Saturday, March 30, 2013

Shrimad BhAgavata in Kannada -Skandha-01-Ch-08(11)


ಅಥ ವಿಶ್ವೇಶ ವಿಶ್ವಾತ್ಮನ್ ವಿಶ್ವಮೂರ್ತೇ ಸ್ವಕೇಷು ಮೇ
ಸ್ನೇಹಪಾಶಮಿಮಂ ಛಿಂಧಿ ದೃಢಂ ಪಾಂಡುಷು ವೃಷ್ಣಿಷು ೪೪

ಇಲ್ಲಿ ಕುಂತಿ ಕೃಷ್ಣನಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾಳೆ: “ನಾನು ‘ಇಂತಹ ಮನೆತನಕ್ಕೆ ಸೇರಿದವಳು’ ಎನ್ನುವ ಭಾವನೆಯನ್ನು ಅಳಿಸಿ ಹಾಕು ಕೃಷ್ಣ” ಎಂದು. ಭಗವಂತ ಯದುವಂಶ ಅಥವಾ ಪುರುವಂಶಕ್ಕಷ್ಟೇ ಮೀಸಲಾದವನಲ್ಲ. ಆತ ಇಡೀ ವಿಶ್ವದ ಸೊತ್ತು. ಆತ ವಿಶ್ವೇಶ. ವಿಶ್ವದ ಒಡೆಯನಾಗಿ ಇಡೀ ವಿಶ್ವದಲ್ಲಿ ತತ್ತದ್ ರೂಪದಲ್ಲಿ ತುಂಬಿರುವವನು ಆತ. ಆದ್ದರಿಂದ “ನನ್ನ ಕುಲ ಎನ್ನುವ ಸ್ನೇಹಪಾಶ ನನ್ನನ್ನು ಕಾಡದಂತೆ ಅದನ್ನು ಹರಿದುಬಿಡು. ಈ ಸ್ನೇಹಪಾಶ ಮತ್ತೆ ನನ್ನನ್ನು ಸಂಸಾರದಲ್ಲಿ ಸಿಲುಕಿಸುವುದು ಬೇಡ” ಎಂದು ಕುಂತಿ ಪ್ರಾರ್ಥಿಸುತ್ತಾಳೆ.  ಮಹಾಭಾರತದಲ್ಲಿ ನಾವು ಕುಂತಿಯ ಕಥೆಯನ್ನು ನೋಡಿದರೆ, ಕೊನೆಯಲ್ಲಿ ಆಕೆ ಎಲ್ಲಾ ಸ್ನೇಹಪಾಶವನ್ನು ಕಳಚಿಕೊಂಡು, ಸರ್ವಸ್ವವನ್ನೂ ತೊರೆದು, ಕಾಡಿಗೆ ಹೋಗುವುದನ್ನು ಕಾಣುತ್ತೇವೆ. ಅಂತಹ ಮಹಾಯೋಗಿನಿ ಆಕೆ.  

ಶ್ರೀಕೃಷ್ಣ ಕೃಷ್ಣಸಖ ವೃಷ್ಣಿವೃಷ ಅವನಿಧ್ರುಗ್ರಾಜನ್ಯವಂಶದಹನ ಅಮರವಂದ್ಯವೀರ್ಯ
ಗೋವಿಂದ ಗೋದ್ವಿಜಸುರಾರ್ತಿಹರಾವತಾರ ಯೋಗೇಶ್ವರ ಅಖಿಲಗುರೋ ಭಗವನ್ನಮಸ್ತೇ ೪೬

ಇಲ್ಲಿ ಕುಂತಿ ಕೃಷ್ಣನನ್ನು ಸ್ತುತಿಸುತ್ತಿದ್ದಾಳೆ: ಅರ್ಜುನನ ಸಖನಾಗಿ ನಿಂತು, ಅವನನ್ನು ಉದ್ದರಿಸಿದ ಕೃಷ್ಣನೇ, ವೃಷ್ಣಿ ವಂಶದ ತಿಲಕಪ್ರಾಯನಾಗಿ ಅವತರಿಸಿ ಬಂದ ಭಗವಂತನೇ, ಭೂಮಿಗೆ ದ್ರೋಹ ಮಾಡಿದ ದುಷ್ಟ ಕ್ಷತ್ರಿಯರನ್ನು ಸುಟ್ಟು ನಾಶಮಾಡಿದವನೇ,  ಜ್ಞಾನಿಗಳ ಮತ್ತು ಸುರರ ದುಃಖವನ್ನು ಪರಿಹರಿಸಿ, ಗೋವುಗಳಿಗೆ ಹಾಗೂ ಭೂಮಿಗೆ ಸಂತಸವನ್ನು ಕೊಟ್ಟ ಗೋವಿಂದನೇ,  ಸಮಸ್ತ ಯೋಗಮಾರ್ಗ ಪ್ರವೃತ್ತಕ ಯೋಗೇಶ್ವರನೇ, ಇಡೀ ಜಗತ್ತಿಗೆ ಗುರುವಾಗಿರುವ ಪ್ರಾಣದೇವರಿಗೂ ಗುರುವಾಗಿರುವ ಭಗವಂತನೇ ನಿನಗೆ ನಮಸ್ಕಾರ.

ಸೂತ ಉವಾಚ-
ಪೃಥಯೇತ್ಥಂ ಕಳಪದೈಃ ಪರಿಗೀತಾಖಿಲೋದಯಃ
ಮಂದಂ ಜಹಾಸ ವೈಕುಂಠೋ ಮೋಹಯನ್ ಯೋಗಮಾಯಯಾ ೪೭

ತಾಂ ಬಾಢಮಿತ್ಯುಪಾಮಂತ್ರ್ಯ ಪ್ರವಿಶ್ಯ ಗಜಸಾಹ್ವಯಮ್
ಸ್ತ್ರಿಯಶ್ಚ ಸ್ವಪುರಂ ಯಾಸ್ಯನ್ ಪ್ರೇಮ್ಣಾ ರಾಜ್ಞಾ ನಿವಾರಿತಃ ೪೮

ಕುಂತಿಯ ಸ್ತೋತ್ರವನ್ನು ಕೃಷ್ಣ ನಕ್ಕು ಸ್ವೀಕರಿಸಿದನಂತೆ. ಆ ನಂತರ ಹೊರಟುನಿಂತ ಕೃಷ್ಣನನ್ನು ದ್ರೌಪದಿ ಮೊದಲಾದ ಅಂತಃಪುರದ ಸ್ತ್ರೀಯರು  ಹಠಮಾಡಿ, ಹಸ್ತಿನಾಪುರದಲ್ಲೇ ಇರಬೇಕೆಂದು ಪ್ರಾರ್ಥಿಸಿಕೊಂಡಾಗ, ಕೃಷ್ಣ ಅಲ್ಲೇ ನಿಲ್ಲುತ್ತಾನೆ. ಮಹಾಭಾರತದ ಈ ಹಂತದಲ್ಲಿ ಇನ್ನೂ ಭೀಷ್ಮರ ಉಪದೇಶ ಭಾಗ ಮುಗಿದಿಲ್ಲ. ಅದು ಮುಗಿಯುವ ತನಕ ಕೃಷ್ಣ ಹಸ್ತಿನಾಪುರದಲ್ಲೇ ನಿಲ್ಲಬೇಕಾಗಿದೆ ಅದಕ್ಕೋಸ್ಕರ ಆತ ನಿಲ್ಲುತ್ತಾನೆ.

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ಅಷ್ಟಮೋSಧ್ಯಾಯಃ

ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಎಂಟನೇ ಅಧ್ಯಾಯ ಮುಗಿಯಿತು.
*********

Shrimad BhAgavata in Kannada -Skandha-01-Ch-08(10)


ಜನ್ಮ ಕರ್ಮ  ಚ ವಿಶ್ವಾತ್ಮನ್ನಜಸ್ಯಾಕರ್ತುರಾತ್ಮನಃ
ತಿರ್ಯಙ್ ನೃಪಯಾದಸ್ಸು ತದತ್ಯಂತವಿಡಂಬನಮ್ ೩೩

ಭಗವಂತ ಏನೂ ಮಾಡುವುದಿಲ್ಲ ಆದರೆ ಎಲ್ಲವನ್ನೂ ಮಾಡುತ್ತಾನೆ! ಅವನಿಗೆ ಹುಟ್ಟಿಲ್ಲ, ಆದರೆ ಆತ ಭೂಮಿಯಲ್ಲಿ ಹುಟ್ಟಿ ಬರುತ್ತಾನೆ. ಎಲ್ಲರೊಳಗೆ ಅಂತರ್ಯಾಮಿಯಾಗಿರುವ ಭಗವಂತನೇಕೆ ಹುಟ್ಟಿಬರಬೇಕು? ಎಲ್ಲಾಕಡೆ ತುಂಬಿರುವ ಭಗವಂತನೇಕೆ ಎಲ್ಲೋ ಒಂದು ಕಡೆ ಜನಿಸುತ್ತಾನೆ? ಸಂಕಲ್ಪಮಾತ್ರದಿಂದ ಎಲ್ಲವನ್ನೂ ಮಾಡಬಲ್ಲ ಭಗವಂತ ಭೂಮಿಯಲ್ಲೇಕೆ ಹುಟ್ಟುತ್ತಾನೆ?  ಕೆಲವೊಮ್ಮೆ ಜಲಚರರೂಪದಲ್ಲಿ, ಇನ್ನು ಕೆಲವೊಮ್ಮೆ ಪಶು ಅಥವಾ ಮಾನವ ರೂಪದಲ್ಲಿ ಭಗವಂತನೇಕೆ ಅವತಾರ ಮಾಡುತ್ತಾನೆ ಎನ್ನುವುದನ್ನು ಇಲ್ಲಿ ಕುಂತಿ ತನ್ನ ಸ್ತುತಿಯಲ್ಲಿ  ವಿವರಿಸುವುದನ್ನು ಕಾಣುತ್ತೇವೆ.

ಕೇಚಿದಾಹುರಜಂ ಜಾತಂ ಪುಣ್ಯಶ್ಲೋಕಸ್ಯ ಕೀರ್ತಯೇ
ಯದೋಃ ಪ್ರಿಯಸ್ಯಾನ್ವವಾಯೇ ಮಲಯಸ್ಯೇವ ಚಂದನಮ್ ೩೫

ಹುಟ್ಟೇ ಇಲ್ಲದ ಭಗವಂತ ಯದುವಂಶದಲ್ಲಿ ವಾಸುದೇವ-ದೇವಕಿಯರ ಮಗನಾಗಿ ಹುಟ್ಟಿಬಂದ. ಏಕೆಂದರೆ ಆತನಿಗೆ ತನ್ನ ಭಕ್ತರಾದ ಅವರನ್ನು ಉದ್ಧರಿಸಬೇಕಾಗಿತ್ತು. ಅವರ ಮನೋಭಿಲಾಷೆಯನ್ನು ಪೂರೈಸುವುದಕ್ಕಾಗಿ ಆತ ಹಾಗೆ ಹುಟ್ಟಿ ಬಂದ. ನಾವು ಯದುವಿನ ಕಥೆಯನ್ನು ನೋಡಿದರೆ ಆತ ತಂದೆಯಿಂದ ಶಾಪಕ್ಕೊಳಗಾದವ. ಆತನ ತಂದೆ ಯಯಾತಿಗೆ ಇಬ್ಬರು ಹೆಂಡತಿಯರು. ದೇವಯಾನಿ ಮತ್ತು ಶರ್ಮಿಷ್ಠೆ. ಇವರಿಗೆ ಐದು ಮಂದಿ ಮಕ್ಕಳು. ಯದು, ತುರ್ವಸು, ದ್ರುಹ್ಯು, ಅನು ಮತ್ತು ಪುರು. ಒಮ್ಮೆ ಯಯಾತಿ ತನ್ನ ಮಕ್ಕಳಲ್ಲಿ ಅವರ ಯೌವನವನ್ನು ತನಗೆ ಕೊಡುವಂತೆ ಕೇಳುತ್ತಾನೆ. ಆಗ ಯದು ಹಾಗೂ ಇತರ ಮೂರು ಮಂದಿ ಮಕ್ಕಳು ಇದಕ್ಕೆ ಒಪ್ಪುವುದಿಲ್ಲ. ಕೊನೆಯ ಮಗ ‘ಪುರು’ ತಂದೆಯ ಮುದಿತನವನ್ನು ತಾನು ಸ್ವೀಕರಿಸಿ, ತನ್ನ ಯೌವನವನ್ನು ತಂದೆಗೆ ಧಾರೆಯರೆಯಲು ಒಪ್ಪುತ್ತಾನೆ. ಆಗ ಯಯಾತಿ ‘ಪುರು’ವನ್ನು ತನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸುತ್ತಾನೆ ಹಾಗೂ ಇತರ ನಾಲ್ವರನ್ನು ನೀವು ರಾಜ್ಯಬ್ರಷ್ಟರಾಗಿ ಎಂದು ಶಪಿಸುತ್ತಾನೆ. ತಂದೆಯ ಆಶೀರ್ವಾದ ಪಡೆದ ‘ಪುರು’ ವಂಶದಲ್ಲಿ ಪಾಂಡವರು ಜನಿಸುತ್ತಾರೆ. ಶಾಪಕ್ಕೊಳಗಾದ ನಾಲ್ವರಲ್ಲಿ ‘ಯದು’ ಮಹಾನ್ ವಿಷ್ಣುಭಕ್ತನಾಗಿದ್ದುದರಿಂದ ಭಗವಂತ ಆತನ ವಂಶದಲ್ಲಿ ಅವತಾರವೆತ್ತಿ ಆತನನ್ನು ಉದ್ಧರಿಸುತ್ತಾನೆ. “ಹೇಗೆ ಗಂಧದ ಮರಗಳಿಂದ ಮಲಯ ಪರ್ವತದ ಹೆಸರು ಅಜರಾಮರವಾಯಿತೋ ಹಾಗೆ ನಿನ್ನ ಅವತಾರ ಯದುವಂಶದಲ್ಲಾದ್ದರಿಂದ ಆ ವಂಶದ ಹೆಸರು ಕೀರ್ತಿಭಾಜನವಾಯಿತು” ಎನ್ನುತ್ತಾಳೆ ಕುಂತಿ.

