Sunday, November 24, 2013

Shrimad BhAgavata in Kannada -Skandha-02-Ch-02(4)

ಚೀರಾಣಿ ಕಿಂ ಪಥಿ ನ ಸಂತಿ ದಿಶಂತಿ ಭಿಕ್ಷಾಂ ನೋ ವಾಂSಘ್ರಿಪಾಃ ಪರಭೃತಃ ಸರಿತೋSಪ್ಯಶುಷ್ಯನ್
ರುದ್ಧಾ ಗುಹಾಃ ಕಿಮವಧೂತಸುಹೃನ್ನ ಕೃಷ್ಣಃ ಕಸ್ಮಾದ್ ಭಜಂತಿ ಕವಯೋ ಧನದುರ್ಮದಾಂಧಾನ್ ೦೫

ಸಾಮಾನ್ಯವಾಗಿ ನಾವು ಯಾವುದೋ ಒಬ್ಬ ಶ್ರೀಮಂತ ವ್ಯಕ್ತಿ ಅಥವಾ ರಾಜಕೀಯ ವ್ಯಕ್ತಿ ಮುಂದೆ ಹೋಗಿ “ನೀವೇ ದೊಡ್ಡವರು, ನಿಮ್ಮಿಂದ ನನಗೆ ಸಹಾಯವಾಗಬೇಕು” ಎಂದು ಕೇಳಿ ಅವರ ಕಾಲಿಗೆ ಅಡ್ಡ ಬೀಳುತ್ತೇವೆ. ಇದು ಭಾಷೆಯ ಹಾಗೂ ಆ ಭಾಷೆಯಲ್ಲಿ ಬರುವ ಎಲ್ಲಾ ಶಬ್ದಗಳ ದುರುಪಯೋಗ. ಇಲ್ಲಿ ಶುಕಾಚಾರ್ಯರು “ಜನರು ಏಕೆ ಹೀಗೆ ಮಾಡುತ್ತಾರೆ” ಎಂದು ಪ್ರಶ್ನಿಸಿದ್ದಾರೆ.  “ಭಗವಂತನನ್ನು ಹೊಗಳಲು ಉಪಯೋಗಿಸುವ ಶಬ್ದಗಳನ್ನು ಏಕೆ ಒಬ್ಬ ಮನುಷ್ಯನನ್ನು ಹೊಗಳಲು ಉಪಯೋಗಿಸಬೇಕು?” ಇದು ಶುಕಾಚಾರ್ಯರ ಪ್ರಶ್ನೆ. ಸಾಮಾನ್ಯವಾಗಿ ಈ ರೀತಿ ಮಾಡಲು ಕಾರಣ- ಯಾವುದೋ ಒಂದು ಲೌಕಿಕ ಲಾಭದ ಆಸೆ. ಶುಕಾಚಾರ್ಯರು ಹೇಳುತ್ತಾರೆ: “ನಮಗೆ ಬೇಕಾಗಿರುವುದು ಮೈಮುಚ್ಚಲು ಒಂದಿಷ್ಟು ಬಟ್ಟೆ, ಹಸಿವು ಪರಿಹಾರಕ್ಕೆ ಒಂದಿಷ್ಟು ಆಹಾರ. ಇದಕ್ಕಾಗಿ ಇನ್ನೊಬ್ಬರ ಮುಂದೇಕೆ ಅಂಗಲಾಚಬೇಕು.” ಹಿಮಾಲಯದಂತಹ ಜನ ವಸತಿ ಇಲ್ಲದ  ಪ್ರದೇಶದಲ್ಲಿ ವಾಸಿಸುವ ಸಾಧು-ಸಂತರ ಜೀವನ ಹೇಗೆ ಸಾಗುತ್ತದೆ ಎನ್ನುವುದನ್ನು ಶುಕಾಚಾರ್ಯರು ಇಲ್ಲಿ ವಿವರಿಸಿದ್ದಾರೆ. ಕಾಡಿನಲ್ಲಿ ಮರಗಳಿಂದ ಮಾಡಿದ ನಾರಿನ ಉಡುಪು ಹಾಗೂ ತಿಂದು ಮುಗಿಸಲು ಅಸಾಧ್ಯವಾದಷ್ಟು ಹಣ್ಣು ಹಂಪಲು ಪ್ರಕೃತಿದತ್ತವಾಗಿ ಅವರಿಗೆ ದೊರೆಯುತ್ತದೆ. ಇಂತಹ ಸ್ಥಳದಲ್ಲಿ ವಾಸಿಸುವವರು ಎಂದೂ ಯಾವ ಕಾರಣಕ್ಕೂ ಯಾರ ಮುಂದೆಯೂ ಕೈಒಡ್ಡುವುದಿಲ್ಲ.
ಇಲ್ಲಿ ಶುಕಾಚಾರ್ಯರು ಕಾಡಿನಲ್ಲಿ ಹಣ್ಣು ಕೊಡುವ ಮರಗಳನ್ನು ‘ಅಘ್ರಿಪಾಃ’ ಎಂದು ಕರೆದಿದ್ದಾರೆ. ಅಘ್ರಿಪಾಃ ಎಂದರೆ ‘ಕಾಲಿನಿಂದ ನೀರನ್ನು  ಕುಡಿದು ತಲೆ ತುಂಬಾ ಹಣ್ಣು ಹೊರುವವುಗಳು’ ಎಂದರ್ಥ. ಇದು ಪ್ರಾಚೀನರು ಮರಗಳಿಗೆ ಕೊಟ್ಟ ವಿಶಿಷ್ಠ ಹೆಸರು.  ಇಲ್ಲಿ ಕಾಡಿನ ಮರಗಳನ್ನು ಮತ್ತು ನದಿಗಳನ್ನು ಶುಕಾಚಾರ್ಯರು ‘ಪರಭೃತಃ’ ಎನ್ನುವ ವಿಶೇಷಣ ಬಳಸಿ ಸಂಬೋಧಿಸಿದ್ದಾರೆ. ಪರಭೃತಃ ಎಂದರೆ ಇನ್ನೊಬ್ಬರಿಗೋಸ್ಕರವೇ ಇರುವವುಗಳು ಎಂದರ್ಥ. ಮರ ತನಗೋಸ್ಕರ ಹಣ್ಣು ಬಿಡುವುದಿಲ್ಲ. ನದಿಗೆ ಬಾಯಾರಿಕೆ ಇಲ್ಲ. ಅವು ಯಾವ ಪ್ರತಿಫಲ ಅಪೇಕ್ಷಿಸದೇ ಹಣ್ಣು-ನೀರನ್ನು ಕೊಡುತ್ತವೆ. “ಭಗವಂತ ನಮಗಾಗಿ ಇಂತಹ ಮರಗಳನ್ನೂ ನದಿಗಳನ್ನೂ ಸೃಷ್ಟಿ ಮಾಡಿಲ್ಲವೇ?” ಎಂದು ಕೇಳುತ್ತಿದ್ದಾರೆ ಶುಕಾಚಾರ್ಯರು.
ಶುಕಾಚಾರ್ಯರ ಈ ಮೇಲಿನ ಮಾತು ಕೇಳವಾಗ  ಆನಂದವೆನಿಸಿದರೂ, ಇಂದು ಈ ರೀತಿ ಬದುಕುವುದು ಕಷ್ಟ. ಆದರೆ ಶುಕಾಚಾರ್ಯರ ಈ ಮಾತನ್ನು ನಾವು ವಿಶ್ಲೇಷಿಸಿ ನೋಡಬೇಕು. ಈ ಪ್ರಪಂಚದಲ್ಲಿ ೮೪ ಲಕ್ಷ ಜೀವಿಗಳಿವೆ. ಇವುಗಳಲ್ಲಿ ಮನುಷ್ಯನನ್ನು ಬಿಟ್ಟು ಇತರ ಎಲ್ಲಾ ಜೀವಿಗಳು ಆಹಾರಕ್ಕಾಗಿ ಇನ್ನೊಬ್ಬರ ಮುಂದೆ ಕೈಯೊಡ್ಡುವ ಪ್ರವೃತ್ತಿ ತೋರುವುದಿಲ್ಲ. ಅವು ಭಗವಂತ ನೈಸರ್ಗಿಕವಾಗಿ ನೀಡಿರುವ ನೀರು-ಆಹಾರವನ್ನು ಸೇವಿಸಿ ಆರೋಗ್ಯವಾಗಿರುತ್ತವೆ. ಇಲ್ಲಿ ನಮಗೆ ಸ್ಪಷ್ಟವಾಗಿ ತಿಳಿಯುವುದೇನೆಂದರೆ, ಇನ್ನೊಬ್ಬರ ಮುಂದೆ ಕೈಯೊಡ್ಡುವಂತೆ ಭಗವಂತ ಜೀವಜಾತದ ಸೃಷ್ಟಿ ಮಾಡಿಲ್ಲ. ಇದು ಮನುಷ್ಯನ ನಾಗರೀಕತೆಯ ಆವಿಷ್ಕಾರ. ನೀರು-ಆಹಾರ ನೈಸರ್ಗಿಕವಾಗಿ ಸಿಗಬಹುದು ಆದರೆ ಇರುವುದಕ್ಕೊಂದು ಮನೆ ಬೇಡವೇ ಎಂದು ಕೇಳಿದರೆ, ಶುಕಾಚಾರ್ಯರು ಹೇಳುತ್ತಾರೆ: “ಪರ್ವತದಲ್ಲಿರುವ ಗುಹೆಗಳೆಲ್ಲಾ ಮುಚ್ಚಿ ಹೋದವೇನು?” ಎಂದು. ಇದು ನಾಗರೀಕತೆ ಬೆಳೆಯುವ ಮೊದಲು ಮನುಷ್ಯ ಬದುಕುತ್ತಿದ್ದ ರೀತಿ. ಇಂದು ನಾವು ಸಹಜ ಜೀವನವನ್ನು ಮರೆತು ಅಸಹಜವನ್ನೇ ಸಹಜವೆಂದು ತಿಳಿದು ಬದುಕುತ್ತಿದ್ದೇವೆ.

