Sunday, December 29, 2013

Shrimad BhAgavata in Kannada -Skandha-02-Ch-02(13)

ವೈಶ್ವಾನರಂ ಯಾತಿ ವಿಹಾಯಸಾ ಗತಃ ಸುಷುಮ್ನಯಾ ಬ್ರಹ್ಮಪಥೇನ ಶೋಚಿಷಾ
ವಿಧೂತಕಲ್ಕೋಽಥ ಹರೇರುದಸ್ತಾತ್ಪ್ರಯಾತಿ ಚಕ್ರಂ ನೃಪ ಶೈಂಶುಮಾರಮ್ ೨೫


ಈ ದೇಹದಿಂದ ಮೇಲೆ ನೆಗೆದ ಜೀವ ಯಾವ ಮಾರ್ಗದ ಮುಖೇನ ಪಯಣಿಸುತ್ತಾನೆ ಎನ್ನುವುದನ್ನು ಇಲ್ಲಿ ಶುಕಾಚಾರ್ಯರು ವಿವರಿಸಿರುವುದನ್ನು ಕಾಣುತ್ತೇವೆ. ಶಾಸ್ತ್ರಗಳಲ್ಲಿ ದೇವಯಾನ ಮತ್ತು ಪಿತೃಯಾನ ಎನ್ನುವ ಎರಡು ಮಾರ್ಗಗಳನ್ನು ಹೇಳಿದರೆ, ಇಲ್ಲಿ ಶುಕಾಚಾರ್ಯರು ದೇವಯಾನದಲ್ಲಿನ ಬ್ರಹ್ಮಯಾನದ ಕುರಿತು ಹೇಳುವುದನ್ನು ಕಾಣುತ್ತೇವೆ. ಈ ಯಾವುದೇ ಮಾರ್ಗದ ಮುಖೇನ ಹೋದರು ಕೂಡಾ, ಹೋಗಲೇ ಬೇಕಾದ ನಡುವಿನ ಒಂದು ತಾಣವಿದೆ ಅದೇ 'ವೈಶ್ವಾನರಲೋಕ'.  ಮೋಕ್ಷವನ್ನು ಸೇರಬೇಕಾದ ಜೀವ ದೇಹದಲ್ಲಿರುವ ಸುಷುಮ್ನಾ ನಾಡಿಯ ಮುಖೇನ ಪಯಣಿಸಿ,  ಸಹಸ್ರಾರದ ಬಾಗಿಲನ್ನು ತೆರೆದು ಹೊರಹೋಗುತ್ತದೆ.ನಮ್ಮ ದೇಹದ ಎಡಭಾಗದಲ್ಲಿ ಐವತ್ತು ಮತ್ತು ಬಲಭಾಗದಲ್ಲಿ ಐವತ್ತು ಮುಖ್ಯ ನಾಡಿಗಳಿವೆ. ನಡುವಿನಲ್ಲಿ ಹೃದಯದಿಂದ ಮೇಲೆ ಹೋಗುವ ಸುಷುಮ್ನಾ ಅಥವಾ ಬ್ರಹ್ಮನಾಡಿ ಇದೆ. ಅದರ ತುದಿ ನಮ್ಮ ನೆತ್ತಿಯಲ್ಲಿದೆ. ಅದನ್ನೇ ಸಹಸ್ರಾರ ಎನ್ನುತ್ತಾರೆ. ಈ ನಾಡಿಯ ಮೂಲಕ, ಸಹಸ್ರಾರದಿಂದ ಜೀವ ದೇಹದಿಂದ ಹೊರ ಹೋದರೆ, ಆ ಜೀವ ಮತ್ತೆ ಮರಳಿ ಹುಟ್ಟುವುದಿಲ್ಲ. ಇದು ಜೀವ ಹುಟ್ಟು ಸಾವಿನ ಚಕ್ರದಿಂದ ಕಳಚಿಕೊಂಡು ಮೋಕ್ಷವನ್ನು ಸೇರುವ  ಮಾರ್ಗ. ದೇಹದ ಎಡ ಮತ್ತು ಬಲಭಾಗದಲ್ಲಿರುವ ನಾಡಿಗಳಿಗೆ ಕವಲಾಗಿ ಸೂಕ್ಷ್ಮವಾಗಿರುವ ೭೨ ಸಾವಿರ ನಾಡಿಗಳಿವೆ. ಇಷ್ಟೇ ಅಲ್ಲದೆ ಈ ಕವಲು ನಾಡಿಗಳಿಗೂ ಅವಾಂತರ ನಾಡಿಗಳಿದ್ದು, ಉಪನಿಷತ್ತಿನಲ್ಲಿ ಹೇಳುವಂತೆ ಒಟ್ಟು ೭೨ ಕೋಟಿ, ೭೨ ಲಕ್ಷದ ೭೨ಸಾವಿರ ನಾಡಿಗಳು ನಮ್ಮ ದೇಹದ ಎರಡು ಬದಿಯಲ್ಲಿವೆ. ಇವು ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ ನಾಡಿಗಳಾಗಿದ್ದು, ಎಲ್ಲವೂ ಕಣ್ಣಿಗೆ ಕಾಣಿಸಲಾರವು. ಈ ಎಲ್ಲಾ ನಾಡಿಗಳಿಗಿಂತ ಸೂಕ್ಷ್ಮವಾದುದು ಜೀವ. ಆದ್ದರಿಂದ ಜೀವ ದೇಹದಿಂದ ಹೊರಹೋಗಲು ಈ ಯಾವುದೇ ನಾಡಿಯನ್ನು ಬಳಸಬಹುದಾದರೂ ಕೂಡಾ, ಭಗವಂತನನ್ನು ಸೇರುವ ಬೆಳಕಿನ ಮಾರ್ಗ ಸುಷುಮ್ನಾ. ಈ ಮಾರ್ಗದಲ್ಲಿ ಸುಷುಮ್ನಾ ಕಿರಣದ ಬೆಳಕು ತುಂಬಿರುತ್ತದೆ. ಈ ಬೆಳಕಿನಿಂದಾಗಿ ಜೀವನಿಗೆ ಸಹಸ್ರಾರದ ಬಾಗಿಲು ಕಾಣುತ್ತದೆ ಮತ್ತು ಜೀವ ಆ ಬಾಗಿಲನ್ನು ತೆರೆದು ಹೊರಹೋಗಲು ಸಾಧ್ಯವಾಗುತ್ತದೆ. [ಈ ಮಾರ್ಗವಲ್ಲದೆ ಇತರ ಎಲ್ಲಾ ಮಾರ್ಗಗಳೂ ಭಯಂಕರವಾದ ಗುಹೆಯಲ್ಲಿನ ಕತ್ತಲೆಯ ಪಯಾಣ(balck tunnel)].  ಸಹಸ್ರಾರದಿಂದ ಹೊರ ಬಂದ ಜೀವ ನಿರಂತರ ಬೆಳಕಿನ ಹಾದಿಯಲ್ಲಿ ಸಾಗುತ್ತಾನೆ. ದೇಹದಿಂದ ಹೊರಬಂದ ತಕ್ಷಣ ವೈಶ್ವಾನರಲೋಕವನ್ನು ಜೀವ ಸೇರುವುದಿಲ್ಲ.  ಅದಕ್ಕೂ ಮೊದಲು ಅನೇಕ ನಿಲುದಾಣಗಳಿವೆ. ಈ ಕುರಿತ ವಿವರಣೆಯನ್ನು ಶುಕಾಚಾರ್ಯರು ಇಲ್ಲಿ ನೀಡಿಲ್ಲವಾದರೂ ಕೂಡಾ, ಇದನ್ನು ಶ್ರೀಕೃಷ್ಣ ಗೀತೆಯಲ್ಲಿ ವಿವರಿಸಿರುವುದನ್ನು ಕಾಣುತ್ತೇವೆ. ಅಗ್ನಿರ್ಜೋತಿರಹಃ ಶುಕ್ಲಃ ಷಣ್ಮಾಸಾ ಉತ್ತರಾಯಣಮ್ ॥೮-೨೪॥  ದೇಹದಿಂದ ಹೊರಬಂದ ಮೋಕ್ಷಯೋಗ್ಯ ಜೀವವನ್ನು ಮೊದಲು ಸ್ವಾಗತಿಸುವವರು ವೈಶ್ವಾನರನ(ಪ್ರಧಾನ ಅಗ್ನಿಯ) ಮಕ್ಕಳಾದ ಅಗ್ನಿ ಮತ್ತು ಜ್ಯೋತಿ(ಅರ್ಚಿರ್ಲೋಕ). ಈ ದೇವತೆಗಳು ಜೀವನನ್ನು ಸತ್ಕರಿಸಿ ಮುಂದಕ್ಕೆ ಕಳುಹಿಸುತ್ತಾರೆ. ಮುಂದೆ ಜೀವನನ್ನು ಬೆಳಕಿನ ಮತ್ತು ಮಧ್ಯಾಹ್ನದ ದೇವತೆಗಳು ಸ್ವಾಗತಿಸುತ್ತಾರೆ. ಈ ನಿಜವಾದ ಬೆಳಕಿನ ಅನುಭವದೊಂದಿಗೆ ಜೀವ ಮುಂದೆ ಸಾಗಿ ಶುಕ್ಲಪಕ್ಷದ ಮತ್ತು ಹುಣ್ಣಿಮೆಯ ದೇವತೆಯನ್ನು ತಲುಪುತ್ತಾನೆ. ಆನಂತರ ಸಂಕ್ರಮಣದ, ಉತ್ತರಾಯಣದ ದೇವತೆ ಜೊತೆಗೆ ಉತ್ತರಾಯಣದ ಆರು ತಿಂಗಳ ದೇವತೆಗಳು ಜೀವನನ್ನು ಮುಂದಕ್ಕೆ ಕಳುಹಿಸುತ್ತಾರೆ.  ಮುಂದೆ ಸಂವತ್ಸರಾಭಿಮಾನಿ ದೇವತೆ, ಮಿಂಚಿನ ದೇವತೆ, ವರುಣ, ದಕ್ಷಪ್ರಜಾಪತಿ, ಹೀಗೆ ಈ ಎಲ್ಲಾ ದೇವತೆಗಳ ಲೋಕದ  ಮುಖೇನ ಸೂರ್ಯಲೋಕವನ್ನು ಜೀವ ಸೇರುತ್ತಾನೆ. ಆನಂತರ ಸೂರ್ಯಲೋಕದಿಂದ ಚಂದ್ರಲೋಕವನ್ನು ತಲುಪಿ, ಅಲ್ಲಿಂದ ವೈಶ್ವಾನರಲೋಕಕ್ಕೆ ಜೀವ ಪ್ರವೇಶಿಸುತ್ತಾನೆ. ವೈಶ್ವಾನರಲೋಕದಲ್ಲಿ ಜೀವ ತನ್ನೆಲ್ಲಾ ಕೊಳೆಗಳನ್ನು ತೊಳೆದುಕೊಂಡು ಪುಟಕ್ಕಿಟ್ಟ ಚಿನ್ನದಂತೆ  ಸ್ವಚ್ಛಗೊಳ್ಳುತ್ತಾನೆ. [ಕೆಲವು ಜೀವರಿಗೆ ಈ ಸ್ವಚ್ಛತೆ ಸೂರ್ಯಲೋಕದಲ್ಲಾದರೆ ಇನ್ನು ಕೆಲವರಿಗೆ ವೈಶ್ವಾನರಲೋಕದಲ್ಲಾಗುತ್ತದೆ]. ಈ ರೀತಿ ಸ್ವಚ್ಛಗೊಂಡ ಜೀವ ವೈಶ್ವಾನರಲೋಕದಿಂದ ಶಿಂಶುಮಾರ ಲೋಕವನ್ನು ಸೇರುತ್ತಾನೆ. ಶಿಂಶುಮಾರ ಎನ್ನುವುದು ಭಗವಂತನ ಒಂದು ರೂಪ. ಇದು ಧ್ರುವಲೋಕದಲ್ಲಿರುವ ಇಡೀ ಪ್ರಪಂಚದ ಕೇಂದ್ರಬಿಂದು(ನಾಭಿಸ್ಥಾನ). ಈ ಕೇಂದ್ರದಿಂದ ಪ್ರಪಂಚವನ್ನು ನಿಯಂತ್ರಿಸುವ ಭಗವಂತನ ಇನ್ನೊಂದು ಹೆಸರು ‘ಕಿಮ್ಸ್ತುಗ್ನ’.  ಶಿಂಶುಮಾರ  ಅಥವಾ ಕಿಮ್ಸ್ತುಗ್ನ ಎನ್ನುವ ಭಗವಂತನ ನಾಮಗಳಿಗೆ ಎಲ್ಲೂ ನಿರ್ವಚನ ಕಾಣಸಿಗುವುದಿಲ್ಲ. ಇದೊಂದು ರಹಸ್ಯವಾದ ಹೆಸರು. ‘ಶಿಂಶು’ ಎಂದರೆ ಲೋಕ ಕಂಟಕರು. ಅಂತಹ ಲೋಕಕಂಟಕರನ್ನು ಸಂಹಾರ ಮಾಡುವ ಭಗವಂತ ಶಿಂಶುಮಾರ ಅಥವಾ ಕಿಮ್ಸ್ತುಗ್ನ. [ಭಗವಂತನ ಈ ನಾಮವನ್ನು ಇತ್ತೀಚೆಗಿನ ಪುಸ್ತಕಗಳಲ್ಲಿ ಶಿಶುಮಾರ ಎಂದಿದ್ದಾರೆ. ಆದರೆ ಪ್ರಾಚೀನ ಗ್ರಂಥಗಳಲ್ಲಿ ಶಿಂಶುಮಾರ ಎಂದಿರುವುದನ್ನು ಕಾಣುತ್ತೇವೆ].    