ಅಪರೇ ವಸುದೇವಸ್ಯ ದೇವಕ್ಯಾಂ ಯಾಚಿತೋSಭ್ಯಗಾತ್
ಅಜಸ್ತ್ವಮಸ್ಯ ಕ್ಷೇಮಾಯ ವಧಾಯ ಚ ಸುರದ್ವಿಷಾಮ್ ೩೬

ಭಾರಾವತರಣಾಯಾನ್ಯೇ ಭುವೋ ನಾವ ಇವೋದಧೌ
ಸೀದಂತ್ಯಾ ಭೂರಿಭಾರೇಣ ಜಾತೋ ಹ್ಯಾತ್ಮಭುವಾSರ್ಥಿತಃ ೩೭

ಭಗವಂತ ತನ್ನ ಕೃಷ್ಣಾವತಾರದಲ್ಲಿ ಕೇವಲ ಯದುವನ್ನಷ್ಟೇ ಉದ್ಧರಿಸಿದ್ದಲ್ಲ, ವಾಸುದೇವ-ದೇವಕಿಯರ ಅಭಿಲಾಷೆಯನ್ನೂ ಈಡೇರಿಸಿದ. ವಾಸುದೇವ-ದೇವಕಿಯರು ಮೂಲರೂಪದಲ್ಲಿ (ಕಶ್ಯಪ-ಅದಿತಿ) ಭಗವಂತನೇ ತಮ್ಮ ಮಗನಾಗಿ ಹುಟ್ಟಬೇಕೆಂದು ತಪಸ್ಸು ಮಾಡಿದ್ದರು. “ಅವರ ಪ್ರಾರ್ಥನೆಯನ್ನು ಮನ್ನಿಸಿ ನೀನು ಅವರಲ್ಲಿ ಹುಟ್ಟಿ ಬಂದೆ” ಎನ್ನುತ್ತಾಳೆ ಕುಂತಿ.  ಯದುವನ್ನು ಉದ್ದರಿಸುವುದು, ಅದಿತಿ-ಕಶ್ಯಪರ ಪ್ರಾರ್ಥನೆಯನ್ನು ಈಡೇರಿಸುವುದಷ್ಟೇ ಭಗವಂತನ ಅವತಾರದ ಉದ್ದೇಶವಲ್ಲ. ಭಗವಂತನ ಸಮಸ್ತ ಅವತಾರವು ಭೂ-ಭಾರದ ಹರಣಕ್ಕೋಸ್ಕರವಾಗುತ್ತದೆ. ಈ ಭೂಮಿ ಒಂದು ದೋಣಿಯಂತೆ. ಅಲ್ಲಿ ಅಧರ್ಮ ಹೆಚ್ಚಾದಾಗ ಆ ಭಾರವನ್ನು ಭೂತಾಯಿ ಹೊರಳಾರಲು. ಭೂಮಿಯಲ್ಲಿ ದೌರ್ಜನ್ಯ ಹೆಚ್ಚಾಗಿ ಅದು ಮುಳುಗುವ ಪರಿಸ್ಥಿತಿ ಬಂದಾಗ ಭಗವಂತ ಭೂಮಿಯ ಮೇಲೆ ಅವತಾರ ರೂಪಿಯಾಗಿ ಇಳಿದು ಬರುತ್ತಾನೆ. “ಬ್ರಹ್ಮ-ರುದ್ರಾದಿಗಳ ಪ್ರಾರ್ಥನೆಯನ್ನು ಮನ್ನಿಸಿ, ಭೂಮಿಯಲ್ಲಿ ಅವತರಿಸಿ, ಧರ್ಮ ಸಂಸ್ಥಾಪನೆ ಮಾಡಿ, ಭೂಮಿಯ ಭಾರವನ್ನು ಕಡಿಮೆ ಮಾಡುವುದು ನಿನ್ನ ಅವತಾರದ ಮೂಲ ಉದ್ದೇಶ” ಎನ್ನುತ್ತಾಳೆ ಕುಂತಿ.

ಭವೇSಸ್ಮಿನ್ ಕ್ಲಿಶ್ಯಮಾನಾನಾಮವಿದ್ಯಾಕಾಮಕರ್ಮಭಿಃ
ಶ್ರವಣಸ್ಮರಣಾರ್ಹಾಣಿ ಕರಿಷ್ಯನ್ನಿತಿ ಕೇಚನ ೩೮

ಕೇವಲ ಭೂಮಿಯ ಭಾರವನ್ನು ಇಳಿಸಲಿಕ್ಕಾಗಿ ಭಗವಂತ ಅವತರಿಸುವುದಲ್ಲ. ಆತನ ಅವತಾರದ ಮೂಲ ಉದ್ದೇಶ: ಸಂಸಾರದಲ್ಲಿ ಅವಿದ್ಯೆ-ಕಾಮ-ಕರ್ಮದಲ್ಲಿ ತೊಡಗಿದ ಜನರಿಗೆ ತನ್ನ ಮಹಿಮೆಯ ಜ್ಞಾನವನ್ನು ಒದಗಿಸಿ, ತನ್ನ ಲೀಲೆಗಳಿಂದ ಒಂದೊಂದು ಜೀವಕ್ಕೂ ತನ್ನನ್ನು ಪ್ರತ್ಯಕ್ಷ ಕಾಣುವ, ಪ್ರತ್ಯಕ್ಷ ಕೇಳಿ ಸ್ಮರಿಸುವ ಆನಂದ ಕೊಡುವುದು. ನಾವು ಭಗವಂತನ ಅವತಾರದ ಕಥೆಗಳನ್ನು ಕೇಳಿ, ಧ್ಯಾನದಲ್ಲಿ ಅದನ್ನು ಅಳವಡಿಸಿಕೊಂಡು ಆಧ್ಯಾತ್ಮಿಕವಾಗಿ ಮುಂದುವರಿದು, ಸಂಸಾರದಿಂದ ಬಿಡುಗಡೆ ಹೊಂದಲಿ ಎನ್ನುವ ಕಾರುಣ್ಯಕ್ಕಾಗಿ ಆತ ಭೂಮಿಯಲ್ಲಿ ಅವತರಿಸುತ್ತಾನೆ. ಈ ಅವತಾರಗಳಿಂದಾಗಿ ನಮಗೆ ಆತನನ್ನು ಧ್ಯಾನದಲ್ಲಿ ಸ್ಮರಿಸುವ ಅವಕಾಶ ಲಭಿಸಿದೆ. ಒಂದು ವೇಳೆ ಭಗವಂತ ಕೃಷ್ಣಾವತಾರ ಮಾಡದೇ ಇದ್ದಿದ್ದರೆ ಇಂದು ನಾವು ಧ್ಯಾನದಲ್ಲಿ ಕೊಳಲನ್ನೂದುವ ಆ ಸುಂದರ ಮೂರ್ತಿಯನ್ನು ಕಾಣಲು ಸಾಧ್ಯವಿತ್ತೇ?

Thursday, March 28, 2013

Shrimad BhAgavata in Kannada -Skandha-01-Ch-08(09)


ನಮೋSಕಿಂಚನವಿತ್ತಾಯ ನಿವೃತ್ತಗುಣವೃತ್ತಯೇ
ಆತ್ಮಾರಾಮಾಯ ಶಾಂತಾಯ ಕೈವಲ್ಯಪತಯೇ ನಮಃ ೩೦

ಇಲ್ಲಿ ಕುಂತಿ ಭಗವಂತನನ್ನು  “ನೀನು ಅಕಿಂಚನ ವಿತ್ತ (ಬಡವರ ಸಂಪತ್ತು)” ಎಂದು ಸ್ತುತಿಸುತ್ತಿದ್ದಾಳೆ. ಮನುಷ್ಯನಿಗೆ ಜೀವನದಲ್ಲಿ ದೊಡ್ಡ ಸಂಪತ್ತು ಎಂದರೆ ಆನಂದ. ಆತ ದುಡ್ಡನ್ನು ಬಯಸುವುದು ಸುಖಪಡುವುದಕ್ಕಾಗಿ. ಸುಖದಲ್ಲಿ ಅತ್ಯಂತ ಶ್ರೇಷ್ಠ ಸುಖ ದುಃಖದ ಸ್ಪರ್ಶವೇ ಇಲ್ಲದ ಮೋಕ್ಷ ಸುಖ. ಅಂತಹ ಮೋಕ್ಷವನ್ನು ಕೊಡುವವನು ಆ ಭಗವಂತ. ಹೀಗಾಗಿ ಭಗವಂತನಿಗಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ.  ಯಾರು ಪ್ರಾಪಂಚಿಕ ಸಂಪತ್ತನ್ನು  ತೊರೆಯುತ್ತಾರೋ ಅವರ ಅಪೂರ್ವ ಮತ್ತು ಅನಂತ ಸಂಪತ್ತಾಗಿ ಭಗವಂತನಿರುತ್ತಾನೆ. ಇಂತಹ ಭಗವಂತನನ್ನು ಇಲ್ಲಿ ಕುಂತಿ “ನಿವೃತ್ತಗುಣವೃತ್ತ” ಎಂದು ಸ್ತುತಿಸಿದ್ದಾಳೆ. ನಮಗೆ ತಿಳಿದಂತೆ ಪ್ರಾಪಂಚಿಕ ಸಂಪತ್ತು ಮೂರು ಗುಣಗಳ ಪ್ರವೃತ್ತಿಯನ್ನೊಳಗೊಂಡಿದೆ. ದುಡ್ಡಿನ ಬಗ್ಗೆ ಮೋಹ ತಮೋಗುಣ, ದುಡ್ಡು ಗಳಿಸುವುದಕ್ಕಾಗಿ ಮಾಡುವ ಸಾಹಸ ರಜೋಗುಣ. ದುಡ್ಡನ್ನು ಒಳ್ಳೆಯದಕ್ಕಾಗಿ ಬಳಸುವುದು ಸತ್ತ್ವಗುಣ. ಹೀಗೆ ದುಡ್ಡಿನಲ್ಲಿ ಮೂರು ಗುಣಗಳಿದ್ದರೂ ಸಹ ಅಲ್ಲಿ ರಜಸ್ಸು ಮತ್ತು ತಮಸ್ಸಿನ ಪ್ರಭಾವವೇ ಹೆಚ್ಚು. ಆದರೆ ಭಗವಂತನೆಂಬ ಸಂಪತ್ತಿನಲ್ಲಿ ಈ ಯಾವ ಗುಣದ ಲೇಪವೂ ಇಲ್ಲ. ಅವನು ಗುಣಾತೀತ ತತ್ತ್ವ. ಇಲ್ಲಿ ಗುಣಾತೀತ ಅಂದರೆ ಆತನಲ್ಲಿ ಯಾವ ಗುಣವೂ ಇಲ್ಲ ಎಂದರ್ಥವಲ್ಲ. ಆತ ತ್ರಿಗುಣಾತೀತ ಮತ್ತು ಸರ್ವಗುಣಪೂರ್ಣ.
ತನ್ನ ಸ್ವರೂಪಾನಂದದಲ್ಲೇ ರಮಿಸುವ ಭಗವಂತನನ್ನು ಇಲ್ಲಿ ಕುಂತಿ  “ಆತ್ಮಾರಾಮ” ಎಂದು ಸ್ತುತಿಸಿದ್ದಾಳೆ. ಆನಂದದಲ್ಲಿ ಎರಡು ವಿಧ. ಒಂದು ಹೊರಗಿನಿಂದ ಪಡೆಯುವ ಆನಂದ ಹಾಗೂ ಇನ್ನೊಂದು ಒಳಗೇ ಇರುವ ಆನಂದ. ನಾವು ನಮ್ಮೊಳಗೇ ಇರುವ ಆನಂದವನ್ನು ಮರೆತಾಗ ಹೊರಗಿನ ಆನಂದವನ್ನು ಪಡೆಯಲು ಬಯಸುತ್ತೇವೆ. ಸಂಸ್ಕೃತದಲ್ಲಿ ಬಾಹ್ಯಾನಂದವನ್ನು ‘ಮೋದ’ ಎಂದು ಕರೆಯುತ್ತಾರೆ. ಆದ್ದರಿಂದ ‘ಆನಂದ’ ಎನ್ನುವ ಸಂಸ್ಕೃತ ಪದ ಕೇವಲ ಅಂತರಂಗದ ಆನಂದವನ್ನು ಹೇಳುವ ಪದ.  ಆದರೆ ಸಂಕೀರ್ಣವಾಗಿ ಇಂದು ಆನಂದ ಎನ್ನುವ ಪದವನ್ನು ಎಲ್ಲವುದಕ್ಕೂ ಬಳಸುತ್ತಾರೆ. ನಮ್ಮೊಳಗೆ ತಾನೇ ತಾನು ಆನಂದಮಯನಾಗಿರುವ ಭಗವಂತ “ಆತ್ಮಾರಾಮ”. ಇದನ್ನೇ ಆಚಾರ್ಯ ಮಧ್ವರು ದ್ವಾದಶಸ್ತೋತ್ರದಲ್ಲಿ ಹೀಗೆ ಹಾಡಿದ್ದಾರೆ:

ಸ್ವಜನೋದಧಿಸಂವೃದ್ಧಿ ಪೂರ್ಣಚಂದ್ರೋಗುಣಾರ್ಣವಃ
ಅಮನ್ದಾನಂದ ಸಾಂದ್ರೋ ನಃ ಸದಾSವ್ಯಾದಿನ್ದಿರಾಪತಿಃ

ಅಮನ್ದಗುಣಸಾರೋSಪಿ ಮಂದಹಾಸೇನ ವೀಕ್ಷಿತಃ
ನಿತ್ಯಮಿಂದರಯಾSನಂದ ಸಾಂದ್ರೋ ಯೋ ನೌಮಿ ತಂ ಹರಿಮ್

ಭಗವಂತನ ಆನಂದ ಸ್ವರೂಪಭೂತವಾದಂತಹದ್ದು. ಆತ್ಮಸ್ವರೂಪವೂ ಕೂಡಾ ಆನಂದಮಯ. ಆದರೆ ಭಗವಂತ ಆನಂದದ ಪರಾಕಾಷ್ಠೆ. ಹಾಗಾಗಿ ಕುಂತಿ ಕೃಷ್ಣನನ್ನು “ಶಾಂತಾಯ” ಎಂದು ಸ್ತುತಿಸಿದ್ದಾಳೆ. ಇಲ್ಲಿ ‘ಶಂ’ ಎಂದರೆ ಆನಂದ, ‘ಅಂತ’ ಎಂದರೆ ತುತ್ತತುದಿ. ಭಗವಂತ ಪೂರ್ಣಾನಂದಸ್ವರೂಪ.  ಇಂತಹ ಭಗವಂತ ನಮಗೆ ದುಃಖರಹಿತ ಆನಂದವನ್ನು ಕೊಡುವ  ‘ಕೈವಲ್ಯಪತಿ’. ಹೀಗೆ “ದುಃಖದ ಸ್ಪರ್ಶವೇ ಇಲ್ಲದ ಸುಖಸ್ವರೂಪ ನೀನು”ಎಂದು  ಭಗವಂತನನ್ನು ಕುಂತಿ ಸ್ತುತಿಸಿದ್ದಾಳೆ.

Shrimad BhAgavata in Kannada -Skandha-01-Ch-08(08)


ನಮೋSಕಿಂಚನವಿತ್ತಾಯ ನಿವೃತ್ತಗುಣವೃತ್ತಯೇ
ಆತ್ಮಾರಾಮಾಯ ಶಾಂತಾಯ ಕೈವಲ್ಯಪತಯೇ ನಮಃ ೩೦
ಇಲ್ಲಿ ಕುಂತಿ ಭಗವಂತನನ್ನು  “ನೀನು ಅಕಿಂಚನ ವಿತ್ತ (ಬಡವರ ಸಂಪತ್ತು)” ಎಂದು ಸ್ತುತಿಸುತ್ತಿದ್ದಾಳೆ. ಮನುಷ್ಯನಿಗೆ ಜೀವನದಲ್ಲಿ ದೊಡ್ಡ ಸಂಪತ್ತು ಎಂದರೆ ಆನಂದ. ಆತ ದುಡ್ಡನ್ನು ಬಯಸುವುದು ಸುಖಪಡುವುದಕ್ಕಾಗಿ. ಸುಖದಲ್ಲಿ ಅತ್ಯಂತ ಶ್ರೇಷ್ಠ ಸುಖ ದುಃಖದ ಸ್ಪರ್ಶವೇ ಇಲ್ಲದ ಮೋಕ್ಷ ಸುಖ. ಅಂತಹ ಮೋಕ್ಷವನ್ನು ಕೊಡುವವನು ಆ ಭಗವಂತ. ಹೀಗಾಗಿ ಭಗವಂತನಿಗಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ.  ಯಾರು ಪ್ರಾಪಂಚಿಕ ಸಂಪತ್ತನ್ನು  ತೊರೆಯುತ್ತಾರೋ ಅವರ ಅಪೂರ್ವ ಮತ್ತು ಅನಂತ ಸಂಪತ್ತಾಗಿ ಭಗವಂತನಿರುತ್ತಾನೆ. ಇಂತಹ ಭಗವಂತನನ್ನು ಇಲ್ಲಿ ಕುಂತಿ “ನಿವೃತ್ತಗುಣವೃತ್ತ” ಎಂದು ಸ್ತುತಿಸಿದ್ದಾಳೆ. ನಮಗೆ ತಿಳಿದಂತೆ ಪ್ರಾಪಂಚಿಕ ಸಂಪತ್ತು ಮೂರು ಗುಣಗಳ ಪ್ರವೃತ್ತಿಯನ್ನೊಳಗೊಂಡಿದೆ. ದುಡ್ಡಿನ ಬಗ್ಗೆ ಮೋಹ ತಮೋಗುಣ, ದುಡ್ಡು ಗಳಿಸುವುದಕ್ಕಾಗಿ ಮಾಡುವ ಸಾಹಸ ರಜೋಗುಣ. ದುಡ್ಡನ್ನು ಒಳ್ಳೆಯದಕ್ಕಾಗಿ ಬಳಸುವುದು ಸತ್ತ್ವಗುಣ. ಹೀಗೆ ದುಡ್ಡಿನಲ್ಲಿ ಮೂರು ಗುಣಗಳಿದ್ದರೂ ಸಹ ಅಲ್ಲಿ ರಜಸ್ಸು ಮತ್ತು ತಮಸ್ಸಿನ ಪ್ರಭಾವವೇ ಹೆಚ್ಚು. ಆದರೆ ಭಗವಂತನೆಂಬ ಸಂಪತ್ತಿನಲ್ಲಿ ಈ ಯಾವ ಗುಣದ ಲೇಪವೂ ಇಲ್ಲ. ಅವನು ಗುಣಾತೀತ ತತ್ತ್ವ. ಇಲ್ಲಿ ಗುಣಾತೀತ ಅಂದರೆ ಆತನಲ್ಲಿ ಯಾವ ಗುಣವೂ ಇಲ್ಲ ಎಂದರ್ಥವಲ್ಲ. ಆತ ತ್ರಿಗುಣಾತೀತ ಮತ್ತು ಸರ್ವಗುಣಪೂರ್ಣ.
ತನ್ನ ಸ್ವರೂಪಾನಂದದಲ್ಲೇ ರಮಿಸುವ ಭಗವಂತನನ್ನು ಇಲ್ಲಿ ಕುಂತಿ  “ಆತ್ಮಾರಾಮ” ಎಂದು ಸ್ತುತಿಸಿದ್ದಾಳೆ. ಆನಂದದಲ್ಲಿ ಎರಡು ವಿಧ. ಒಂದು ಹೊರಗಿನಿಂದ ಪಡೆಯುವ ಆನಂದ ಹಾಗೂ ಇನ್ನೊಂದು ಒಳಗೇ ಇರುವ ಆನಂದ. ನಾವು ನಮ್ಮೊಳಗೇ ಇರುವ ಆನಂದವನ್ನು ಮರೆತಾಗ ಹೊರಗಿನ ಆನಂದವನ್ನು ಪಡೆಯಲು ಬಯಸುತ್ತೇವೆ. ಸಂಸ್ಕೃತದಲ್ಲಿ ಬಾಹ್ಯಾನಂದವನ್ನು ‘ಮೋದ’ ಎಂದು ಕರೆಯುತ್ತಾರೆ. ಆದ್ದರಿಂದ ‘ಆನಂದ’ ಎನ್ನುವ ಸಂಸ್ಕೃತ ಪದ ಕೇವಲ ಅಂತರಂಗದ ಆನಂದವನ್ನು ಹೇಳುವ ಪದ.  ಆದರೆ ಸಂಕೀರ್ಣವಾಗಿ ಇಂದು ಆನಂದ ಎನ್ನುವ ಪದವನ್ನು ಎಲ್ಲವುದಕ್ಕೂ ಬಳಸುತ್ತಾರೆ. ನಮ್ಮೊಳಗೆ ತಾನೇ ತಾನು ಆನಂದಮಯನಾಗಿರುವ ಭಗವಂತ “ಆತ್ಮಾರಾಮ”. ಇದನ್ನೇ ಆಚಾರ್ಯ ಮಧ್ವರು ದ್ವಾದಶಸ್ತೋತ್ರದಲ್ಲಿ ಹೀಗೆ ಹಾಡಿದ್ದಾರೆ:

ಸ್ವಜನೋದಧಿಸಂವೃದ್ಧಿ ಪೂರ್ಣಚಂದ್ರೋಗುಣಾರ್ಣವಃ
ಅಮನ್ದಾನಂದ ಸಾಂದ್ರೋ ನಃ ಸದಾSವ್ಯಾದಿನ್ದಿರಾಪತಿಃ

ಅಮನ್ದಗುಣಸಾರೋSಪಿ ಮಂದಹಾಸೇನ ವೀಕ್ಷಿತಃ
ನಿತ್ಯಮಿಂದರಯಾSನಂದ ಸಾಂದ್ರೋ ಯೋ ನೌಮಿ ತಂ ಹರಿಮ್

ಭಗವಂತನ ಆನಂದ ಸ್ವರೂಪಭೂತವಾದಂತಹದ್ದು. ಆತ್ಮಸ್ವರೂಪವೂ ಕೂಡಾ ಆನಂದಮಯ. ಆದರೆ ಭಗವಂತ ಆನಂದದ ಪರಾಕಾಷ್ಠೆ. ಹಾಗಾಗಿ ಕುಂತಿ ಕೃಷ್ಣನನ್ನು “ಶಾಂತಾಯ” ಎಂದು ಸ್ತುತಿಸಿದ್ದಾಳೆ. ಇಲ್ಲಿ ‘ಶಂ’ ಎಂದರೆ ಆನಂದ, ‘ಅಂತ’ ಎಂದರೆ ತುತ್ತತುದಿ. ಭಗವಂತ ಪೂರ್ಣಾನಂದಸ್ವರೂಪ.  ಇಂತಹ ಭಗವಂತ ನಮಗೆ ದುಃಖರಹಿತ ಆನಂದವನ್ನು ಕೊಡುವ  ‘ಕೈವಲ್ಯಪತಿ’. ಹೀಗೆ “ದುಃಖದ ಸ್ಪರ್ಶವೇ ಇಲ್ಲದ ಸುಖಸ್ವರೂಪ ನೀನು”ಎಂದು  ಭಗವಂತನನ್ನು ಕುಂತಿ ಸ್ತೋತ್ರ ಮಾಡುತ್ತಾಳೆ.

Monday, March 25, 2013

Shrimad BhAgavata in Kannada -Skandha-01-Ch-08(07)