ಲೌಕಿಕ ಸ್ಪರ್ಶ ಬೇಡ ಎಂದು ತನ್ನತ್ತ ಬರುವವರನ್ನು ಕೈಯೆತ್ತಿ ಸಲಹುತ್ತಾನೆ ಆ ಭಗವಂತ. ಆದರೆ ಇಂದು ಎಲ್ಲರನ್ನೂ ಸಲಹುವ ಭಗವಂತನೊಬ್ಬನಿದ್ದಾನೆ ಎನ್ನುವುದನ್ನು ಜನ ಮರೆತು ಬದುಕುತ್ತಿದ್ದಾರೆ. ಭಗವಂತ ಎಲ್ಲವನ್ನೂ ಕೊಟ್ಟಿದ್ದರೂ ಕೂಡಾ ನಾವು ಇನ್ನೊಬ್ಬರ ಮುಂದೆ ಕೈಯೊಡ್ಡುತ್ತಿದ್ದೇವೆ. ಇನ್ನೊಬ್ಬರ ಬಳಿ ಇರುವ ಸಂಪತ್ತು ಅವರ ಸಂಪಾದನೆ ಮತ್ತು ಅದು ಅವರ ಮನೆವಾಳ್ತೆಗೆ ಬೇಕಾಗುತ್ತದೆ. ನಾವು ನಮಗೆ ಭಗವಂತ ಏನು ಕೊಟ್ಟಿದ್ದಾನೆ  ಅದರಲ್ಲಿ ಬದುಕಲು ಕಲಿಯಬೇಕು. ಹಿಂದೆ ಬಾಲ್ಯದಲ್ಲಿ ಕಾಡಿನಲ್ಲಿರುವ ಗುರುಕುಲದಲ್ಲಿ ವಿದ್ಯಾಭ್ಯಾಸ ನಂತರ ಮುಪ್ಪಿನಲ್ಲಿ ವಾನಪ್ರಸ್ಥ ಎನ್ನುವ ಕ್ರಮವಿತ್ತು.  ಇದರಿಂದಾಗಿ ಎಲ್ಲವನ್ನೂ ಕಳೆದುಕೊಂಡು ಬದುಕುವ ನಿಸ್ಪೃಹತೆಯ ಪಾಠ ಸಿಗುತ್ತಿತ್ತು. ಆದರೆ ಇಂದು ಮಕ್ಕಳು, ಯುವಕ-ಯುವತಿಯರು, ಮುದುಕರು ಎಲ್ಲರೂ ಪೇಟೆಗೆ ಮರುಳಾಗಿದ್ದಾರೆ. ಇದರಿಂದಾಗಿ ಒಬ್ಬರು ಇನ್ನೊಬ್ಬರಿಗೆ ಭಾರವಾಗಿ ಬದುಕುತ್ತಿದ್ದಾರೆ. ಪೇಟೆಯಲ್ಲಿ ಜನಸಂಖ್ಯಾ ಸ್ಪೋಟವಾಗಿ ಜೀವನದ ಸಮತೋಲನ, ಅಧ್ಯಾತ್ಮ ನಿಸ್ಪೃಹತೆ, ಎಲ್ಲವೂ ಕಾಣೆಯಾಗುತ್ತಿದೆ. ನಾಗರಿಕತೆಯ ಹೆಸರಿನಲ್ಲಿ ಎಲ್ಲಾ ಜೀವನ್ಮೌಲ್ಯಗಳೂ  ನಾಶವಾಗಿ ಕೇವಲ ಸ್ವಾರ್ಥ  ಬೆಳೆಯುತ್ತಿದೆ. ಇದೆಲ್ಲವೂ ಮನುಷ್ಯ ತಾನೇ ನಿರ್ಮಿಸಿಕೊಂಡ ಸಮಸ್ಯೆ. ಹೀಗಾಗಿ ಇಂದು ನಾವು ನಾವೇ ನಿರ್ಮಿಸಿರುವ ಬಲೆಯಲ್ಲಿ ಸಿಕ್ಕಿ ಓದ್ದಾಡುವ ಪರಿಸ್ಥಿತಿ ಬಂದಿದೆ. ಇದಕ್ಕಾಗಿ ಶುಕಾಚಾರ್ಯರು ಹೇಳುತ್ತಾರೆ: “ನಿನ್ನ ಸಾಮಾಜಿಕ ಮತ್ತು ಲೌಕಿಕವಾದ ವ್ಯವಹಾರಗಳನ್ನು ಎಷ್ಟು ಸಾಧ್ಯವೋ ಅಷ್ಟು ಕಮ್ಮಿ ಮಾಡು” ಎಂದು.  ಇಲ್ಲಿ ಎಲ್ಲವನ್ನೂ ಬಿಟ್ಟು ಬಿಡು ಎಂದು ಅವರು ಹೇಳುತ್ತಿಲ್ಲ. ಏಕೆಂದರೆ ನಾವು ಅದನ್ನು ಬಿಡಲಾರದಷ್ಟು ಅಂಟಿಸಿಸಿಕೊಂಡಾಗಿದೆ. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಕಮ್ಮಿ ಮಾಡಬೇಕು, ಅದನ್ನೇ ಸರ್ವಸ್ವ ಎಂದು ಕುಳಿತರೆ ನಮ್ಮ ಬದುಕಿನ ಸಮಸ್ಯೆಗೆ ಪರಿಹಾರವೇ ಇಲ್ಲವಾಗುತ್ತದೆ. ಮಿತಭಾಷಿಯಾಗಿ, ವ್ಯವಹಾರದಲ್ಲಿ ಎಷ್ಟು ಬೇಕೋ ಅಷ್ಟೇ ತೊಡಗಿಸಿಕೊಂಡು, ಭಗವಂತನನ್ನು ಮರೆಯದೇ ಬದುಕಿದಾಗ ಜೀವನ ದುರ್ಬರವಾಗದೆ ಸಹಜ ಸ್ಥಿತಿಯಲ್ಲಿ ನಾವು ಬದುಕಲು ಸಾಧ್ಯವಾಗುತ್ತದೆ. 

Saturday, November 23, 2013

Shrimad BhAgavata in Kannada -Skandha-02-Ch-02(3)

ಅತಃ ಕವಿರ್ನಾಮಸು ಯಾವದರ್ಥಃ ಸ್ಯಾದಪ್ರಮತ್ತೋ ವ್ಯವಸಾಯಬುದ್ಧಿಃ
ಸಿದ್ಧೇSನ್ಯಥಾರ್ಥೇ ನ ಯತೇತ ತತ್ತತ್  ಪರಿಶ್ರಮಂ ತತ್ರ ಸಮೀಕ್ಷಮಾಣಃ ೦೩