Thursday, December 26, 2013

Shrimad BhAgavata in Kannada -Skandha-02-Ch-02(12)

ಯೋಗೇಶ್ವರಾಣಾಂ ಗತಿಮಾಮನಂತಿ ಬಹಿಸ್ತ್ರಿಲೋಕ್ಯಾಃ ಪವನಾಂತರಾತ್ಮಾ
ನ ಕರ್ಮಭಿಸ್ತಾಂ ಗತಿಮಾಪ್ನುವಂತಿ ವಿದ್ಯಾತಪೋಯೋಗಸಮಾಧಿಭಾಜಾಮ್ ೨೪

ಭಗವಂತನ ಅಪರೋಕ್ಷದಿಂದ ಬಹಳ ಎತ್ತರಕ್ಕೇರಿದ ಜ್ಞಾನಿಗಳು ಮೋಕ್ಷಕ್ಕೆ ಮೊದಲು ಭೂಮಿ, ಅಂತರಿಕ್ಷ ಮತ್ತು ಸ್ವರ್ಗದಿಂದಾಚೆಗಿನ ಲೋಕದಲ್ಲಿರುತ್ತಾರೆ. ಈ ಲೋಕಗಳಿಗೆ ಕೇವಲ ಮೋಕ್ಷಯೋಗ್ಯರಿಗೆ ಮಾತ್ರ ಪ್ರವೇಶ ಮತ್ತು ಇವು ನಮ್ಮ ಕಣ್ಣಿಗೆ ಕಾಣುವ ಲೋಕಗಳಲ್ಲ. ಹೇಗೆ ವಾತಾವರಣದಲ್ಲಿರುವ ಲಕ್ಷೋಪಲಕ್ಷ ಜೀವಗಳು ನಮಗೆ ಕಾಣುವುದಿಲ್ಲವೋ ಹಾಗೇ ಈ ಲೋಕಗಳು ನಮ್ಮ ಸ್ಥೂಲವಾದ ಕಣ್ಣಿಗೆ  ಕಾಣುವುದಿಲ್ಲ. ಪುರಾಣದಲ್ಲಿ ಹೇಳುವಂತೆ ಭೂಮಿಯಲ್ಲೇ ಎಷ್ಟೋ  ಭಾಗ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಸಪ್ತಸಾಗರದಲ್ಲಿ ಕೊನೆಯಸಾಗರ ಈ ಭೂಭಾಗದಲ್ಲೇ ಇದ್ದರೂ ಕೂಡಾ  ಅದು ನಮಗೆ ಕಾಣದು ಎನ್ನುತ್ತಾರೆ ಶಾಸ್ತ್ರಕಾರರು. ಅದನ್ನು ಜ್ಞಾನದಿಂದ ಒಳಗಣ್ಣು ತೆರೆದ ಅಪರೋಕ್ಷ ಜ್ಞಾನಿಗಳಿಗಷ್ಟೇ ಕಾಣಬಲ್ಲರು. ಹೀಗಾಗಿ ಭೂಮಿಯಿಂದ ಮೇಲೆ ಹೋದಂತೆ ಒಂದಕ್ಕಿಂತ ಒಂದು ಸೂಕ್ಷ್ಮವಾಗಿರುವ ಲೋಕಗಳಿವೆ. ಮೊದಲು ಅಂತರಿಕ್ಷ, ಅಂತರಿಕ್ಷಕ್ಕಿಂತ ಸೂಕ್ಷ-ಸ್ವರ್ಗ, ಸ್ವರ್ಗಕ್ಕಿಂತ ಸೂಕ್ಷ್ಮ-ಮಹರ್ಲೋಕ, ಮಹರ್ಲೋಕಕ್ಕಿಂತಲೂ ಸೂಕ್ಷ್ಮಲೋಕ-ಜನರ್ಲೋಕ, ಜನರ್ಲೋಕಕ್ಕಿಂತ ಸೂಕ್ಷ್ಮ-ತಪರ್ಲೋಕ, ತಪರ್ಲೋಕಕ್ಕಿಂತ ಸೂಕ್ಷ್ಮ-ಸತ್ಯಲೋಕ. ಉಪನಿಷತ್ತಿನಲ್ಲಿ ಹೇಳುವಂತೆ ಸತ್ಯವನ್ನು ಕಾಣಲು ಸೂಕ್ಷ್ಮವಾದ ಕಣ್ಣು, ಸೂಕ್ಷ್ಮವಾದ ಬುದ್ಧಿ ಬೇಕು. ನಮ್ಮ ಸ್ಥೂಲ ಕಣ್ಣಿಗೆ, ಸ್ಥೂಲ ಬುದ್ಧಿಗೆ ಯಾವುದೂ ಕಾಣದು, ಯಾವುದೂ ತಿಳಿಯದು. ಈ ಪ್ರಪಂಚದಲ್ಲಿ ಸ್ಥೂಲವಾಗಿರುವ ಭಾಗ ನೂರನೇ ಒಂದು  ಭಾಗಕ್ಕಿಂತಲೂ ಕಡಿಮೆ.  ಇಂತಹ ಸೂಕ್ಷ್ಮ ಪ್ರಪಂಚವನ್ನು ನಾವು ಸ್ಥೂಲ ಇಂದ್ರಿಯಗಳಿಂದ ಗ್ರಹಿಸುವುದು ಸಾಧ್ಯವಿಲ್ಲ. ಅದು ಯಾವ ಭೂತಗನ್ನಡಿಗೂ  ಕಾಣದು.
ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: ಕರ್ಮ, ಯಜ್ಞ-ಯಾಗ, ಇತ್ಯಾದಿಯಿಂದ ಹೆಚ್ಚೆಂದರೆ ಸ್ವರ್ಗದ ತನಕ ಹೋಗಬಹುದು, ಆದರೆ ಸ್ವರ್ಗದಿಂದಾಚೆಗೆ ಹೋಗಬೇಕಾದರೆ ಜ್ಞಾನಯೋಗ ಬೇಕು ಎಂದು. ಅವು ಕೇವಲ ಅಪರೋಕ್ಷ ಜ್ಞಾನಿಗಳು ಕಾಣಬಹುದಾದ ಮತ್ತು ಅನುಭವಿಸಬಹುದಾದ ಲೋಕಗಳು.  ಇಲ್ಲಿ ಶುಕಾಚಾರ್ಯರು “ಅಪರೋಕ್ಷ ಜ್ಞಾನಿಗಳು ಹೋಗಿ ಸೇರುವ ತಾಣ  ಪವನಾಂತರಾತ್ಮಾ” ಎಂದಿದ್ದಾರೆ. ಪವನಾಂತರಾತ್ಮಾ ಎಂದರೆ ಎಲ್ಲರ ಒಳಗೂ ಅಂತರ್ಯಾಮಿಯಾಗಿರುವ ಪವನನ ಲೋಕವಾದ ಸತ್ಯಲೋಕ ಎನ್ನುವುದು ಒಂದು ಅರ್ಥವಾದರೆ, ಪವನನ ಅಂತರಾತ್ಮನಾದ ಭಗವಂತನ ಲೋಕ(ಮೋಕ್ಷ) ಎನ್ನುವುದು ಇನ್ನೊಂದು ಅರ್ಥ. ಇವೇ ಯೋಗೇಶ್ವರರ ಎರಡು ಲೋಕಗಳು. ಜ್ಞಾನಯೋಗದಲ್ಲಿ ಬಹಳ ಎತ್ತರಕ್ಕೇರಿದವರು ಮಾತ್ರ ಈ ಲೋಕಗಳಿಗೆ ಹೋಗಿ ಇರಬಲ್ಲರು.