ವಿಪದಃ ಸಂತು ನಃ ಶಶ್ವತ್ ತತ್ರತತ್ರ ಜಗತ್ಪತೇ
ಭವತೋ ದರ್ಶನಂ ಯತ್ ಸ್ಯಾದಪುನರ್ಭವದರ್ಶನಮ್ ೨೮

ಇಲ್ಲಿ ಕುಂತಿ ಕೃಷ್ಣನಲ್ಲಿ ಕೇಳುವ ಈ ಮಾತು ತುಂಬಾ ವಿಶಿಷ್ಠವಾದುದು. ಆಕೆ ಕೇಳುತ್ತಾಳೆ: “ನನಗೆ ಏನಾದರೂ ಕೊಡುವುದಿದ್ದರೆ ನೀನು ನನ್ನ ಜೀವನದುದ್ದಕ್ಕೂ ಕಷ್ಟವನ್ನು ಕೊಡು” ಎಂದು. ನಾವು ಭಗವಂತನಲ್ಲಿ ‘ಸದಾ ಸುಖವನ್ನು ಕೊಡು’ ಎಂದು ಕೇಳಬಾರದು. ಏಕೆಂದರೆ ಸುಖಪುರುಷರಿಗೆ ಪ್ರಪಂಚ ಜ್ಞಾನವೇ ಇರುವುದಿಲ್ಲ. ಅವರಿಗೆ ಭಗವಂತನ ನೆನಪು ಕೂಡಾ ಇರುವುದಿಲ್ಲ. ಜೀವನದಲ್ಲಿ ಕಷ್ಟ ಬರುವುದು ಎಂದರೆ ಅದು ಜೀವ ಪಕ್ವವಾಗುವ ಕ್ರಿಯೆ. ಅದು ಶಿಕ್ಷೆ ಅಲ್ಲ, ಶಿಕ್ಷಣ. ಹೇಗೆ ಅಕ್ಕಿ ಬೆಂಕಿಯ ಕಾವಿನಲ್ಲಿ ಬೆಂದು ಅನ್ನವಾಗುತ್ತದೋ ಹಾಗೇ ಈ ಜೀವ ಕೂಡಾ. ಅದಕ್ಕೆ ಕಷ್ಟವೆಂಬ ಕಾವು ಕೊಟ್ಟಾಗ ಅದು ಪಕ್ವವಾಗುತ್ತದೆ. ಇಲ್ಲಿ ಕುಂತಿ ಹೇಳುತ್ತಾಳೆ: “ನನಗೆ ಕಷ್ಟವನ್ನೇ ಕೊಡು, ಏಕೆಂದರೆ ನೀನು ಜಗತ್ಪತಿ. ಕಷ್ಟವನ್ನು ಕೊಟ್ಟು ಅದನ್ನು ಎದುರಿಸುವ ಆತ್ಮಸ್ಥೈರ್ಯ ಕೊಡುವವನು ನೀನು. ಜಗತ್ತಿನ ಪಾಲಕನಾದ ನೀನು ಕೊಡುವ ಕಷ್ಟ ನಮಗೆ ರಕ್ಷಣೆ! ಯಾವ ಕಷ್ಟದಿಂದ ನಿನ್ನ ದರ್ಶನ ಸಾಧ್ಯವೋ ಅಂತಹ ಕಷ್ಟಕ್ಕಿಂತ ದೊಡ್ಡ ಭಾಗ್ಯ ಜೀವನದಲ್ಲಿ ಇನ್ನೊಂದಿಲ್ಲ. ನಿನ್ನ ದರ್ಶನ ಸಾಮಾನ್ಯ ವಿಷಯವೇ? ಋಷಿಗಳು ನಿನ್ನನ್ನು ಕಾಣಬೇಕು ಎಂದು ಜನ್ಮ-ಜನ್ಮದಲ್ಲಿ ಪರಿತಪಿಸುತ್ತಾರೆ. ಹಾಗಿರುವಾಗ ಕಷ್ಟಕಾಲದಲ್ಲಿ ಅನಾಯಾಸವಾಗಿ ನಿನ್ನ ದರ್ಶನ ಭಾಗ್ಯ ಸಿಗುವುದರಿಂದ ಸದಾ ನನಗೆ ಕಷ್ಟ ಕೊಡು” ಎಂದು ಕೇಳುತ್ತಾಳೆ. ಭಗವಂತನ ದರ್ಶನ ಸಾಮಾನ್ಯ ಸಂಗತಿಯೇ? ಆತನ ದರ್ಶನ “ಅಪುನರ್ಭವದರ್ಶನ”. ‘ಪುನರ್ಭವ’ ಎಂದರೆ ಮತ್ತೆಮತ್ತೆ ಹುಟ್ಟುವುದು. ಆದ್ದರಿಂದ ಅಪುನರ್ಭವದರ್ಶನ ಎಂದರೆ ಮರುಹುಟ್ಟಿಲ್ಲದ ಮೋಕ್ಷವನ್ನು ಕೊಡುವ ದರ್ಶನ. ಇಂತಹ ಮಹಾನ್ ದರ್ಶನ ಅತ್ಯಂತ ಕ್ಲಿಷ್ಟ. ಆದರೆ ಆಪತ್ತಿನಲ್ಲಿ ಭಗವಂತನ ದರ್ಶನ ಅನಾಯಾಸವಾಗಿರುವುದರಿಂದ “ನನಗೆ ಕಷ್ಟವನ್ನೇ ಕೊಡು” ಎಂದು ಕುಂತಿ ಕೃಷ್ಣನಲ್ಲಿ ಕೇಳುತ್ತಾಳೆ.  

ಜನ್ಮೈಶ್ವರ್ಯಶ್ರುತಶ್ರೀಭಿರೇಧಮಾನಮದಃ ಪುಮಾನ್
ನಾರ್ಹ ಇತ್ಯಭಿಧಾತುಂ ವೈ ತ್ವಾಮಕಿಂಚನಗೋಚರಮ್ ೨೯

ಇಂದು ನಾವು ನಮ್ಮನ್ನು ಐದು ಮದಗಳಿಂದ ಹೊದ್ದುಕೊಂಡು ಬದುಕುತ್ತಿದ್ದೇವೆ. ಅವುಗಳೆಂದರೆ ೧. ಕುಲದ ಮದ, ೨. ಐಶ್ವರ್ಯ ಮದ, ೩. ವಿದ್ಯೆಯ ಮದ, ೪.ಧನ ಮದ.
ನಮ್ಮ ಮನೆತನ, ಪರಂಪರೆ, ಅದರ ಬಗ್ಗೆ ಹೆಗ್ಗಳಿಕೆ, ಇವು ಅಹಂಕಾರವಾಗಿ ಬೆಳೆದಾಗ ಅದು ನಮ್ಮನ್ನು  ದೇವರಿಂದ ದೂರ ಮಾಡಿಸುತ್ತದೆ. ಅದೇ ರೀತಿ: ಅಧಿಕಾರದ ಮದ, ನನ್ನಂತಹ ವಿದ್ವಾಂಸ ಯಾರಿದ್ದಾರೆ ಎನ್ನುವ ವಿದ್ಯೆಯ ಮದ, ಸಂಪತ್ತಿನ ಮದ-ಇವು ಅಹಂಕಾರವಾಗಿ ಯಾರನ್ನು ಕಾಡುತ್ತದೋ “ಅಂತವನ ಬಾಯಿಯಲ್ಲಿ ಭಗವಂತನ ಹೆಸರೇ ಬಾರದು” ಎನ್ನುತ್ತಾಳೆ ಕುಂತಿ. ಈ ಮದದ ಹೊದಿಕೆಯನ್ನು ಕಳಚಿ ಹೊರಬಂದಾಗ ಮಾತ್ರ ಭಗವಂತನ ದರ್ಶನ ಸಾಧ್ಯ.
ಅಹಂಕಾರಶೂನ್ಯನಾಗಿ ಪೂರ್ಣ ಶರಣಾಗತಿಯಾಗುವುದೊಂದೇ ಭಗವಂತನ ಅನುಗ್ರಹಕ್ಕೆ ದಾರಿ. ನಮ್ಮ ಯಾವ ಮದವೂ ನಮ್ಮನ್ನು ಭಗವಂತನತ್ತ ಒಯ್ಯುವುದಿಲ್ಲ. ಹಾಗಾಗಿ ಮೊತ್ತಮೊದಲು ನಾವು  ಈ ಮದದಿಂದ ಕಳಚಿಕೊಳ್ಳಬೇಕು. ಇಲ್ಲಿ ಕುಂತಿ ಹೇಳುತ್ತಾಳೆ: “ನೀನು ಅ-ಕಿಂಚನ” ಎಂದು. ಅಂದರೆ ಕಷ್ಟದಲ್ಲಿರುವವರಿಗೆ ಗೋಚರನಾಗುವವ ಎಂದರ್ಥ. ಇದರರ್ಥ ಶ್ರೀಮಂತರಿಗೆ ಭಗವಂತ ಗೋಚರನಾಗುವುದಿಲ್ಲ ಎಂದರ್ಥವಲ್ಲ. ಶ್ರೀಮಂತಿಕೆ ಇದ್ದು ಶರಣಾಗಿತಿ ಇದ್ದಾಗ ಕೂಡಾ  ಭಗವಂತ ಗೋಚರನಾಗುತ್ತಾನೆ. ನಮಗೆ ಅ-ಕಾರವಾಚ್ಯ ಭಗವಂತನೇ ಸರ್ವಸ್ವವಾದಾಗ ಆತ ಗೋಚರನಾಗುತ್ತಾನೆ.

ವೇದದಲ್ಲಿ ಹೇಳಿದ ಮಾತನ್ನೇ ಇಲ್ಲಿ ಕುಂತಿ ಹೇಳಿರುವುದು. ಕಠೋಪನಿಷತ್ತಿನಲ್ಲಿ ಹೇಳುವಂತೆ: “ನ ಸಾಂಪರಾಯಃ ಪ್ರತಿಭಾತಿ ಬಾಲಂ  ಪ್ರಮಾದ್ಯಂತಂ ವಿತ್ತಮೋಹೇನ ಮೂಢಮ್ । [೧-೨-೬]. ಇಲ್ಲಿ ಹೇಳುವಂತೆ:  ವಿತ್ತದ ಮೋಹದಿಂದ ಮೂಢರಾಗಿರುವವರ ಬಳಿ ಭಗವಂತ ಸುಳಿಯುವುದಿಲ್ಲ. ಇದನ್ನೇ ಬೈಬಲ್ ನಲ್ಲಿ ಹೀಗೆ ಹೇಳಿದ್ದಾರೆ: “Blessed are you who are poor, for yours is the kingdom of God” “It is easier for a Camel to go through the eye of a needle than for a rich person to enter the Kingdom of God".  

Wednesday, March 20, 2013

Shrimad BhAgavata in Kannada -Skandha-01-Ch-08(06)