ಎಲ್ಲಾ ಶಬ್ದಗಳಲ್ಲಿ ಕೇವಲ ಭಗವಂತನ ಚಿಂತನೆ ಮಾಡಿದರೆ ಲೋಕ ವ್ಯವಹಾರ ನಡೆಯುವುದು ಹೇಗೆ? ಈ ಪ್ರಶ್ನೆಗೆ ಉತ್ತರಿಸುತ್ತಾ ಶುಕಾಚಾರ್ಯರು ಹೇಳುತ್ತಾರೆ: “ನಮಗೆ ಲೋಕದಲ್ಲಿ ಲೌಕಿಕವಾಗಿ  ಎಷ್ಟು ಅನಿವಾರ್ಯವಾಗಿ  ಶಬ್ದಗಳನ್ನು ಬಳಸಬೇಕೋ ಅಷ್ಟನ್ನೇ ಬಳಸಬೇಕು” ಎಂದು. ಏಕೆಂದರೆ ಅಮುಖ್ಯ ಅರ್ಥದಲ್ಲಿ ಲೋಕವ್ಯವಹಾರವೂ ನಡೆಯಬೇಕು. ಆದ್ದರಿಂದ ಎಷ್ಟು ಪ್ರಯೋಜನ ಇದೆಯೋ ಅಷ್ಟು ಮಾತ್ರವೇ ಲೌಕಿಕ ಮಾತನ್ನಾಡಬೇಕು. ಉಳಿದ ಎಲ್ಲಾ ಮಾತನ್ನು ಭಗವಂತನ ಪರವಾಗಿ ಚಿಂತನೆ ಮಾಡಬೇಕು. ಪೂರ್ತಿಯಾಗಿ ಭಗವದ್ ಚಿಂತನೆ ಮಾಡಿದರೆ ಲೋಕ ವ್ಯವಹಾರ ನಡೆಯುವುದಿಲ್ಲ. ಉದಾಹರಣೆಗೆ ಹಿಂದೆ ಹೇಳಿದಂತೆ ‘ವಿದ್ಯಾರತ್ನಾಕರ’ ಎನ್ನುವ ಹೆಸರಿನ ಮಗನನ್ನು ಕರೆಯಲು ತಂದೆ ಆ ಶಬ್ದವನ್ನೇ ಬಳಸಬೇಕು. ಆಗ ಮಗ “ನನ್ನ ತಂದೆ ಭಗವದ್ ಸ್ಮರಣೆ ಮಾಡುತ್ತಿದ್ದಾನೆ “ ಎಂದು ಸುಮ್ಮನೆ ಕುಳಿತುಕೊಂಡರೆ ಲೋಕ ವ್ಯವಹಾರ ನಡೆಯುವುದಿಲ್ಲ. ಆತ ತಂದೆ ನನ್ನನ್ನು ಕರೆಯುತ್ತಿದ್ದಾರೆ ಎಂದು ಅದಕ್ಕೆ ಓಗೊಡಲೇಬೇಕು. ಆದರೆ ಇಲ್ಲಿ ‘ವಿದ್ಯಾರತ್ನಾಕರ’ ಎನ್ನುವ ಪದ  ಭಗವಂತನ ಗುಣಗಾನ ಮಾಡುವ  ಭಗವಂತನ ಹೆಸರು, ಅದನ್ನು ನಾವು ವ್ಯವಹಾರಕ್ಕಾಗಿ ಬಳಸುತ್ತಿದ್ದೇವೆ ಎನ್ನುವ ಎಚ್ಚರ ಅಗತ್ಯ.
ಸಾಮಾಜಿಕವಾಗಿ ಮಾತ್ರವಲ್ಲ, ವೇದ ಭಾಷೆಯಲ್ಲಿ ಕೂಡಾ ಈ ರೀತಿಯ ಬಳಕೆ ಅನಿವಾರ್ಯ. ಉದಾಹರಣೆಗೆ ವೇದದಲ್ಲಿ  ವಸಂತೇ ವಸಂತೇ ಜ್ಯೋತಿಷಾ ಯಜೇತಾ ಎನ್ನುವ ಮಾತಿದೆ. ಅಂದರೆ “ಪ್ರತಿಯೊಂದು ವಸಂತ ಋತುವಿನಲ್ಲಿ ಜ್ಯೋತಿಷ್ಠೋಮ ಯಾಗದಿಂದ ಭಗವಂತನನ್ನು ಆರಾಧಿಸಬೇಕು” ಎಂದರ್ಥ. ಇದು ಲೌಕಿಕವಾದ ವೇದಾರ್ಥ. ಆದರೆ ಈ ವಾಕ್ಯ ಮುಖ್ಯವಾಗಿ ಭಗವಂತನ ಗುಣಗಾನ ಮಾಡುತ್ತದೆ.  ಅದು ಹೇಗೆಂದು ಇಲ್ಲಿ ಬರುವ ಪ್ರತಿಯೊಂದು ಪದವನ್ನೂ ಭಗವಂತನ ಪರ ಮಾಡಿ ಅರ್ಥ ಮಾಡಿ ತಿಳಿದುಕೊಳ್ಳಬಹುದು. ಹಾಗೆ ಮಾಡಿದಾಗ: ವಸನ್+ತೇ=ವಸಂತೇ ಅಂದರೆ: ಎಲ್ಲವುದರ ಒಳಗೂ ವಾಸ ಮಾಡುವವನು, ಎಲ್ಲೆಡೆ ತುಂಬಿರುವವನು ಎಂದರ್ಥ. ಅದೇ ರೀತಿ  ‘ಜ್ಯೋತಿಷಾ’. ಇಲ್ಲಿ  ಜ್ಯೋತಿ ಎಂದರೆ ಬೆಳಕು, ಷ-ಕಾರೋ ಪ್ರಾಣೋ ಆತ್ಮಾ. ಅಂದರೆ ಬೆಳಕಿನ ಪುಂಜವಾಗಿ ಎಲ್ಲೆಡೆ ತುಂಬಿರುವವ ಮತ್ತು ಎಲ್ಲರ ಅಂತರ್ಯಾಮಿಯಾಗಿದ್ದು ಪ್ರೇರೇಪಿಸುವವ. ಆದ್ದರಿಂದ ಸ್ವಯಂ ಪ್ರಕಾಶಸ್ವರೂಪನೂ, ಸರ್ವಚೇಷ್ಠಕನೂ ಆದವ ಜ್ಯೋತಿಷಾ. ಇನ್ನು ‘ಆಯಜೇತಾ’. ಇಲ್ಲಿ ‘ಇತ’ ಎಂದರೆ ಪೂಜಿತನಾದವನು. ಆದ್ದರಿಂದ ಆಯಜೇತಾ ಎಂದರೆ: ಎಲ್ಲಾ ಯಜ್ಞಗಳಿಂದ ಪೂಜಿತನಾದವನು ಎಂದರ್ಥ. ಹೀಗೆ ನೋಡಿದಾಗ ಇಡೀ ವಾಕ್ಯ ಭಗವದ್ ಪರವಾಗುತ್ತದೆ. ಆದರೆ ಕೇವಲ ಭಗವದ್ ಪರವಾಗಿ ನೋಡಿದರೆ ವ್ಯವಹಾರ ನಡೆಯುವುದಿಲ್ಲ. ಹಾಗಾಗಿ ವೇದ ಮಂತ್ರದಲ್ಲಿ ವ್ಯವಹಾರ ನಿರ್ವಹಣೆಗೆ ಎಷ್ಟು ಲೌಕಿಕ ಅರ್ಥಬೇಕೋ ಅಷ್ಟು ಲೌಕಿಕ ಅರ್ಥವನ್ನು ಕಾಣಬೇಕು. ಆದರೆ ಮಂತ್ರದ ನಿಜವಾದ ಅರ್ಥ ಭಗವಂತ ಎನ್ನುವುದನ್ನು ಮಾತ್ರ ಮರೆಯಬಾರದು. ಇದು ಭಾಷೆಯ ಮೇಲೆ ಅಧ್ಯಾತ್ಮದ ಅನುಸಂಧಾನ.
ಬ್ರಹ್ಮಾಂಡ ಪುರಾಣದಲ್ಲಿ ಹೇಳುವಂತೆ: “ಶಾಸ್ತ್ರೇಷು ಭಾರತಂ ಸಾರಸ್ತತ್ರ ನಾಮಸಹಸ್ರಕಮ್”  ಅಂದರೆ “ಶಾಸ್ತ್ರಗಳ ಸಾರ ಮಹಾಭಾರತವಾದರೆ, ಭಾರತದ  ಸಾರ ವಿಷ್ಣುಸಹಸ್ರನಾಮ”. ಈ ವಿಷಯವನ್ನು ಮೇಲ್ನೋಟದಲ್ಲಿ ನೋಡಿದಾಗ ನಮಗೆ ಗೊಂದಲವಾಗುತ್ತದೆ. ಏಕೆಂದರೆ ಮಹಾಭಾರತದಲ್ಲಿರುವುದು ಕೌರವ ಪಾಂಡವರ ಜಗಳದ ಕಥೆ. ಆದರೆ ವಿಷ್ಟು ಸಹಸ್ರನಾಮದಲ್ಲಿ ಅಂತಹ ಯಾವ ಕಥೆಯೂ ಇಲ್ಲ. ಅಲ್ಲಿರುವುದು ಭಗವಂತನ ಸಹಸ್ರ ಗುಣವಾಚಕ ನಾಮಗಳು. ಹೀಗಿರುವಾಗ ಅದು ಭಾರತದ ಸಂಗ್ರಹ(synopsis) ಆಗುವುದು ಹೇಗೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಈ ಪ್ರಶ್ನೆಗೆ ಉತ್ತರ ರೂಪವಾಗಿಯೇ ಶುಕಾಚಾರ್ಯರು “ಎಲ್ಲಾ ಶಬ್ದಗಳೂ ಭಗವಂತನನ್ನು ಹೇಳುತ್ತವೆ” ಎಂದು ಹೇಳಿರುವುದು. ಈ ಹಿನ್ನೆಲೆಯಲ್ಲಿ ಭಾರತದ ಪ್ರತಿಯೊಂದು ಶ್ಲೋಕಗಳಲ್ಲಿ, ಪ್ರತಿಯೊಂದು ಶಬ್ದಗಳಲ್ಲಿ ಭಗವಂತನನ್ನು ಕಂಡಾಗ ನಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ. ಭಾರತದಲ್ಲಿ ಒಂದು ಲಕ್ಷ ಶ್ಲೋಕಗಳಿವೆ. ಅಂದರೆ ಮೂವತ್ತೆರಡು ಲಕ್ಷ ಅಕ್ಷರಗಳು. ಈ ಮೂವತ್ತೆರಡು ಲಕ್ಷ ಅಕ್ಷರಗಳೂ ಭಗವಂತನ ನಾಮವನ್ನು ಹೇಳುತ್ತವೆ ಮತ್ತು ಅದರ ಸಾರವನ್ನು ವೇದವ್ಯಾಸರು ನಮಗೆ  ವಿಷ್ಣುಸಹಸ್ರನಾಮವಾಗಿ ಕೊಟ್ಟಿದ್ದಾರೆ.   ವರಾಹ ಪುರಾಣದಲ್ಲಿ ವೇದವ್ಯಾಸರು ಹೇಳುತ್ತಾರೆ:  "ಯಾವಂತಿ ಪಟಿಥಾನಿ ತಾವಂತಿ ಹರಿನಾಮಂತಿ ಪಟಿಥಾನಿ ನಾಸಂಶಯಃ- ಒಮ್ಮೆ ವೇದವನ್ನು ಓದಿದರೆ ಅದರಲ್ಲಿ ಎಷ್ಟು ಅಕ್ಷರಗಳಿವೆಯೋ ಅಷ್ಟು ಹರಿನಾಮವನ್ನು ನಾವು ಪಠಿಸಿದಂತಾಗುತ್ತದೆ” ಎಂದು. ಆದ್ದರಿಂದ ಪ್ರಾಚೀನರ ಪ್ರಕಾರ ಒಮ್ಮೆ ಋಗ್ವೇದ ಓದಿದರೆ 4 ಲಕ್ಷದ 32 ಸಾವಿರ ಭಗವಂತನ ನಾಮ ಸ್ಮರಣೆ ಮಾಡಿದಂತಾಗುತ್ತದೆ.  ಇದು ಎಲ್ಲಾ ಅಕ್ಷರಗಳೂ, ಎಲ್ಲಾ ನಾದಗಳೂ ಭಗವಂತನ ನಾಮ ಎನ್ನುವ ಎಚ್ಚರ. ಉನ್ನತವಾದ ಧ್ಯಾನ ಸ್ಥಿತಿಗೆ ಏರಿದವರಿಗೆ ಇದು ಸಹಜವಾದ ಪ್ರವೃತ್ತಿ. ಏಕೆಂದರೆ ಧ್ಯಾನದಲ್ಲಿ ಯಾವ ಯಜ್ಞ-ಯಾಗ-ಆಹುತಿಗಳೂ ಇಲ್ಲ. ಅಲ್ಲಿ ಕೇವಲ ಭಗವಂತ ಮಾತ್ರ. ಆದರೆ ಧ್ಯಾನದಿಂದ ವ್ಯವಹಾರಕ್ಕಿಳಿದಾಗ ಅಲ್ಲಿ ವ್ಯಾವಹಾರಿಕ ಅರ್ಥವೂ ಬೇಕಾಗುತ್ತದೆ. ಇದು ಭಾಷೆಯ ಬಗ್ಗೆ ನಮಗಿರಬೇಕಾದ ಎಚ್ಚರ. ಹೀಗಾಗಿ ಮಾತನಾಡುವಾಗ ಶಾಸ್ತ್ರೀಯ ಸಂಗತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಮಾತನಾಡಬೇಕು.  ಉದಾಹರಣೆಗೆ ನಾವು ಒಬ್ಬ ವ್ಯಕ್ತಿಯನ್ನು ಬಯ್ಯುತ್ತೇವೆ. ಅಲ್ಲಿ ವ್ಯಾವಹಾರಿಕವಾಗಿ ಆತನನ್ನು ಬೈದರೂ, ಅಂತತಃ ನಾವು ಬಯ್ಯುವುದು ಆ ವ್ಯಕ್ತಿಯನ್ನಲ್ಲ, ಬದಲಿಗೆ ಆ ವ್ಯಕ್ತಿಯೊಳಗಿನ ಭಗವದ್ ತತ್ತ್ವವನ್ನು. ಈ ಎಚ್ಚರದಿಂದ  ವ್ಯವಹರಿಸಿದಾಗ ಜೀವನ ಸಾರ್ಥಕ.

ಸಾಮಾನ್ಯವಾಗಿ ಲೌಕಿಕವಾದ ಯಾವುದೋ ಒಂದು ಕೆಲಸಕ್ಕಾಗಿ ನಾವು ಭಾಷೆಯನ್ನು ಬಳಸುತ್ತೇವೆ. ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಒಂದು ವೇಳೆ ಬೇರೆ ವಿಧದಿಂದ ಮಾತು ಬಳಸದೆಯೇ ಆ ಕೆಲಸ ಆಗುವುದಿದ್ದರೆ  ಅಂತಹ ಸಂದರ್ಭದಲ್ಲಿ ಲೌಕಿಕ ಅರ್ಥದಲ್ಲಿ ಮಾತನ್ನು ಬಳಸಲೇಬೇಡ” ಎಂದು.   “ಭಗವಂತನನ್ನು ಪ್ರತಿ ಶಬ್ದದಿಂದ ಅನುಸಂಧಾನ ಮಾಡಿದಾಗ ಎಲ್ಲಾ ಕೆಲಸವೂ ಆಗುತ್ತದೆ. ಹಾಗಿರುವಾಗ ಲೌಕಿಕ ಅರ್ಥದಲ್ಲಿ ಏಕೆ ಭಾಷೆಯನ್ನು ಬಳಸಬೇಕು” ಎನ್ನುವುದು ಇಲ್ಲಿ ಶುಕಾಚಾರ್ಯರ ಪ್ರಶ್ನೆ. ಇದು ಶುಕಾಚಾರ್ಯರ ನಿಲುವು. ಸಾಮಾನ್ಯರಾದ ನಮಗೆ ಈ ರೀತಿ ಬದುಕುವುದು ಸಾಧ್ಯವಿಲ್ಲ. ಲೌಕಿಕವಾಗಿ ಶಬ್ದ ಬಳಕೆಯಿಂದ ಯಾವುದೇ ಆನಂದವಿಲ್ಲ ಎನ್ನುವುದು ಧ್ಯಾನದ ಸ್ಥಿತಿಯಲ್ಲಿ ನಮಗೆ ಗೋಚರವಾಗುತ್ತದೆ.

Saturday, November 16, 2013

Shrimad BhAgavata in Kannada -Skandha-02-Ch-02(2)