‘ಪವನಾಂತರಾತ್ಮಾ’ ಎನ್ನುವುದನ್ನು ಆಚಾರ್ಯ ಮಧ್ವರು “ಪವನಃ ಅಂತರಾತ್ಮಾ” ಎಂದು ವಿವರಿಸಿದ್ದಾರೆ. ಅಂದರೆ ಪ್ರತಿಯೊಂದು ಜೀವಸ್ವರೂಪದೊಳಗೂ ಅಂತರ್ಯಾಮಿಯಾಗಿ ಪ್ರಾಣದೇವರು ಮತ್ತು ಬ್ರಹ್ಮ ದೇವರಿದ್ದಾರೆ ಎಂದರ್ಥ. [ಈ ವಿಷಯವನ್ನು ಸರಿಯಾಗಿ ಅರಿಯದೇ, ದಾಸ ಸಾಹಿತ್ಯವನ್ನೂ ತಪ್ಪಾಗಿ ಅರ್ಥೈಸಿ,  ಪ್ರಾಣದೇವರಿಗೆ ಜೀವ ಸ್ವರೂಪದೊಳಗೆ ಪ್ರವೇಶವಿಲ್ಲ ಎಂದು ಇತ್ತೀಚೆಗಿನ ಕೆಲವು ಪುಸ್ತಕಗಳಲ್ಲಿ ಹೇಳಲಾಗಿದೆ. ಆದರೆ ಅದು ತಪ್ಪು ತಿಳುವಳಿಕೆ]. ಭಗವಂತನೊಂದಿಗೆ ನಮ್ಮ ಆತ್ಮಸ್ವರೂಪದೊಳಗಿದ್ದು ನಮ್ಮನ್ನು ನಿಯಂತ್ರಿಸುತ್ತಾರೆ ಪ್ರಾಣದೇವರು. ಹೀಗಾಗಿ ಜ್ಞಾನಿಗಳು ಮೊದಲು ಹೋಗಿ ಸೇರುವುದು ಪವನನ ಲೋಕವನ್ನು. ಅಲ್ಲಿಂದ ಆತ ಜೀವನನ್ನು ಭಗವಂತನ ಬಳಿ ಕರೆದುಕೊಂಡು ಹೋಗುತ್ತಾನೆ.
 ಶುಕಾಚಾರ್ಯರು  ಹೇಳುತ್ತಾರೆ: “ಸ್ವರ್ಗಲೋಕದಿಂದ ಆಚೆಗಿನ ಲೋಕಗಳು ಕೇವಲ ವಿದ್ಯೆ, ತಪಸ್ಸು, ಯೋಗ ಮತ್ತು  ಸಮಾಧಿ ಇದ್ದವರಿಗೆ ಮಾತ್ರ ದಕ್ಕುವ ಲೋಕಗಳು” ಎಂದು.  ವಿದ್ಯೆ ಎಂದರೆ ಶಾಸ್ತ್ರದಿಂದ ತತ್ತ್ವವನ್ನು ಯಥಾರ್ಥವಾಗಿ ತಿಳಿಯುವುದು; ತಪಸ್ಸು ಎಂದರೆ ತಿಳಿದಿರುವ ವಿಷಯದ ನಿರಂತರ ಮನನ; ಯೋಗ ಎಂದರೆ ಭಗವಂತನಲ್ಲಿ ಭಕ್ತಿಯೋಗ ಮತ್ತು  ಸಮಾಧಿ ಎಂದರೆ ಭಗವಂತನನ್ನು ಸದಾ ಕಾಣುವ ಅಂತರ್ದೃಷ್ಟಿ. ಆದರೆ ಇಲ್ಲಿ ಹೇಳಿದ ವಿದ್ಯೆ, ತಪಸ್ಸು, ಯೋಗ ಮತ್ತು  ಸಮಾಧಿ ಎನ್ನುವುದಕ್ಕೆ ಇದಲ್ಲದೆ ಇನ್ನೊಂದು ಅಪೂರ್ವ ಅರ್ಥವಿದೆ. ಈ ಕುರಿತು ಭಾಗವತದ ಏಕಾದಶ ಸ್ಕಂಧದಲ್ಲಿ ವಿವರಣೆಯನ್ನು ಕಾಣಬಹುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ: ಸಾಧಕರಲ್ಲಿ ಐದು ವಿಧ. ಮಹಾಜ್ಞಾನಿ, ಜ್ಞಾನಿ, ತಪಸ್ವಿ, ಯೋಗಿ ಮತ್ತು ಪಾದಯೋಗಿ. ಜ್ಞಾನಿಗಳಲ್ಲಿ ಅತ್ಯಂತ ಕೆಳಗಿನ ಸ್ಥರದಲ್ಲಿರುವವರು ಪಾದಯೋಗಿಗಳು. ಅವರಿಗಿಂತ ಎತ್ತರದಲ್ಲಿ ಕ್ರಮವಾಗಿ ಯೋಗಿಗಳು, ತಪಸ್ವಿಗಳು ಮತ್ತು ಜ್ಞಾನಿಗಳಿದ್ದಾರೆ. ಮಹಾಜ್ಞಾನಿಗಳು ಎಲ್ಲರಿಗಿಂತ ಎತ್ತರದಲ್ಲಿದ್ದಾರೆ. ಇವರೆಲ್ಲರಿಗೂ ಸಮಾಧಿ ಬೇಕೇ ಬೇಕು. ಸಮಾಧಿ ಇಲ್ಲದೆ ಈ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ಈ ಹಿಂದೆ ಧ್ಯಾನ ಪ್ರಕ್ರಿಯೆಯಲ್ಲಿ ವಿಶ್ಲೇಷಿಸಿದಂತೆ: ಅಪರೋಕ್ಷ ಜ್ಞಾನಿಗಳಿಗೂ ಕೂಡಾ ನಿರಂತರ ನೇರ ಭಗವಂತನ ದರ್ಶನ ಸಾಧ್ಯವಿಲ್ಲ. ಇದನ್ನು ವಿವರಿಸುತ್ತಾ ಆಚಾರ್ಯ ಮಧ್ವರು ಹೇಳುತ್ತಾರೆ: ಪಾದಯೋಗಿಗಳಿಗೆ ನಾಲ್ಕನೇ ಒಂದು ಮಾತ್ರಾಕಾಲ ಭಗವಂತನ ನೇರ ದರ್ಶನ ಸಾಧ್ಯ ಎಂದು. [ಇದಕ್ಕಾಗಿ ಅವರನ್ನು ಪಾದಯೋಗಿಗಳು ಎನ್ನುತ್ತಾರೆ. ಒಂದು ಮಾತ್ರಾಕಾಲ ಎಂದರೆ ಒಂದು ಅಕ್ಷರವನ್ನು(ಉದಾಹರಣೆಗೆ ‘ಅ’) ಉಚ್ಛಾರ ಮಾಡುವಷ್ಟು ಕಾಲ].  ಇವರು ಮೋಕ್ಷಕ್ಕೆ ಮೊದಲು ಮಹಾರ್ಲೋಕಕ್ಕೆ ಹೋಗುತ್ತಾರೆ. ಇನ್ನು ಯೋಗಿಗಳು. ಇವರಿಗೆ ಭಗವಂತನ ನೇರ ದರ್ಶನ ಒಂದು ಮಾತ್ರಾಕಾಲ ಸಾಧ್ಯ ಮತ್ತು  ಇವರು ಜನರ್ಲೋಕವನ್ನು ಪಡೆಯುತ್ತಾರೆ. ಯೋಗಿಗಳ ನಂತರ ತಪಸ್ವಿಗಳು. ಅವರಿಗೆ ಆರು ಮಾತ್ರಾಕಾಲ ಭಗವಂತನ ನೇರ ದರ್ಶನವಾಗುತ್ತದೆ ಹಾಗೂ ಅವರು ತಪರ್ಲೋಕವನ್ನು ಪಡೆಯುತ್ತಾರೆ. ಇವರ ನಂತರವಿರುವ ಜ್ಞಾನಯೋಗಿಗಳಿಗೆ ಒಂದು ಮಹೂರ್ತಾಕಾಲ ಅಂದರೆ ನಲವತ್ತೆಂಟು ನಿಮಿಷಗಳ ಕಾಲ ಭಗವಂತನ ದರ್ಶನವಾಗುತ್ತದೆ ಮತ್ತು ಅವರು ಸತ್ಯಲೋಕವನ್ನು ಪಡೆಯುತ್ತಾರೆ. ಎಲ್ಲರಿಂದಲೂ ಅಧಿಕ ಸಮಯ, ತಾಸುಗಟ್ಟಲೆ ಭಗವಂತನನ್ನು ನೇರ ನೋಡಬಲ್ಲ ಮಹಾಜ್ಞಾನಿಗಳು ನೇರವಾಗಿ ಮೋಕ್ಷಸ್ಥಾನಕ್ಕೆ ಹೋಗಬಲ್ಲರು. ಇವರೆಲ್ಲರೂ ಬೇಕೆನಿಸಿದಾಗ ಸಮಾಧಿ ಸ್ಥಿತಿಗೆ ಹೋಗಬಲ್ಲರು. ಕೇವಲ ಕರ್ಮಾನುಷ್ಠಾನದಿಂದ ಈ ಎತ್ತರಕ್ಕೆರಲು ಸಾಧ್ಯವಿಲ್ಲ.  ಅಪರೋಕ್ಷಜ್ಞಾನಿಗಳು ಈ ಎತ್ತರಕ್ಕೆ ಹೋಗುವ ದಾರಿಯನ್ನು ಇಲ್ಲಿ ಶುಕಾಚಾರ್ಯರು ಪರೀಕ್ಷಿತನ ಮುಂದೆ ತೆರೆದಿಡುತ್ತಿದ್ದಾರೆ.   

Sunday, December 22, 2013

Shrimad BhAgavata in Kannada -Skandha-02-Ch-02(11)

ಯದಿ ಪ್ರಯಾಸ್ಯತ್ಯಥ ಪಾರಮೇಷ್ಠ್ಯಂ ವೈಹಾಯಸಾನಾಮುತ ಯದ್ ವಿಹಾರಮ್
ಅಷ್ಟಾಧಿಪತ್ಯಂ ಗುಣಸನ್ನಿವಾಯೇ ಸಹೈವ ಗಚ್ಛೇನ್ಮನಸೇಂದ್ರಿಯೈಶ್ಚ ೨೩

ದೇಹತ್ಯಾಗ ಮಾಡಿದ ಅಪರೋಕ್ಷ ಜ್ಞಾನಿ ನೇರವಾಗಿ ಮೋಕ್ಷಕ್ಕೆ ಹೋಗುವುದಿಲ್ಲ. ಮೋಕ್ಷಕ್ಕೆ ಹೋಗಲು ಒಂದು ಅವಧಿ ಇದೆ.   ದೇಹತ್ಯಾಗ ಮಾಡಿದ ಮೇಲೆ  ಮೋಕ್ಷಕ್ಕೆ ಹೋಗುವ ತನಕ ಜೀವ ಬೇರೆ-ಬೇರೆ ಸ್ಥಾನದಲ್ಲಿರುತ್ತಾನೆ. ಆ ಸ್ಥಾನಗಳೆಂದರೆ ಸ್ವರ್ಗಲೋಕದ ಆನಂತರ ಇರುವ, ದೇವತೆಗಳ ವಿಹಾರತಾಣವಾಗಿರುವ-  ಮಹರ್ಲೋಕ, ಜನರ್ಲೋಕ, ತಪರ್ಲೋಕ ಮತ್ತು ಸತ್ಯಲೋಕ. ತಮ್ಮ ಯೋಗ್ಯತೆಗನುಗುಣವಾಗಿ ಬೇರೆಬೇರೆ  ಲೋಕಗಳಲ್ಲಿ ಬ್ರಹ್ಮಕಲ್ಪದ ಅವಸಾನದ ತನಕ ಇದ್ದು, ಕೊನೆಗೆ ಚತುರ್ಮುಖ ಬ್ರಹ್ಮನೊಂದಿಗೆ  ಜೀವ ಮೋಕ್ಷವನ್ನು ಸೇರುತ್ತಾನೆ. ಈ ಲೋಕವನ್ನು ಸೇರಿದ ಜೀವನಿಗೆ ಮತ್ತೆ ಮರುಹುಟ್ಟಿಲ್ಲ.  ಈ ಲೋಕಗಳಲ್ಲದೆ ಪುಣ್ಯಫಲದಿಂದ ಸ್ವರ್ಗಲೋಕವನ್ನು ಸೇರಿದ ಜೀವನಿಗೆ ಪುನರ್ಜನ್ಮವಿರುತ್ತದೆ. ಆತ ಮತ್ತೆ ಮೋಕ್ಷ ಸಾಧನೆ ಮಾಡಬೇಕಾಗುತ್ತದೆ.
ಮೇಲಿನ  ಶ್ಲೋಕದಲ್ಲಿ ‘ಅಷ್ಟಾಧಿಪತ್ಯಂ’ ಎಂದರೆ  ಅಷ್ಟದಿಕ್ಪಾಲಕರ ಆಡಳಿತಕ್ಕೊಳಪಟ್ಟ ಸ್ವರ್ಗಲೋಕ ಎನ್ನುವುದು ಒಂದು ಅರ್ಥವಾದರೆ, ಅಷ್ಟಸಿದ್ಧಿ ಪಡೆದವರ ಸ್ಥಾನವಾದ ಮೋಕ್ಷ ಎನ್ನುವುದು ಇನ್ನೊಂದು ಅರ್ಥ. [ಅಷ್ಟಸಿದ್ಧಿಯ ಬಗ್ಗೆ ಮುಂದೆ ಭಾಗವತದಲ್ಲೇ ವಿವರಣೆ ಬರುತ್ತದೆ. ಸಂಕ್ಷಿಪ್ತವಾಗಿ ಅಷ್ಟಸಿದ್ಧಿಯ ಬಗ್ಗೆ ಹೇಳಬೇಕೆಂದರೆ: ಅಣಿಮಾ - ದೇಹವನ್ನು ಅತಿ ಚಿಕ್ಕ (ಅಣುವಿಗಿಂತ ಅಣು) ಗಾತ್ರಕ್ಕೆ ಇಳಿಸುವದು; ಲಘಿಮಾ - ಹತ್ತಿಯಂತೆ ಹಗುರಾಗುವದು; ಮಹಿಮಾ - ದೇಹವನ್ನು ಅತಿ ದೊಡ್ಡ ಗಾತ್ರಕ್ಕೆ ಹೆಚ್ಚಿಸುವದು; ಗರಿಮಾ - ಬೆಟ್ಟದಷ್ಟು ಭಾರವಾಗಿರುವದು; ಪ್ರಾಪ್ತಿ – ಎಲ್ಲಿಗೆ ಹೋಗಬೇಕೆಂದು ಇಚ್ಛೆಯಾಯಿತೋ ಆ ಕ್ಷಣ ಅಲ್ಲಿಗೆ ಹೋಗುವುದು; ಪ್ರಾಕಾಮ್ಯ – ನಾವು ಇಷ್ಟಪಟ್ಟ ವಸ್ತು ನಾವಿದ್ದಲ್ಲಿಗೆ ಬರುವುದು; ಈಶಿತ್ವ – ಏನನ್ನೂ ಮಾಡುವ ತಾಕತ್ತು;  ವಶಿತ್ವ – ಯಾರನ್ನು ಬೇಕಾದರೂ ತನ್ನ ಅಧೀನಕ್ಕೆ ತೆಗೆದುಕೊಳ್ಳುವುದು].