ನಮಃ ಪಂಕಜನಾಭಾಯ ನಮಃ ಪಂಕಜಮಾಲಿನೇ
ನಮಃ ಪಂಕಜನೇತ್ರಾಯ ನಮಸ್ತೇ ಪಂಕಜಾಂಘ್ರಯೇ ೨೫

ಭಗವಂತನ ಅನುಸಂಧಾನ ಹೇಗಿರಬೇಕು ಎನ್ನುವುದನ್ನು ನಾವು ಈ ಶ್ಲೋಕದಲ್ಲಿ ಕಾಣುಬಹುದು. ಮೇಲ್ನೋಟದಲ್ಲಿ ನೋಡಿದರೆ ಈ ಶ್ಲೋಕ ತೀರ ಸರಳವಾದ ಶ್ಲೋಕ.  ಇಲ್ಲಿ ಭಗವಂತನನ್ನು “ನೀನು ಪಂಕಜನಾಭ, ನೀನು ಪಂಕಜಮಾಲಿ, ನೀನು ಪಂಕಜನೇತ್ರ, ನೀನು ಪಂಕಜಾಂಘ್ರ. ನಿನಗೆ ನಮಸ್ಕಾರ” ಎಂದು ಕುಂತಿ ಸ್ತುತಿಸಿದ್ದಾಳೆ. ಅಂದರೆ: “ನೀನು ಹೊಕ್ಕುಳಲ್ಲಿ ಕಮಲ ಉಳ್ಳವನು, ಕೊರಳಲ್ಲಿ ತಾವರೆಯ ಮಾಲೆ ಧರಿಸಿದವನು, ತಾವರೆಯಂತಹ ಕಣ್ಣುಳ್ಳವನು ಮತ್ತು ತಾವರೆಯಂತಹ ಪಾದವುಳ್ಳವನು” ಎಂದರ್ಥ.  ಆದರೆ ಈ ಶ್ಲೋಕಕ್ಕೆ ಇಷ್ಟೇ ಅರ್ಥವಲ್ಲ. ಇದರ ಹಿಂದೆ ಅಡಗಿರುವ ಅರ್ಥಸಾರವನ್ನು ನಾವು ಕೆದಕಿ ನೋಡಿದರೆ ಇಲ್ಲಿ ಭಗವಂತನ ಅನುಸಂಧಾನದ ಒಂದು ಸುಂದರ ಚಿತ್ರಣ ಕಾಣುತ್ತದೆ.
“ನಮಃ ಪಂಕಜನಾಭಾಯ” ಎಂದರೆ ನಾಭಿಯಲ್ಲಿ ತಾವರೆಯುಳ್ಳ ನಿನಗೆ ನಮಸ್ಕಾರ ಎಂದರ್ಥ. ಭಗವಂತನ ಈ ನಾಮ ವೈದಿಕ ಉಪಾಸನೆ ಹೇಗಿರಬೇಕು ಎನ್ನುವುದನ್ನು ವಿವರಿಸುತ್ತದೆ. ವೇದದಲ್ಲಿ ವಿಶ್ವಕರ್ಮ ಸೂಕ್ತ ಎನ್ನುವ ಸೂಕ್ತವೊಂದಿದೆ. ಅಲ್ಲಿ ಭಗವಂತನ ವರ್ಣನೆ ಮಾಡಿ, ಆತನನ್ನು ಹೇಗೆ ಉಪಾಸನೆ ಮಾಡಬೇಕು ಎಂದು ವಿವರಿಸಿದ್ದಾರೆ. ಅಲ್ಲಿ ಹೇಳುವಂತೆ: “ಅಜಸ್ಯ ನಾಭಾವಧ್ಯೇಕಮರ್ಪಿತಂ ಯಸ್ಮಿನ್ವಿಶ್ವಾನಿ ಭುವನಾನಿ ತಸ್ಥುಃ” ಅಂದರೆ “ಯಾವುದರಲ್ಲಿ ಆ ಹದಿನಾಲ್ಕು ಲೋಕಗಳು ಸೇರಿಕೊಂಡಿವೆಯೋ ಅದು ಹುಟ್ಟದವನ ಹೊಕ್ಕುಳಲ್ಲಿ ಹುಟ್ಟಿ ಬಂತು” ಎಂದರ್ಥ. ಇದು ವೇದ ಭಾಷೆ. ನಮಗೆ ತಕ್ಷಣ ಈ ಭಾಷೆ ಅರ್ಥವಾಗುವುದಿಲ್ಲ. ಅದಕ್ಕಾಗಿ ವೇದವ್ಯಾಸರು ಇದಕ್ಕೆ ಸ್ಕಾಂಧಪುರಾಣದಲ್ಲಿ ವ್ಯಾಖ್ಯಾನ ನೀಡಿದ್ದಾರೆ. ಅಲ್ಲಿ ಹೇಳುವಂತೆ: ಭಗವಂತನ ಉದರದಿಂದ ಈ ಪ್ರಪಂಚ ಸೃಷ್ಟಿಯಾಯಿತು. ಅದು ಕಮಲ ರೂಪದಲ್ಲಿ ಆತನ ನಾಭಿಯಿಂದ ಹೊರ ಚಿಮ್ಮಿತು. ಹೀಗೆ ಹೊರ ಹೊಮ್ಮಿದ ಕಮಲದಲ್ಲಿ ಇಡೀ ವಿಶ್ವ ಸೂಕ್ಷ್ಮರೂಪದಲ್ಲಿದ್ದು, ಅದರ ಜೊತೆಗೆ ಚತುರ್ಮುಖ ಬ್ರಹ್ಮ ಕೂಡಾ ಸೃಷ್ಟನಾದ. ಹೀಗೆ ಸೃಷ್ಟನಾದ ಚತುರ್ಮುಖ ಬ್ರಹ್ಮನೊಳಗೆ ತಾನೂ ನಿಂತು, ಸೂಕ್ಷ್ಮಪ್ರಪಂಚಕ್ಕೆ ಸ್ಥೂಲ ರೂಪವನ್ನು ಭಗವಂತ ನೀಡಿದ. ಇದು ಭಗವಂತನ ‘ಪಂಕಜನಾಭಃ ಅಥವಾ ಪದ್ಮನಾಭಃ’ ಎನ್ನುವ ನಾಮದ ಸಂಕ್ಷಿಪ್ತ ವಿವರಣೆ. ಇಲ್ಲಿ ಸೃಷ್ಟಿ ನಿರ್ಮಾಣ ಪ್ರಕ್ರಿಯೆಯ ವಿವರಣೆ ಅಡಗಿದೆ.
ಈ ಸೃಷ್ಟಿ ನಿರ್ಮಾಣಕ್ಕೆ ಮೊದಲು ಎಲ್ಲವೂ ಭಗವಂತನ ಉದರದಲ್ಲಿತ್ತು. ನಂತರ ಭಗವಂತನ ನಾಭಿಕಮಲದಿಂದ ಪ್ರಪಂಚ ಸೃಷ್ಟಿಯಾಯಿತು. ಮುಂದೆ ಮಹಾಪ್ರಳಯದಲ್ಲಿ ಈ ವಿಶ್ವ ನಾಶವಾಗುತ್ತದೆ. ಆ ನಂತರ ಪ್ರಳಯಕಾಲದ ನಂತರ ಮರಳಿ ಭಗವಂತನಿಂದ ಈ ಸೃಷ್ಟಿ ಪುನಃ ನಿರ್ಮಾಣವಾಗುತ್ತದೆ. ಹೀಗೆ ಅನಂತಕೋಟಿ ಕಾಲದಲ್ಲಿ ಅನಂತಕೋಟಿ ಬ್ರಹ್ಮಾಂಡ ಸೃಷ್ಟಿಯಾಗಿ ನಾಶವಾಗುತ್ತಿರುತ್ತದೆ. ಇದೊಂದು ನಿರಂತರ ಪ್ರವಾಹ. ಅನಾದಿ-ಅನಂತಕಾಲದಲ್ಲಿ ಅನಂತ ಬ್ರಹ್ಮಾಂಡದ ಮಾಲೆಯ ಪರಂಪರೆಯನ್ನು ಸೃಷ್ಟಿ-ಸಂಹಾರ ಮಾಡುವ ಅನಾದಿ-ಅನಂತ ತತ್ತ್ವ ಭಗವಂತ ‘ಪಂಕಜಮಾಲಿ’.
ಅನಾದಿಕಾಲದಿಂದ ಅನಂತ ಕಾಲದ ತನಕ ಸೃಷ್ಟಿ-ಸಂಹಾರ-ನಿಯಮನ ಮಾಡುವ ಭಗವಂತನನ್ನು ನಾವು ಕಾಣುವ ಬಗೆ ಹೇಗೆ? ಈ ಹಿಂದೆ ಹೇಳಿದಂತೆ ಜ್ಞಾನಾನಂದಮಯನಾದ ಭಗವಂತನನ್ನು ನಾವು ನಮ್ಮ ಆತ್ಮಸ್ವರೂಪದ ಕಣ್ಣಿನಿಂದ ಕಾಣಬೇಕು. ಆದರೆ ಇಲ್ಲಿ ಇನ್ನೊಂದು ಪ್ರಶ್ನೆ ಬರುತ್ತದೆ. ಅದೇನೆಂದರೆ: ಜ್ಞಾನಾನಂದಮಯನಾದ ಭಗವಂತನಿಗೆ ಆಕಾರವುಂಟೇ? ಈ ವಿಚಾರವಾಗಿ ಅನೇಕ ಭಿನ್ನಾಭಿಪ್ರಾಯಗಳಿವೆ. ಅನೇಕರು ಹೇಳುವಂತೆ: ಭಗವಂತನಿಗೆ ಆಕಾರವಿಲ್ಲ. ಆಕಾರವೆನ್ನುವುದು ಪಂಚಭೂತಗಳಿಂದ ಸೃಷ್ಟಿಯಾದ ದೇಹಕ್ಕೆ ಮಾತ್ರ ಇರುವಂತಹದ್ದು. ಆಕಾರ ಎಂದರೆ ಅದು ಸೀಮಿತವಾದುದು. ಆದರೆ ಜ್ಞಾನಾನಂದಮಯನೂ, ಸರ್ವಗತನೂ ಆದ ಭಗವಂತನಿಗೆ ಆಕಾರವಿಲ್ಲ ಎನ್ನುವುದು ಹಲವರ ವಾದ. ಆದರೆ ಈ ಕಲ್ಪನೆಯನ್ನು ಶಾಸ್ತ್ರದ ಮರ್ಮವನ್ನು ತಿಳಿದವರು ಒಪ್ಪುವುದಿಲ್ಲ. ಭಗವಂತ ಜ್ಞಾನಾನಂದಮಯನೂ ಹೌದು, ಸರ್ವಗತನೂ ಹೌದು. ಆದರೆ ಅವನಿಗೆ ಆಕಾರವಿದೆ. ಇದಕ್ಕೆ ಉದಾಹರಣೆ ಇಲ್ಲಿ ಕುಂತಿ ಕಾಣುತ್ತಿರುವ ಕೃಷ್ಣ. ಆಕೆಗೆ ಕೃಷ್ಣ ಸರ್ವಗತನಾಗಿ ಕಾಣುತ್ತಿಲ್ಲ. ಆಕೆಗೆ ಭಗವಂತ ಸರ್ವಗತ ಎನ್ನುವುದು ತಿಳಿದಿದೆ ಆದರೆ ಆತನನ್ನು ಆಕೆ ತನ್ನ ಮುಂದೆ ಸೀಮಿತವಾದ ಪ್ರದೇಶದಲ್ಲಿ ಕಾಣುತ್ತಿದ್ದಾಳೆ.
ಇನ್ನು ಸರ್ವಗತನಾದ ಭಗವಂತ ಬರುವುದು ಹೋಗುವುದು ಅಂದರೇನು? ಇಲ್ಲಿ ಕೃಷ್ಣ ಹಸ್ತಿನಾಪುರದಿಂದ ದ್ವಾರಕೆಗೆ ಹೊರಟ ಎಂದಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ಕಠೋಪನಿಷತ್ತು ಉತ್ತರಿಸುತ್ತದೆ. ಅಲ್ಲಿ ಯಮ ನಚಿಕೇತನಿಗೆ ಕೊಡುವ ವಿವರಣೆ ಹೀಗಿದೆ: “ಆಸೀನೋ ದೂರಂ ವ್ರಜತಿ ಶಯಾನೋ ಯಾತಿ ಸರ್ವತಃ । ಕಸ್ತಂ ಮದಾಮದಂ ದೇವಂ ಮದನ್ಯೋ ಜ್ಞಾತುಮರ್ಹತಿ” ॥ಕಠ-೧-೨-೨೧॥ ಅಂದರೆ: ಭಗವಂತ ಇದ್ದಲ್ಲೇ ಇರುತ್ತಾನೆ, ಆದರೆ ಎಷ್ಟು ದೂರ ಬೇಕಾದರೂ ಹೋಗುತ್ತಾನೆ. ಒಂದು ಕಡೆ ಇರುತ್ತಾನೆ, ಆದರೆ ಎಲ್ಲಾ ಕಡೆ ತುಂಬಿದ್ದಾನೆ. ಇದು ಮೇಲ್ನೋಟಕ್ಕೆ ವಿರೋಧಾಭಾಸ ಹೇಳಿಕೆಯಂತೆ ಕಾಣುತ್ತದೆ. ಆದರೆ ಸರ್ವಗತನಾದ ಭಗವಂತ ಸರ್ವಸಮರ್ಥ ಎನ್ನುವುದನ್ನು ನಾವು ಮರೆಯಬಾರದು. ಸರ್ವಗತನಾದ ಭಗವಂತ ತನ್ನ ಭಕ್ತನಿಗಾಗಿ ಒಂದು ಕಡೆ ವಿಶಿಷ್ಠವಾಗಿ ಕಾಣಿಸಿಕೊಳ್ಳಬೇಕಾಗದ ಸನ್ನಿವೇಶ ಬಂದಾಗ, ಆತ ತನ್ನ ಭಕ್ತ ಕಾಣಿಸಿಕೊಳ್ಳಬಹುದಾದ ರೂಪದಲ್ಲಿ ಕಾಣಿಸಿಕೊಳ್ಳಬಲ್ಲ. ಭಗವಂತ ಸೀಮಿತರೂಪದಲ್ಲಿ ನಮಗೆ ಕಾಣಿಸಿಕೊಳ್ಳಬಲ್ಲನೇ   ಹೊರತು, ಆತನ ರೂಪ  ಸೀಮಿತವಲ್ಲ. ಆತ ಅಣೋರಣೀಯನೂ ಹೌದು, ಮಹತೋಮಯನೂ ಹೌದು.
ಭಗವಂತ ನಮಗೆ ಸೀಮಿತವಾದ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ ನಿಜ, ಆದರೆ ಹಾಗೆ ಕಾಣುವ ಆತನ ರೂಪ ಪಂಚಭೂತಗಳಿಂದಾಗಿಲ್ಲ. ಉಪನಿಷತ್ತಿನಲ್ಲಿ ಹೇಳುವಂತೆ: “ಯತ್ತೇ ರೂಪಂ ಕಲ್ಯಾಣತಮಮಮ್ ತತ್ತೇ ಪಶ್ಯಾಮಿ”.  ಅದು ಜ್ಞಾನಿಗಳು ಕಾಣುವ ಪರಮಮಾಂಗಲಿಕ ರೂಪ.  ಈ ರೂಪವನ್ನು ಜ್ಞಾನಿ ತನ್ನ ಸ್ವರೂಪಭೂತವಾದ ಕಣ್ಣಿನಿಂದ ಧ್ಯಾನದಲ್ಲಿ ಕಾಣುತ್ತಾನೆ. ಇದನ್ನೇ ಇಲ್ಲಿ ಕುಂತಿ ‘ಪಂಕಜನೇತ್ರಾಯ, ಪಂಕಜಾಂಘ್ರಯ’ ಎಂದು ಸ್ತುತಿಸಿದ್ದಾಳೆ. ಅಂದರೆ ಅರಳಿದ ತಾವರೆ ಎಸಳಿನಂತಹ ವಿಶಾಲವಾದ ಕಣ್ಣುಳ್ಳವನು, ತಾವರೆ ಮೊಗ್ಗಿನಂತಹ ಪಾದವುಳ್ಳವನು ಎಂದರ್ಥ.   ಸೌಂದರ್ಯಕ್ಕೆ ಸಂಕೇತ ಕಣ್ಣು. ‘ಅರಳಿದ ತಾವರೆಯ ಎಸಳಿನಂತಹ ವಿಶಾಲವಾದ ಕಣ್ಣು’ ಇದು ವೈದಿಕವಾಗಿ ಭಗವಂತನ ರೂಪವನ್ನು ಕಾಣುವ ಬಗೆ. ಇದನ್ನೇ ಛಾಂದೋಗ್ಯ ಉಪನಿಷತ್ತಿನಲ್ಲಿ ಹೀಗೆ ಹೇಳಿದ್ದಾರೆ: “ತಸ್ಯ ಯಥಾ ಕಪ್ಯಾಸಂ ಪುಂಡರೀಕಮೇವಮಕ್ಷಿಣೀ” (೧.೬.೭). ಧ್ಯಾನದಲ್ಲಿ ನಾವು ಭಗವಂತನ ಸರ್ವಾಂಗವನ್ನು(ಪ್ರತೀಕವನ್ನು) ಕಾಣುವುದು ಅಷ್ಟು ಸುಲಭವಲ್ಲ. ಹಾಗಾಗಿ ಮೊದಲು ಆತನ ಒಂದು ಅಂಗವನ್ನು ಕೇಂದ್ರೀಕರಿಸಿ ಧ್ಯಾನ ಮಾಡಬೇಕು. ನಮ್ಮ ಮೇಲೆ ಅನುಗ್ರಹದ ವೃಷ್ಟಿಯನ್ನು ಸುರಿಸುವ ಭಗವಂತನ ಅರಳುಗಣ್ಣನ್ನು ಧ್ಯಾನದಲ್ಲಿ ಕಾಣಲು ಪ್ರಯತ್ನಿಸಬೇಕು. ಭಗವಂತ ನಮ್ಮನ್ನು ನೋಡುತ್ತಿದ್ದಾನೆ, ಅವನ ಅನುಗ್ರಹ ನಮ್ಮ ಮೇಲೆ ಬೀಳುತ್ತಿದೆ. ಆತನ ಪಾದದ ಅಂಗುಷ್ಠ, ಅಂಗುಷ್ಠದ ಕೆಂಪು ಮಣಿಯಂತಹ ನಕಾಗ್ರ, ಆ ನಕಾಗ್ರದಿಂದ ಉದಿಸುವ ಸೂರ್ಯನಂತೆ ಕೆಂಪು ಕಿರಣಗಳು ಚಿಮ್ಮುತ್ತಿವೆ ಎನ್ನುವುದನ್ನು ನಾವು ಅನುಭವಿಸಬೇಕು.
ಪಂಕಜನೇತ್ರ ಎನ್ನುವ ಭಗವಂತನ ನಾಮವನ್ನು ಇನ್ನೊಂದು ಆಯಾಮದಲ್ಲಿ ನೋಡಿದರೆ: ಅದು ಭಗವಂತನ ವಿಶ್ವ ನಿಯಮನವನ್ನು ಹೇಳುತ್ತದೆ. “ನೇತೃತ್ವಾತಮ್ ನೇತ್ರಂ” .  ನಾಭಿಯಲ್ಲಿ ಅರಳಿದ  ಕಮಲರೂಪಿ ಬ್ರಹ್ಮಾಂಡವನ್ನು ನಿಯಮನ ಮಾಡುವ ನೀನು ಪಂಕಜನೇತ್ರಃ. ಇಂತಹ ನಿನಗೆ ಈ ಬ್ರಹ್ಮಾಂಡ(ಪಂಕಜ) ಎನ್ನುವುದು, ನಿನ್ನ ಪಾದದ ಕಿರುಬೆರಳಿನ ಸಂದಿಯಲ್ಲಿನ(ಅಂಘ್ರ) ಒಂದು ಪುಟ್ಟ ಧೂಳಿನ ಕಣವಿದ್ದಂತೆ (ಪಂಕಜಾಂಘ್ರಯಃ). ಎಂದು ಕುಂತಿ ಕೃಷ್ಣನನ್ನು ಸ್ತುತಿಸುತ್ತಾಳೆ.