ಭಗವಂತ ಎಲ್ಲಾ ಶಬ್ದಗಳಿಂದ ವಾಚ್ಯನಾದವನು. ಏಕೆಂದರೆ ಆತ ಸರ್ವಗುಣಪೂರ್ಣ. ಆದರೆ ಇದನ್ನು ಅರಿಯದೇ ನಾವಿಂದು ಪ್ರತಿಯೊಂದು ಶಬ್ದಗಳನ್ನೂ ಅಪೂರ್ಣ ಅರ್ಥದಲ್ಲಿ ಅಥವಾ ಅಪಾರ್ಥದಲ್ಲಿ ಬಳಸಿಕೊಂಡು ಬದುಕುತ್ತಿದ್ದೇವೆ. ಯಾವ ಶಬ್ದನಿಷ್ಪತ್ತಿಯೂ(Etymological meaning) ತಿಳಿಯದೇ, ಕೇವಲ ವ್ಯಾವಹಾರಿಕವಾಗಿ ಶಬ್ದಗಳನ್ನು ಬಳಸುತ್ತಿದ್ದೇವೆ. ಉದಾಹರಣೆಗೆ ಒಂದು ಮಗುವಿಗೆ ‘ವಿದ್ಯಾರತ್ನಾಕರ’  ಎನ್ನುವ ಹೆಸರಿಡುತ್ತೇವೆ. ಆದರೆ ಆತ  ಶುಂಠನಾಗಿ ಬೆಳೆಯುತ್ತಾನೆ. ಅಲ್ಲಿ ವಿದ್ಯೆ ಇಲ್ಲ, ರತ್ನ ಇಲ್ಲ, ಆಕರವೂ ಇಲ್ಲ. ಇಂತಹ ಸಂದರ್ಭದಲ್ಲಿ ಆ ಹೆಸರು ಕೇವಲ ಕರೆದಾಗ ಓಗೊಡಲು ಇರುವ ವ್ಯಾವಹಾರಿಕ ಶಬ್ದವಷ್ಟೇ ಆಗುತ್ತದೆ.  ಹೀಗೆ ಲೋಕದ ವಿಷಯದಲ್ಲಿ ವ್ಯರ್ಥವಾಗಿ ಕೇವಲ ಸಂಕೇತವಾದ  ಪದ ಭಗವಂತನ ನಾಮವಾದಾಗ ಮಾತ್ರ ಸಾರ್ಥಕವಾಗುತ್ತದೆ. ಕೇವಲ ವ್ಯಾವಹಾರಿಕ ಪ್ರಪಂಚದಲ್ಲಷ್ಟೇ ಅಲ್ಲ, ವೈದಿಕ ವಾಙ್ಮಯದಲ್ಲೂ ಅಷ್ಟೇ. ಉದಾಹರಣೆಗೆ ಯಜ್ಞದಲ್ಲಿ ಆಹುತಿ ಕೊಡುವಾಗ “ಅಗ್ನಯೇ ಸ್ವಾಹಾ ಅಗ್ನಯ ಇದಂ ನ ಮಮ; ಇಂದ್ರಾಯ ಸ್ವಾಹಾ ಇಂದ್ರಾಯ ಇದಂ ನ ಮಮ” , ಇತ್ಯಾದಿ ಮಂತ್ರ ಹೇಳಿ ಆಹುತಿ ಕೊಡುತ್ತೇವೆ. ಇಲ್ಲಿ ಹೇಳುವ ‘ಇಂದ್ರ’ ದೇವಲೋಕದ ದೇವೇಂದ್ರ ಎಂದು ತಿಳಿದು ನಾವು ಆಹುತಿ ಕೊಟ್ಟರೆ ಅದು ವ್ಯರ್ಥ! ಏಕೆಂದರೆ ‘ಇಂದ್ರ’ ಶಬ್ದದ ಅರ್ಥ ‘ಸರ್ವಸಮರ್ಥ’. ದೈತ್ಯ-ದಾನವರು ದಾಳಿ ಮಾಡಿದಾಗ ಓಡಿಹೋಗುವ ದೇವೇಂದ್ರ ಸರ್ವಸಮರ್ಥನಲ್ಲ. ಹಾಗಾಗಿ ಈ ಮಂತ್ರದಲ್ಲಿ ‘ಇಂದ್ರ’ ಎಂದರೆ ಇಂದ್ರನೊಳಗೆ ಅಂತರ್ಯಾಮಿಯಾಗಿ ನಿಯಮಿಸುತ್ತಿರುವ ಭಗವಂತ ಎಂದರ್ಥ. ಈ ರೀತಿ ಪ್ರತಿಯೊಂದು ಶಬ್ದದ ಅರ್ಥ ತಿಳಿದು ವೇದಮಂತ್ರವನ್ನು ಹೇಳಿ ಹೋಮ-ಹವನ ಮಾಡಿದಾಗ ಅದು ಸಾರ್ಥಕ. ಪ್ರತಿಯೊಂದು ಶಬ್ದದ ಪೂರ್ಣಾರ್ಥ ಕೇವಲ ಭಗವಂತನಲ್ಲಿ ಕೂಡುತ್ತದೆ ಹೊರತು ಇನ್ನೆಲ್ಲೂ ಅಲ್ಲ. ಇದಕ್ಕಾಗಿ “ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ” ಎಂದಿದ್ದಾರೆ. ನಾವು ಯಾವ ದೇವತೆಗೆ ನಮಸ್ಕಾರ ಮಾಡಿದರೂ ಅದು ಸಲ್ಲುವುದು ಆ ದೇವತೆ ಒಳಗಿರುವ ಭಗವಂತನಿಗೆ. ಇದಕ್ಕೆ ಶಾಸ್ತ್ರಕಾರರು ಕೊಟ್ಟಿರುವ ಉದಾಹರಣೆ ಅದ್ಭುತವಾಗಿದೆ. ಆಕಾಶಾತ್ ಪತಿತಂ ತೋಯಂ | ಯಥಾ ಗಚ್ಛತಿ ಸಾಗರಂ | ಆಕಾಶದಿಂದ ಮಳೆಯಾಗಿ ಸುರಿಯುವ ನೀರು ತೋಡಲ್ಲೇ ಬೀಳಲಿ, ನದಿಯಲ್ಲೇ ಬೀಳಲಿ, ಆದರೆ  ಅದು  ಕೊನೆಗೆ ಹೋಗಿ ಸೇರಬೇಕಾದ ತಾಣ-ಸಮುದ್ರ. ಇದೇ ರೀತಿ ಮಧ್ಯದಲ್ಲಿ ಅವಾಂತರ ದೇವತೆಗಳು ಯಾರೇ ಇದ್ದರೂ, ಎಲ್ಲಾ ಸ್ತೋತ್ರಗಳು, ನಮಸ್ಕಾರಗಳು ಕೊನೆಗೆ ಹೋಗಿ ಸೇರಬೇಕಾಗಿರುವುದು ಭಗವಂತನನ್ನು.  ಸಂಧ್ಯಾವಂದನೆಯಲ್ಲಿ ಬಳಸುವ ಮಂತ್ರಗಳು ಇದನ್ನೇ ಪ್ರತಿಪಾದಿಸುತ್ತವೆ. ಭಾಗವತದಲ್ಲೇ ಹೇಳುವಂತೆ ಗುಹಾಶಯಾಯೈವ ನ ದೇಹಮಾನಿನೇ(೪-೪-೨೨). ನಾವು ನಮಸ್ಕರಿಸುವುದು ಯಾವುದೇ ದೇಹಾಭಿಮಾನಿಗಲ್ಲ(ಜೀವನಿಗಲ್ಲ), ಬದಲಿಗೆ ಆತನ ಹೃದಯ ಗುಹೆಯಲ್ಲಿರುವ ಭಗವಂತನಿಗೆ.  ಹೀಗೆ ನಾವು ಮಾಡುವ ಸ್ತೋತ್ರ, ಆಹುತಿ, ನಮಸ್ಕಾರ ಎಲ್ಲವೂ ಪೂರ್ಣಪ್ರಮಾಣದಲ್ಲಿ ಸಲ್ಲಬೇಕಾಗಿರುವುದು ಆ ನಾರಾಯಣನಿಗೆ. ಇದನ್ನೇ ಬೃಹದಾರಣ್ಯಕ ಉಪನಿಷತ್ತಿನ ಅಂತರ್ಯಾಮಿ ಬ್ರಾಹ್ಮಣ ವಿವರಿಸುತ್ತಾ, ಪ್ರತಿಯೊಂದು ಮಂತ್ರವನ್ನೂ   “ಏಷ ತೇ ಆತ್ಮಾ ಅಂತರ್ಯಾಮಿ ಅಮೃತಃ ಎಂದು ಉಪಸಂಹಾರ ಮಾಡುವುದನ್ನು ಕಾಣುತ್ತೇವೆ. “ಆದರೆ ಅಜ್ಞಾನದ ಬೇಲಿಯಲ್ಲಿ ಸಿಲುಕಿರುವ ಮನುಷ್ಯ ಎಲ್ಲದರೊಳಗೂ ಅಂತರ್ಯಾಮಿಯಾಗಿ ಭಗವಂತನಿದ್ದಾನೆ ಎನ್ನುವ ಅರಿವಿಲ್ಲದೇ ಯಾವುದ್ಯಾವುದೋ ಕ್ಷುದ್ರ ದೇವತೆಗಳ ಬೆನ್ನು ಹತ್ತುತ್ತಿದ್ದಾನೆ” ಎಂದಿದ್ದಾರೆ ಶುಕಾಚಾರ್ಯರು.
ಶುಕಾಚಾರ್ಯರು ಹೇಳುತ್ತಾರೆ: “ಪ್ರಕೃತಿಯ ಮೋಹಕ್ಕೊಳಗಾದ ಮನುಷ್ಯ ಕೇವಲ ಪ್ರಾಪಂಚಿಕ ಸಂಸ್ಕಾರದಲ್ಲೇ ಮುಳುಗಿ, ಶಬ್ದಗಳನ್ನು ಅಪಾರ್ಥವಾಗಿಯೋ ಅಥವಾ ಅಪೂರ್ಣ ಅರ್ಥದಲ್ಲೋ ಉಪಯೋಗಿಸುತ್ತಿದ್ದಾನೆ” ಎಂದು. ಹೀಗಾಗಿ ಇಂದು ನಿಜವಾದ ಶಬ್ದಾರ್ಥವನ್ನು ಹೇಳಿದರೆ ಅದನ್ನು ನಂಬುವವರೂ ಇಲ್ಲ! ಇಷ್ಟೇ ಅಲ್ಲದೆ, ಅನೇಕ ಶಬ್ದಗಳ ಅರ್ಥ ಪ್ರಾಪಂಚಿಕವಾಗಿ ಸಂಕುಚಿತವಾಗುತ್ತಿದೆ. ಉದಾಹರಣೆಗೆ ‘ಪುರುಷ’ ಎನ್ನುವ ಪದ. ಇದರ ಸೂಕ್ಷ ಅರ್ಥ ‘ಭಗವಂತ’ ಎಂದಾದರೂ, ಪ್ರಾಪಂಚಿಕ ಅರ್ಥ ಮಾನವ ಶರೀರದೊಳಗಿರುವ ಜೀವ ಎನ್ನುವುದು. ಆದರೆ ಇಂದು ಪ್ರಾಪಂಚಿಕ ಅರ್ಥವೂ ಸಂಕುಚಿತಗೊಂಡು ಕೇವಲ ‘ಗಂಡಸು’ ಎನ್ನುವ ಅರ್ಥದಲ್ಲಿ ಇದು ಸಾಮಾಜದಲ್ಲಿ ಬಳಕೆಯಲ್ಲಿದೆ. ಹೀಗೆ ಸಾಮಾಜಿಕ ಪ್ರಭಾವದಿಂದ ಶಬ್ದಗಳು ತಮ್ಮ ಅರ್ಥವ್ಯಾಪ್ತಿಯನ್ನು ಕಳೆದುಕೊಳ್ಳುತ್ತಿವೆ. ಹೀಗೆ ಶಬ್ದದ ಅಪೂರ್ಣ-ಅರ್ಥ ಮತ್ತು ಸಂಕುಚಿತ-ಅರ್ಥದೊಂದಿಗೆ ವೇದಾರ್ಥ ಚಿಂತನೆ ಮಾಡಿದಾಗ ಎಲ್ಲವೂ ಅಪಾರ್ಥವಾಗುತ್ತದೆ.

ಎಷ್ಟೋ ಜನ್ಮಗಳ ಪ್ರಾಪಂಚಿಕ ಸಂಸ್ಕಾರದಿಂದಾಗಿ ಬಂದಿರುವ  ಅಜ್ಞಾನವೆಂಬ ಮಂಚದಲ್ಲಿ ಮಲಗಿದವನಿಗೆ ಜ್ಞಾನ ಬೇಡವಾಗುತ್ತದೆ. ಇದರಿಂದಾಗಿ ‘ಎಲ್ಲಾ ಶಬ್ದವೂ ಭಗವಂತನನ್ನು ಹೇಳುತ್ತದೆ’ ಎನ್ನುವ ಸತ್ಯ ತಿಳಿದಾಗ ಆಗುವ ಆನಂದ ಆತನಿಗೆ ಬೇಡವಾಗುತ್ತದೆ. ಆತ ತನ್ನ  ಅಜ್ಞಾನದಲ್ಲೇ ಆನಂದ ಪಡುತ್ತಿರುತ್ತಾನೆ. ಇದನ್ನೇ ಪಾಶ್ಚಾತ್ಯರು ‘Ignorance is bliss” ಎಂದು ಕರೆದರು.  ಆದರೆ ನಿಜವಾದ ಜ್ಞಾನಿಗೆ  ಸರ್ವಶಬ್ದಗಳೂ ಭಗವಂತನನ್ನು ಹೇಳುತ್ತವೆ ಎನ್ನುವ ಸತ್ಯದ ಅರಿವು ಅಮೃತಪಾನದಂತೆ.   