ಸಾವಿನ ಆನಂತರ ಮತ್ತು ಮೋಕ್ಷ ಸಿದ್ಧಿಯ ಮೊದಲು ಜೀವ ಯಾವ ಇಂದ್ರಿಯವನ್ನು ಹೊಂದಿರುತ್ತಾನೆ ? ಸ್ವರೂಪಭೂತವಾದ ಇಂದ್ರಿಯವೋ ಅಥವಾ ಪಾಂಚಭೌತಿಕ ಇಂದ್ರಿಯವೋ? ಈ ಪ್ರಶ್ನೆಗೆ ಉತ್ತರಿಸುತ್ತಾ ಶುಕಾಚಾರ್ಯರು ಹೇಳುತ್ತಾರೆ: ಜೀವ ತನ್ನ ಇಂದ್ರಿಯ ಮತ್ತು ಮನಸ್ಸಿನೊಂದಿಗೇ ದೇಹದಿಂದ ಹೊರ ಹೋಗುತ್ತದೆ ಹೊರತು ಇಂದ್ರಿಯವನ್ನು ಬಿಟ್ಟು ಹೋಗುವುದಿಲ್ಲ. ಮೋಕ್ಷಕ್ಕೆ ಹೋಗುವ ತನಕವೂ ಈ ಇಂದ್ರಿಯಗಳು ಆತನ ಜೊತೆಗಿರುತ್ತವೆ. ಮೋಕ್ಷಸ್ಥಿತಿಯಲ್ಲಿ ಹೋಗಿ ನಿಂತಾಗಲೇ ಸ್ವರೂಪಭೂತವಾದ ಇಂದ್ರಿಯ ಮತ್ತು ಮನಸ್ಸು. ಅಲ್ಲಿಯ ತನಕ ಚರಮಶರೀರ ನಾಶವಾದರೂ ಕೂಡಾ ಆತನ ಲಿಂಗಶರೀರ ಮತ್ತು ಇಂದ್ರಿಯ ಆತನ ಜೊತೆಗೇ ಇರುತ್ತವೆ.  

Saturday, December 14, 2013

Shrimad BhAgavata in Kannada -Skandha-02-Ch-02(10)

ನಾಭ್ಯಾಂ ಸ್ಥಿತಂ ಹೃದ್ಯವರೋಪ್ಯ ತಸ್ಮಾದುದಾನಗತ್ಯೋರಸಿ ತಂ ನಯೇನ್ಮುನಿಃ
ತತೋಽನುಸಂಧಾಯ ಧಿಯಾ ಮನಸ್ವೀ ಸ್ವತಾಲುಮೂಲಂ ಶನಕೈರ್ನಯೇತ ೨೧

ತಸ್ಮಾದ್ ಭ್ರುವೋರಂತರಮುನ್ನಯೇತ ನಿರುದ್ಧಸಪ್ತಾಶ್ವಪ ಥೋSನಪೇಕ್ಷಃ
ಸ್ಥಿತ್ವಾ ಮುಹೂರ್ತಾರ್ಧಮಕುಂಠದೃಷ್ಟಿರ್ನಿರ್ಭಿದ್ಯ ಮೂರ್ಧನ್ ವಿಸೃಜೇತ್ ಪರಂ ಗತಃ ೨೨

ಸ್ವ-ಇಚ್ಛೆಯಿಂದ ಪ್ರಾಣತ್ಯಾಗ ಮಾಡುವಾಗ ಜೀವವನ್ನು ಹೇಗೆ ದೇಹದಿಂದ ಹೊರ ಕಳುಹಿಸುವುದು  ಎನ್ನುವುದನ್ನು ಇಲ್ಲಿ ಶುಕಾಚಾರ್ಯರು ವರ್ಣಿಸಿರುವುದನ್ನು ಕಾಣುತ್ತೇವೆ. [ಈ ರೀತಿ ಪ್ರಾಣತ್ಯಾಗ ಮಾಡುವ ಯತಿಗಳು ಇಂದಿಗೂ ಹಿಮಾಲದಲ್ಲಿದ್ದಾರೆ. ಇಂತಹ ಯತಿಗಳ ದೇಹತ್ಯಾಗವನ್ನು  ಕಣ್ಣಾರೆ ಕಂಡ ವಿವರಣೆಯನ್ನು “ಲಿವಿಂಗ್ ವಿತ್ ಹಿಮಾಲಯನ್ ಮಾಸ್ಟರ್ಸ್” ಎನ್ನುವ ಪುಸ್ತಕದಲ್ಲಿ ಸ್ವಾಮಿರಾಮ್ ಅವರು ಸುಂದರವಾಗಿ ವರ್ಣಿಸಿರುವುದನ್ನು ಕಾಣುತ್ತೇವೆ. ಇದೊಂದು ಓದಲೇ ಬೇಕಾದ ಉತ್ತಮ ಪುಸ್ತಕ]. ಮೊದಲು ಮೂಲಾಧಾರದಿಂದ ಪ್ರಾಣಶಕ್ತಿಯನ್ನು ಊರ್ಧ್ವಮುಖಗೊಳಿಸಿ ನಾಭಿಯಲ್ಲಿ ತಂದು ನಿಲ್ಲಿಸಬೇಕು. ನಂತರ ನಾಭಿಯಿಂದ ಅದನ್ನು ಅನಾಹತಚಕ್ರಕ್ಕೆ ತಂದು ಅಲ್ಲಿಂದ ಸುಷುಮ್ನಾ ನಾಡಿಯ ಮುಖೇನ ಹೃತ್ಕಮಲದಲ್ಲಿ ತಂದು ನಿಲ್ಲಿಸಬೇಕು. ನಮಗೆ ತಿಳಿದಂತೆ ಹೃತ್ಕಮಲದಲ್ಲಿ ಜೀವನಿದ್ದಾನೆ ಮತ್ತು ಭಗವಂತನಿದ್ದಾನೆ. ಇದು ಎಲ್ಲಾ ಚಟುವಟಿಕೆಗಳ ಕೇಂದ್ರಸ್ಥಾನ. ಇಲ್ಲಿಂದ ಪ್ರಾಣಶಕ್ತಿಯನ್ನು ಭಗವಂತ ಮತ್ತು ಜೀವನ ಜೊತೆಗೆ  ಮೇಲಕ್ಕೆ ಕಳುಹಿಸಬೇಕು. ಹೀಗೆ ಮಾಡುವಾಗ ಹೃದಯದಲ್ಲಿರುವ ಪ್ರಾಣದೇವರ ಮತ್ತು ಭಗವಂತನ ಅನುಸಂಧಾನ ಗಟ್ಟಿಯಾಗಿರಬೇಕು ಮತ್ತು ಅವರ ರಕ್ಷೆಯಲ್ಲಿರುವ ಜೀವಸ್ವರೂಪದ ಚಿಂತನೆ ಮಾಡಬೇಕು. ಈ ಹಂತದಲ್ಲಿ ಜೀವಸ್ವರೂಪವನ್ನು ಪಾಂಚಭೌತಿಕ ದೇಹದಿಂದ ಸ್ಪಷ್ಟವಾಗಿ ಗುರುತಿಸಿಕೊಳ್ಳಬೇಕು. “ಈ ಸ್ಥಿತಿಯಲ್ಲಿ ಮನಸ್ಸು ದೃಢವಾಗಿರಲಿ” ಎಂದು ಇಲ್ಲಿ ಶುಕಾಚಾರ್ಯರು ಎಚ್ಚರಿಸಿರುವುದನ್ನು ಕಾಣುತ್ತೇವೆ.  ಏಕೆಂದರೆ ಇಲ್ಲಿಂದ ಮೇಲೆ ಜೀವ ಹೊರಹೋಗಲು ಅನೇಕ ಮಾರ್ಗಗಳಿವೆ. ರೋಮಕೂಪವಿರಬಹುದು ಅಥವಾ ಬಾಯಿ, ಕಣ್ಣು, ಮೂಗು, ಕಿವಿಗಳಿರಬಹುದು.  ಈ ಯಾವುದೇ ದ್ವಾರದ ಮುಖೇನ ಪ್ರಾಣಶಕ್ತಿ ನುಣುಚಿಕೊಳ್ಳದಂತೆ ಎಚ್ಚರಿಕೆವಹಿಸಬೇಕು. ಹೃತ್ಕಮಲದಿಂದ ಮೇಲಕ್ಕೆ ಪ್ರಾಣಶಕ್ತಿಯನ್ನು ಕೊಂಡೊಯ್ದು ಸ್ವಪ್ನದ ಕೇಂದ್ರಸ್ಥಾನವಾದ ವಿಶುದ್ಧಿಚಕ್ರದಲ್ಲಿ ನಿಲ್ಲಿಸಬೇಕು. ಇಲ್ಲಿಂದ ಮೇಲಿನ ಪಯಣ ಅತ್ಯಂತ ಕ್ಲಿಷ್ಟ. ಇಲ್ಲಿ ಪ್ರತಿ ಹೆಜ್ಜೆಹೆಜ್ಜೆಗೂ ಎಚ್ಚರ ಅಗತ್ಯ. ವಿಶುದ್ಧಿಚಕ್ರದಿಂದ ಬ್ರಹ್ಮನಾಡಿಯ ಮುಖೇನ ಭ್ರೂಮಧ್ಯಕ್ಕೆ ಬರಬೇಕು.  “ಈ ಹಂತದಲ್ಲಿ ಎಲ್ಲಾ ಐಹಿಕ ಕಾಮನೆಗಳನ್ನು ತ್ಯಜಿಸಿ ಅದರ ಮುಖೇನ ಇಲ್ಲಿರುವ ಎಲ್ಲಾ ಏಳು ಕುದುರೆಗಳ ಬಾಗಿಲುಗಳನ್ನು(೨ ಕಿವಿ, ೨ ಮೂಗಿನ ದ್ವಾರ, ೨ ಕಣ್ಣು ಹಾಗೂ ಬಾಯಿ)   ಮುಚ್ಚು” ಎಂದಿದ್ದಾರೆ ಶುಕಾಚಾರ್ಯರು. ಇಲ್ಲಿ ಬುದ್ಧಿ ಕುಸಿಯದಂತೆ ಎಚ್ಚರವಹಿಸಿ ಸದಾ ಭಗವಂತನನ್ನು ನೆನೆಯುತ್ತಾ ಸ್ವಲ್ಪಕಾಲ ಜೀವವನ್ನು ಅಲ್ಲೇ  ನಿಲ್ಲಿಸಿ ಅದನ್ನು ಮತ್ತೆ ಊರ್ಧ್ವಕ್ಕೆ ಹೋಗಲು ಅಣಿಗೊಳಿಸಬೇಕು. ನಂತರ ಸಹಸ್ರಾರವನ್ನು ಭೇದಿಸಿ ಬ್ರಹ್ಮನಾಡಿಯಿಂದ ಜೀವ ಹೊರಹೋಗಬೇಕು. ಇದು ನಮ್ಮ ದೇಹದಲ್ಲಿರುವ ಶಕ್ತಿಕೇಂದ್ರಗಳ ಮೂಲಕ ಪ್ರಾಣಶಕ್ತಿಯನ್ನು ಊರ್ಧ್ವಮುಖಗೊಳಿಸಿ, ಊರ್ಧ್ವಮುಖವಾದ ಪ್ರಾಣಶಕ್ತಿಯ ಜೊತೆಗೆ ಜೀವವನ್ನು ಬ್ರಹ್ಮನಾಡಿಯಲ್ಲಿ ಹೊರಕ್ಕೆ ಕಳುಹಿಸುವ ಒಂದು ಅದ್ಭುತ ಪ್ರಕ್ರಿಯೆ. [ಈ ರೀತಿಯ ಹಠಯೋಗ ಕಠಿಣ ಸಾಧನವಾಗಿರುವುದರಿಂದ ಪ್ರಾಚೀನರು ಅದಕ್ಕೆ ಪೂರಕವಾದ ಅತ್ಯಂತ ಸರಳ ವಿಧಾನವನ್ನು ತಮ್ಮ ದೈನಂದಿನ ಜೀವನದಲ್ಲಿ ತೊಡಗಿಸಿಕೊಂಡಿದ್ದರು. ಇದಕ್ಕೆ ಉತ್ತಮ ಉದಾಹರಣೆ ಊರ್ಧ್ವಪುಂಡ್ರ ಧಾರಣೆ.  ಜೀವದ ಊರ್ಧ್ವಮುಖ ಗತಿಗೆ ಸಂಬಂಧಪಟ್ಟ ಈ ಆಚರಣೆ ಪೂರ್ಣ ಪ್ರಮಾಣದಲ್ಲಿ ದೇಹದಲ್ಲಿರುವ ಶಕ್ತಿ ಕೇಂದ್ರಗಳನ್ನು ಜಾಗೃತಿಗೊಳಿಸುವ ಒಂದು ಸರಳವಾದ ಬಾಹ್ಯ ವಿಧಾನ]. ಶುಕಾಚಾರ್ಯರು ಇಲ್ಲಿ ವಿವರಿಸಿರುವ ಅಂತ್ಯಕಾಲದ ಅನುಸಂಧಾನ ಮತ್ತು ಜೀವದಗತಿ ಇಷ್ಟು ಸ್ಪಷ್ಟವಾಗಿ ಇನ್ನೆಲ್ಲೂ ಕಾಣಸಿಗುವುದಿಲ್ಲ. ಇದು ಭಾಗವತದಲ್ಲಿ ಬಂದಿರುವ ಅದ್ಭುತ ವಿವರಣೆ.