Saturday, March 16, 2013

Shrimad BhAgavata in Kannada -Skandha-01-Ch-08(05)


ಕೃಷ್ಣಾಯ ವಾಸುದೇವಾಯ ದೇವಕೀನಂದನಾಯ ಚ
ನಂದಗೋಪಕುಮಾರಾಯ ಗೋವಿಂದಾಯ ನಮೋ ನಮಃ ೨೪

ಕುಂತಿ ಕೃಷ್ಣನನ್ನು ಸ್ತುತಿಸುವ ಈ ಶ್ಲೋಕ ಒಂದು ಅಪೂರ್ವವಾದ ಮಂತ್ರ. ಇದು ಮೇಲ್ನೋಟಕ್ಕೆ ಬಹಳ ಸರಳವಾಗಿದ್ದು, ಸಾಮಾನ್ಯವಾಗಿ ಎಲ್ಲರಿಗೂ ಅರ್ಥವಾಗುವ ಶ್ಲೋಕ. ಮೇಲ್ನೋಟದಲ್ಲಿ ನೋಡಿದರೆ ಇದು ಕೃಷ್ಣನ ವಿವಿಧ ನಾಮಗಳನ್ನು ಹೇಳುತ್ತದೆ ಮತ್ತು “ವಸುದೇವ-ದೇವಕಿಯರ ಮಗನಾಗಿ ಹುಟ್ಟಿ, ನಂದಗೋಪನ ಮನೆಯಲ್ಲಿ ಬೆಳೆದು, ಗೋವುಗಳ ರಕ್ಷಣೆ ಮಾಡುತ್ತಾ ಓಡಾಡಿದ ಕೃಷ್ಣನಿಗೆ ನಮೋ ನಮಃ” ಎಂದು ಹೇಳಿದಂತೆ ಕಾಣುತ್ತದೆ. ಆದರೆ ಮೇಲ್ನೋಟಕ್ಕೆ ಕಾಣುವ ಅರ್ಥವಲ್ಲದೇ ನಾವು ಆಳಕ್ಕಿಳಿದು ನೋಡಬೇಕಾದ ಅನೇಕ ಅರ್ಥಗಳು ಈ ಮಂತ್ರದಲ್ಲಡಗಿದೆ.
ಇದು ಕುಂತಿಯ ಅಂತರಂಗ ದರ್ಶನದಿಂದ ಮೂಡಿಬಂದ ಶ್ಲೋಕ. ಆದ್ದರಿಂದ ಆ ಅಂತರಂಗ ದರ್ಶನದಲ್ಲಿ ಅವಳು ಕಂಡ, ಈ ಮಂತ್ರದ ಒಳಗೆ  ಹುದುಗಿರುವ ಒಳನೋಟವನ್ನು ನಾವಿಲ್ಲ ನೋಡಬೇಕು. ಇಲ್ಲಿ ಪ್ರಸ್ತುತಪಡಿಸಲಾದ ಭಗವಂತನ ಪ್ರತಿಯೊಂದು ನಾಮಗಳ ಆಯ್ಕೆಗೆ ಒಂದು ವಿಶಿಷ್ಠ ಕಾರಣವಿದೆ. ಪ್ರತಿಯೊಂದು ನಾಮವನ್ನೂ ಕೂಡಾ ಒಂದು ವಿಶಿಷ್ಠ ಕ್ರಮದಲ್ಲಿ ಹೇಳಲಾಗಿದೆ. ಇವೆಲ್ಲವನ್ನೂ ಬಿಡಿಸಿ ನೋಡಿದಾಗ ಮಾತ್ರ  ಈ ಮಂತ್ರದ ಹಿಂದಿನ ಸಂದೇಶ ನಮಗೆ ತಿಳಿಯುತ್ತದೆ.
‘ಕೃಷ್ಣ’ ಎಂದರೆ: ಎಲ್ಲರನ್ನೂ ಆಕರ್ಷಣೆ ಮಾಡತಕ್ಕಂತಹ ಶಕ್ತಿ. ಭೂಮಿಯಿಂದ ನಮ್ಮನ್ನು ಆಕರ್ಷಣೆ ಮಾಡಿ, ಈ ಸಂಸಾರ ಬಂಧದಿಂದ ನಮ್ಮನ್ನು ಕರ್ಷಣೆ ಮಾಡಿ ನಮಗೆ  ಮೋಕ್ಷ ಕರುಣಿಸಲು ಭೂಮಿಗಿಳಿದು ಬಂದ ಆನಂದರೂಪಿ ಭಗವಂತ ಕೃಷ್ಣ. ‘ಕೃಷ್ಣ’ ಎನ್ನುವ ಭಗವಂತನ ನಾಮವನ್ನು ನಾವು ಬಿಡಿಸುತ್ತಾ ಹೋದರೆ ಅಲ್ಲಿ ಅನೇಕ ಅರ್ಥಗಳನ್ನು ಕಾಣಬಹುದು. ಆದರೆ ಇಲ್ಲಿ ನಾವು ಕುಂತಿ ಯಾವ ಅರ್ಥದಲ್ಲಿ ಈ ನಾಮವನ್ನು ಬಳಸಿದ್ದಾಳೆ ಎನ್ನುವುದನ್ನು ತಿಳಿಯಬೇಕು. ಸೂಕ್ಷ್ಮವಾಗಿ ಗಮನಿಸಿದರೆ: ಈ ಶ್ಲೋಕದ ಹಿಂದಿನ ಶ್ಲೋಕದಲ್ಲಿ ಕುಂತಿ:  “ಪರಮಹಂಸರು ಭಕ್ತಿಯಿಂದ ತಮ್ಮ ಹೃದಯದಲ್ಲಿ ಕಾಣುವ ವಸ್ತು ನೀನು” ಎಂದು ಹೇಳಿರುವುದನ್ನು ನಾವು ನೋಡಿದ್ದೇವೆ. ಆದ್ದರಿಂದ ಈ ಮಂತ್ರದ ಹಿಂದೆ ಧ್ಯಾನದ ಪ್ರಸ್ತಾಪವಿರುವುದು ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಮಂತ್ರವನ್ನು ನೋಡಿದಾಗ ನಮಗೆ ಮಂತ್ರದ ಹಿಂದಿನ ಗೂಢಾರ್ಥ ತಿಳಿಯುತ್ತದೆ.
ಜ್ಞಾನಿಗಳು ತಮ್ಮ ಹೃದಯದತ್ತ  ಕರ್ಷಣೆ ಮಾಡಿಕೊಂಡು, ತಮ್ಮ ಹೃದಯದಲ್ಲಿ ನಿಲ್ಲಿಸಿಕೊಂಡ ಶಕ್ತಿ ‘ಕೃಷ್ಣ’. ಆದ್ದರಿಂದ ಹೃದಯದಲ್ಲಿ ನಿಲ್ಲಿಸಿ ಧ್ಯಾನದಲ್ಲಿ ಕಾಣಬೇಕಾದ ವಸ್ತು ‘ಕೃಷ್ಣ’. ಧ್ಯಾನ ಮಾಡುವಾಗ ನಾವು “ನಮ್ಮ ಹೃದಯದಲ್ಲಿ ಕಾಣಿಸಿಕೋ” ಎಂದು ಧ್ಯಾನ ಮಾಡಬಹುದು. ಆದರೆ  ಅವನು ಹೇಗೆ ಕಾಣಿಸಿಕೊಳ್ಳುತ್ತಾನೆ? ಧ್ಯಾನ ಎನ್ನುವುದು ಮಾನಸಿಕ ಅನುಸಂಧಾನ. ಅಲ್ಲಿ  ನಮ್ಮ ಮನಸ್ಸೇ ಶಿಲ್ಪಿಯಾಗಿ ಕಡೆದ ಭಗವಂತನ ಪ್ರತೀಕವನ್ನು ನಾವು ಕಾಣಬಹುದು. ಆದರೆ ಹಾಗೆ ಕಾಣುವ ಭಗವಂತನ ರೂಪ ಕೇವಲ ಆತನ  ಪ್ರತೀಕ ಹೊರತು ಭಗವಂತನ ಸ್ವರೂಪವಲ್ಲ. ಇದನ್ನು ಉಪನಿಷತ್ತಿನಲ್ಲಿ ಸುಂದರವಾಗಿ ವರ್ಣಿಸಿರುವುದನ್ನು ಕಾಣುತ್ತೇವೆ. ಕೇನೋಪನಿಷತ್ತಿನಲ್ಲಿ ಹೇಳುವಂತೆ: ಯನ್ಮನಸಾ ನ ಮನುತೇ ಯೇನಾಹುರ್ಮನೋ ಮತಮ್  ತದೇವ ಬ್ರಹ್ಮ ತ್ವಂ ವಿದ್ಧಿ ನೇದಂ ಯದಿದಮುಪಾಸತೇ ಕೇನ-೧-೬ಯಾವುದನ್ನು ನಾವು ಉಪಾಸನೆಯ ಹಂತದಲ್ಲಿ ಕಾಣುತ್ತೇವೆ, ಅದು ಭಗವಂತನ ರೂಪವಲ್ಲ. ಅದು ನಮ್ಮದೇ  ಮನಸ್ಸು ಕೆತ್ತಿರುವ ಭಗವಂತನ ಪ್ರತೀಕ.” ಆದ್ದರಿಂದ ಧ್ಯಾನದಲ್ಲಿ ಭಗವಂತನ ದರ್ಶನ ಅಂದರೆ ಅದು ಆತನ ಪ್ರತೀಕ ದರ್ಶನ.
ನಾವು ಭಗವಂತನನ್ನು ಹೃದಯದತ್ತ ಕರ್ಷಣೆ ಮಾಡಿಕೊಂಡ ತಕ್ಷಣ ಆತ ನಮ್ಮ ಮನಸ್ಸಿಗೆ ಗೋಚರನಾಗಲಾರ. ಏಕೆಂದರೆ ಆತ ‘ವಾಸುದೇವ’. ಭಗವಂತನನ್ನು ಕಾಣುವ ಪರಿಶುದ್ಧ ಮನಸ್ಸಿಗೆ ‘ವಸುದೇವ’ ಎನ್ನುತ್ತಾರೆ. ಅಂತಹ ಪರಿಶುದ್ಧ ಮನಸ್ಸಿಗೆ ಮಾತ್ರ ಗೋಚರನಾಗುವ ಭಗವಂತ ವಾಸುದೇವ.  ನಮ್ಮ ಬದುಕಿನಲ್ಲಿ ಶುದ್ಧ ಮತ್ತು ಸಾತ್ತ್ವಿಕವಾದ ಮನಸ್ಸು ಎಲ್ಲವುದಕ್ಕಿಂತ ದೊಡ್ಡ ಸಂಪತ್ತು. ಅದು ನಮಗೆ ಸತ್ಯದ ಬೆಳಕನ್ನು ತೋರಬಲ್ಲದು. ಅಂತಹ ಪರಿಶುದ್ಧ ಮನಸ್ಸಿಗೆ ಯಾವ ಆಸೆ-ಆಕಾಂಕ್ಷೆಗಳ, ರಾಗ-ದ್ವೇಷಗಳ ಲೇಪವಿರುವುದಿಲ್ಲ. ಅಂತಹ ನಿರ್ಮಲವಾದ ಮನಸ್ಸಿಗೆ ಧ್ಯಾನಾವಸ್ಥೆಯಲ್ಲಿ ಭಗವಂತನ ಪ್ರತೀಕ ಗೋಚರವಾಗುತ್ತದೆ.
ನಾವು ನಮ್ಮ ಮನಸ್ಸಿನಲ್ಲಿ ಭಗವಂತನ ಯಾವ ರೂಪ ಕಂಡರೂ ಸಹ, ಅದು ಆತನ ಸ್ವರೂಪಭೂತ ರೂಪವಲ್ಲ. ಏಕೆಂದರೆ ನಮಗೆ ತಿಳಿದಂತೆ ಭಗವಂತ ಅಪ್ರಾಕೃತ. ಆತನ ಶರೀರ ಪಂಚಭೂತಗಳಿಂದಾಗಿರುವುದಲ್ಲ. ಆತನ ಶರೀರ ಜ್ಞಾನಾನಂದಸ್ವರೂಪ. ಅಂತಹ ಜ್ಞಾನಾನಂದಸ್ವರೂಪಭೂತವಾದ ದೇಹವನ್ನು ನಮ್ಮ ಆತ್ಮಸ್ವರೂಪ ಮಾತ್ರ ಗ್ರಹಿಸಬಲ್ಲದು. ಇದಕ್ಕಾಗಿ ನಾವು ಹೇಗೆ ಬಾಹ್ಯೇಂದ್ರಿಯವನ್ನು ನಿರ್ವ್ಯಾಪಾರಗೊಳಿಸಿದೆವೋ, ಹಾಗೇ ನಮ್ಮ ಮನಸ್ಸನ್ನು ಸ್ಥಬ್ಧಗೊಳಿಸಬೇಕು. ಇದನ್ನು ಯೋಗಶಾಸ್ತ್ರದಲ್ಲಿ ಉನ್ಮನೀಭಾವ ಎನ್ನುತ್ತಾರೆ. ಇದು ಅಷ್ಟು ಸುಲಭದ ಕೆಲಸವಲ್ಲ. ಇದು ಧ್ಯಾನದ ಪರಾಕಾಷ್ಠೆ. ಈ ಸ್ಥಿತಿಯಲ್ಲಿ ನಮ್ಮ ಆತ್ಮಶಕ್ತಿ ಜಾಗೃತವಾಗುತ್ತದೆ. ಇದನ್ನೇ ಆತ್ಮಸಾಕ್ಷಾತ್ಕಾರ ಎನ್ನುತ್ತಾರೆ. ಈ ಸ್ಥಿತಿಯಲ್ಲಿ ನಮ್ಮ ಆತ್ಮಸ್ವರೂಪ ನೇರವಾಗಿ ಭಗವಂತನ ಸ್ವರೂಪಭೂತವಾದ ರೂಪವನ್ನು ಕಾಣುತ್ತದೆ.  ಧ್ಯಾನದ ಈ ಸ್ಥಿತಿಯಲ್ಲಿ ಕಾಣುವ ಭಗವಂತ ‘ದೇವಕೀನಂದನ’.  ಇಲ್ಲಿ ‘ದೇವಕಿಗಳು’ ಎಂದರೆ: ಜ್ಞಾನಾನಂದಮಯವಾದ ಜೀವಸ್ವರೂಪದ ಅರಿವು ಪಡೆದವರು. ಅವರಿಗೆ ‘ಇನಂದನ’ ಆ ಭಗವಂತ. ಅಂದರೆ ಜ್ಞಾನಾನಂದಮಯನಾದ ತನ್ನನ್ನು ತೋರಿಸಿ, ಸದಾ  ಜ್ಞಾನಾನಂದಮಯ ಸ್ಥಿತಿಯಲ್ಲೇ ಇರಗೊಡುವವನು. ಒಟ್ಟಿನಲ್ಲಿ ಹೇಳಬೇಕೆಂದರೆ: ಯಾರು ಆತ್ಮಸಾಕ್ಷಾತ್ಕಾರದಿಂದ ಸ್ವರೂಪದ ಮೂಲಕ ಭಗವಂತನನ್ನು ಧ್ಯಾನಿಸಬಲ್ಲರೋ, ಅವರಿಗೆ ಜ್ಞಾನಾನಂದದ ದರ್ಶನವನ್ನು ಕೊಡುವ ಭಗವಂತ ದೇವಕೀನಂದನ.
ಧ್ಯಾನದಲ್ಲಿ ಭಗವಂತನನ್ನು ಕಾಣಬೇಕಾದರೆ  ವೇದದಲ್ಲಿ ಹೇಳಿದ ಭಗವಂತನ ರಹಸ್ಯದ ಅನುಸಂಧಾನ ಬಹಳ ಮುಖ್ಯ. ಮೊದಲು ನಾವು ಬತ್ತಲಾಗಬೇಕು. ಆಗ ವೇದ ನಮ್ಮ ಮುಂದೆ ಬತ್ತಲಾಗುತ್ತದೆ. ಇಲ್ಲಿ ನಾವು ಬತ್ತಲಾಗುವುದು ಎಂದರೆ ನಾವು ನಮ್ಮ ಅಹಂಕಾರವನ್ನು ಕಳಚಿಕೊಂಡು, ವೇದ ವಾಙ್ಮಯ ತಿಳಿದ ಜ್ಞಾನಿಗಳಲ್ಲಿ  ಮತ್ತು  ಭಗವಂತನಲ್ಲಿ ಪೂರ್ಣ ಶರಣಾಗುವುದು. ಈ ಸ್ಥಿತಿಯಲ್ಲಿ ಮಾತ್ರ ನಮಗೆ ವೇದದ ಅಂತರಂಗದ ಅರ್ಥ ತಿಳಿಯುತ್ತದೆ. ನಮಗೆ ಆನಂದವನ್ನಿತ್ತು ರಕ್ಷಿಸುವ ವೇದಗಳನ್ನು ನಂದ-ಗೋಪ ಎನ್ನುತ್ತಾರೆ. ಅಂತಹ ವೇದಗಳಿಂದ ಅಭಿವ್ಯಕ್ತನಾಗುವ ಭಗವಂತ ನಂದಗೋಪ ಕುಮಾರ. ಒಟ್ಟಿನಲ್ಲಿ ಹೇಳಬೇಕೆಂದರೆ: ಭಗವಂತನ ಮತ್ತು ಗುರುಗಳ ಅನುಗ್ರಹದಿಂದ ಹೃದಯ ಶುದ್ಧಿಯಾಗಿ, ವೇದದಲ್ಲಿ ಹೇಳಲಾದ ಭಗವಂತನ ರಹಸ್ಯವನ್ನು ಅರಿತಾಗ, ಧ್ಯಾನದಲ್ಲಿ ನಮ್ಮ ಸ್ವರೂಪಭೂತವಾದ ಆತ್ಮಕ್ಕೆ ಗೋಚರನಾಗುವ ಭಗವಂತ ನಂದಗೋಪಕುಮಾರ.
ಭಗವಂತ ಜ್ಞಾನಿಗಳಿಗೋಸ್ಕರ ಹಾಗೂ ಸಾತ್ತ್ವಿಕ ಜೀವರ ಉದ್ಧಾರಕ್ಕಾಗಿ ಭೂಮಿಯಲ್ಲಿ ಇಳಿದು ಬರುತ್ತಾನೆ. ವೇದಜ್ಞರಿಗಾಗಿ ಲೋಕದಲ್ಲಿ ಅಭಿವ್ಯಕ್ತನಾಗುವ ಭಗವಂತ ಗೋವಿಂದ. “ಸಮಸ್ತ ವೇದಗಳಿಂದ ತಿಳಿಯಲ್ಪಡುವವ, ಸೂರ್ಯಕಿರಣಗಳಲ್ಲಿ ಸನ್ನಿಹಿತನಾಗಿ ನಮ್ಮನ್ನು ರಕ್ಷಿಸುವವ, ಸ್ವರ್ಗದಲ್ಲಿದ್ದು ದೇವತೆಗಳಿಗೆ ಗೋಚರನಾಗುವ ನೀನು, ನಮ್ಮಂತಹ ಸಾಮಾನ್ಯರಿಗಾಗಿ ಭೂಮಿಗಿಳಿದು ಬಂದು ದರ್ಶನ ಕೊಟ್ಟೆಯಲ್ಲಾ, ನಿನಗೆ ನನ್ನ ನಮಸ್ಕಾರ, ನಿನಗೆ ನಮಸ್ಕಾರ” ಎಂದು ಕುಂತಿ ಕೃಷ್ಣನಿಗೆ ನಮಸ್ಕರಿಸುತ್ತಾಳೆ. ಇಲ್ಲಿ ಎರಡು ಬಾರಿ ಕುಂತಿ “ನಿನಗೆ ನಮಸ್ಕಾರ” ಎಂದಿದ್ದಾಳೆ. ನಾವು ನಮ್ಮ ಅಹಂಕಾರವನ್ನು ಕಳಚಿಕೊಂಡು, ಭಗವಂತನ ಎತ್ತರವನ್ನು ತಿಳಿದು, ಆತನ ಮುಂದೆ ನಾವು ಬಹಳ ಚಿಕ್ಕವರು ಎಂದು ತಿಳಿದು, ಭಗವಂತನನ್ನು ಸ್ತುತಿಸುತ್ತಾ, ದೈಹಿಕವಾಗಿ, ನಮ್ರತೆಯಿಂದ  ಆತನ ಮುಂದೆ ಮಣಿಯುವುದು ನಿಜವಾದ ನಮಸ್ಕಾರ. ಇಲ್ಲಿ ಕುಂತಿ ಪೂರ್ಣ ಶರಣಾಗತಿಯಿಂದ ಕೃಷ್ಣನಿಗೆ ನಮಿಸುವುದನ್ನು ನಾವು ಕಾಣುತ್ತೇವೆ. 