Friday, November 15, 2013

Shrimad BhAgavata in Kannada -Skandha-02-Ch-02(1)

ದ್ವಿತೀಯೋSಧ್ಯಾಯಃ


ಶ್ರೀಶುಕ ಉವಾಚ--
ಶಬ್ದಸ್ಯ ಹಿ ಬ್ರಹ್ಮಣ ಏಷ ಪಂಥಾ ಯನ್ನಾಮಭಿರ್ಧ್ಯಾಯತಿ ಧೀರಪಾರ್ಥೈಃ
ಪರಿಭ್ರಮಂಸ್ತತ್ರ ನ ವಿಂದತೇಽರ್ಥಾನ್ಮಾಯಾಮಯೇ ವಾಸನಯಾ ಶಯಾನಃ ೦೨

ಧ್ಯಾನ ಪ್ರಕ್ರಿಯೆಯನ್ನು ವಿವರಿಸುತ್ತಾ ಶುಕಾಚಾರ್ಯರು ಇಲ್ಲಿ ಒಂದು ವಿಶೇಷ ಹಾಗೂ ಅತ್ಯಂತ ಮಹತ್ತರವಾದ ವಿಷಯವನ್ನು ಪರೀಕ್ಷಿತನಿಗೆ ವಿವರಿಸುವುದನ್ನು ಕಾಣುತ್ತೇವೆ. ಧ್ಯಾನ ಸಾಧನೆ ಮಾಡುತ್ತಾ-ಮಾಡುತ್ತಾ ಮುಂದುವರಿದು ಪ್ರಪಂಚದಲ್ಲಿನ ಎಲ್ಲಾ ಶಬ್ದಗಳಲ್ಲಿ ಭಗವಂತನನ್ನು ಕಾಣಬೇಕು ಎಂದಿದ್ದಾರೆ ಶುಕಾಚಾರ್ಯರು. ಇಲ್ಲಿ  ಶಬ್ದ ಎಂದರೆ ಕೇವಲ ಸಂಸ್ಕೃತ ಶಬ್ದವಷ್ಟೇ ಅಲ್ಲ, ಪ್ರಪಂಚದ ಎಲ್ಲಾ ಭಾಷೆಯ ಎಲ್ಲಾ ಶಬ್ದಗಳು, ಜೊತೆಗೆ ಪ್ರಾಣಿ-ಪಕ್ಷಿಗಳ ಮತ್ತು ಪ್ರಕೃತಿಯ ನಾದ (ಪಕ್ಷಿಗಳ ಚಿಲಿಪಿಲಿ, ಪ್ರಾಣಿಗಳ ಕೂಗು, ನೀರಿನ ಝುಳು-ಝುಳು, ಸಮುದ್ರದ ಮೊರೆತ, ಗಾಳಿಯ ಸುಯಿಲು, ಎಲೆಗಳ ಮರ್ಮರ), ಎಲ್ಲದರಲ್ಲೂ ಭಗವಂತನನ್ನು ಕಾಣಬೇಕು. ಇದನ್ನೇ ಐತರೇಯ ಅರಣ್ಯಕದಲ್ಲಿ ಹೀಗೆ ಹೇಳಿದ್ದಾರೆ:  ಸರ್ವೇ ಘೋಷಾಃ ಸರ್ವೇ ವೇದಾಃ ಸರ್ವಾಃ ರಚಃ ಎಕೈವ ವ್ಯಾಹೃತಿಃ”  ಕೇವಲ ಶಬ್ದಗಳಿಗೆ ಮಾತ್ರ ಅರ್ಥವಿರುವುದಲ್ಲ, ನಾದಗಳಿಗೂ ಅರ್ಥವಿದೆ. ನಾದದಿಂದ ಒಂದು ಮಾತಿಗೆ ಹೊಸ ಅರ್ಥ ಬರುತ್ತದೆ. ಪ್ರತಿ ಮಾತಿನಲ್ಲೂ ಒಂದು ಸಂಗೀತವಿದೆ. ನಾದ ಸಂಯೋಜನೆ ಇಲ್ಲದೇ ಭಾವಾಭಿವ್ಯಕ್ತಿ ಆಗುವುದೇ ಇಲ್ಲ.  ವಾಸ್ತವವಾಗಿ ಶಬ್ದಗಳಿಗೆ ಅರ್ಥ ಹುಟ್ಟುವುದೇ ನಾದದಿಂದ. ಆದ್ದರಿಂದ ನಾದವೂ ಕೂಡಾ ಒಂದು ಪ್ರತ್ಯೇಕ ಭಾಷೆ. ಹೀಗಾಗಿ ಋಗ್ವೇದ-ಯಜುರ್ವೇದದ ಮಂತ್ರಗಳೇ ಇರುವ ಸಾಮವೇದ ಅಲ್ಲಿರುವ ನಾದದಿಂದಾಗಿ  ಪ್ರತ್ಯೇಕ ವೇದ ಶಾಖೆಯಾಯಿತು. ಅದು ಸಂಗೀತದ ಭಾಷೆಯಲ್ಲಿ ಭಗವಂತನನ್ನು ಸ್ತೋತ್ರ ಮಾಡುವ ವೇದಶಾಖೆ. 
ಸಂಗೀತದಲ್ಲಿ ಇಂದು ಅನೇಕ ಸಂಗತಿಗಳು ಮರೆತು ಹೋಗಿವೆ. ಹಿಂದೂಸ್ತಾನಿ ಸಂಗೀತದಲ್ಲಿ  ಆಲಾಪ ಮಾಡುವಾಗ ‘ನೋಂ-ನೋಂ’ ಎನ್ನುತ್ತಾರೆ. ಇದು ‘ನಮೋ ನಾರಾಯಣಾಯ’ ಎನ್ನುವುದರ ಸಂಕ್ಷೇಪಪದ(abbreviation). ಇದೇ ರೀತಿ ತಬಲಾ/ಮೃದಂಗ ಬಾರಿಸುವಾಗ ಅದಕ್ಕೆ ಅನುಕರಣೆ ಮಾಡುವ ಅನೇಕ ಧ್ವನಿಗಳಿವೆ. ಉದಾಹರಣೆಗೆ: ಧಿಮಿತ ಧಿಮಿತ ಧಿಮಿ, ಧಿಮಿಕಿಟ ಕಿಟತೊಂ, ತೋಂ ತೋಂ ತರಿಕಿಟ, ತರಿಕಿಟ ಕಿಟತೊಂ..ಇತ್ಯಾದಿ. ಆದರೆ ಈ ಧ್ವನಿಯ ಹಿಂದಿನ ಅರ್ಥ ಏನು ಎನ್ನುವುದು ಇಂದು ಖಚಿತವಾಗಿ ನಮಗೆ ಗೊತ್ತಿಲ್ಲ. ಇಲ್ಲಿ ತರಿಕಿಟ ಎನ್ನುವಲ್ಲಿ ಕರಿಕಿಟ ಅಥವಾ ಇನ್ನೇನೋ ಹೇಳುವಂತಿಲ್ಲ. ಏಕೆಂದರೆ ಈ ಎಲ್ಲಾ ಧ್ವನಿಯ ಹಿಂದೆ ಒಂದು ಅಪೂರ್ವವಾದ ಆಧ್ಯಾತ್ಮಿಕ ಅರ್ಥ ಚಿಂತನೆ ಅಡಗಿದೆ.  
ವಿಶ್ವದಲ್ಲಿ ವಿರಾಟ್ ಪುರುಷನಾಗಿ ತುಂಬಿರುವ ಭಗವಂತನೇ ಎಲ್ಲಾ ಶಬ್ದಗಳಿಗೂ ಕೊನೇಯ ಆಸರೆ. ಯಾವ ಶಬ್ದವೇ ಇರಲಿ, ಅದು ಅಂತತಃ ಭಗವಂತನ ನಾಮವೇ ಆಗಿರುತ್ತದೆ. ಪ್ರತಿಯೊಂದು ಶಬ್ದದ ಮೂಲತತ್ತ್ವ/ಸಾರ(essence) ಆ ಭಗವಂತ. ಉದಾಹರಣೆಗೆ ಆತ್ಮ. ಆತ್ಮ ಎನ್ನುವುದರ ಸ್ಥೂಲ ಅರ್ಥ ದೇಹ. ಆದರೆ ಇನ್ನೂ ಆಳಕ್ಕೆ ಹೋದರೆ ಆತ್ಮ ಎಂದರೆ ಮನಸ್ಸು, ಚಿತ್ತ, ಚೇತನ, ಇತ್ಯಾದಿ. ಆದರೆ ಎಲ್ಲಕ್ಕಿಂತ ಸೂಕ್ಷ್ಮವಾಗಿ ನೋಡಿದರೆ ಆತ್ಮ ಎಂದರೆ ಪರಮಾತ್ಮ. ಇದೇ ರೀತಿ ನಾವು ‘ಇವರು ಇಂತವರು’ ಎಂದು ಒಬ್ಬ ವ್ಯಕ್ತಿಯ ಶರೀರವನ್ನು ತೋರಿಸುತ್ತೇವೆ. ಆದರೆ ನಾವು ತೋರಿಸುವುದು ಕೇವಲ ಆ ವ್ಯಕ್ತಿಯ ಶರೀರವನ್ನಲ್ಲ; ಶರೀರದೊಳಗಿರುವ ಚೇತನ ಹಾಗೂ ಅಂತತಃ  ಚೇತನದೊಳಗಿರುವ ಬಿಂಬ ರೂಪಿ ಭಗವಂತನನ್ನು.  ಹೀಗೆ ಪ್ರತಿಯೊಂದು ಶಬ್ದ ಅಂತತಃ ಭಗವಂತನನ್ನೇ ಹೇಳುತ್ತದೆ. ಆದರೆ ಅದನ್ನು ಸೂಕ್ಷ್ಮವಾಗಿ ಗ್ರಹಿಸುವ ಶಕ್ತಿ ನಮಗೆ ಬೇಕು. ಹೇಗೆ ಪ್ರಹ್ಲಾದನಿಗೆ ಕಂಬದೊಳಗೆ ಭಗವಂತನನ್ನು ಕಂಡನೋ ಹಾಗೇ ನಾವೂ ಕೂಡಾ ಪ್ರತೀ ಶಬ್ದ-ನಾದದಲ್ಲಿ ಭಗವಂತನನ್ನು ಕಾಣಬೇಕು.