Wednesday, December 11, 2013

Shrimad BhAgavata in Kannada -Skandha-02-Ch-02(9)

ಸ್ಥಿರಂ ಸುಖಂ ಚಾಸನಮಾಸ್ಥಿತೋ ಯತಿರ್ಯದಾ ಜಿಹಾಸುರಿಮಮಂಗ ಲೋಕಮ್
ಕಾಲೇ ಚ ದೇಶೇ ಚ ಮನೋ ನ ಸಜ್ಜೇತ್ ಪ್ರಾಣಾನ್ ನಿಯಚ್ಛೇನ್ಮನಸಾ ಜಿತಾಸುಃ ೧೬

ಮನಶ್ಚ ಬುದ್ಧ್ಯಾSಮಲಯಾ ನಿಯಮ್ಯ ಕ್ಷೇತ್ರಜ್ಞ ಏತಾಂ ನಿನಯೇತ್ ತಮಾತ್ಮನಿ
ಆತ್ಮಾನಮಾತ್ಮನ್ಯವರುಧ್ಯ ಧೀರೋ ಲಬ್ಧೋಪಶಾಂತಿರ್ವಿರಮೇತ ಕೃತ್ಯಾತ್ ೧೭

“ಬುದ್ಧಿಪೂರ್ವಕವಾಗಿ ದೇಹತ್ಯಾಗ ಮಾಡುವವರು ಭಧ್ರವಾದ ಆಸನದಲ್ಲಿ ಚಲನೆ ಇಲ್ಲದೆ ನಿಶ್ಚಲವಾಗಿ ಕುಳಿತುಕೊಂಡು ದೇಶ-ಕಾಲದ ಬಗ್ಗೆ ಯೋಚನೆ ಮಾಡದೇ  ಧ್ಯಾನಕ್ಕೆ ತೊಡಗಬೇಕು” ಎಂದಿದ್ದಾರೆ ಶುಕಾಚಾರ್ಯರು. ಇದು ಬಹಳ ಮುಖ್ಯವಾದ ವಿಚಾರ. ನಮ್ಮಲ್ಲಿ ಕೆಲವರಿಗೆ ಒಂದು ತಪ್ಪು ಕಲ್ಪನೆ ಇದೆ. ಅದೇನೆಂದರೆ ಉತ್ತರಾಯಣದಲ್ಲಿ ಅದರಲ್ಲೂ ಹಗಲಲಿ ಸತ್ತರೆ ಮಾತ್ರ ಮೋಕ್ಷ ಎಂದು. ಇದು ಭೀಷ್ಮಾಚಾರ್ಯರ ಕಥೆಯನ್ನು ಕೇಳಿ ಬಂದಿರುವ ತಪ್ಪು ತಿಳುವಳಿಕೆ. ಉತ್ತರಾಯಣದಲ್ಲಿ ಸತ್ತವರೆಲ್ಲಾ ಮೋಕ್ಷಕ್ಕೆ ಹೋಗುವುದಿಲ್ಲ. ಮೋಕ್ಷ ಯೋಗ್ಯರು ಯಾವಾಗ ಸತ್ತರೂ ಮೋಕ್ಷವನ್ನು ಸೇರುತ್ತಾರೆ.  ಶಾಸ್ತ್ರದಲ್ಲಿ ಬರುವ ಉತ್ತರಾಯಣ, ಶುಕ್ಲಪಕ್ಷ,  ಇತ್ಯಾದಿ ಉಲ್ಲೇಖಗಳು ನಾವು ಹೋಗಿ ಸೇರುವ ದೇವತೆಗಳ ಉಲ್ಲೇಖವಾಗಿದೆ. ಇನ್ನು ಪುರಾಣದಲ್ಲಿ ಪ್ರಯಾಗ-ತ್ರಿವೇಣಿ ಸಂಗಮದಲ್ಲಿ ಸತ್ತರೆ ಮೋಕ್ಷ ಎನ್ನುವ ಮಾತಿದೆ. ಇದು ಆ ಕ್ಷೇತ್ರ ಎಷ್ಟು ಪವಿತ್ರ ಎನ್ನುವುದನ್ನು ಸೂಚಿಸುತ್ತದೆ. ಅಲ್ಲಿ ಸ್ನಾನ ಮಾಡುವುದರಿಂದ ಕ್ರಮೇಣ ಮನಃಶುದ್ಧಿಯಾಗಿ, ಜ್ಞಾನವೃದ್ಧಿಯಾಗಿ ಮೋಕ್ಷಕ್ಕೆ ಹೋಗಬಹುದೇ ಹೊರತು, ಗಂಗೆಗೆ ಹಾರಿದರೆ ಮೋಕ್ಷ ಸಿಗುವುದಿಲ್ಲ.  ಹೀಗಾಗಿ ಇಲ್ಲಿ ಮುಖ್ಯವಾಗಿ ಶುಕಾಚಾರ್ಯರು “ಪ್ರಾಣೋತ್ಕ್ರಮಣ ಕಾಲದಲ್ಲಿ, ದೇಹತ್ಯಾಗ ಮಾಡುವಾಗ  ದೇಶ-ಕಾಲದ ಬಗ್ಗೆ ಯೋಚಿಸಲೇ ಬೇಡ” ಎಂದಿದ್ದಾರೆ. ‘ತದೇವ ಲಗ್ನಂ, ಸುದಿನಂ ತದೇವ’ ಯಾವ ದೇಶದಲ್ಲಿ, ಯಾವ ಕಾಲದಲ್ಲಿ ಭಗವಂತನ ಸ್ಮರಣೆ ಬಂತೋ ಅದೇ ಪುಣ್ಯಕಾಲ, ಅದೇ ಪುಣ್ಯದೇಶ. ಭಗವಂತನ ಸ್ಮರಣೆ ಇಲ್ಲದೆ ಯಾವ-ದೇಶ ಕಾಲದಲ್ಲಿ ಸತ್ತರೂ ಉಪಯೋಗವಿಲ್ಲ. ಹೀಗಾಗಿ ನಮ್ಮ ಚಿಂತನೆ ಕೇವಲ ಭಗವಂತನ ಕುರಿತಾಗಿರಲಿ, ದೇಶ-ಕಾಲದಲ್ಲಿ ಬೇಡ.

ಮೊತ್ತಮೊದಲು ಪ್ರಾಣಾಯಾಮದಿಂದ ಉಸಿರನ್ನು ಗೆದ್ದು, ಪ್ರಾಣದೇವರಲ್ಲಿ ಮನಸ್ಸನ್ನು ನಿಲ್ಲಿಸಿ, ಪ್ರಾಣಾಂತರ್ಗತ ಭಗವಂತನನ್ನು ಧ್ಯಾನ ಮಾಡಬೇಕು. ಪ್ರಾಣದೇವರ ಅನುಗ್ರಹದಿಂದ ಇಂದ್ರಿಯಾಭಿಮಾನಿ ದೇವತೆಗಳನ್ನು ಮನೋಭಿಮಾನಿ ದೇವತೆಗಳ ಅಧೀನವಾಗಿ(ಲಯ ಚಿಂತನೆ) ಧ್ಯಾನ ಮಾಡಬೇಕು. [ಇಂದ್ರಿಯಾಭಿಮಾನಿ ದೇವತೆಗಳು ಯಾರು ಎನ್ನುವ ವಿವರಣೆ ಮುಂದೆ ಭಾಗವತದಲ್ಲೇ ಬರುತ್ತದೆ. ಹದಿನೆಂಟನೇ ಕಕ್ಷ್ಯೆದಿಂದ ಎಂಟನೇ ಕಕ್ಷ್ಯೆಯ ಇಂದ್ರನ  ತನಕ  ಎಲ್ಲಾ ದೇವತೆಗಳು ನಮ್ಮ ಇಂದ್ರಿಯಾಭಿಮಾನಿಗಳು. ಲಯ ಚಿಂತನೆಯ ಕುರಿತು ಈಗಾಗಲೇ ಒಂದನೇ ಸ್ಕಂಧದಲ್ಲಿ ವಿವರಿಸಲಾಗಿದೆ ೧-೧೫-೧೦]. ಇಂದ್ರಿಯಾಭಿಮಾನಿ ದೇವತೆಗಳು  ಮನೋಮಯಕೋಶದ ದೇವತೆಗಳಾದ ಗರುಡ-ಶೇಷ-ರುದ್ರರ ಅಧೀನವಾಗಿ ಪ್ರಾಣಮಯಕೋಶವನ್ನು ನಿಯಂತ್ರಿಸುತ್ತಾರೆ ಎಂದು ಚಿಂತನೆ ಮಾಡಬೇಕು. ನಂತರ ಮನೋಮಯಕೋಶದ ದೇವತೆಗಳನ್ನು ಬುದ್ಧಿಯ ಅಭಿಮಾನಿನಿಯರಾದ ಸರಸ್ವತಿ-ಭಾರತಿಯರ ಅಧೀನವಾಗಿ ಮತ್ತು ಬುದ್ಧಿಯ ಅಭಿಮಾನಿಯರು  ವಿಜ್ಞಾನ ಮತ್ತು ಆನಂದಮಯಕೋಶದ ಅಭಿಮಾನಿಯರಾದ ಬ್ರಹ್ಮ-ವಾಯುವಿನ ಅಧೀನ ಎಂದು ತಾರತಮ್ಯ(portfolio) ಚಿಂತನೆ ಮಾಡಬೇಕು. ಕೊನೆಯಲ್ಲಿ ಎಲ್ಲಾ ದೇವತೆಗಳು ಜೀವಸ್ವರೂಪದಲ್ಲಿರುವ ಕ್ಷೇತ್ರಜ್ಞನಾದ ಭಗವಂತನ ಅಧೀನ ಎಂದು ಚಿಂತನೆ ಮಾಡಬೇಕು. ಜೀವಸ್ವರೂಪದಲ್ಲಿ ಅಣೋರಣೀಯನಾಗಿರುವ  ಕ್ಷೇತ್ರಜ್ಞನಾದ ಭಗವಂತ ಪಿಂಡಾಂಡದಲ್ಲಿರುವ ಭಗವಂತನ ಸ್ವರೂಪ. ಪಿಂಡಾಂಡದಲ್ಲಿರುವ ಭಗವಂತ ಬ್ರಹ್ಮಾಂಡದಲ್ಲಿರುವ ಭಗವಂತನ ಸ್ವರೂಪ. ಬ್ರಹ್ಮಾಂಡದಲ್ಲಿರುವ ಭಗವಂತ ಸರ್ವಗತನಾದ ಭಗವಂತನ ಸ್ವರೂಪ ಎಂದು ಐಕ್ಯಚಿಂತನೆ ಮಾಡಬೇಕು. ಈ ರೀತಿ ಚಿಂತನೆ ಮಾಡುತ್ತಾ ಜೀವ ದೇಹದಿಂದ ಮೇಲಕ್ಕೆ ಹೋಗಬೇಕು.