Saturday, March 9, 2013

Shrimad BhAgavata in Kannada -Skandha-01-Ch-08(04)


ಮಹಾಭಾರತದಲ್ಲಿ ಹೇಳುವಂತೆ: ಅಶ್ವತ್ಥಾಮ ತನ್ನ ಜಿದ್ದನ್ನು ಬಿಡದೆ “ಪಾಂಡವರ ವಂಶವನ್ನು ನಿರ್ವಂಶ ಮಾಡಬೇಕೆನ್ನುವುದು ನನ್ನ ಸಂಕಲ್ಪ” ಎಂದು ಹೇಳಿದಾಗ, ಕೃಷ್ಣ ಒಂದು ಮಾತನ್ನು ಹೇಳುತ್ತಾನೆ: “ತಿಳಿಗೇಡಿತನದಿಂದ ಹುಚ್ಚು-ಹುಚ್ಚಾಗಿ ಮಾತನಾಡುತ್ತಿರುವ ನಿನಗೆ ಕೃಷ್ಣ ಅಂದರೆ ಏನು ಎಂದು ತೋರಿಸುವ ಅಗತ್ಯವಿದೆ. ನಿನಗೆ ಅದೇನು ಮಾಡಲು ಶಕ್ಯವೋ ಅದನ್ನು ಮಾಡು, ಆದರೆ ಪಾಂಡವರ ವಂಶ ಉಳಿಯುತ್ತದೆ. ಇದು ನನ್ನ ಸಂಕಲ್ಪ” ಎಂದು. ಈ ಮಾತಿಗನುಗುಣವಾಗಿ ಇಲ್ಲಿ ಚಕ್ರಧಾರಿ ರೂಪನಾಗಿ ಕೃಷ್ಣ ಪರೀಕ್ಷಿತನ ರಕ್ಷಣೆಗೆ ನಿಂತ.
  
ಯದ್ಯಪ್ಯಸ್ತ್ರಂ ಬ್ರಹ್ಮಶಿರಸ್ತ್ವಮೋಘಂ ಚಾಪ್ರತಿಕ್ರಿಯಮ್
ವೈಷ್ಣವಂ ತೇಜ ಆಸಾದ್ಯ ಸಮಶಾಮ್ಯದ್ ಭೃಗೂದ್ವಹ ೧೮

ಬ್ರಹ್ಮಾಸ್ತ್ರವನ್ನು ತಡೆಯುವುದು ಸಾಧಾರಣವಾದ ಕೆಲಸವಲ್ಲ. ಇಲ್ಲಿ ಅಸ್ತ್ರ ಪ್ರಯೋಗಿಸಿದವರು ಸ್ವಯಂ ರುದ್ರ ದೇವರ ಅವತಾರ. ಬ್ರಹ್ಮಾಸ್ತ್ರದ ಋಷಿ ಚತುರ್ಮುಖ ಮತ್ತು ದೇವತೆ ಸ್ವಯಂ ನಾರಾಯಣ. ಇದು ತ್ರಿಮೂರ್ತಿ ಸಂಗಮ. ಇಂತಹ ಶಕ್ತಿ ಎಂದೂ ಹುಸಿಯಾಗದು. ಆದರೆ ಇದು ವಿಷ್ಣುವನ್ನು ಅಭಿಮಂತ್ರಿಸಿದ ತೇಜಸ್ಸು. ಇಂತಹ ತೇಜಸ್ಸನ್ನು ಸ್ವಯಂ ವಿಷ್ಣುವೇ ತೇಜಸ್ಸಾಗಿ ನಿಂತು ತಡೆದಾಗ ಆ ಅಸ್ತ್ರ ಉಪಶಮನವಾಗುತ್ತದೆ.