ಎಲ್ಲಾ ನಾದಗಳೂ ಭಗವಂತನನ್ನು ಹೇಳುತ್ತವೆ ಎನ್ನುವುದು ಒಂದು ರೋಚಕವಾದ ಸಂಗತಿ. ವೇದದಲ್ಲಿ ಉದಾತ್ತ, ಅನುದಾತ್ತ, ಸ್ವರಿತ ಹಾಗೂ ಪ್ರಚಯ ಎನ್ನುವ ನಾಲ್ಕು  ಸ್ವರಗಳನ್ನು ಕಾಣುತ್ತೇವೆ(ಸಾಮವೇದದಲ್ಲಿ ಸಪ್ತ ಸ್ವರಗಳಿವೆ). ಈ ನಾಲ್ಕು ಸ್ವರಗಳಿಗೆ ಅದರದ್ದೇ ಆದ ವಿಶೇಷ ಅರ್ಥವಿದೆ. ಅನುದಾತ್ತ ಎಂದರೆ ಸ್ವರವನ್ನು ಕೆಳಕ್ಕೆ ಒತ್ತುಕೊಟ್ಟು ಹೇಳುವುದು. ಹಾಗಾಗಿ ಇದು ದಾರ್ಢ್ಯ(confirmation)ವನ್ನು ಹೇಳುತ್ತದೆ.[ ಉದಾಹರಣೆಗೆ ‘ಖಂಡಿತ’ ಎನ್ನುವ ಪದ. ಈ ಪದದಲ್ಲಿ  ‘ಖ’ ಅನುದಾತ್ತ ಮತ್ತು ಇದು ನಿಶ್ಚಿತತೆಯನ್ನು ಹೇಳುತ್ತದೆ]. ಉದಾತ್ತದಲ್ಲಿ ಮೇಲಕ್ಕೆ ಒತ್ತುಕೊಡಲಾಗುತ್ತದೆ. ಹಾಗಾಗಿ ಇದು ‘ಉಚ್ಚತೆ’ಯನ್ನು ಹೇಳುತ್ತದೆ. ಹೀಗೇ  ಸ್ವರಿತ ನೀಚತ್ವವನ್ನೂ ಹಾಗೂ ಪ್ರಚಯ ಯಥಾಸ್ಥಿತಿಯನ್ನೂ ಹೇಳುತ್ತದೆ.  ಇಂತಹ ಸ್ವರ ಪ್ರಕ್ರಿಯೆ ಎಲ್ಲಾ ಭಾಷೆಗಳಿಗೂ ಅನ್ವಯ. ಆದರೆ ಇದನ್ನು  ವೇದದಲ್ಲಿ  ಕಡ್ಡಾಯವಾಗಿ ಉಳಿಸಿಕೊಂಡಿದ್ದಾರೆ. ಉದಾಹರಣೆಗೆ ಋಗ್ವೇದದ ಮೊದಲ ಮಂತ್ರ  “ಅಗ್ನಿಮೀಳೇ ಪುರೋಹಿತಂ” ಎನ್ನುವಲ್ಲಿ ಅಗ+ನಿ=ಅಗ್ನಿ. ಅಂದರೆ ಸ್ವತಃ ಚಲಿಸಲಾಗದ ವಸ್ತುವಿಗೆ ಚಾಲನೆ ಕೊಡುವ ಶಕ್ತಿ.  ಇಲ್ಲಿ ‘ಅಗ’ ಎನ್ನುವಲ್ಲಿ ‘ಅ’ ಅನುದಾತ್ತವಾಗಿದ್ದು  ಅದು ‘ಸ್ವತಃ ಚಲಿಸಲಾಗದ್ದು’ ಎನ್ನುವುದನ್ನು ಧೃಡೀಕರಿಸುತ್ತದೆ. ಅಂದರೆ ‘ನಿಶ್ಚಿತವಾಗಿ ಎಂದೆಂದೂ ಸ್ವತಃ ಚಲಿಸಲಾಗದ್ದು’ ಎಂದರ್ಥ. ಇನ್ನು ಚಲನೆ ಕೊಡುವ ಶಕ್ತಿಯನ್ನು ಹೇಳುವ ‘ನಿ’ಯಲ್ಲಿ ಬರುವ ‘ಇ’ ಉದಾತ್ತ. ಇದು ಸ್ವತಃ ಚಲನೆ ಇಲ್ಲದ ವಸ್ತುವಿಗೆ ಚಾಲನೆ ಕೊಡುವ ಶಕ್ತಿಯ(ಭಗವಂತನ) ಉಚ್ಛತೆಯನ್ನು ಹೇಳುತ್ತದೆ. ಅಂದರೆ-“ಅದು(ಭಗವಂತ) ಬಹಳ ದೂಡ್ಡ(ಉಚ್ಛ) ಸಂಗತಿ ಹಾಗಾಗಿ ಅದು ಚಲಿಸಲಾಗದ ವಸ್ತುವಿಗೂ ಚಲನೆ ಕೊಟ್ಟಿತು” ಎನ್ನುವುದನ್ನು ಹೇಳುತ್ತದೆ. ಇನ್ನು  ಮೀಳೇ ಎನ್ನುವಲ್ಲಿ ಬಂದಿರುವ ಸ್ವರಿತ(‘ಈ’) ಹಾಗೂ ಪ್ರಚಯ(‘ಎ’) ಕ್ರಮವಾಗಿ ನೀಚತ್ವ ಮತ್ತು ಯಥಾಸ್ಥಿತಿಯನ್ನು ಹೇಳುತ್ತದೆ. “ಚಲನಶೀಲವಲ್ಲದ ಸಮಸ್ತ ಪ್ರಪಂಚಕ್ಕೆ ಉಚ್ಛನಾದ ನೀನು, ಈ ಪ್ರಪಂಚಕ್ಕೆ ಚಲನೆ ಕೊಟ್ಟೆ.  ನಿನ್ನನ್ನು ನಾನು ಸ್ತೋತ್ರ ಮಾಡುತ್ತಿದ್ದೇನೆ. ಏಕೆಂದರೆ ನಿನ್ನ ಮುಂದೆ ನಾನು ಅತ್ಯಂತ ಸಣ್ಣವ(ನೀಚ). ನೀನು ಉಚ್ಛ ಹಾಗೂ ನಿನ್ನ ಮುಂದೆ ನಾನು ಸಣ್ಣವಸ್ತು. ಇದು ಯಥಾಸ್ಥಿತಿ ಮತ್ತು ಇದೆಂದೂ ಬದಲಾಗುವುದಿಲ್ಲ”. ಇದು ನಾಲ್ಕು ಅಕ್ಷರಗಳಲ್ಲಿ ನಮಗೆ ವೇದ ಸ್ವರದ ಮೂಲಕ ತಿಳಿಸುವ ಅರ್ಥ. ನಾದದಿಂದಲೇ ಮಂತ್ರಕ್ಕೆ ವಿಶೇಷ ಅರ್ಥ ಬರುವುದರಿಂದ ಸರಿಯಾದ ಸ್ವರವನ್ನು ಬಳಸದೇ ವೇದ ಮಂತ್ರ ಪಠಿಸುವಂತಿಲ್ಲ. ಹೀಗೆ ಇಡೀ ವೇದ ಒಂದು ವಿಶೇಷ ಅರ್ಥವನ್ನು ನಾದದ ಮುಖೇನ ನಮಗೆ ನೀಡುತ್ತದೆ.
ಸಂಗೀತಮಯವಾಗಿರುವ ಸಾಮವೇದವನ್ನು ಪಠಿಸುವವರು ನಡುವೆ ಅನೇಕ ಸ್ತೋಭಾಕ್ಷರಗಳನ್ನು ಬಳಸುವುದನ್ನು ಕಾಣುತ್ತೇವೆ. (ಉದಾಹರಣೆಗೆ ಹಾ..ವು...ಹಾ..ವು.) ಈ ಸ್ತೋಭಾಕ್ಷರದಲ್ಲಿ ಬರುವ ‘ಹ’ಕಾರ ವಿಸ್ಮಯ-ಆನಂದ-ವಿಭ್ರಮವನ್ನು ಹೇಳುತ್ತದೆ. ಭಗವಂತ ಅದೆಷ್ಟು ಅಚ್ಚರಿ, ಅದೆಂತಹ ಆನಂದ, ಎಂಥಾ ವಿಸ್ಮಯ.. ಇತ್ಯಾದಿ ಉದ್ಗಾರ ನಾದದಲ್ಲೇ ಬಂದು ಬಿಡುತ್ತದೆ.
ಪ್ರಕೃತಿಯಲ್ಲಿನ ಎಲ್ಲಾ ನಾದದಲ್ಲಿ ಭಗವಂತನನ್ನು ಕಾಣುವುದು ಹೇಗೆ ಎನ್ನುವುದನ್ನು ಎನ್ನುವುದನ್ನು ವಿವರಿಸಲು  ಆಚಾರ್ಯ ಮಧ್ವರು ಕೊಟ್ಟ ಒಂದು ಉದಾಹರಣೆಯನ್ನು ನೋಡಿದರೆ,   ನಮಗೆ ನಾದದಲ್ಲಿ ಭಗವಂತನನ್ನು ಹೇಗೆ ಕಾಣಬಹುದು ಎನ್ನುವುದು ಕಿಂಚಿತ್ ಅರ್ಥವಾಗಬಹುದು. ನಮಗೆ ತಿಳಿದಂತೆ ಆಗಾಗ ನಮ್ಮ ಮನೆಗಳಲ್ಲಿ ಹಲ್ಲಿ ಲೊಚಗುಟ್ಟುತ್ತಿರುತ್ತದೆ. ಇದನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ, ನಾವೂ ಕೂಡಾ ನಮಗೆ ಬಹಳ ಆಶ್ಚರ್ಯವಾದಾಗ ‘ಅದ್ಭುತ’ ಎನ್ನುವುದನ್ನು ವ್ಯಕ್ತಪಡಿಸಲು ನಮ್ಮ ಬಾಯಿಯಿಂದ  ಹಲ್ಲಿಯಂತೆ ಶಬ್ದ ಮಾಡುತ್ತೇವೆ. ಈ ರೀತಿ ಸಂಬಂಧಕಲ್ಪಿಸಿ ಯೋಚಿಸಿದರೆ:  “ಭಗವಂತ ಅದ್ಭುತ” ಎನ್ನುವುದು ಹಲ್ಲಿಯ ನಾದದ ಅರ್ಥ! ಹೀಗೆ ಭಗವಂತನನ್ನು ಹೇಳದೇ ಇರುವ ಒಂದು ಶಬ್ದ, ಒಂದು ನಾದ ಈ ಪ್ರಪಂಚದಲ್ಲಿಲ್ಲ.

