದ ಹೇಗೆ ಬೇರೆಬೇರೆ ದೇವತೆಗಳ ಪ್ರತೀಕದ ಮೂಲಕ ಭಗವಂತನನ್ನು ಆರಾಧಿಸಿ ನಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಬಹುದು ಎನ್ನುವುದನ್ನು ನೋಡಿದೆವು. ಈ ಹಂತದಲ್ಲಿ ನಮಗೆ ಒಂದು ಪ್ರಶ್ನೆ ಬರಬಹುದು. ಅದೇನೆಂದರೆ: “ಬೇರೆಬೇರೆ ಬಯಕೆಗಳ ಈಡೇರಿಕೆಗೆ ಬೇರೆಬೇರೆ ದೇವತೆಗಳ ಮೂಲಕವೇ ಹೋಗಬೇಕೇ? ಭಗವಂತನನ್ನೇ ಕೇಳಿಕೊಂಡರೆ ಸಾಲದೇ” ಎಂದು. ಈ ಪ್ರಶ್ನೆಗೆ ಉತ್ತರ ತಿಳಿಯಬೇಕಾದರೆ  ವಿಶ್ವನಿಯಾಮಕ ಭಗವಂತನ ವ್ಯವಸ್ಥೆಯ ತಿಳುವಳಿಕೆ ನಮಗಿರಬೇಕು. ಪ್ರಪಂಚದಲ್ಲಿ ಲೌಕಿಕವಾಗಿ ಹೇಗೆ ಆಡಳಿತ ವ್ಯವಸ್ಥೆ ಇರುತ್ತದೋ ಹಾಗೇ, ಶಾಸ್ತ್ರೀಯವಾಗಿ ವಿಶ್ವದಲ್ಲಿ ಒಂದೊಂದು ವಿಭಾಗದ ನಿರ್ವಹಣೆಗಾಗಿ ಒಂದೊಂದು ದೇವತೆಯನ್ನು ಭಗವಂತ ನಿಯಮಿಸಿದ್ದಾನೆ. ಆದ್ದರಿಂದ ನಾವು ಆಯಾ ವಿಭಾಗದ ದೇವತೆಗಳ ಮುಖೇನವೇ ದೇವರನ್ನು ತಲುಪಬೇಕು.  ದೇವತೆಗಳೇ ಭಗವಂತನ ಪರಿವಾರ. ಆ ಪರಿವಾರ ಸಮೇತನಾದ ಭಗವಂತನ ವೈಭವವನ್ನು ನಾವು ಏಕದೇವ ನಿಷ್ಠೆಯಿಂದ, ಅಂತರ್ಯಾಮಿ ಚಿಂತನೆಯಿಂದ ಅನುಸಂಧಾನ ಮಾಡಬೇಕು. ಪರಿವಾರವನ್ನು ನಿರಾಕರಣೆ ಮಾಡಿ ಭಗವಂತನನ್ನು ನೇರ ಅನುಸಂಧಾನ ಮಾಡಿದರೆ ಅದನ್ನು ಭಗವಂತ ಸ್ವೀಕರಿಸಲಾರ. [ಇದಕ್ಕೆ ಅಪವಾದ ಎಂದರೆ ಜ್ಞಾನದಲ್ಲಿ ಎತ್ತರಕ್ಕೇರಿದ ಸಾಧಕರು. ಅವರಿಗೆ ಭಗವಂತನ ಪರಿವಾರದ ಪೂರ್ಣ ಅರಿವಿರುತ್ತದೆ. ಈ ಅರಿವಿನೊಂದಿಗೆ ಅವರು ನೇರ ಭಗವಂತನೊಂದಿಗೆ ಸಂವಹನ ಮಾಡಬಲ್ಲರು]. ಈ ಎಲ್ಲಾ ಕಾರಣಕ್ಕಾಗಿ ಶುಕಾಚಾರ್ಯರು ಭಗವಂತನ ಪರಿವಾರದ ಜೊತೆಗೆ ಅದರ ಒಳಗಿರುವ ಭಗವದ್ ಶಕ್ತಿಯನ್ನು ಉಪಾಸನೆ ಮಾಡು ಎಂದಿದ್ದಾರೆ.