Saturday, December 7, 2013

Shrimad BhAgavata in Kannada -Skandha-02-Ch-02(8)

ಯಾವನ್ನ ಜಾಯೇತ ಪರಾವರೇSಸ್ಮಿನ್ವಿಶ್ವೇಶ್ವರೇ ದ್ರಷ್ಟರಿ ಭಕ್ತಿಯೋಗಃ
ತಾವತ್ಸ್ಥವೀಯಃ ಪುರುಷಸ್ಯ ರೂಪಂ ಕ್ರಿಯಾವಸಾನೇ ಪ್ರಯತಃ ಸ್ಮರೇತ ೧೫

ಭಗವಂತನನ್ನು ಧ್ಯಾನ ಮಾಡಬೇಕಾದರೆ ಕೇವಲ ಪಾಂಡಿತ್ಯ ಸಾಲದು. ಧ್ಯಾನಕ್ಕೆ ಬಹಳ ಮುಖ್ಯವಾದುದು ಜ್ಞಾನದ ಜೊತೆಗೆ ಶರಣಾಗತಿ(Submission). ಭಕ್ತಿ ಇಲ್ಲದ ಪಾಂಡಿತ್ಯದಿಂದ ಧ್ಯಾನ ಅಸಾಧ್ಯ. ಎಲ್ಲವನ್ನೂ ಕಾಣಬಲ್ಲ ಭಗವಂತ ನಮ್ಮೊಳಗಿನ ಅಹಂಕಾರವನ್ನೂ ಕಾಣಬಲ್ಲ. ಹಾಗಾಗಿ ಎಲ್ಲಿಯ ತನಕ ನಾವು ಅಹಂಕಾರದಿಂದ ಈಚೆ ಬರುವುದಿಲ್ಲವೋ, ಅಲ್ಲಿಯ ತನಕ ಭಗವಂತನ ದರ್ಶನ ಸಾಧ್ಯವಿಲ್ಲ. ವೇದದಲ್ಲಿ ಹೇಳುವಂತೆ:  “ತಮೇವಂ ವಿದ್ವಾನ್ ಅಮೃತ ಇಹಭವತಿ”. ಅಂದರೆ- ಭಗವಂತನಲ್ಲಿ ಭಕ್ತಿ ಮಾಡಬೇಕಾದರೆ ಜ್ಞಾನ  ಬೇಕು, ಆತ ಜ್ಞಾನಿಗಳಿಗೆ ಮಾತ್ರ ಕಾಣಿಸಿಕೊಳ್ಳುತ್ತಾನೆ. ಇದೇ ಮಾತನ್ನು ಶ್ರೀಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ: ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ ಭಗವದ್ಗೀತಾ-೪-೩೭॥ ಅಂದರೆ: ಅರಿವಿನ ಬೆಂಕಿ ಎಲ್ಲಾ ಕರ್ಮಗಳನ್ನೂ ಸುಟ್ಟುಬಿಡುತ್ತದೆ. ಆದರೆ ಭಕ್ತ್ಯಾ ತು ಅನನ್ಯಯಾ ಶಕ್ಯಃ ಭಗವದ್ಗೀತಾ-೧೧-೫೪॥ ಅಂದರೆ: ಭಕ್ತಿಗೆ ಪೂರಕವಾದ ಜ್ಞಾನ ಮಾತ್ರ ಭಗವಂತನ ಅರಿವಿಗೆ ಕಾರಣವಾಗುತ್ತದೆ.
ಮೇಲಿನ ಶ್ಲೋಕದಲ್ಲಿ ಶುಕಾಚಾರ್ಯರು “ಪರಾವರನಾದ ಭಗವಂತನಲ್ಲಿ ಭಕ್ತಿ ಬರಲಿಲ್ಲ ಎಂದರೆ ನಮ್ಮ ಜ್ಞಾನದಲ್ಲಿ ದೋಷವಿದೆ ಎಂದು ತಿಳಿಯಬೇಕು” ಎಂದಿದ್ದಾರೆ. ಇಲ್ಲಿ ‘ಪರಾವರ’ ಎಂದರೆ ಎಲ್ಲಾ ತತ್ತ್ವಗಳಿಗೂ ಹಿರಿಯ ತತ್ತ್ವ ಎಂದರ್ಥ. ನಾವು ಜಗತ್ತಿನ ಯಾವುದೋ ಮೂಲೆಯಲ್ಲಿರುವ ಒಂದು  ಅಣುಕಣ.  ಈ ಜಗತ್ತಿನಲ್ಲಿ ನಮಗಿಂತ ದೊಡ್ಡ ತತ್ತ್ವಗಳು ಬಹಳಷ್ಟಿವೆ. ಆದರೆ ಭಗವಂತನ ಮುಂದೆ ಇತರ ಎಲ್ಲಾ ತತ್ತ್ವಗಳೂ ಸಣ್ಣವು. ಹಾಗಾಗಿ ಅಂತಹ  ಭಗವಂತನ ಮೇಲೆ ನಮಗೆ ಭಕ್ತಿ ಬರಲಿಲ್ಲ ಎಂದರೆ ನಮಗೆ ಸರಿಯಾಗಿ ಭಗವಂತನ ಅರಿವೇ ಬರಲಿಲ್ಲ ಎಂದರ್ಥ.
ಭಗವಂತ ಇಡೀ ವಿಶ್ವಕ್ಕೆ ಸ್ವಾಮಿ. ಅಷ್ಟೇ ಅಲ್ಲ, ಪ್ರತಿಯೊಂದು ಜೀವರೊಳಗೆ ಅಂತರ್ಯಾಮಿಯಾಗಿ  ಇರತಕ್ಕವನು ಆತ. ಇಂತಹ  ಬ್ರಹ್ಮ-ವಾಯುವಿಗೂ ನಿಯಾಮಕನಾಗಿರುವ ಭಗವಂತನಲ್ಲಿ ಪೂರ್ಣಪ್ರಮಾಣದಲ್ಲಿ ಭಕ್ತಿ ಬರಲಿಲ್ಲ ಎಂದರೆ ಕಣ್ಮುಚ್ಚಿ ಆತನನ್ನು ಧ್ಯಾನದಲ್ಲಿ ಕಾಣಲು ಸಾಧ್ಯವಿಲ್ಲ.
ಮಾನಸ ಪೂಜೆ ಸಾಧ್ಯವಾಗುವ ತನಕ  ಬಾಹ್ಯಕ್ರಿಯೆಗಳಿಂದ ಭಗವಂತನನ್ನು ಅರ್ಚಿಸಬೇಕು. ಹೀಗೆ ಮಾಡುತ್ತಾ ಮುಂದುವರಿದಾಗ ಅದು ಮನಸ್ಸಿನ ಮೇಲೆ ಪ್ರಭಾವಬೀರುತ್ತದೆ. ಇದರಿಂದ ಅಹಂಕಾರ ಕಡಿಮೆಯಾಗಿ  ಧ್ಯಾನದ ಮಾರ್ಗ ಸುಗಮವಾಗುತ್ತದೆ. ಬಾಹ್ಯ ಪೂಜೆಯನ್ನು ನಿರಂತರ ಮಾಡಿ “ನನ್ನ ಅಂತರಂಗದಲ್ಲಿ ಕಾಣಿಸಿಕೋ” ಎಂದು ಭಗವಂತನಲ್ಲಿ ಪ್ರಾರ್ಥಿಸಬೇಕು. ಪ್ರತಿಯೊಂದು ಆಚರಣೆಯ ಕೊನೆಯಲ್ಲಿ ಎಲ್ಲವುದರಲ್ಲೂ ಭಗವಂತನಿದ್ದಾನೆ ಎನ್ನುವುದನ್ನು ನೆನಪಿಸಿಕೊಳ್ಳಬೇಕು. ನಾನು ಪೂಜಿಸುತ್ತಿರುವುದು ಕೇವಲ ಪ್ರತಿಮೆಯನ್ನಲ್ಲ, ಬದಲಿಗೆ ಆ ಪ್ರತಿಮೆಯ ಅಂತರ್ಯಾಮಿಯಾಗಿರುವ ಭಗವಂತನನ್ನು ಎನ್ನುವ ಅನುಸಂಧಾನ ನಮ್ಮ ಕ್ರಿಯೆಯಲ್ಲಿರಬೇಕು. ನಾವು ಮಾಡುವ ಪೂಜೆಯ ಪ್ರತಿಯೊಂದು ಹಂತದಲ್ಲಿ ಭಗವಂತನನ್ನು ಅನುಸಂಧಾನ ಮಾಡುವುದು ಕಷ್ಟವಾದಾಗ, ಪೂಜೆಯ ಕೊನೆಗೆ “ಇದು ಎಲ್ಲವುದರ ಒಳಗೂ-ಹೊರಗೂ ತುಂಬಿರುವ ಆತನಿಗೆ ಅರ್ಪಿತವಾಗಿ ಆತ ಪ್ರಸನ್ನನಾಗಲಿ” ಎಂದು ಭಗವಂತನಿಗೆ ಅರ್ಪಿಸಬೇಕು. [ಇದಕ್ಕಾಗಿಯೇ ಪ್ರತಿಯೊಂದು ಪೂಜೆಯ ಕೊನೆಗೆ ಕೃಷ್ಣಾರ್ಪಣಮಸ್ತು ಹೇಳಲಾಗುತ್ತದೆ].

Wednesday, December 4, 2013

Shrimad BhAgavata in Kannada -Skandha-02-Ch-02(7)

ಅದೀನಲೀಲಾಹಸಿತೇಕ್ಷಣೋಲ್ಲಸದ್ ಭ್ರೂ ಭಂಗಸಂಸೂಚಿತಭೂರ್ಯನುಗ್ರಹಮ್
ಈಕ್ಷೇತ ಚಿಂತಾಮಯಮೇನಮೀಶ್ವರಂ ಯಾವನ್ಮನೋ ಧಾರಣಯಾSವತಿಷ್ಠತೇ ೧೩
  
ಈ ಶ್ಲೋಕದಲ್ಲಿ ಶುಕಾಚಾರ್ಯರು ಹಿಂದೆ ವಿವರಿಸಿದ ಧ್ಯಾನ ಪ್ರಕ್ರಿಯೆಯನ್ನು  ಮತ್ತೆ ಇನ್ನೊಂದು ರೀತಿಯಲ್ಲಿ ವಿವರಿಸುತ್ತಾ ಹೇಳುತ್ತಾರೆ: “ಭಗವಂತನ ಮುಖದಲ್ಲಿ ಉತ್ಕೃಷ್ಟವಾದ ಮಂದಹಾಸವನ್ನು ಧ್ಯಾನಮಾಡು” ಎಂದು.  ಮುಖಕ್ಕೆ ಕಳೆಯೇ ಮಂದಹಾಸ. ಇಂತಹ ಮಂದಹಾಸದಲ್ಲಿ ಅತ್ಯಂತ ಶ್ರೇಷ್ಠ ಮಂದಹಾಸ ಆ ಭಗವಂತನ ಮಂದಹಾಸ. “ಅಂತಹ ಮಂದಹಾಸಬೀರುವ ಭಗವಂತನನ್ನು ಧ್ಯಾನದಲ್ಲಿ ಕಾಣು” ಎಂದಿದ್ದಾರೆ ಶುಕಾಚಾರ್ಯರು. “ಭಗವಂತ ಮುಗುಳ್ನಗುತ್ತಿದ್ದಾನೆ, ಆತ ತನ್ನ ಕರುಣಾಪೂರ್ಣ ಅರಳುಗಣ್ಣಿನಿಂದ ನನ್ನನ್ನು  ನೋಡುತ್ತಿದ್ದಾನೆ, ಆತನ ಅನುಗ್ರಹದ ವೃಷ್ಟಿ ನನ್ನ  ಮೇಲಾಗುತ್ತಿದೆ” ಎಂದು ಅಂತರಂಗದಲ್ಲಿ ಭಗವಂತನನ್ನು ಧ್ಯಾನ ಮಾಡಬೇಕು.