Sunday, November 10, 2013

Shrimad BhAgavata in Kannada -Skandha-02-Ch-01(9)

ಬ್ರಹ್ಮಾಂಡದಲ್ಲಿ ಭಗವಂತನ ರೂಪಚಿಂತನೆ

ವಿಶೇಷಸ್ತಸ್ಯ ದೇಹೋSಯಂ ಸ್ಥವಿಷ್ಠಶ್ಚ ಸ್ಥವೀಯಸಾಮ್
ಯತ್ರೇದಂ ದೃಶ್ಯತೇ ವಿಶ್ವಂ ಭೂತಂ ಭವ್ಯಂ ಭವಚ್ಚ ಯತ್  ೨೪

ಭಗವಂತನ ಸ್ಥೂಲ ರೂಪದ ಉಪಾಸನೆಯನ್ನು ವಿವರಿಸುತ್ತಾ ಶುಕಾಚಾರ್ಯರು ಹೇಳುತ್ತಾರೆ: “ಈ ಬ್ರಹ್ಮಾಂಡ ಆತನ ಅತ್ಯಂತ ದೊಡ್ಡ ಸ್ಥೂಲ ಪ್ರತೀಕ” ಎಂದು.  ಇಲ್ಲಿ ‘ವಿಶೇಷ’ ಎನ್ನುವ ಪದವನ್ನು ಬಳಸಲಾಗಿದೆ. ವೈದಿಕ ಸಂಸ್ಕೃತದಲ್ಲಿ  ‘ವಿಶೇಷ’ ಎಂದರೆ ಭೂಮಿ. ಪಂಚಭೂತಗಳಲ್ಲಿ ವಿಶೇಷವಾಗಿ ಎಲ್ಲಾ ಗುಣಗಳು(ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ) ಅಭಿವ್ಯಕ್ತವಾಗುವುದು ಪೃಥ್ವಿಯಲ್ಲಿ.  ಹಾಗಾಗಿ  ಭೂಮಿಯನ್ನು ‘ವಿಶೇಷ’ ಎಂದೂ ಕರೆಯುತ್ತಾರೆ. ಬ್ರಹ್ಮಾಂಡ ಕೂಡಾ ಪಾರ್ಥಿವವಾಗಿರುವುದರಿಂದ ಅದನ್ನೂ ಕೂಡಾ ‘ವಿಶೇಷ’ ಎಂದು ಕರೆಯುತ್ತಾರೆ. ಕೇವಲ ಭೂಮಿಯಷ್ಟೇ ಅಲ್ಲ, ಇಡೀ ಬ್ರಹ್ಮಾಂಡವೇ ಭಗವಂತನ ಪ್ರತೀಕ. ಮೇಲಿನ ಶ್ಲೋಕದಲ್ಲಿ ಬ್ರಹ್ಮಾಂಡವೇ ಭಗವಂತನ ದೇಹ ಎಂದಿದ್ದಾರೆ.  ನಾವು ಸಾಮಾನ್ಯವಾಗಿ ದೇಹ ಮತ್ತು ಶರೀರ ಎನ್ನುವ ಪದವನ್ನು ಒಂದೇ ಅರ್ಥದಲ್ಲಿ ಬಳಸುತ್ತೇವೆ. ಆದರೆ ಈ ಎರಡು ಶಬ್ದಗಳ ನಿರ್ವಚನದಲ್ಲಿ ಸ್ವಲ್ಪ ವ್ಯತ್ಯಾಸವಿದೆ. ದೇಹ ಎಂದರೆ ‘ಬೆಳೆಯುವಂತಹದ್ದು’, ಶರೀರ ಎಂದರೆ ‘ಒಂದು ದಿನ ಬಿದ್ದು ಹೋಗುವಂತಹದ್ದು’. ಭಗವಂತನಿಗೆ ನಮ್ಮಂತೆ ಸುಖ-ದುಃಖವನ್ನು ಅನುಭವಿಸುವ ಹಾಗೂ ಒಂದು ದಿನ ಬಿದ್ದುಹೋಗುವ ಶರೀರವಿಲ್ಲ. ಸ್ವರೂಪಭೂತವಾದ ದೇಹವೇ ಆತನ ನಿಜವಾದ ದೇಹ. ಆದ್ದರಿಂದ ಮೇಲಿನ ಶ್ಲೋಕದಲ್ಲಿ ದೇಹ ಎಂದರೆ ಪ್ರತೀಕ ಅಥವಾ ಅಧಿಷ್ಠಾನ ಎಂದರ್ಥ. ಮನೆಯಲ್ಲಿ ಪೂಜಿಸುವ ಶಾಲಗ್ರಾಮವೂ ಭಗವಂತನ ಪ್ರತೀಕ.  ಅಣುವಿನಲ್ಲಿ ಅಣುವಾಗಿರುವ, ಜೀವದಲ್ಲಿರುವ ಬಿಂಬರೂಪಿ ಭಗವಂತ ಸೂಕ್ಷ್ಮಾತಿ-ಸೂಕ್ಷ್ಮ ಪ್ರತೀಕವಾದರೆ, ಬ್ರಹ್ಮಾಂಡದಲ್ಲಿರುವ ಭಗವಂತ ಸ್ಥೂಲದಲ್ಲಿ ಸ್ಥೂಲ ಪ್ರತೀಕ. ಇಡೀ ಜೀವಜಾತ ಯಾವ ಬ್ರಹ್ಮಾಂಡದೊಳಗೆ ಹಿಂದೆ ಇತ್ತೋ, ಈಗ ಇದೆಯೋ, ಮುಂದೆ ಇರುತ್ತದೋ ಅಂತಹ ಇಡೀ ಜೀವಜಾತಕ್ಕೆ ಆಸರೆಯಾಗಿರುವ ಈ ಬ್ರಹ್ಮಾಂಡ ಭಗವಂತನ ಅತಿ ದೊಡ್ಡ ಪ್ರತೀಕ. ಇಂತಹ ಭಗವಂತನನ್ನು ಬ್ರಹ್ಮಾಂಡದಲ್ಲಿ ಅಂತರ್ಯಾಮಿಯಾಗಿ ಕಂಡು ಧ್ಯಾನದಲ್ಲಿ ಚಿಂತಿಸಬೇಕು.     

ಆಂಡಕೋಶೇ ಶರೀರೇSಸ್ಮಿನ್ ಸಪ್ತಾವರಣಸಂಯುತೇ
ವೈರಾಜಃ ಪುರುಷೋ ಯೋSಸೌ ಭಗವಾನ್ ಧಾರಣಾಶ್ರಯಃ  ೨೫
                       
ಪಾತಾಲಮೇತಸ್ಯ ಹಿ ಪಾದಮೂಲಂ ಪಠಂತಿ ಪಾರ್ಷ್ಣಿಪ್ರಪದೇ ರಸಾತಲಮ್
ಮಹಾತಲಂ ವಿಶ್ವಸೃಜಃ ಸುಗುಲ್ಫೌ ತಲಾತಲಂ ವೈ ಪುರುಷಸ್ಯ ಜಂಘೇ  ೨೬

ದ್ವೇ ಜಾನುನೀ ಸುತಲಂ ವಿಶ್ವಮೂರ್ತೇ ರೂರುದ್ವಯಂ ವಿತಲಂ ಚಾತಲಂ ಚ
ಮಹೀತಲಂ ತಜ್ಜಘನಂ ಮಹೀಪತೇ ನಭಸ್ತಲಂ ನಾಭಿಸರೋ ಗೃಣಂತಿ  ೨೭

ಉರಃಸ್ಥಲಂ ಜ್ಯೋತಿರನೀಕಮಸ್ಯ ಗ್ರೀವಾ ಮಹರ್ವದನಂ ವೈ ಜನೋಽಸ್ಯ
ತಪೋ ರರಾಟಿಂ ವಿದುರಾದಿಪುಂಸಃ ಸತ್ಯಂ ತು ಶೀರ್ಷಾಣಿ ಸಹಸ್ರಶೀರ್ಷ್ಣಃ  ೨೮

ಮೊಟ್ಟೆಯ ಆಕಾರದಂತೆ ಹಾಗೂ ಕಮಲದ ಮೊಗ್ಗಿನಂತಿರುವ ಬ್ರಹ್ಮಾಂಡವನ್ನು ಆಂಡಕೋಶ ಎಂದು ಕರೆಯುತ್ತಾರೆ.(ಇತ್ತೀಚೆಗಿನ ಕೊಶಗಳಲ್ಲಿ ಅಂಡಕೋಶ ಎಂದಿದೆ, ಆದರೆ ‘ಆಂಡ’ ಎನ್ನುವುದು ಪ್ರಾಚೀನ ಶಬ್ದ) ಭಗವಂತನ ನಾಭಿಯಿಂದ ಚಿಮ್ಮಿದ ನಾಭೀಕಮಲವೇ ಈ ಬ್ರಹ್ಮಾಂಡ. ಪಂಚಭೂತಗಳು, ಅಹಂಕಾರತತ್ತ್ವ ಮತ್ತು ಮಹತತ್ತ್ವಗಳೆಂಬ ಏಳು ಆವರಣಗಳು ಈ ಬ್ರಹ್ಮಾಂಡವನ್ನಾವರಿಸಿದೆ. ಅದರಲ್ಲಿ ತುಂಬಿರುವ ಭಗವಂತ ವೈರಾಜ ಪುರುಷ. ಇದೇ ಕಾರಣಕ್ಕೆ ಬ್ರಹ್ಮಾಂಡವನ್ನು ವಿರಾಠ್ ಎಂದೂ ಕರೆಯುತ್ತಾರೆ. ಈ ಬ್ರಹ್ಮಾಂಡದಲ್ಲಿ ತುಂಬಿರುವ ಭಗವಂತನನ್ನು ಹೇಗೆ ಮನಸ್ಸಿನಲ್ಲಿ ನೆಲೆಗೊಳಿಸಬೇಕು ಎನ್ನುವುದನ್ನು ಇಲ್ಲಿ ಶುಕಾಚಾರ್ಯರು ವರ್ಣಿಸಿದ್ದಾರೆ.  ಪುರುಷಸೂಕ್ತದಲ್ಲಿ ಬಂದಿರುವ ಭಗವಂತನ ರೂಪಚಿಂತನೆಯನ್ನೇ ಇಲ್ಲಿ ಭಾಗವಂತ ವರ್ಣಿಸುವುದನ್ನು ಕಾಣುತ್ತೇವೆ. ಪ್ರಾಚೀನರು ಬ್ರಹ್ಮಾಂಡವನ್ನು ಹದಿನಾಲ್ಕು ವಿಭಾಗವಾಗಿ ವಿಂಗಡಿಸಿದರು. ಅವುಗಳೆಂದರೆ: ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸಾತಳ, ಪಾತಾಳ, ಭೂಲೋಕ, ಭುವರ್ಲೋಕ, ಸುವರ್ಲೋಕ, ತಪೋಲೋಕ, ಮಹಾಲೋಕ, ಜನರ್ಲೋಕ ಮತ್ತು ಸತ್ಯಲೋಕ. ಮಧ್ಯದಲ್ಲಿ ಭೂಮಿ ಹಾಗೂ ಅದರ ಕೆಳಗೆ ಏಳು ಹಾಗೂ ಭೂಮಿ ಸಹಿತವಾಗಿ ಅದರಿಂದ ಮೇಲೆ ಏಳು ಲೋಕಗಳಿರುವ ಈ ಬ್ರಹ್ಮಾಂಡವನ್ನು ಚತುರ್ದಶ ಭುವನ ಎಂದು ಕರೆಯುತ್ತಾರೆ.  ಈ ಹದಿನಾಲ್ಕು ಲೋಕಗಳಲ್ಲಿ ಭಗವಂತನ ಅವಯವ ಚಿಂತನೆ ಹೇಗೆ ಮಾಡಬೇಕು ಎನ್ನುವುದನ್ನು ಮೇಲಿನ ಶ್ಲೋಕದಲ್ಲಿ ವರ್ಣಿಸಲಾಗಿದೆ.
ಪಾತಾಳಲೋಕ ಭಗವಂತನ ಪಾದದ ತಳಭಾಗ, ರಸಾತಳ ಲೋಕ ಆತನ ಪಾದದ ಹಿಮ್ಮಡಿ ಮತ್ತು ಮುಂಗಾಲು(ಬೆರಳಿನ ಭಾಗ). ಮಹಾತಳ ಆತನ ಪಾದದ ಮೇಲಿನ ಎರಡು ಗಂಟುಗಳು(ಮಣಿಗಂಟು), ಜಂಘೇ(ಮೀನಖಂಡ, shanks)ತಳಾತಳ. ಮೊಣಕಾಲು(Knees) ಸುತಳ ಹಾಗೂ ಎರಡು ತೊಡೆಗಳು ವಿತಳ ಮತ್ತು ಅತಳ. ಈ ರೀತಿ ಭಗವಂತನ ಪಾದದಿಂದ ಸೊಂಟದ ತನಕ ಇರತಕ್ಕಂತಹ ಭಾಗ ಕೆಳಗಿನ ಏಳು ಲೋಕಗಳಲ್ಲಿ ತುಂಬಿದೆ ಮತ್ತು ಈ ಲೋಕಗಳು ಭಗವಂತನ ಈ ಅವಯವಗಳಲ್ಲಿ ಆಶ್ರಿತವಾಗಿವೆ ಎಂದು ಚಿಂತನೆ ಮಾಡಬೇಕು.
ಭಗವಂತನ ಸೊಂಟದ ಭಾಗ ಭೂಮಿ, ಭಗವಂತನ ನಾಭಿ ಅಂತರಿಕ್ಷ, ನಾಭಿಯಿಂದ ಮೇಲಿನ ಹೃದಯದ ಭಾಗ ದೇವತೆಗಳ ಲೋಕ(ಸ್ವರ್ಗಲೋಕ), ಎದೆಯಿಂದ ಮೇಲೆ ಕುತ್ತಿಗೆ ತನಕ ಮಹರ್ಲೋಕ, ಕುತ್ತಿಗೆಯಿಂದ ಕಣ್ಣಿನ ತನಕ ಜನರ್ಲೋಕ, ರರಾಟ(ನೆತ್ತಿ/ಹುಬ್ಬು) ಸ್ಥಾನದಲ್ಲಿ ತಪೋಲೋಕ ಮತ್ತು ಸಹಸ್ರಶೀರ್ಷನಾದ ಪುರುಷನ  ಶಿರಸ್ಸು ಸತ್ಯಲೋಕದಲ್ಲಿ ತುಂಬಿದೆ. ಈ ರೀತಿ ಇಡೀ ವಿಶ್ವದಲ್ಲಿ ಭಗವಂತನ ಪಾದದಿಂದ ಶಿರಸ್ಸಿನ ತನಕ ತುಂಬಿರುವ ವಿಶ್ವರೂಪದ ಚಿಂತನೆ ಮಾಡಬೇಕು. ಆಯಾ ಲೋಕಗಳು ಭಗವಂತನ ಸ್ವರೂಪದೇಹದ ಆಯಾ ಭಾಗಗಳಿಂದ  ಉತ್ಪನ್ನವಾಗಿವೆ ಮತ್ತು ಅದರಲ್ಲಿ ಆಶ್ರಯಿಸಿಕೊಂಡಿವೆ ಎಂದು ಚಿಂತನೆ ಮಾಡಬೇಕು.
ಬ್ರಹ್ಮಾಂಡದಲ್ಲಷ್ಟೇ ಅಲ್ಲದೆ ಪಿಂಡಾಂಡದಲ್ಲಿ ಕೂಡಾ ಭಗವಂತನ ಹದಿನಾಲ್ಕು ಲೋಕಗಳ ಚಿಂತನೆ ಮಾಡಬಹುದು. ಮೂಲಭೂತವಾಗಿ ಹದಿನಾಲ್ಕು ಲೋಕಗಳನ್ನು ಮೂರು ಲೋಕವಾಗಿ ಮತ್ತು  ಏಳು ಲೋಕವಾಗಿ ಶಾಸ್ತ್ರಕಾರರು  ವಿಭಾಗಮಾಡಿ ಹೇಳುತ್ತಾರೆ. ಭೂಮಿ ಮತ್ತು ಭೂಮಿಯಿಂದ ಕೆಳಗಿನ ಲೋಕಗಳನ್ನು ಒಟ್ಟಿಗೆ ಒಂದು ಲೋಕವಾಗಿ ಕಂಡು ಅದನ್ನು ಭೂಃ ಎಂದು, ನಂತರ ಅಂತರಿಕ್ಷವನ್ನು ಭುವಃ ಎಂದೂ ಮತ್ತು ಅಲ್ಲಿಂದ ಮೇಲಕ್ಕಿರುವ ಐದು ಲೋಕಗಳನ್ನು ಸುವಃ ಎಂದು ಒಟ್ಟಿಗೆ ಮೂರು ವಿಭಾಗ ಮಾಡುತ್ತಾರೆ. ಅದೇ ರೀತಿ    ಭೂಮಿ ಹಾಗೂ ಭೂಮಿಯಿಂದ ಕೆಳಗಿನ ಲೋಕಗಳನ್ನು ಒಂದು ಲೋಕವಾಗಿ ಹಾಗೂ ಅದರ ಜೊತೆಗೆ ಮೇಲಿನ ಆರು ಲೋಕಗಳನ್ನು ಸೇರಿಸಿ ಒಟ್ಟಿಗೆ ಏಳು ಲೋಕಗಳಾಗಿ ವಿಭಾಗ ಮಾಡುತ್ತಾರೆ.  ಬ್ರಹ್ಮಾಂಡವನ್ನು ಮೂರು ಲೋಕಗಳಾಗಿ ಕಂಡಾಗ ಭಗವಂತನ ಕಾಲಿನಲ್ಲಿ ಭೂಮಿ, ನಾಭಿಯಲ್ಲಿ ಅಂತರಿಕ್ಷ ಹಾಗೂ ಶಿರಸ್ಸಿನಲ್ಲಿ ಸ್ವರ್ಗದ ಚಿಂತನೆ ಮಾಡುತ್ತಾರೆ.