ಅಕಾಮಃ ಸರ್ವಕಾಮೋ ವಾ ಮೋಕ್ಷಕಾಮ ಉದಾರಧೀಃ
ತೀವ್ರೇಣ ಭಕ್ತಿಯೋಗೇನ ಯಜೇತ ಪುರುಷಂ ಪರಮ್ ೧೦

ಭಕ್ತಿಯಲ್ಲಿ ಅತ್ಯಂತ ಶ್ರೇಷ್ಠಭಕ್ತಿ ಎಂದರೆ ಯಾವುದೇ ಕಾಮನೆ ಇಲ್ಲದೆ ದೇವರನ್ನು ಆರಾಧಿಸುವುದು(ಅಕಾಮಃ). ಏಕೆಂದರೆ ಒಂದು ವಸ್ತುವನ್ನು ಬಯಸಿ ದೇವರನ್ನು ಆರಾಧಿಸುವಾಗ, ಅದರಿಂದ ಮುಂದೆ ಒಳಿತಾಗುತ್ತದೋ ಅಥವಾ ಕೆಡುಕಾಗುತ್ತದೋ ಎನ್ನುವ ಜ್ಞಾನ ನಮಗಿರುವುದಿಲ್ಲ. ಇದರಿಂದಾಗಿ ನಾವು ಬಯಸಿ ಪಡೆದ ವಸ್ತುವಿನಿಂದಲೇ ನಮಗೆ ಕೆಟ್ಟದ್ದಾಗುವ ಸಾಧ್ಯತೆಗಳಿವೆ. ಇಷ್ಟೇ ಅಲ್ಲದೆ ನಾವು ಯಾವುದೋ ಒಂದನ್ನು ಅಪೇಕ್ಷಿಸಿ ದೇವರನ್ನು ಆರಾಧಿಸಿದರೆ ಆತ ಅದಷ್ಟನ್ನೇ ಕೊಡುತ್ತಾನೆ. ಏನನ್ನೂ ಬಯಸದೇ ಆರಾಧಿಸಿದರೆ ಆತ ನಮಗೆ ಏನೇನು ಅಗತ್ಯವೋ ಅವೆಲ್ಲವನ್ನೂ ಕೊಡುತ್ತಾನೆ.
ಸರ್ವಕಾಮ ಎಂದರೆ ಲೌಕಿಕ ಉದ್ದೇಶಕ್ಕಾಗಿ ಎಲ್ಲವನ್ನೂ ಬಯಸುವವನು. ಮೋಕ್ಷಕಾಮ ಎಂದರೆ ಮೋಕ್ಷವನ್ನು ಬಯಸಿ ಭಗವಂತನನ್ನು ಆರಾಧಿಸುವವನು. ಅಕಾಮ ಎಂದರೆ ಎಲ್ಲವನ್ನೂ ಭಗವಂತನಿಗಾಗಿ ಮಾಡುತ್ತಿರುವವನು. ಈತ ಮೋಕ್ಷವನ್ನು ಕೂಡಾ ಬಯಸುವುದಿಲ್ಲ. ತೀವ್ರ ಭಕ್ತಿ ಉಳ್ಳ ಮತ್ತು ಬಹಳ ಎತ್ತರಕ್ಕೇರಿದ ಜ್ಞಾನಿಗಳು ಈ ಮೇಲಿನ ಯಾವುದೇ ಗುಂಪಿಗೆ ಸೇರಿದ್ದರೂ ಕೂಡಾ, ದೇವತೆಗಳ ಮುಖೇನ  ಭಗವಂತನನ್ನು ಆರಾಧಿಸದೇ ನೇರವಾಗಿ ಭಗವಂತನಲ್ಲೇ ಶರಣಾಗಿ ಎಲ್ಲವನ್ನೂ ಪಡೆಯಬಲ್ಲರು. ಇವರು ಭಗವಂತನ ಸಮಸ್ತ ಪರಿವಾರದ ಎಚ್ಚರದೊಂದಿಗೆ ನೇರವಾಗಿ ಪುರುಷಸೂಕ್ತ ಪ್ರತಿಪಾದ್ಯ ಹಾಗೂ ವೇದ ಪ್ರದಿಪಾದ್ಯ ಭಗವಂತನನ್ನು ಆರಾಧಿಸುವುದರಿಂದ ಎಲ್ಲವನ್ನೂ ಪಡೆದುಕೊಳ್ಳುತ್ತಾರೆ.