ಇಲ್ಲಿ ಭಗವಂತನನ್ನು ‘ಚಿಂತಾಮಯ’ ಎಂದು ಸಂಬೋಧಿಸಿದ್ದಾರೆ. ಇದು ಇಂದು ಲೋಕದಲ್ಲಿ ಬಳಕೆಯಲ್ಲಿಲ್ಲದ ಪದ. ಶಾಸ್ತ್ರೀಯವಾಗಿ ಚಿಂತಾಮಯ ಎಂದರೆ ಬೇಡಿದ್ದನ್ನು ಕೊಡುವ ಕರುಣಾಳು ಎಂದರ್ಥ. “ನಾನಿರುವಾಗ ನಿನಗೇಕೆ ಚಿಂತೆ” ಎಂದು ಮಂದಹಾಸ ಬೀರುತ್ತಾ, ಅರಳುಗಣ್ಣಿನಿಂದ ಭಗವಂತ ನನ್ನನ್ನು ನೋಡುತ್ತಿದ್ದಾನೆ ಎಂದು ಆ ಕರುಣಾಮೂರ್ತಿ ಭಗವಂತನನ್ನು ಧ್ಯಾನದಲ್ಲಿ ಕಾಣಬೇಕು. “ಈ ರೀತಿ ಆನಂದದ ಅಭಿವ್ಯಕ್ತಿ ಮಾಡುವಂತಹ ಅರಳುಗಣ್ಣು, ಆ ಮಂದಹಾಸ ಎಷ್ಟು ಹೊತ್ತು ಕಾಣುತ್ತದೋ ಅಷ್ಟುಹೊತ್ತು ನೋಡಿ ಆನಂದಪಡು” ಎಂದಿದ್ದಾರೆ ಶುಕಾಚಾರ್ಯರು. ಧ್ಯಾನದಲ್ಲಿ ನಿರಂತರ ಪ್ರಯತ್ನ ಮಾಡಿದರೆ ಈ ರೀತಿಯ ಅಪೂರ್ವ ಅನುಭವವನ್ನು ಪಡೆಯುವುದು ಸಾಧ್ಯ. 
ಒಮ್ಮೆ ಧ್ಯಾನದಲ್ಲಿ ಭಗವಂತನ ಸುಂದರಮೂರ್ತಿಯನ್ನು ಕಂಡರೆ ಆನಂತರ ಜಗತ್ತಿನಲ್ಲಿ ಯಾವುದೂ ಅದಕ್ಕಿಂತ ಸುಂದರ ಅನಿಸುವುದೇ ಇಲ್ಲ. ಇದರಿಂದ ಪ್ರಾಪಂಚಿಕ ಸೆಳೆತ ಕಡಿಮೆಯಾಗುತ್ತದೆ. ಕಣ್ಮುಚ್ಚಿ ಕುಳಿತ ತಕ್ಷಣ ಭಗವಂತನ ರೂಪ ಕಾಣುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಕಾಣಿಸಿದರೂ ಅದು ಸಮಗ್ರವಾಗಿ ಇಡೀ ದಿನ ಕಾಣಲು ಸಾಧ್ಯವಿಲ್ಲ. ಆತ್ಮಸ್ವರೂಪದಿಂದ ಭಗವಂತನನ್ನು ಕಾಣುವಾಗಲೂ ಸಹ, ಎಲ್ಲೋ ಒಮ್ಮೆ ಮಿಂಚಿನಂತೆ ಕಾಣಿಸಿ ಕಣ್ಮರೆಯಾಗುತ್ತಾನೆ ಆ ಭಗವಂತ. ಆದರೆ ಒಮ್ಮೆ ಕಂಡ ನೆನಪು ಇಡೀ ಜನ್ಮಕ್ಕೆ ಸಾಕಾಗುತ್ತದೆ.
  

Sunday, December 1, 2013

Shrimad BhAgavata in Kannada -Skandha-02-Ch-02(6)

ಸ ಸರ್ವವಿದ್ ಹೃದ್ಯನುಭೂಶ್ಚ ಸರ್ವ ಆತ್ಮಾ ಯಥಾ ಸುಪ್ತಜನೇಕ್ಷಿತೈಕಃ
ತಂ ಸತ್ಯ ಮಾನಂದನಿಧಿಂ ಭಜೇತ  ಸರ್ವಾತ್ಮನಾSತೋSನ್ಯತ ಆತ್ಮಘಾತಃ  ೦೭

ಈ ಶ್ಲೋಕದಲ್ಲಿ ಶುಕಾಚಾರ್ಯರು  ಭಗವಂತನ ಚಿತ್ರಣ ಕೊಡುತ್ತಾ ಆತನನ್ನು ‘ಸರ್ವವಿತ್’ ಎಂದು ಕರೆದಿದ್ದಾರೆ. ಮೇಲ್ನೋಟಕ್ಕೆ ಸರ್ವವಿತ್ ಎಂದರೆ ಎಲ್ಲವನ್ನೂ ಬಲ್ಲವ(ಸರ್ವಜ್ಞ) ಎಂದರ್ಥ. ಆದರೆ ಉಪನಿಷತ್ತಿನಲ್ಲಿ ಹೇಳುವಂತೆ: ಯಃ ಸರ್ವಜ್ಞಃ ಸರ್ವವಿದ್ಯಸ್ಯ ಜ್ಞಾನಮಯಂ ತಪಃ ಮುಂಡಕ ೧.೧.೯ ಇಲ್ಲಿ ಭಗವಂತನನ್ನು ಸರ್ವಜ್ಞ ಮತ್ತು ಸರ್ವವಿತ್ ಎಂದು ಬೇರೆ ಬೇರೆಯಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಸರ್ವವಿತ್ ಎಂದರೆ ಕೇವಲ ಸರ್ವಜ್ಞ ಅಲ್ಲ. ಸರ್ವಂ ವಿದಂತಿ-ಸರ್ವವಿತ್. ಏನನ್ನು ಪಡೆಯಬೇಕೋ ಅದೆಲ್ಲವನ್ನೂ ಪಡೆದವನು(ಆಪ್ತಕಾಮ) ಮತ್ತು ಎಲ್ಲವನ್ನೂ ಬಲ್ಲ ಭಗವಂತ ಸರ್ವವಿತ್.  ಇಂತಹ ಭಗವಂತ ಎಲ್ಲಿದ್ದಾನೆ ಎಂದರೆ ಶುಕಾಚಾರ್ಯರು ಹೇಳುತ್ತಾರೆ: “ಆತ ನಿಮ್ಮ ಹೃದಯ ಕಮಲದಲ್ಲೇ ಇದ್ದಾನೆ” ಎಂದು. ಈ ಕುರಿತ ಸುಂದರ ವಿವರಣೆ ಮುಂದೆ ಭಾಗವತದಲ್ಲೇ ಬರುತ್ತದೆ.  ತಸ್ಯಾವಿಜ್ಞಾತನಾಮಾSSಸೀತ್  ಸಖಾSವಿಜ್ಞಾತಚೇಷ್ಟಿತಃ ।ಭಾಗವತ-೪-೨೫-೧೦  ಈ ದೇಹದೊಳಗೆ ಒಬ್ಬ ಜೀವನಿದ್ದಾನೆ ಮತ್ತು ಸದಾ ಅವನೊಂದಿಗಿರುವ ಒಬ್ಬ ಗೆಳೆಯನಿದ್ದಾನೆ. ಆದರೆ ಆ ಗೆಳೆಯನ ಹೆಸರೇನು, ಆತ ಏನನ್ನು ಮಾಡುತ್ತಿದ್ದಾನೆ ಎನ್ನುವುದು ಜೀವನಿಗೆ ತಿಳಿದಿಲ್ಲ! ಇದನ್ನೇ ಉಪನಿಷತ್ತಿನಲ್ಲಿ “ದ್ವಾ ಸುಪರ್ಣಾ ಸಯುಜಾ ಸಖಾಯಾ ಮುಂಡಕ ೩-೧-೧  ಎಂದಿದ್ದಾರೆ. ಹೃದಿ ಹ್ಯೇಷ ಆತ್ಮಾ ಷಟ್ ಪ್ರಶ್ನ ೩.೫ ನಮ್ಮ  ಜೀವ ಇರುವುದೂ ಹೃದಯದಲ್ಲಿ, ಭಗವಂತ ಇರುವುದೂ ಹೃದಯದಲ್ಲಿ. ನಮ್ಮ ಆತ್ಮದ ಅತ್ಯಂತ ಆತ್ಮೀಯ ಗೆಳೆಯನಾಗಿ ಪಕ್ಕದಲ್ಲೇ ಭಗವಂತನಿದ್ದಾನೆ.  ಆದರೆ ನಮಗೆ ಆತನ ಪರಿಚಯವೇ ಇಲ್ಲ. ಹಾಗಾಗಿ ನಮ್ಮ ಪಾಲಿಗೆ ಆತ ಇದ್ದೂ ಇಲ್ಲವಾಗಿದ್ದಾನೆ.  ಇದಕ್ಕಾಗಿ ಇಲ್ಲಿ ಶುಕಾಚಾರ್ಯರು “ಭಗವಂತ ನಿಮ್ಮ ಹೃದಯ ಕಮಲದಲ್ಲೇ ಇದ್ದಾನೆ, ಅವನನ್ನು ಇನ್ನೆಲ್ಲೋ ಹುಡುಕಬೇಡಿ”ಎಂದಿದ್ದಾರೆ.
ಈ ಶ್ಲೋಕದಲ್ಲಿ ಶುಕಾಚಾರ್ಯರು ಭಗವಂತನನ್ನು ‘ಅನುಭೂಃ’ ಎಂದಿದ್ದಾರೆ. ಅನುಭೂಃ ಎಂದರೆ ತನ್ನ ಇಚ್ಛೆಗನುಗುಣವಾಗಿ  ತಾನಿರುವವ. ಇಚ್ಛಾಮಾತ್ರದಿಂದದಲೇ ಸೃಷ್ಟಿ-ಸ್ಥಿತಿ-ಸಂಹಾರ ಮಾಡಬಲ್ಲ ಭಗವಂತ ತಾನು ಬಯಸಿದ ಅನಂತ ರೂಪ ತೊಡಬಲ್ಲ. ಇಂತಹ ಭಗವಂತನನ್ನು ಶುಕಾಚಾರಾಯರು ‘ಸರ್ವಃ’ ಎಂದು ಸಂಬೋಧಿಸಿದ್ದಾರೆ. ಸರ್ವಃ ಪದದ ವಿವರಣೆ ಗೀತೆಯಲ್ಲಿ ಬರುತ್ತದೆ. ಅಲ್ಲಿ ಅರ್ಜುನ  ಸರ್ವಂ ಸಮಾಪ್ನೋಷಿ ತತೋSಸಿ ಸರ್ವಃ  ಎಂದಿದ್ದಾನೆ. [ಭಗವದ್ಗೀತಾ-೧೧-೪೦]. ಎಲ್ಲಾ ಕಡೆ ವ್ಯಾಪಿಸಿರುವ, ಎಲ್ಲಾ ಗುಣಗಳಿಂದ ಪೂರ್ಣನಾದ, ಸರ್ವಕರ್ತ, ಸರ್ವಗತ, ಸರ್ವಸಮರ್ಥ ಭಗವಂತ ಸರ್ವಃ.  ಇಂತಹ ಭಗವಂತ ನಮ್ಮೆಲ್ಲರ ಹೃದಯದಲ್ಲಿ ಹೇಗಿದ್ದಾನೆ ಎನ್ನುವುದನ್ನು ವಿವರಿಸುತ್ತಾ ಶುಕಾಚಾರ್ಯರು ಇಲ್ಲಿ ಬಹಳ ಸುಂದರವಾದ ಮಾತೊಂದನ್ನು ಹೇಳುತ್ತಾರೆ. ಹೇಗೆ ಎಲ್ಲರೂ ಮಲಗಿರುವ ಮನೆಯೊಂದನ್ನು ಒಬ್ಬ ಕಾವಲುಗಾರ ಸದಾ ಎಚ್ಚರವಾಗಿದ್ದು ಕಾಯುತ್ತಿರುತ್ತಾನೋ ಹಾಗೇ, ನಿದ್ರೆಯಲ್ಲಿರುವ ಅನಂತ ಜೀವರಾಶಿಯನ್ನು ಪ್ರಾಣದೇವರ ಅಂತರ್ಯಾಮಿಯಾಗಿ ನಿಂತು ಭಗವಂತ ಕಾಪಾಡುತ್ತಿದ್ದಾನೆ. ನಾವು ನಿದ್ರಿಸಿದಾಗ ನಮ್ಮೆಲ್ಲಾ ಇಂದ್ರಿಯಾಭಿಮಾನಿ ದೇವತೆಗಳು ನಿದ್ರಿಸಬಹುದು. ಆದರೆ ಸದಾ ಎಚ್ಚರವಾಗಿದ್ದು ನಾವು ಉಸಿರಾಡುವಂತೆ ಮಾಡುವವ ‘ಪ್ರಾಣ’. ಇಂತಹ ಪ್ರಾಣದೇವರ ಅಂತರ್ಯಾಮಿಯಾಗಿರುವ ಭಗವಂತ ಎಲ್ಲಾ ಸತ್ಯಗಳಿಗೂ ಮಿಗಿಲಾದ ನಿರ್ದುಷ್ಟವಾದ ಸತ್ಯ.  “ಯಾವ ದೋಷದ ಸ್ಪರ್ಶವೂ ಇಲ್ಲದ, ಎಲ್ಲಾ ಸದ್ಗುಣಗಳಿಂದ ಭರಿತವಾದ, ಸದಾ ಸಜ್ಜನರನ್ನು ರಕ್ಷಿಸುವ ಭಗವಂತನೆಂಬ ಆನಂದದ ಕಡಲಿನತ್ತ ಹೋಗು” ಎಂದಿದ್ದಾರೆ ಶುಕಾಚಾರ್ಯರು.