ಭಗವಂತನ ಮುಖಾರವಿಂದ

ಛಂದಾಂಸ್ಯನಂತಸ್ಯ ಗಿರೋ ಗೃಣಂತಿ ದಂಷ್ಟ್ರಾರ್ಯಮೇಂದೂಡುಗಣಾ ದ್ವಿಜಾನಿ
ಹಾಸೋ ಜನೋನ್ಮಾದಕರೀ ಚ ಮಾಯಾ ದುರಂತಸರ್ಗೋ ಯದಪಾಂಗಮೋಕ್ಷಃ  ೩೧

 ಭಗವಂತನ ಮುಖದಲ್ಲೇ ಮೂರು ಲೋಕಗಳ ಚಿಂತನೆಯ ಒಂದು ಕ್ರಮವಿದೆ. ನಮಗೆ ತಿಳಿದಂತೆ ಭೂಸ್ಥಾನ ಅಗ್ನಿಯ ಸ್ಥಾನ, ಅಂತರಿಕ್ಷ ವಾಯುವಿನ ಸ್ಥಾನ  ಹಾಗೂ ಸ್ವರ್ಗ ಆದಿತ್ಯನ ಸ್ಥಾನ. ಆದ್ದರಿಂದ ವೇದದಲ್ಲಿ ‘ಭೂರ್ಭುವ ಸ್ವಃ’ ಎಂದರೆ ಅಗ್ನಿ-ವಾಯು-ಆದಿತ್ಯ ಎನ್ನುವ ಮೂರು ಪ್ರತೀಕಗಳಿಂದ ಭಗವಂತನ ಉಪಾಸನೆ. ಮುಖದಲ್ಲಿ ಅಗ್ನಿಯ ಸ್ಥಾನ-ಬಾಯಿ, ವಾಯುವಿನ ಸ್ಥಾನ-ಉಸಿರು ಮತ್ತು ಆದಿತ್ಯನ ಸ್ಥಾನ-ಕಣ್ಣು. ಹೀಗೆ ಮುಖದಲ್ಲಿ ಮೂರು ಲೋಕಗಳ ಮತ್ತು ಆ ಮೂರು ಲೋಕಗಳಲ್ಲಿ ತುಂಬಿರುವ ಭಗವಂತನ ಸ್ಥೂಲ ಚಿಂತನೆ ಮಾಡಬಹುದು.    
 ಈ ಮೇಲಿನ ಶ್ಲೋಕದಲ್ಲಿ ಶುಕಾಚಾರ್ಯರು ಭಗವಂತನ ಮುಖದ ಚಿತ್ರಣ ಕೊಡುತ್ತಾ ಹೇಳುತ್ತಾರೆ: ಸಮಸ್ತ  ವೈದಿಕ ವಾಙ್ಮಯಗಳೇ ಆತನ ನುಡಿಮುತ್ತುಗಳು; ಸೂರ್ಯ-ಚಂದ್ರರೇ ಆತನ  ಕೋರೆ ದಾಡೆಗಳು; ಅಂತರಿಕ್ಷದಲ್ಲಿರುವ ನಕ್ಷತ್ರಗಳೇ ಆತನ ಹಲ್ಲುಗಳು;  ಈ ವಿಶ್ವವನ್ನು ಮರಳುಗೊಳಿಸುವ ಮಾಯೆಯೇ ಆತನ ಮುಗುಳ್ನಗೆ; ಕೊನೆಗಾಣದ ಈ ಸೃಷ್ಟಿಯೇ ಆತನ ಕಣ್ಣನೋಟ” ಎಂದು. ಈ ರೀತಿ ಭಗವಂತನ ವಿಶ್ವರೂಪದ ಚಿತ್ರಣ ಇನ್ನೂ ವಿಸ್ತಾರವಾಗಿದೆ ಆದರೆ ನಮಗೆ ಸ್ಥೂಲವಾಗಿ ಇಷ್ಟು ತಿಳಿದಿದ್ದರೂ ಸಾಕು, ಅದನ್ನೇ ನಾವು ಧ್ಯಾನದಲ್ಲಿ ಕಾಣುವ ಪ್ರಯತ್ನ ಮಾಡಬಹುದು.  
ಗಾಯತ್ತ್ರಿ ಧ್ಯಾನ ಮಾಡುವವರಿಗೆ ಗಾಯತ್ತ್ರೀ ಪ್ರತಿಪಾದ್ಯ ನಾರಾಯಣನನ್ನು ಚಿಂತಿಸುವ ರೂಪದ ವಿವರಣೆ ಹೀಗಿದೆ: “ಉದಯಿಸಿರುತ್ತಿರುವ ಸೂರ್ಯಮಂಡಲದ ಮಧ್ಯದಲ್ಲಿ ಕಮಲದ ಮೇಲೆ ಪದ್ಮಾಸನ ಹಾಕಿ ಕುಳಿತುಕೊಂಡಿರುವವನು, ತೋಳುಗಳಲ್ಲಿ ತೋಳುಬಳೆ, ಕಿವಿಗಳಲ್ಲಿ ಮೊಸಳೆಯಾಕರದ ಕುಂಡಲಗಳು (ಮಕರ ಕುಂಡಲ), ತಲೆಯ ಮೇಲೆ ಕಿರೀಟ, ಕೊರಳಿನಲ್ಲಿ ಹಾರ ವಿರಾಜಿಸುತ್ತಿದೆ. ಎರಡು ಕೈಗಳಲ್ಲಿ ಶಂಖ-ಚಕ್ರ, ಇನ್ನೆರಡು ಕೈಗಳನ್ನು ತೊಡೆಯಮೇಲಿಟ್ಟಿರುವವನು, ಇಂತಹ ಚಿನ್ನದ ಮೈಬಣ್ಣದ ನಾರಾಯಣನನ್ನು ಧ್ಯಾನಿಸಬೇಕು” ಎನ್ನುತ್ತಾರೆ. ಆದರೆ ಒಮ್ಮೆಗೇ ಇಂತಹ ರೂಪವನ್ನು ಧ್ಯಾನದಲ್ಲಿ ಕಾಣಲು ಸಾಧ್ಯವಾಗದು. ಅದಕ್ಕಾಗಿ ಶುಕಾಚಾರ್ಯರು ಸ್ಥೂಲೇ ಭಗವತೋ ರೂಪೇ” ಎಂದಿದ್ದಾರೆ. ಮೊದಲು ಸೂರ್ಯಮಂಡಲವನ್ನು ಕಣ್ಮುಚ್ಚಿ ನೋಡಿ, ಅದರಲ್ಲಿ ಸೂರ್ಯನಾರಾಯಣನಿದ್ದಾನೆ ಎಂದು ಸ್ಥೂಲ ಪ್ರತೀಕದಲ್ಲಿ ಮನಸ್ಸನ್ನು ಏಕಾಗ್ರಗೊಳಿಸಬೇಕು. ನಂತರ ನಿಧಾನವಾಗಿ ಭಗವಂತನ ರೂಪ ಕಾಣಿಸುತ್ತದೆ. ಈ ಹಿಂದೆ ಹೇಳಿದಂತೆ ಭಗವಂತನ ರೂಪವನ್ನು ಧ್ಯಾನ ಮಾಡುವಾಗ ಪೂರ್ಣ ರೂಪವನ್ನು ಧ್ಯಾನಿಸದೇ ಯಾವುದೋ ಒಂದು ಅಂಗದಲ್ಲಿ ಮನಸ್ಸನ್ನು ಏಕಾಗ್ರಗೊಳಿಸಬೇಕು.

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ದ್ವಿತೀಯಸ್ಕಂಧೇ ಪ್ರಥಮೋSಧ್ಯಾಯಃ
ಭಾಗವತ ಮಹಾಪುರಾಣದ ಎರಡನೇ  ಸ್ಕಂಧದ ಒಂದನೇ ಅಧ್ಯಾಯ ಮುಗಿಯಿತು
*********