ಈ ಹಿಂದೆ ಧರ್ಮವನ್ನು ಬಯಸುವವನು ನಾರಾಯಣನನ್ನು ಉಪಾಸನೆ ಮಾಡಬೇಕು ಎಂದು ಹೇಳಿದ್ದನ್ನು ನೋಡಿದ್ದೇವೆ. ಹಿಂದೆ ಹೇಳಿದ ನಾರಾಯಣನ ಉಪಾಸನೆ ಮತ್ತು ಈ ಮೇಲಿನ ಶ್ಲೋಕದಲ್ಲಿನ ಭಗವಂತನ ಉಪಾಸನೆಯ ವಿವರಣೆಗೆ ಪೂರಕವಾಗಿ ಆಚಾರ್ಯ ಮಧ್ವರು ಸ್ಕಾಂದ ಪುರಾಣದಲ್ಲಿನ ಒಂದು ಪ್ರಮಾಣ ಶ್ಲೋಕವನ್ನು ನೀಡಿದ್ದಾರೆ.   ಅಕಾಮೋ ಧರ್ಮಕಾಮೋ ವಾ ಮೋಕ್ಷಕಾಮೋSಪಿ ಯೋ ಭವೇತ್ ಅಥವಾ ಸರ್ವಕಾಮೋ ಯಃ ಸ ವಿಷ್ಣುಂ ಪುರುಷಂ ಯಜೇತ್   ಇತಿ ಸ್ಕಾಂದೇ   ಧರ್ಮ-ಮೋಕ್ಷಗಳಿಗೆ ನೇರವಾಗಿ ಭಗವಂತನನ್ನೇ ಉಪಾಸನೆ ಮಾಡಬೇಕು. ಅರ್ಥ-ಕಾಮಗಳಿಗೆ ಇತರ ದೇವತೆಗಳನ್ನು ಅಂತರ್ಯಾಮಿ ಭಗವಂತನ ಎಚ್ಚರದಿಂದ ಉಪಾಸನೆ ಮಾಡಬಹುದು. ಜ್ಞಾನದಲ್ಲಿ ಎತ್ತರಕ್ಕೇರಿದವರು ಅರ್ಥ-ಕಾಮಗಳಿಗೂ ನೇರವಾಗಿ ಭಗವಂತನ ಉಪಾಸನೆ ಮಾಡಬಹುದು.
ಇಲ್ಲಿ ಶುಕಾಚಾರ್ಯರು ಪರೀಕ್ಷಿತನಿಗೆ ಐಹಿಕ ಉಪಾಸನೆಯಿಂದ ಮೋಕ್ಷಸಾಧನೆಯವರೆಗೆ  ಎಲ್ಲವನ್ನೂ ಸಂಕ್ಷಿಪ್ತವಾಗಿ, ಸಾರರೂಪದಲ್ಲಿ ಹೇಳಿರುವುದನ್ನು ಕಾಣುತ್ತೇವೆ. ಇದು ಪ್ರಾಚೀನರ ಕ್ರಮ. “ಸಂಕ್ಷೇಪ ವಿಸ್ತರಾಭ್ಯಾಂ ಪ್ರವದಂತಿ ಮನೀಶಿಣಃ”  ಎನ್ನುವ ಮಾತೊಂದಿದೆ. ಯಾವಾಗಲೂ ಒಮ್ಮೆಗೇ ವಿಸ್ತಾರವಾಗಿ ಹೇಳಬಾರದು. ಮೊದಲು ಸಂಕ್ಷಿಪ್ತವಾಗಿ ಹೇಳಬೇಕು. ಇದು ಶೋತೃಗಳ ಗಮನವನ್ನು ಕೇಂದ್ರೀಕರಿಸುವ ಒಂದು ಮನಃಶಾಸ್ತ್ರ.

ಈ ಹಂತದಲ್ಲಿ ನೈಮಿಶಾರಣ್ಯದಲ್ಲಿ ಭಾಗವತವನ್ನು ಶೌನಕಾದಿಗಳಿಗೆ ಹೇಳುತ್ತಿರುವ ಉಗ್ರಶ್ರವಸ್ಸು ಹೇಳುತ್ತಾರೆ: ಸಂಕ್ಷಿಪ್ತವಾಗಿ ಎಲ್ಲವನ್ನೂ ಹೇಳಿದ ಶುಕಾಚಾರ್ಯರು,  ‘ನೀನಂತೂ ಭಾಗವತ ಪ್ರಧಾನ, ನಿನಗೆ ಭಗವದನುಗ್ರಹವಿದೆ, ಹಾಗಾಗಿ ನಿನ್ನ ದಾರಿ ಸುಗಮ’  ಎಂದು ಪರೀಕ್ಷಿತನಿಗೆ ಹೇಳಿ, ತಮ್ಮ ಉಪದೇಶವನ್ನು ನಿಲ್ಲಿಸಿ ಬಿಡುತ್ತಾರೆ” ಎಂದು.