ಮಾ ಮಂಸ್ಥಾ ಹ್ಯೇತದಾಶ್ಚರ್ಯಂ ಸರ್ವಾಶ್ಚರ್ಯಮಯೇSಚ್ಯುತೇ
ಯ ಇದಂ ಮಾಯಯಾ ದೇವ್ಯಾ ಸೃಜತ್ಯವತಿ ಹಂತ್ಯಜಃ ೧೯

ಶೌನಕರು ಹೇಳುತ್ತಾರೆ: “ಬ್ರಹ್ಮಾಸ್ತ್ರವನ್ನು ಕೃಷ್ಣ  ಉಪಶಮನ ಮಾಡಿರುವುದನ್ನು ನಂಬಲಾರದ ವಿಸ್ಮಯ ಎಂದುಕೊಳ್ಳಬೇಡಿ” ಎಂದು ಏಕೆಂದರೆ ಭಗವಂತ ಸ್ವಯಂ ‘ಅಚ್ಚರಿ’. ಆತ ವಿಸ್ಮಯ. ಅಂತಹ ‘ಅದ್ಭುತ’ ಭಗವಂತ ಬ್ರಹ್ಮಾಸ್ತ್ರವನ್ನು ತಡೆದ ಎಂದರೆ ಅಲ್ಲಿ ಯಾವ ಅಚ್ಚರಿಯೂ ಇಲ್ಲ. ಇಚ್ಛಾಮಾತ್ರದಿಂದ, ಪ್ರಕೃತಿಯ ಮುಖೇನ  ಇಡೀ ಬ್ರಹ್ಮಾಂಡವನ್ನು ನಿರ್ಮಿಸಿದವ ಆತ. ಒಂದು ದಿನ ಈ ಬ್ರಹ್ಮಾಂಡವನ್ನು ಕಬಳಿಸುವವನೂ ಆತನೇ. ಇಂತಹ ಹುಟ್ಟು-ಸಾವಿಲ್ಲದ ಭಗವಂತ ಬ್ರಹ್ಮಾಸ್ತ್ರದಿಂದ ಪಾಂಡವ ಸಂತತಿ ಉಳಿಸಿದ ಎನ್ನುವುದು ಆತನ ಒಂದು ಅದ್ಭುತ ಲೀಲೆ.

ಬ್ರಹ್ಮತೇಜೋವಿನಿರ್ಮುಕ್ತೈರಾತ್ಮಜೈಃ ಸಹ ಕೃಷ್ಣಯಾ
ಪ್ರಯಾಣಾಭಿಮುಖಂ ಕೃಷ್ಣಮಿದಮಾಹ ಪೃಥಾ ಸತೀ ೨೦

ಉತ್ತರೆಯ ಗರ್ಭದಲ್ಲಿನ ಶಿಶುವನ್ನು ಸಂರಕ್ಷಿಸಿದ ಘಟನೆಯನ್ನು ನೋಡಿ ಎಲ್ಲರೂ ಸಂತೋಷ ಪಡುತ್ತಾರೆ. ಪ್ರಯಾಣಕ್ಕೆ ಮುಂಚಿತವಾಗಿ ಕುಂತಿ ಕೃಷ್ಣನನ್ನು ವಿಶೇಷವಾಗಿ ಸ್ತುತಿಸುತ್ತಾಳೆ.

ಪ್ರಥೋವಾಚ-
ನಮಸ್ಯೇ ಪುರುಷಂ ತ್ವಾದ್ಯಮೀಶ್ವರಂ ಪ್ರಕೃತೇಃ ಪರಮ್
ಅಲಕ್ಷ್ಯಂ ಸರ್ವಭೂತಾನಾಮಂತರ್ಬಹಿರಪಿ ಧ್ರುವಮ್ ೨೧

ಉಪನಿಷತ್ತಿನ ಸಾರ ತುಂಬಿದ, ಅಪೂರ್ವ ಪದಗುಚ್ಛಗಳಿಂದ ಕೂಡಿದ ಶ್ಲೋಕಗಳಿಂದ ಕೃಷ್ಣನನ್ನು ಸ್ತೋತ್ರಮಾಡುತ್ತಿರುವ ಕುಂತಿಯ ವೈದೂಷ್ಯವನ್ನು ನಾವಿಲ್ಲ ಕಾಣಬಹುದು. ಕುಂತಿ ಹೇಳುತ್ತಾಳೆ: ಗುಣತ್ರಯ(ಪ್ರಕೃತಿ)ಗಳಿಂದ   ದೇಹವನ್ನು ಸೃಷ್ಟಿಮಾಡಿ, ಆ ದೇಹದೊಳಗೆ ನಮ್ಮನ್ನಿಟ್ಟು, ನಮ್ಮೊಳಗೆ ಅಂತರ್ಯಾಮಿಯಾಗಿ ನೆಲೆಸಿದ ‘ಪುರುಷಃ’ ನೀನು” ಎಂದು. ಈ ಬ್ರಹ್ಮಾಂಡ ಸೃಷ್ಟಿಗೂ ಮೊದಲು ಬ್ರಹ್ಮಾಂಡಕ್ಕಿಂತಲೂ ದೊಡ್ಡದಾಗಿ, ಅನಂತ ಆಕಾಶದಲ್ಲಿ ತುಂಬಿರುವ ಭಗವಂತ ಪುರುಷಃ. ಇಂತಹ ಭಗವಂತ ಬ್ರಹ್ಮಾಂಡ ಸೃಷ್ಟಿ ಮಾಡಿ, ಬ್ರಹ್ಮಾಂಡದೊಳಗೆ ತುಂಬಿದ. ನಂತರ ಬ್ರಹ್ಮಾಂಡದಲ್ಲಿ ಸಮಸ್ತ ಪಿಂಡಾಂಡಗಳನ್ನು ಸೃಷ್ಟಿಸಿ, ಪ್ರತಿಯೊಂದು ಪಿಂಡಾಂಡದಲ್ಲಿ  ತುಂಬಿದ. ಪ್ರಕೃತಿಯಿಂದ ದೇಹವನ್ನು ಸೃಷ್ಟಿಮಾಡಿ ಅದರೊಳಗೆ ತಾನೂ ಸೇರಿದ ಭಗವಂತ ಪ್ರಕೃತಿಗೆ ಬದ್ಧನಾಗಿಲ್ಲ. ಏಕೆಂದರೆ ಆತ ಗುಣಾತೀತ. ಹೀಗೆ ಗುಣದ ಲೇಪವಿಲ್ಲದೆ, ಗುಣಬದ್ಧ ಶರೀರದಲ್ಲಿ ಭಗವಂತ ನೆಲೆಸಿದ್ದಾನೆ. ಇಲ್ಲಿ ಕುಂತಿ ಹೇಳುತ್ತಾಳೆ “ನಮಗೆ ಅಗೋಚರನಾಗಿ ನಮ್ಮ ಮಾತು-ಮನಗಳಿಗೆ ಮೀರಿ ನಮ್ಮೊಳಗೆ ನೀನು ತುಂಬಿದ್ದೀಯ” ಎಂದು.  ಭಗವಂತ ಎಲ್ಲರೊಳಗೂ ತುಂಬಿದ್ದಾನೆ. ಆದರೆ ಆತ ಎಲ್ಲರಿಗೂ ಅಗೋಚರ. ಅವನನ್ನು ಕಾಣುವುದು, ‘ಹೀಗೇ ಇದ್ದಾನೆ’ ಎಂದು ಹೇಳುವುದು ಅಸಾಧ್ಯ. ಆತನನ್ನು ಮನಸ್ಸು ಗ್ರಹಿಸಲಾರದು.

ಮಾಯಾಯವನಿಕಾಚ್ಛನ್ನೋ ಮಾಯಾSಧೋಕ್ಷಜ ಮರ್ತ್ಯಯಾ
ನ ಲಕ್ಷ್ಯಸೇ ಮೂಢದೃಶಾ ನಟೋ ನಾಟ್ಯಚರೋ ಯಥಾ ೨೨

ಮುಂದುವರಿದು ಕುಂತಿ ಹೇಳುತ್ತಾಳೆ: “ಮಾಯೆಯ ಪರದೆಯ ಮರೆಯಲ್ಲಿ ಮರೆಯಾಗಿ ನಿಂತವನು ನೀನು” ಎಂದು. ನಮಗೂ ಭಗವಂತನಿಗೂ ನಡುವೆ ಅಜ್ಞಾನವೆಂಬ ಪರದೆ ಇದೆ. ಹಾಗಾಗಿ ಆತ ನಮ್ಮೆದುರೇ ಇದ್ದರೂ ನಮಗೆ ಕಾಣುವುದಿಲ್ಲ. ಋಗ್ವೇದದಲ್ಲಿ ಹೇಳುವಂತೆ: “ನ ತಂ ವಿದಾಥ ಯ ಇಮಾ ಜಜಾನಾನ್ಯದ್ಯುಷ್ಮಾಕಮಂತರಂ ಬಭೂವ ನೀಹಾರೇಣ ಪ್ರಾವೃತಾ ಜಲ್ಪ್ಯಾ ಚಾಸುತೃಪ ಉಕ್ಥಶಾಸಶ್ಚರಂತಿ  ೧೦.೦೮೨.೦೭  ಭಗವಂತ ನಮಗೆ ತಿಳಿದ ಯಾವ ವಸ್ತುವೂ ಅಲ್ಲ. ಆತ ಎಲ್ಲವುದಕ್ಕಿಂತ ಭಿನ್ನ. ಆತನನ್ನು ಎಲ್ಲೋ ಹುಡುಕುವುದು ಬೇಡ. ಆತ ನಮ್ಮೊಳಗೇ ಇದ್ದಾನೆ. ಆದರೆ ಮಂಜುಕವಿದ ಕಣ್ಣು ನಮ್ಮದು. ಆದ್ದರಿಂದ ಆತ ನಮ್ಮೆದುರೇ ಇದ್ದರೂ ನಾವು ಆತನನ್ನು ಕಾಣಲಾರೆವು. ಇಲ್ಲಿ ಕುಂತಿ ಹೇಳುತ್ತಾಳೆ: ನಾವು ಹುಟ್ಟು-ಸಾವಿಗೆ ಬದ್ಧರಾದವರು. ಆದರೆ ನೀನು ಪ್ರತ್ಯಕ್ಷಕ್ಕೆ ಗೋಚರನಾಗದ ಅಧೋಕ್ಷಜ. ಇಂತಹ ನಿನ್ನನ್ನು ಒಬ್ಬ ಸಾಮಾನ್ಯಳಾದ ನಾನು ಕಾಣುವುದುಂಟೇ? ಪರದೆಯ ಹಿಂದಿರುವ ನಟನಂತೆ, ನಮ್ಮ ಎದುರಿಗಿದ್ದರೂ ನಮಗೆ ಗೋಚರನಾಗದ ಕೃಷ್ಣ ನೀನಲ್ಲವೇ?” ಎಂದು ಪ್ರಶ್ನಿಸುತ್ತಾಳೆ ಕುಂತಿ. 

ತಥಾ ಪರಮಹಂಸಾನಾಂ ಮುನೀನಾಮಮಲಾತ್ಮನಾಮ್
ಭಕ್ತಿಯೋಗವಿಧಾನಾರ್ಥಂ ಕಥಂ ಪಶ್ಯೇಮ ಹಿ ಸ್ತ್ರಿಯಃ ೨೩

 “ಸಂಸಾರದಲ್ಲಿ ಮುಳುಗಿದ ಒಬ್ಬ ಸಾಮಾನ್ಯ ಸ್ತ್ರೀ ನಾನು. ಆದರೆ ನೀನು ಪರಮಹಂಸರ, ಮುನಿಗಳ ಮತ್ತು ಅಮಲಾತ್ಮರ ಭಕ್ತಿಗೆ ವಿಷಯಿಕನಾದವನು. ಇಂತಹ ನಿನ್ನನ್ನು ನನ್ನಂತ ಸಾಮಾನ್ಯ ಸ್ತ್ರೀ ಅರಿಯಲು ಸಾಧ್ಯವೇ?” ಎಂದು ತನ್ನ ಅಸಾಯಕತೆಯನ್ನು ವ್ಯಕ್ತಪಡಿಸುತ್ತಾಳೆ ಕುಂತಿ. ಇಲ್ಲಿ ಅಮಲಾತ್ಮರು ಎಂದರೆ ಕಾಮ-ಕ್ರೋಧಾದಿಗಳನ್ನುಗಳನ್ನು ಗೆದ್ದು, ರಜಸ್ಸು-ತಮಸ್ಸುಗಳನ್ನು ಸೆಳೆದು, ಶುದ್ಧ ಸಾತ್ತ್ವಿಕ ಮನಸ್ಸನ್ನು ಗಳಿಸಿದವರು. ಇಂತಹ ಅಮಲಾತ್ಮರು ನಿರಂತರ ಭಗವಂತನ ಚಿಂತನೆ ಮಾಡಿ ಮುನಿಗಳಾಗಿ ನಂತರ ಪರಮಹಂಸರಾಗುತ್ತಾರೆ.  ಸತ್ತ್ವ-ರಜಸ್ಸು-ತಮಸ್ಸಿನ ಮಿಶ್ರಣದಲ್ಲಿ ಕೇವಲ ಸತ್ತ್ವವನ್ನಷ್ಟೇ ಹೀರಿ ಅದರಲ್ಲೇ ಸದಾ ನೆಲೆನಿಲ್ಲಬಲ್ಲ ವಿರಕ್ತರನ್ನು ಪರಮಹಂಸರು ಎನ್ನುತ್ತಾರೆ. ಭಗವಂತನನ್ನು ಬಿಟ್ಟು ಇತರ ವಿಷಯ ಇವರ ಮನಸ್ಸಿಗೆ ಸುಳಿಯುವುದಿಲ್ಲ.