“ಎಲ್ಲಾ ಬಗೆಯಿಂದಲೂ ತ್ರಿಕರ್ಣಗಳಿಂದ(ಮನಸ್ಸು-ಮಾತು-ಕೃತಿಗಳಿಂದ), ಎಲ್ಲಾ ಅವಸ್ಥೆಗಳಲ್ಲಿ(ಎಚ್ಚರ-ಕನಸು-ನಿದ್ರೆ) ಭಗವಂತನೆಂಬ ಸತ್ಯದ ಬೆನ್ನುಹತ್ತು. ಇಲ್ಲದಿದ್ದರೆ ಆತ್ಮನಾಶವನ್ನು ಹೊಂದುತ್ತೀಯ” ಎಂದು ಎಚ್ಚರಿಸಿದ್ದಾರೆ ಶುಕಾಚಾರ್ಯರು.  ಇಲ್ಲಿ ಹೇಳಲಾದ ‘ಆತ್ಮಘಾತ’ ಎನ್ನುವ ಪದಕ್ಕೆ ನಾಲ್ಕು ಅರ್ಥಗಳಿವೆ. ಈ ಹಿಂದೆ ಹೇಳಿದಂತೆ ಆತ್ಮ ಎನ್ನುವ ಪದಕ್ಕೆ ದೇಹ, ಮನಸ್ಸು, ಜೀವ ಮತ್ತು ಪರಮಾತ್ಮ ಎನ್ನುವ ನಾಲ್ಕು ಅರ್ಥಗಳಿವೆ. ಮನುಷ್ಯ ಜನ್ಮ ಬಂದಾಗಲೂ ಭಗವಂತನ ಸ್ಮರಣೆ ಮಾಡದೇ ಹೋದರೆ ಆ ದೇಹ ವ್ಯರ್ಥವಾಗುತ್ತದೆ. ಇದು ದೇಹನಾಶ. ಭಗವಂತ ಕರುಣಿಸಿರುವ ಚಿಂತನಾಶೀಲ ಮನಸ್ಸಿನಲ್ಲಿ ಭಗವಂತನ ಸ್ಮರಣೆ ಮಾಡದೇ ಹೋದರೆ ಅದರಿಂದ ಮನಸ್ಸಿನ ಮತ್ತು ಬುದ್ಧಿಯನಾಶವಾಗಿ ಆತ್ಮ ಉದ್ದಾರದ ಮಾರ್ಗದಲ್ಲಿ ಸಾಗದೇ ಅಧಃಪಾತವನ್ನು ಹೊಂದುತ್ತದೆ. [ಬುದ್ಧಿನಾಶಾದ್ ವಿನಶ್ಯತಿ ॥ಭಗವದ್ಗೀತಾ-೨-೬೩॥]. ಇದರಿಂದಾಗಿ ನಾವು ಭಗವಂತನನ್ನು ನಿರಾಕರಣೆ ಮಾಡಿಕೊಂಡು ಬದುಕುತ್ತೇವೆ ಮತ್ತು ಅದರಿಂದಾಗಿ ನಮ್ಮ ಪಾಲಿಗೆ ಭಗವಂತ ಇಲ್ಲವಾಗುತ್ತಾನೆ. 

Shrimad BhAgavata in Kannada -Skandha-02-Ch-02(5)

ಏವಂ ಸ್ವಚಿತ್ತೇ ಸ್ವತ ಏವ ಸಿದ್ಧ ಆತ್ಮಾ ಪ್ರಿಯೋSರ್ಥೋ ಭಗವಾನನಂತಃ
ತಂ ನಿರ್ವೃತೋ ನಿಯತಾರ್ಥೋ ಭಜೇತ ಸಂಸಾರಹೇತೂಪರಮಶ್ಚ ಯತ್ರ ೦೬

ಈ ಹಿಂದೆ ಹೇಳಿದಂತೆ ಇಂದು ನಾವು ಮನೆ-ಸಂಸಾರ ಎಲ್ಲವನ್ನೂ ಸಂಪೂರ್ಣ ತ್ಯಜಿಸಿ ಕಾಡಿಗೆ ಹೋಗಿ ಬದುಕಲು ಸಾಧ್ಯವಿಲ್ಲ. ಆದರೆ ನಾವು ಎಲ್ಲವುದರ ಜೊತೆಗೆ ಇದ್ದೂ ಅದನ್ನು ಅಂಟಿಸಿಕೊಳ್ಳದೇ ಬದುಕುವುದನ್ನು ಕಲಿಯಬೇಕು. ಶ್ರೀಕೃಷ್ಣ ಗೀತೆಯಲ್ಲಿ ಹೇಳಿದಂತೆ: “ಪದ್ಮಪತ್ರಮಿವಾಂಭಸಾ”- ತಾವರೆ ಎಲೆ ನೀರಿನಲ್ಲಿರುವಂತೆ- ಜೊತೆಗಿದ್ದರೂ ಅಂಟಿಸಿಕೊಳ್ಳದೇ ಇರುವುದನ್ನು (Detached attachment) ನಾವು ಅಭ್ಯಾಸ ಮಾಡಿಕೊಳ್ಳಬೇಕು. ಇದೇ ನಿಜವಾದ ವೈರಾಗ್ಯ. ಈ ರೀತಿ ಮನಸ್ಸಿಗೆ ತರಬೇತಿ ಕೊಟ್ಟಾಗ ಜೀವನದಲ್ಲಿ ಯಶಸ್ವಿಯಾಗಿ ಬದುಕಬಹುದು.  ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಈ ಸ್ಥಿತಿಯಲ್ಲಿ ನಾವು ನಿಂತಾಗ ನಮ್ಮ ಚಿತ್ತದಲ್ಲಿ ಭಗವಂತನ ಇರವಿನ ಅರಿವು ಜಾಗೃತಿಗೊಳ್ಳುತ್ತದೆ” ಎಂದು. ಭಗವಂತ ನಮ್ಮೆಲ್ಲರ ಒಳಗೂ-ಹೊರಗೂ ಇದ್ದಾನೆ ನಿಜ, ಆದರೆ ಆ ಅರಿವು ನಮಗಿಲ್ಲ.  ಕೇವಲ ಇರವು ಮುಖ್ಯವಲ್ಲ, ಇರವಿನ ಅರಿವೂ ಮುಖ್ಯ. ಅರಿವು ಇಲ್ಲದ ಇರವು ನಮ್ಮಪಾಲಿಗೆ ವ್ಯರ್ಥ.
ಇಲ್ಲಿ ಭಗವಂತನನ್ನು ಆತ್ಮಾ ಎಂದು ಸಂಬೋಧಿಸಿದ್ದಾರೆ. ‘ಆತ್ಮಾ’  ಎಂದರೆ ಅಂತರ್ಯಾಮಿ ಹಾಗೂ ಅತ್ಯಂತ ಆತ್ಮೀಯ ಎಂದರ್ಥ. ಭಗವಂತ ನಮ್ಮ ಅತ್ಯಂತ ಆತ್ಮೀಯ ಮತ್ತು ಆತ ಎಲ್ಲಾ ಕಾಲದಲ್ಲೂ ನಮ್ಮನ್ನು ಸ್ವೀಕರಿಸಲು ಸಿದ್ಧನಾಗಿರುತ್ತಾನೆ. ಹೀಗಿರುವಾಗ ನಾವು ಯಾರಲ್ಲೋ ಅಂಗಲಾಚುವುದನ್ನು ಬಿಟ್ಟು ಭಗವಂತನ ಅರಿವನ್ನು ಪಡೆದು, “ನನ್ನನ್ನು ಸ್ವೀಕರಿಸು” ಎಂದು ಅವನಲ್ಲಿ ಬೇಡಿಕೊಳ್ಳಬೇಕು.  ಭಗವಂತ ನಮಗೆ ಅತ್ಯಂತ ಪ್ರಿಯವಾದ ವಸ್ತು. ಆದರೆ ಆತನ ಪರಿಚಯ ನಮಗಿಲ್ಲದ ಕಾರಣ ನಮಗೆ ಯಾವುದು ಪ್ರಿಯ, ಯಾವುದು ಅಪ್ರಿಯ ಎನ್ನುವುದು ತಿಳಿಯದೇ, ಪ್ರಿಯವಾದುದರ ಅನ್ವೇಷಣೆ ಮಾಡುತ್ತಾ, ದಾರಿ ತಪ್ಪಿ ಯಾರದ್ದೋ ಬೆನ್ನು ಹತ್ತುತ್ತೇವೆ. ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಎಲ್ಲವುದಕ್ಕಿಂತ ಪ್ರಿಯವಾದ ವಸ್ತು ಹಾಗೂ ಜೀವನದ ಕೊನೇಯ ಪುರುಷಾರ್ಥ ಆ ಭಗವಂತ” ಎಂದು. ಭಗವಂತನಿಂದಾಗಿ ಈ ಭೂಮಿಯಲ್ಲಿ ಹುಟ್ಟಿದ ನಮಗೆ ಭಗವಂತನನ್ನು ಸೇರುವುದೇ ಪರಮ ಪುರುಷಾರ್ಥ. ಭಗವಂತ ನಿತ್ಯ-ಸತ್ಯ ಮತ್ತು ಶಾಶ್ವತವಾಗಿ ಎಲ್ಲಾ ಕಡೆ ಇರುವ ಅನಂತ ಸತ್ಯ. ಈ ಸತ್ಯದ ಹಿಂದೆ ನಾವು ಹೋಗಬೇಕು ಎನ್ನುವ ಅರಿವು ನಮಗೆ ಸಹಜವಾಗಿ ಧ್ಯಾನದಲ್ಲಿ ಬರುತ್ತದೆ. ಭಗವಂತನನ್ನು ಸೇರುವ ಉದ್ಧೇಶ ನಿಶ್ಚಿತವಾಗಿದ್ದಾಗ ಒಳಗೆ ಆನಂದ ಮತ್ತು ಧೈರ್ಯ ತುಂಬುತ್ತದೆ. ಸಂಸಾರಕ್ಕೆ ಕಾರಣವಾಗಿರುವ ಅಜ್ಞಾನ-ದುಃಖ-ದಾರಿದ್ರ್ಯ ಮುಂತಾದ ಎಲ್ಲಾ ಸಮಸ್ಯೆಗಳಿಗೆ ಕೊನೇ ಉತ್ತರ ಆ ಭಗವಂತ. ಅಂತಹ ಭಗವಂತನಲ್ಲಿ ಮನಸ್ಸನ್ನು ಗಟ್ಟಿಯಾಗಿ ನಿಲ್ಲಿಸಿದಾಗ ಯಾವುದೇ ಉದ್ವೇಗವಿಲ್ಲದೇ ಆನಂದವಾಗಿರಬಹುದು.